ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳಿಂದ ನಡೆಯದ ಸಾಮಾನ್ಯ ಸಭೆ..!

ಭೂತನಾಳ ಕೆರೆ ಅಂಗಳದಲ್ಲಿ ಮಹಾನಗರ ಪಾಲಿಕೆಯ ಬಜೆಟ್‌ ಸಭೆ ಇಂದು
Last Updated 5 ಮಾರ್ಚ್ 2018, 4:16 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆದು ಬರೋಬ್ಬರಿ ಐದು ತಿಂಗಳು ಸಮೀಪಿಸಿತು. ಇದೂವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಈ ಕುರಿತಂತೆ ಧ್ವನಿ ಎತ್ತಿಲ್ಲ... ವಿಜಯಪುರಿಗರ ದೌರ್ಭಾಗ್ಯವಿದು...

2017ರ ಜುಲೈ 28ರಿಂದ ಪಾಲಿಕೆಯಲ್ಲಿ ನಾಲ್ಕನೇ ಅವಧಿಯ ಮೇಯರ್‌–ಉಪ ಮೇಯರ್‌ ಆಡಳಿತ ಚಾಲನೆಗೊಂಡಿದೆ. ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಯಲೇಬೇಕು ಎಂಬುದು ರಾಜ್ಯ ಸರ್ಕಾರದ ನಡಾವಳಿಯಲ್ಲಿದೆ. ಆದರೆ ಎಂಟು ತಿಂಗಳ ಅವಧಿಯಲ್ಲಿ ನಡೆದಿರುವುದು ಎರಡು ಸಾಮಾನ್ಯ ಸಭೆಗಳು ಮಾತ್ರ.

ಸೆ 15ರಂದು ನಡೆದ ಮೊದಲ ಸಭೆ ಅಧಿಕಾರಿಗಳು–ಸದಸ್ಯರ ತಿಕ್ಕಾಟಕ್ಕೆ ಬಲಿಯಾಯ್ತು. ಮುಂದುವರೆದ ಸಭೆ ಭಯದಲ್ಲೇ ಮುಕ್ತಾಯಗೊಂಡಿತು. ಅ 12ರಂದು ನಡೆದ ಸಭೆ ಸಹ ಅಧಿಕಾರಿಗಳ ಭಯದಲ್ಲೇ ನಿಗದಿತ ಠರಾವು ಪಾಸು ಮಾಡಲಷ್ಟೇ ಸೀಮಿತವಾಯ್ತು...

ನಗರದ ಸಮಸ್ಯೆಗೆ ಸಂಬಂಧಿಸಿದ ಒಂದೇ ಒಂದು ವಿಷಯ ಈ ಎರಡೂ ಸಭೆಗಳಲ್ಲಿ ಪ್ರಸ್ತಾಪಗೊಳ್ಳಲಿಲ್ಲ. ಅಭಿವೃದ್ಧಿ ಕೆಲಸದ ಕುರಿತಂತೆ ಕೂಲಂಕಷ ಚರ್ಚೆಯಾಗಲಿಲ್ಲ. ಆದರೂ ಅಭಿವೃದ್ಧಿ ಕಾಮಗಾರಿ ನಡೆದಿವೆ.

ಶತಮಾನದ ಐತಿಹ್ಯ ಹೊಂದಿರುವ ಗಾಂಧಿಚೌಕ್‌ನಲ್ಲಿರುವ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಅನುಮೋದನೆ ನೀಡಿದೆಯೋ ? ಇಲ್ಲವೋ ಎಂಬುದು ಬಹುತೇಕ ಸದಸ್ಯರಿಗೆ ಗೊತ್ತಿಲ್ಲದಾಗಿದೆ. ನಮ್ಮೂರಿನ ಆಡಳಿತ ಈ ಪರಿ ಸಾಗಿದೆ...

ಪಾಲಿಕೆ ಆಡಳಿತ ವೈಖರಿಗೆ ವಿಜಯಪುರದ ರೆಹಮತುನ್ನೀಸಾ, ಆರ್‌.ಬಿ.ಪಾಟೀಲ, ಕೆ.ಎಸ್‌.ಹಿರೇಮಠ, ಎಸ್‌.ಕೆ.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

ಅಜೆಂಡಾ ಪ್ರತಿ ನೀಡಿಲ್ಲ; ಅಸಮಾಧಾನ

‘ಹಿಂದಿನ ಸಾಮಾನ್ಯ ಸಭೆ ನಡೆದ ಬರೋಬ್ಬರಿ ಐದು ತಿಂಗಳ ಆಸುಪಾಸಿನಲ್ಲಿ ಬಜೆಟ್‌ ಸಾಮಾನ್ಯ ಸಭೆಯನ್ನು ಮೇಯರ್‌ ಸಂಗೀತಾ ಪೋಳ ಸಂಪ್ರದಾಯದಂತೆ ಭೂತನಾಳ ಕೆರೆ ಅಂಗಳದಲ್ಲಿ ಮಾರ್ಚ್‌ 5ರ ಸೋಮವಾರ ಕರೆದಿದ್ದಾರೆ.

ಆದರೆ ಇದುವರೆಗೂ ನಮಗೆ ಬಜೆಟ್‌ ಸಭೆಯ ಅಜೆಂಡಾ ಪ್ರತಿಯೇ ಸಿಕ್ಕಿಲ್ಲ. ಹಿಂಗಾದರೇ ಅಲ್ಲಿ ಹೋಗಿ ನಾವೇನು ಚರ್ಚಿಸಬೇಕು. ಯಾವ ವಿಷಯದ ಕುರಿತಂತೆ ಮಾತನಾಡಬೇಕು ಎಂಬುದೇ ತಿಳಿಯದಾಗಿದೆ’ ಎಂದು ಆಡಳಿತಾರೂಢ ಕಾಂಗ್ರೆಸ್‌ನ ಹಿರಿಯ ಸದಸ್ಯ ಅಬ್ದುಲ್‌ ರಜಾಕ್‌ ಹೊರ್ತಿ ‘ಪ್ರಜಾವಾಣಿ’ ಬಳಿ ದೂರಿದರು.

‘ಬಜೆಟ್‌ ತಯಾರಿಯ ಪೂರ್ವಭಾವಿ ಸಭೆಗೂ ಎಲ್ಲ ಸದಸ್ಯರು ಹಾಜರಿರಲಿಲ್ಲ. 15 ಸದಸ್ಯರಷ್ಟೇ ಉಪಸ್ಥಿತರಿದ್ದರು. ಆಯುಕ್ತರು ಸಹ ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಯಾವ ದೂರದೃಷ್ಟಿಯಿಟ್ಟುಕೊಂಡು ಬಜೆಟ್‌ ಸಿದ್ಧಪಡಿಸಿದ್ದಾರೆ ಎಂಬುದೇ ಅರಿಯದಾಗಿದೆ’ ಎಂದು ಹೊರ್ತಿ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ ಬಜೆಟ್‌ ಸಭೆ ಭೂತನಾಳ ಕೆರೆ ಅಂಗಳದಲ್ಲಿ ನಡೆದಾಗಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೆವು. ವನ ಮಹೋತ್ಸವ ನಡೆಸಬೇಕಾದ ಸ್ಥಳದಲ್ಲಿ ಬಜೆಟ್‌ ಮಂಡಿಸಬೇಡಿ. ಗಾಂಭೀರ್ಯತೆ ಹಾಳು ಮಾಡಬೇಡಿ ಎಂದು ತಿಳಿಸಿದ್ದೆವು. ಆದರೂ ಮತ್ತೆ ಈ ಬಾರಿ ಭೂತನಾಳದಲ್ಲೇ ಪಿಕ್‌ನಿಕ್‌ ಪ್ರವಾಸದಂತೆ ಬಜೆಟ್ ಸಭೆ ಆಯೋಜಿಸಿದ್ದಾರೆ. ಇದರಿಂದ ಬೇಸತ್ತು ಸಭೆಗೆ ಗೈರು ಹಾಜರಾಗುವೆ.

ಈ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇ ಅನುಷ್ಠಾನಗೊಳ್ಳುತ್ತಿಲ್ಲ. ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗಿಂತ ಶಾಸಕರು, ಸಚಿವರ ಹಿಂಬಾಲಕರಿಗೆ ಮಣೆ ಹಾಕುವ ಸಂಸ್ಕೃತಿ ಮುಂದುವರೆದಿದೆ. ಕೆಲವರ ಪರೋಕ್ಷ ಹಿಡಿತದಲ್ಲಿ ಆಡಳಿತ ನಡೆದಿದೆ’ ಎಂದು ಬಿಜೆಪಿ ಸದಸ್ಯ ರವೀಂದ್ರ ಲೋಣಿ ಗಂಭೀರ ಆರೋಪ ಮಾಡಿದರು.

**

ಇಂತಹ ನಿರ್ದಿಷ್ಟ ಜಾಗದಲ್ಲೇ ಬಜೆಟ್‌ ಮಂಡಿಸಬೇಕು ಎಂಬ ನಿಯಮಾವಳಿ ಪಾಲಿಕೆ ಆಡಳಿತದಲ್ಲಿಲ್ಲ. ಮೇಯರ್‌ ಸೂಚನೆಯಂತೆ ನಗರದ ವ್ಯಾಪ್ತಿಯಲ್ಲೇ ಸಭೆ ನಡೆಯುತ್ತಿದೆ.
-ಶ್ರೀಹರ್ಷಾಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ

ಬಜೆಟ್‌ ಸಭೆ ನಡೆಯೋದೇ ಅನುಮಾನ. ಈ ಬಾರಿಯೂ ಓದದೆ ಅನುಮೋದನೆ ಪಡೆಯುವ ಸಾಧ್ಯತೆಯೇ ಹೆಚ್ಚಿದೆ. ಅಸಹಾಯಕರಾಗಿದ್ದೇವೆ.

-ಅಬ್ದುಲ್‌ ರಜಾಕ್‌ ಹೊರ್ತಿ, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT