ನೀರಿನ ತೊಟ್ಟಿಗಳ ನಿರ್ಮಾಣಕ್ಕೆ ಚಾಲನೆ

7

ನೀರಿನ ತೊಟ್ಟಿಗಳ ನಿರ್ಮಾಣಕ್ಕೆ ಚಾಲನೆ

Published:
Updated:
ನೀರಿನ ತೊಟ್ಟಿಗಳ ನಿರ್ಮಾಣಕ್ಕೆ ಚಾಲನೆ

ಬೆಂಗಳೂರು: ಪಶು–ಪಕ್ಷಿಗಳ ದಾಹವನ್ನು ನೀಗಿಸುವ ಸಲುವಾಗಿ ಕಾಮಧೇನು ಹಂಸ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕಡೆಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ.  ಕಾಂಗ್ರೆಸ್‌ ಮುಖಂಡ ಎಂ.ವಿ.ರಾಜಶೇಖರನ್ ನಗರದಲ್ಲಿ ಭಾನುವಾರ ಈ ಯೋಜನೆಯನ್ನು ಉದ್ಘಾಟಿಸಿದರು.‌

ಇದೇ ಸಂದರ್ಭದಲ್ಲಿ, 10 ಪ್ರಗತಿ ಪರ ರೈತರಿಗೆ ‘ಕ್ಷೀರ ಗೋ ಪ್ರಶಸ್ತಿ’ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿವಿಧ ಶಾಲೆಗಳ 280 ವಿದ್ಯಾರ್ಥಿಗಳಿಗೆ ‘ವಿದ್ಯಾದೀಪ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮೊದಲ ವರ್ಷದ ಪದವಿ ಓದುತ್ತಿರುವ ಅಂಗವಿಕಲ ವಿದ್ಯಾರ್ಥಿ ಎನ್.ತನ್ಮಯ್‌ಗೆ ‘ವಿಶೇಷ ವಿದ್ಯಾದೀಪ ಪ್ರಶಸ್ತಿ’ ನೀಡಲಾಯಿತು. ಈ ಪ್ರಶಸ್ತಿಯು ₹ 10,000 ನಗದು ಬಹುಮಾನ, ಸ್ಮರಣಿಕೆ, ಪ್ರಮಾಣಪತ್ರ ಒಳಗೊಂಡಿದೆ.

‘ಅಮೆರಿಕಾ ಮತ್ತು ಜಪಾನ್ ದೇಶಗಳಲ್ಲಿ ಕೃಷಿ ಕ್ಷೇತ್ರಕ್ಕೆ ಶೇಕಡ  ನೂರರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ ಅಲ್ಲಿನ ರೈತರು ಸರ್ವತೋಮುಖ ಅಭಿವೃದ್ಧಿ ಕಂಡಿದ್ದಾರೆ. ಆದರೆ ನಮ್ಮ ದೇಶದ ರೈತರಿಗೆ ಆ ಭಾಗ್ಯ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಸಿಕ್ಕಿಲ್ಲ. ಕೆಲ ವರ್ಷಗಳ ಹಿಂದೆ ಶೇ 68 ರಷ್ಟು ಇದ್ದ ಕೃಷಿ ಭೂಮಿಯ ಪ್ರಮಾಣ ಈಗ ಗಣನೀಯವಾಗಿ ಕುಸಿದಿದೆ. ರೈತರು ಸಂಕಷ್ಟದಲ್ಲಿರಲು ಇದು ಮುಖ್ಯ ಕಾರಣ’ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಜಿ.ಜಯರಾಜ್, ‘ಪಕ್ಷಿಗಳು, ಕುರಿಗಳು, ಮೇಕೆಗಳು, ದನ ಕರುಗಳಂತಹ ಮೂಕ ಜೀವಿಗಳ ನೀರಿನ ದಾಹ ನೀಗಿಸಲೆಂದು ರಾಜ್ಯದಾದ್ಯಂತ ನೀರಿ‌ನ ತೊಟ್ಟಿಗಳ ನಿರ್ಮಿಸಲಿದ್ದೇವೆ. ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರದ ಅನೇಕ ಹಳ್ಳಿಗಳಲ್ಲಿ ಈಗಾಗಲೇ ಸಿಮೆಂಟ್‌ ತೊಟ್ಟಿಗಳನ್ನು ನಿರ್ಮಿಸಿದ್ದೇವೆ’ ಎಂದರು.

‘ಜನಸಂದಣಿ ಇಲ್ಲದ ಜಾಗದಲ್ಲಿ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲಿ ಸದಾ ಹಕ್ಕಿಗಳ ಹಿಂಡುಗಳಿರುತ್ತವೆ. ಮಂಗ, ಮೊಲ, ಮುಂಗುಸಿಯಂತಹ ಪ್ರಾಣಿಗಳೂ ಈ ತೊಟ್ಟಿಗಳಲ್ಲಿ ನೀರು ಕುಡಿಯುತ್ತವೆ. ಇದನ್ನು ನೋಡಿ ಸಂತಸವಾಗುತ್ತದೆ. ಹೀಗಾಗಿ, ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆ.ವಿ.ರವಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry