ತುರಹಳ್ಳಿ ಅರಣ್ಯಕ್ಕೆ ಬೆಂಕಿ: 20 ಎಕರೆ ಅಗ್ನಿಗೆ ಆಹುತಿ

ಬುಧವಾರ, ಮಾರ್ಚ್ 20, 2019
26 °C
ಅರಣ್ಯ ಪ್ರದೇಶ ಒತ್ತುವರಿ ಮಾಡಲು ಕಿಡಿಗೇಡಿಗಳಿಂದ ಕೃತ್ಯ– ಅರಣ್ಯ ಇಲಾಖೆ ಶಂಕೆ

ತುರಹಳ್ಳಿ ಅರಣ್ಯಕ್ಕೆ ಬೆಂಕಿ: 20 ಎಕರೆ ಅಗ್ನಿಗೆ ಆಹುತಿ

Published:
Updated:
ತುರಹಳ್ಳಿ ಅರಣ್ಯಕ್ಕೆ ಬೆಂಕಿ: 20 ಎಕರೆ ಅಗ್ನಿಗೆ ಆಹುತಿ

ಬೆಂಗಳೂರು: ಕನಕಪುರ ರಸ್ತೆ ಬಳಿಯ ತುರಹಳ್ಳಿ ಅರಣ್ಯಕ್ಕೆ ಭಾನುವಾರ ಸಂಜೆ 5ರ ಸುಮಾರಿಗೆ ಬೆಂಕಿ ಬಿದ್ದಿದೆ. 20 ಎಕರೆಯಷ್ಟು ಜಾಗದಲ್ಲಿ ಗಿಡಮರಗಳು ಅಗ್ನಿಗೆ ಆಹುತಿಯಾಗಿವೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ನಿವಾಸಿಗಳ ನೆರವಿನಿಂದ ಬೆಂಕಿ ನಂದಿಸಿದರು.

‘ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುವ ಸಲುವಾಗಿ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇಂತಹ ಕೃತ್ಯ ತಡೆಗಟ್ಟಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ನಗರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಕಿಯ ತೀವ್ರತೆಹೆಚ್ಚು ಇರಲಿಲ್ಲ. ಹಾಗಾಗಿ, ಹುಲ್ಲು, ಸಣ್ಣಪುಟ್ಟ ಸಸಿಗಳು ಸುಟ್ಟಿವೆಯೇ ಹೊರತು ದೊಡ್ಡ ಮರಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ’ ಎಂದರು.

ಅರಣ್ಯ ಒತ್ತುವರಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ, ಅರಣ್ಯಕ್ಕೆ ತಂತಿ ಬೇಲಿ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಬೆಂಕಿ ಹೊತ್ತಿಕೊಂಡಿದ್ದು ಕಂಡರೆ ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದೇವೆ ಎಂದರು.

ಸ್ಥಳೀಯ ನಿವಾಸಿಗಳ ಒತ್ತಾಯದ ಮೇರೆಗೆ ಅರಣ್ಯದೊಳಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅರಣ್ಯದೊಳಗೆ ಇರುವ ದೇವಸ್ಥಾನಕ್ಕೆ ಹೋಗಲು ಅವಕಾಶವಿತ್ತು. ಇದನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಬಿಬಿಎಂಪಿ ವೃಕ್ಷ ಸಮಿತಿ ಸದಸ್ಯ ವಿಜಯ್‌ ನಿಶಾಂತ್‌ ಅನುಮಾನ ವ್ಯಕ್ತಪಡಿಸಿದರು.

‘ಅರಣ್ಯದಲ್ಲಿ ಅನೈತಿಕ ಚಟುವಟಿಕೆ’

ತುರಹಳ್ಳಿ ಅರಣ್ಯದಲ್ಲಿ ಅನೈತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಕೆಲವರು ಇಲ್ಲಿ ಕುಡಿತ, ಮೋಜು–ಮಸ್ತಿ ಮಾಡುತ್ತಾರೆ. ಗಾಂಜಾ ಸೇವಿಸುತ್ತಾರೆ. ಕುಡಿದ ಮತ್ತಿನಲ್ಲಿ ಬೆಂಕಿ ಇಡುವ ಪ್ರಸಂಗಗಳೂ ನಡೆಯುತ್ತಿವೆ ಎಂದು ಇಕೊ ವಾಲೆಂಟಿಯರ್ಸ್‌ ಇಂಡಿಯಾ ಟ್ರಸ್ಟ್‌ನ ಸುನಿಲ್‌ ಬಬರ್‌ವಾಲ್‌ ತಿಳಿಸಿದರು.

ಶೋಭಾ ಫಾರೆಸ್ಟ್‌ ವ್ಯೂ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ಸಂಘದ ಸದಸ್ಯರು ಪ್ರತಿ ವಾರ ಅರಣ್ಯದಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡುತ್ತಿದ್ದಾರೆ. ಕಸ ಹಾಕದಂತೆ ಸ್ಥಳೀಯ ನಿವಾಸಿಗಳಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಕಸ ಸಂಗ್ರಹಿಸಲು ಇಟ್ಟಿದ್ದ ಬುಟ್ಟಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ದೂರಿದರು.

*

ಅರಣ್ಯ ಇಲಾಖೆಯು ಮತ್ತಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು. ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

– ಸುನಿಲ್‌ ಬಬರ್‌ವಾಲ್‌, ಇಕೊ ವಾಲೆಂಟಿಯರ್ಸ್‌ ಇಂಡಿಯಾ ಟ್ರಸ್ಟ್‌ನ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry