ರಾಮಕೃಷ್ಣ ಆಶ್ರಮದ ಸಾಧನೆ ಮಹೋನ್ನತ

ಮಂಗಳವಾರ, ಮಾರ್ಚ್ 26, 2019
31 °C
ರಾಮಕೃಷ್ಣ ವಿವೇಕಾನಂದ ಅಶ್ರಮದ ಬೆಳ್ಳಿಹಬ್ಬದ ರಜತಯಾನ ಉದ್ಘಾಟಿಸಿದ ಸ್ವಾಮಿ ಗೌತಮಾನಂದಜಿ ಮಹಾರಾಜ್

ರಾಮಕೃಷ್ಣ ಆಶ್ರಮದ ಸಾಧನೆ ಮಹೋನ್ನತ

Published:
Updated:
ರಾಮಕೃಷ್ಣ ಆಶ್ರಮದ ಸಾಧನೆ ಮಹೋನ್ನತ

ತುಮಕೂರು: ತುಮಕೂರು ರಾಮಕೃಷ್ಣ ವಿವೇಕಾನಂದ ಅಶ್ರಮವು 25 ವರ್ಷ ಪೂರೈಸಿ ರಜತಯಾನ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ರಾಮಕೃಷ್ಣರ ತಪೋ ಶಕ್ತಿಯಿಂದಲೇ ಇಂತಹ ಮಹೋನ್ನತ ಕಾರ್ಯವಾಗಿದೆ ಎಂದು ಚೆನ್ನೈನ ಮೈಲಾಪುರ ರಾಮಕೃಷ್ಣಮಠದ ಅಧ್ಯಕ್ಷರು ಹಾಗೂ ಕೋಲ್ಕತ್ತದ ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ಹೇಳಿದರು.

ಭಾನುವಾರ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ರಾಮಕೃಷ್ಣ ವಿವೇಕಾನಂದ ಅಶ್ರಮದ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಜತಯಾನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮಕೃಷ್ಣ ಪರಮಹಂಸರೇ ಹೇಳಿದಂತೆ ಅವರ ತಪೋಶಕ್ತಿಯಿಂದಲೇ ಇಂತಹ ಉತ್ತಮ ಕಾರ್ಯಗಳು ನಡೆಯುತ್ತಲೇ ಇರುತ್ತವೆ. 25 ವರ್ಷದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮವು ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಹೀಗೆ ಅನೇಕ ವಿಭಾಗಗಳಲ್ಲಿ ತನ್ನದೇ ಆದ ವಿಶೇಷ ಕಾರ್ಯ ಸಾಧನೆ ಮಾಡಿದೆ. ಸಾಕಷ್ಟು ಹತ್ತಿರದಿಂದ ಈ ಕಾರ್ಯಗಳನ್ನು ನಾನು ಕಂಡಿದ್ದೇನೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವುದು ಸಂತೋಷ ತಂದಿದೆ ಎಂದು ನುಡಿದರು.

ಗದಗ–ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ‘ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ. ಸಮಾಜದ ಹಿರಿಯರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು' ಎಂದು ಹೇಳಿದರು.

'ನಮ್ಮ ದೇಶದ ಹಿರಿಮೆ, ಶಕ್ತಿ, ಪರಂಪರೆಯನ್ನು ಅಮೆರಿಕ, ಇಂಗ್ಲೆಂಡ್ ಸೇರಿ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಅರ್ಥ ಮಾಡಿಕೊಂಡಿದ್ದವು. ಆದರೆ, ನಮ್ಮವರಿಗೆ ಇನ್ನೂ ಅದು ಅರ್ಥವಾಗಿಲ್ಲದಿರುವುದು ದೌರ್ಭಾಗ್ಯ' ಎಂದರು.

'ನಾಲ್ಕಾರು ಪದವಿ ಪಡೆದವರಿಗೆ ಸಾಮಾನ್ಯ ಜ್ಞಾನ ಎಂಬುದು ಇರುವುದಿಲ್ಲ. ಫಿಸಿಕ್ಸ್, ಎಕನಾಮಿಕ್ಸ್, ಕೆಮೆಸ್ಟ್ರಿ ಅಂಥಾ ಮಕ್ಕಳ ತಲೆಗೆ ತುಂಬಿ ಅವರ ಸಮಗ್ರ ವ್ಯಕ್ತಿತ್ವಕ್ಕೆ ಅಡ್ಡಿ ಮಾಡಲಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು' ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘1992ರಲ್ಲಿ ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರಿಂದ ಆಶ್ರಮವು ಸ್ಥಾಪನೆಗೊಂಡು ಈಗ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಬೆಳ್ಳಿ ಹಬ್ಬದ ಪ್ರಯುಕ್ತ 2017ರ ಮಾರ್ಚ್ ನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ರಜತಯಾನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದು ವಿವರಿಸಿದರು.

ಮಕ್ಕಳು, ವೈದ್ಯರು, ಜನಪ್ರತಿನಿಧಿಗಳು, ವಕೀಲರು, ಎಂಜಿನಿಯರ್, ಆಟೊ ಚಾಲಕರು, ದಿನಪತ್ರಿಕೆ ಹಾಕುವವರು, ಪತ್ರಕರ್ತರು ಮತ್ತು ಮಾಧ್ಯಮದವರಿಗೆ, ಶಿಕ್ಷಕರಿಗೆ, ತಾಯಂದಿರಿಗೆ ಹೀಗೆ ಅನೇಕರಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ತಿಳಿಸಿದರು.

ರಾಮಕೃಷ್ಣ ಪರಂಪರೆ ಮತ್ತು ಇನ್ನಿತರೆ ಸಂಪ್ರದಾಯಗಳ ಶ್ರೇಷ್ಠ ಯತಿಗಳು, ಸುಪ್ರಸಿದ್ಧ ಚಿಂತಕರು, ಅಧಿಕಾರಿಗಳು ವಿವಿಧ ಕ್ಷೇತ್ರಗಳ ಸಾಧಕರು, ಶ್ರೇಷ್ಠ ಕಲಾವಿದರು ಸೇರಿ ಯಶಸ್ವಿಗೊಳಿಸಿದ್ದಾರೆ. ರಜತಯನ ಸಮಾರೋಪವನ್ನು ಯುವ ಸಮಾವೇಶ ಮತ್ತು ಸಾಧು–ಭಕ್ತ ಸಮಾಗಮ ಕಾರ್ಯಕ್ರಮದ ಮೂಲಕ ಆಚರಿಸಿದೆ ಎಂದು ಹೇಳಿದರು.

ಮಂಗಳೂರು ರಾಮಕೃಷ್ಣ ಮಿಷನ್‌ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ವೇದಿಕೆಯಲ್ಲಿದ್ದರು. ಆಶ್ರಮದಿಂದ ಪ್ರಕಟಿಸಿದ 25 ಪುಸ್ತಕಗಳನ್ನು ಸ್ವಾಮಿ ಗೌತಮಾನಂದಜೀ ಮಹಾರಾಜ್ ಅವರು ಬಿಡುಗಡೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.

**

ಸಹಸ್ರಾರು ವಿದ್ಯಾರ್ಥಿ, ಭಕ್ತ ಸಮೂಹ

ರಜತಯಾನ ಸಮಾರೋಪ ಕಾರ್ಯಕ್ರಮದಲ್ಲಿ ಅಶ್ರಮದ ಸಾವಿರಾರು ಭಕ್ತರು ಭಾಗವಹಿಸಿದ್ದು ಒಂದೆಡೆಯಾದರೆ, ಯುವ ಸಮಾವೇಶದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಬಂದಿದ್ದರು. ಪ್ರೌಢ ಶಾಲೆ, ಕಾಲೇಜು, ಪದವಿ, ಸ್ನಾತಕೋತ್ತರ, ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್ ಡಿಪ್ಲೊಮಾ ಹೀಗೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡುವಾಗ ಕಿವಿಗೊಟ್ಟು ಕೇಳಿದರು. ಬೃಹತ್ ಎಲ್‌ಸಿಡಿ ಪರದೆಯ ಮೇಲೆ ಮೋದಿಯವರು ವಿಡಿಯೊ ಕಾನ್ಫರೆನ್ಸ್‌ ನಲ್ಲಿ ಮಾತನಾಡಲು ಬರುತ್ತಿದ್ದಂತೆಯೇ ಕರತಾಡನ ಮಾಡಿದರು. ಭಾರತ್ ಮಾತಾ ಕಿ ಜೈ, ಮೋದಿಜಿ ಜೈ ಎಂದು ಘೋಷಣೆ ಕೂಗಿದರು. ಪ್ರಧಾನಿ ಒಂದೆರಡು ಪದಗಳನ್ನು ಕನ್ನಡದಲ್ಲಿ ಹೇಳಿದಾಗ,  ಜಿಲ್ಲೆಗೆ ಬಂದು ಹೋದ ಸಂದರ್ಭಗಳ ಬಗ್ಗೆ ವಿವರಿಸಿದಾಗ ಜನರು ಖುಷಿ ಪಟ್ಟರು.

**

ಪುಸ್ತಕ ಪ್ರದರ್ಶನ ವೀಕ್ಷಣೆಗೆ ಉತ್ಸುಕತೆ

ವೇದಿಕೆಯ ಪಕ್ಕ ರಾಮಕೃಷ್ಣ ಆಶ್ರಮ, ಮಿಷನ್‌ಗಳು ಯುವಕರಿಗೆ, ಮಕ್ಕಳಿಗೆ ಪ್ರಕಟಿಸಿದ ಪುಸ್ತಕಗಳು, ಆಧ್ಯಾತ್ಮಿಕ ಪುಸ್ತಕಗಳು ಸೇರಿ ಸಾವಿರಾರು ಪುಸ್ತಕಗಳ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಸಾಕಷ್ಟು ಜನರು ಈ ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿದರು. ವಿಶೇಷವಾಗಿ ಯುವಕರು ಹೆಚ್ಚು ಉತ್ಸುಕತೆಯಿಂದ ಪುಸ್ತಕಗಳನ್ನು ನೋಡಿ ಖರೀದಿಸಿದರು.

**

ಸನ್ಮಾರ್ಗದತ್ತ ಸಾಗಲು ಪೂರಕ

ಯುವಕರಿಗೆ ನೈತಿಕ ಶಿಕ್ಷಣ ಎಷ್ಟರ ಮಟ್ಟಿಗೆ ಮುಖ್ಯ, ವಿವೇಕಾನಂದರು ಪ್ರತಿಪಾದಿಸಿದ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ಬಹುಮುಖ್ಯವಾಗಿದೆ. ಇಂತಹ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸುವ ಜತೆಗೆ ಪ್ರಧಾನಿ ಅವರ ಭಾಷಣ ಆಲಿಸುವ ಅವಕಾಶವೂ ಲಭಿಸಿದ್ದು ಸಂತೋಷ ತಂದಿದೆ.

–ಎಸ್.ಶ್ರೆಯಸ್, ಸಿದ್ಧಗಂಗಾ ಪದವಿ ಕಾಲೇಜು, ತುಮಕೂರು.

**

ಎಚ್ಚರಿಸುವ ಸಂದೇಶ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಖುಷಿ ತಂದಿದೆ. ಸ್ವಾಮೀಜಿಯವರು, ಪ್ರಧಾನಿಯವರು ಯುವಕರ ಸಾಮರ್ಥ್ಯ, ಅವರ ಮುಂದಿರುವ ಸವಾಲುಗಳು, ಭವಿಷ್ಯದ ಕುರಿತು ಆಡಿದ ಮಾತುಗಳು ನಮ್ಮಂತಹ ಯುವ ಸಮುದಾಯದ ಜವಾಬ್ದಾರಿಯನ್ನು ನೆನಪಿಸಿವೆ.

–ರೇಷ್ಮಾ, ಅಕ್ಷಯ್ ನರ್ಸಿಂಗ್ ಕಾಲೇಜು, ತುಮಕೂರು.

**

ಎಂದೂ ಮರೆಯಲಾರದ ಕ್ಷಣ

ವಿದ್ಯಾರ್ಥಿಗಳಿಗೆ, ಯುವಕರು ಭಾಗವಹಿಸುದಕ್ಕೆ ಇಂತಹ ಕಾರ್ಯಕ್ರಮಗಳು ಅಪರೂಪ. ಪ್ರಧಾನಿಯವರ ಪ್ರೇರಣಾತ್ಮಕ ಭಾಷಣವು ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಕಾರ್ಯಕ್ರಮ ಎಂದಿಗೂ ಮರೆಯಲಾಗದು.

– ಸೀತಾ, ಅಕ್ಷಯ್ ನರ್ಸಿಂಗ್ ಕಾಲೇಜು, ತುಮಕೂರು.

**

ಸ್ವಾಮೀಜಿ ಮಾರ್ಗದರ್ಶನ ಚೆನ್ನಾಗಿತ್ತು

ವಿದ್ಯಾರ್ಥಿಗಳು ಮತ್ತು ಯುವಕರನ್ನೇ ಕೇಂದ್ರವಾಗಿ

ಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ. ಉತ್ತಮ ಅಭಿರುಚಿ, ನೈತಿಕತೆಯ ವಿಚಾರಗಳು ಸ್ವಾಮೀಜಿಗಳು ನೀಡಿದರು. ಚೆನ್ನಾಗಿತ್ತು.

–ಜಯಸಿಂಹ, ಸಿದ್ಧಗಂಗಾ ಪದವಿ ಕಾಲೇಜು, ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry