ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ

ಗುಡಿ ಕೈಗಾರಿಕೆ ಪ್ರೋತ್ಸಾಹದಿಂದ ಉದ್ಯೋಗ ಸೃಷ್ಟಿ: ಕಾನೂನು ಸಚಿವ ಟಿ.ಬಿ.ಜಯಚಂದ್ರ
Last Updated 5 ಮಾರ್ಚ್ 2018, 4:52 IST
ಅಕ್ಷರ ಗಾತ್ರ

ತುಮಕೂರು: ಸಣ್ಣ ಹಾಗೂ ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಹಾಗೂ ಇಂತಹ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗುವುದಲ್ಲದೆ ನಿರುದ್ಯೋಗ ನಿವಾರಣೆಯಾಗಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.‌

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವಜ್ರ ಮಹೋತ್ಸವದ ಅಂಗವಾಗಿ ನಗರದ ಗಾಜಿನಮನೆಯಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಖಾದಿ ಮತ್ತು ಗ್ರಾಮದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟದ ಖಾದಿ ಉತ್ಸವ ಉದ್ಘಾಟಿಸಿ  ಮಾತನಾಡಿದರು.

ಗ್ರಾಮಗಳು ಸಶಕ್ತಗೊಂಡರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದರು. ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಜಿಲ್ಲಾ ಖಾದಿ ಉತ್ಸವವನ್ನು ಆಯೋಜಿಸುತ್ತಿದೆ. ಇದರಿಂದ ಖಾದಿಗೆ ಉತ್ತೇಜನ ದೊರಕುತ್ತದೆ ಎಂದು ತಿಳಿಸಿದರು.

ದೊಡ್ಡ ದೊಡ್ಡ ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುಡಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಬ್ರಾಂಡೆಡ್ ಉತ್ಪನ್ನಗಳಿಗೆ ಮಹತ್ವ ನೀಡುವ ಬದಲು ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಸಾರ್ವಜನಿಕರು ಮಹತ್ವ ನೀಡಿದರೆ ಗಾಂಧೀಜಿ ಅವರ ಕನಸು ನನಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್  ಮಾತನಾಡಿ, ’ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ಮಾರುಕಟ್ಟೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಖಾದಿ ಉತ್ಸವವನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ ಕೈಗೊಳ್ಳುವ ಉದ್ದಿಮೆದಾರರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಶೇ 35ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಯುವ ಉದ್ಯಮಿಗಳು ಇದರ ಉಪಯೋಗ ಪಡೆಯಬೇಕು ಎಂದರು.

ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರಾದ ಎಂ.ಆರ್.ಪರ್ವತಪ್ಪ, ವಿ.ರಾಜಗೋಪಾಲ್, ಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ, ಮುಖಂಡರಾದ ವೀರಪ್ಪ, ಅಂಜಿರಪ್ಪ, ಚಿಕ್ಕಬಳ್ಳಾಪುರ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT