ಇತಿಹಾಸ ನೆನಪಿಸುವ ಹಳೆಯ ಸೇತುವೆ

ಮಂಗಳವಾರ, ಮಾರ್ಚ್ 19, 2019
28 °C
ಹೊಸ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ, ಈಡೇರಿದ ಸ್ಥಳೀಯರ ಎರಡು ದಶಕಗಳ ಬೇಡಿಕೆ

ಇತಿಹಾಸ ನೆನಪಿಸುವ ಹಳೆಯ ಸೇತುವೆ

Published:
Updated:
ಇತಿಹಾಸ ನೆನಪಿಸುವ ಹಳೆಯ ಸೇತುವೆ

ಭದ್ರಾವತಿ: ಸುಮಾರು 158 ವರ್ಷಗಳ ಇತಿಹಾಸ ಹೇಳುವ ರಸ್ತೆಯ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರುವ ಮೂಲಕ ₹ 22.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಕಳೆದೆರಡು ದಶಕದಿಂದ ಹೊಸ ಸೇತುವೆ ನಿರ್ಮಾಣ ಜನರ ಬೇಡಿಕೆಯಾಗಿಯೇ ಉಳಿದಿತ್ತು. ಈಗ ಈಡೇರುವ ಕಾಲ ಕೂಡಿಬಂದಿದೆ. ಹೀಗೆಂದ ಮಾತ್ರಕ್ಕೆ ಹಳೆಯ ಸೇತುವೆ ದುಸ್ಥಿತಿಯ ಹಾದಿ ಹಿಡಿದಿದೆ ಎಂದೇನೂ ಅಲ್ಲ. ನಗರದ ಹಳೇನಗರ ಹಾಗೂ ಹೊಸನಗರ ಭಾಗಕ್ಕೆ ಸಂರ್ಪಕ ಕಲ್ಪಿಸುವ ದೃಷ್ಟಿಯಿಂದ ಭದ್ರಾನದಿಗೆ ಅಡ್ಡಲಾಗಿ 1860 ರಲ್ಲಿ ನಿರ್ಮಾಣ ಮಾಡಿದ್ದ ₹ 74,997 ವೆಚ್ಚದ ಬೃಹತ್ ಸೇತುವೆ ಇಂದಿಗೂ ಇಲ್ಲಿನ ಜನರ ನಡುವೆ ಬಾಂಧವ್ಯ ಬೆಸೆದಿದೆ.

ಮೈಸೂರು ಸಂಸ್ಥಾನದ ಪಿಡಬ್ಲ್ಯೂ ಇಲಾಖೆಯಿಂದ ನಿರ್ಮಿತವಾಗಿದ್ದ ಸೇತುವೆ ಮುಖ್ಯರಸ್ತೆಯ ಸಂಪರ್ಕ ಹೆಚ್ಚು ಮಾಡುವ ಜತೆಗೆ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಬೆಳವಣಿಗೆಯಲ್ಲಿ ತನ್ನದೇ ವಿಶಿಷ್ಟ ಕೊಡುಗೆ ನೀಡಿದೆ.

ಪರ್ಯಾಯ ಸೇತುವೆ: ಈ ಬೃಹತ್ ಸೇತುವೆಗೆ ಬದಲಾಗಿ ಸಂಚಾರ ದಟ್ಟಣೆ ಇಲ್ಲದಂತೆ ಮಾಡುವ ಸಲುವಾಗಿ 1983–85ರ ಅವಧಿಯಲ್ಲಿ ಅಂದಾಜು ₹ 25 ಲಕ್ಷ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಯಿಂದ ಡಿಪೊ ಕಡೆಗೆ ಸಾಗುವ ರಸ್ತೆಯಲ್ಲಿ ಹೊಸ ಸೇತುವೆ ನಿರ್ಮಿಸಲಾಯಿತು. ಇದರ ಮೂಲಕ ಸಹ ಹೊಸ ಬಡಾವಣೆಯನ್ನು ಸುಲಭ ರೀತಿಯಲ್ಲಿ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿತ್ತು. ಗತವೈಭವ ಹೇಳುವ ಹಳೆಯ ಸೇತುವೆಯಿಂದ ಭದ್ರಾ ಸೇತುವೆ ಮೇಲಿನ ಓಡಾಟದ ದಟ್ಟಣೆ ಮಾತ್ರ ಕಡಿಮೆಯಾಗಲಿಲ್ಲ.

ಈ ನಿಟ್ಟಿನಲ್ಲಿ ಹಳೆಯ ಭದ್ರಾ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಿಸಿದರೆ ಸುಗಮ ಓಡಾಟ ಹಾಗೂ ಇತಿಹಾಸದ ಸೇತುವೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅರಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೊಸ ಸೇತುವೆ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.

ಈ ವಿಚಾರವನ್ನು ಹೊತ್ತ ಚುನಾಯಿತ ಪ್ರತಿನಿಧಿಗಳು ನಿರಂತರವಾಗಿ ಎರಡು ದಶಕಗಳಿಂದ ಮಾಡಿದ ಪ್ರಯತ್ನದ ಫಲವಾಗಿ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಜನರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ.

ನೆನಪುಗಳ ಸೇತುವೆ: ಇತಿಹಾಸದ ಸೇತುವೆ ಮೇಲೆ ಹಲವು ನೆನಪುಗಳ ಸಮಾಗಮವೇ ನಡೆದಿದೆ ಎನ್ನುತ್ತಾರೆ ಹಿರಿಯ ನಾಗರಿಕರು ಹಾಗೂ ಮುಖಂಡರು.

ಮೂರು ದಶಕಗಳ ಹಿಂದೆ ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದುಉ, ಇಬ್ಬರು ಸಾವನ್ನಪ್ಪಿದ್ದರು. ಈಚೆಗೆ ಅಪಘಾತದಿಂದಾಗಿ ತಡೆಗೋಡೆಯೇ ಕುಸಿದು ಬಿದ್ದಿತ್ತು.

ಹಲವು ಹೋರಾಟ, ಪ್ರತಿಭಟನೆ ಹಾಗೂ ಗಣಪತಿ ಉತ್ಸವದ ಸಂದರ್ಭದಲ್ಲಿ ಈ ಸೇತುವೆ ತುಂಬಿ ತುಳುಕುವುದು ಸಾಮಾನ್ಯ. ಸಂಚಾರ ದಟ್ಟಣೆ ಹೆಚ್ಚಾದಾಗ ಕಿರಿದಾದ ಈ ಜಾಗದಲ್ಲಿ ಸಾಗಲು ಬಹಳ ಕಷ್ಟಪಡಬೇಕು. ಈಗ ಹೊಸ ಸೇತುವೆ ನಿರ್ಮಾಣದ ಕನಸು ನನಸಾಗಲಿದ್ದು, ಸಮಸ್ಯೆ ಬರೆಹರಿಯುವ ಲಕ್ಷಣಗಳು ಕಾಣುತ್ತಿವೆ.

**

ಹಳೇ ಸೇತುವೆ ಪಕ್ಕದಲ್ಲಿ ಹೊಸಸೇತುವೆ

₹ 22.5 ಕೋಟಿ ವೆಚ್ಚದಲ್ಲಿ ನಿರ್ಮಾಣ

18 ತಿಂಗಳಿನಲ್ಲಿ ಕಾಮಗಾರಿ ಪೂರ್ಣ

ಕೊಯಮತ್ತೂರಿನ ಖಾಸಗಿ ಕಂಪನಿಗೆ ಗುತ್ತಿಗೆ

ಹೆಚ್ಚಿರುವ ಸಂಚಾರ ದಟ್ಟಣೆಗೆ ತಡೆ

**

ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ಕಾಮಗಾರಿ ಪೂರ್ಣವಾದರೆ ಈಗಿರುವ ಮಾಧವಾಚಾರ್ ವೃತ್ತ ಮತ್ತಷ್ಟು ದೊಡ್ಡದಾಗಿ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.

- ಶಿವಸ್ವಾಮಿ, ಹೊಸಮನೆ, ಭದ್ರಾವತಿ.

ನಮ್ಮೂರಿನ ಜನರ ಹಲವು ದಶಕದ ಬೇಡಿಕೆಗೆ ಈಗ ಪ್ರತಿಫಲ ಸಿಕ್ಕಿದೆ. ಆದಷ್ಟು ಶೀಘ್ರ ನಿರ್ಮಾಣ ಕಾರ್ಯ ಮುಕ್ತಾಯವಾಗಲಿ.

-ಶ್ರೀವತ್ಸ, ವ್ಯಾಪಾರಿ, ಬಿ.ಎಚ್. ರಸ್ತೆ, ಭದ್ರಾವತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry