ಶುರುವಾಗಿದೆ ಬೇಸಿಗೆ ಕಾಲದ ಬಾಯಾರಿಕೆ

7
ತಂಪು ಪಾನೀಯ, ಹಣ್ಣು-ಹಂಪಲು, ಮಜ್ಜಿಗೆಗೆ ಬೇಡಿಕೆ

ಶುರುವಾಗಿದೆ ಬೇಸಿಗೆ ಕಾಲದ ಬಾಯಾರಿಕೆ

Published:
Updated:

ರಾಯಚೂರು: ಹೋಳಿಹಬ್ಬದಲ್ಲಿ ಮೈ ತುಂಬ ಮೆತ್ತಿಕೊಂಡಿದ್ದ ಬಣ್ಣದಲ್ಲಿ ಅಳಿದುಳಿದ ಕೊಳೆ ತೊಳೆಯುವ ಬೇಸಿಗೆಕಾಲದ ಬೆವರು ಈಗಾಗಲೇ ಶುರುವಾಗಿದೆ.

ಫೆಬ್ರುವರಿ ಅಂತ್ಯದಲ್ಲಿ 34 ಡಿಗ್ರಿ ಸೆಲ್ಸಿಯಷ್ಟಿದ್ದ ತಾಪಮಾನವು, ಕ್ರಮೇಣ ಏರುಗತಿ ಪಡೆಯುತ್ತಿದೆ. ಮಾರ್ಚ್ 4 ರಂದು 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ ವರೆಗೂ ಹೋಗಬಹುದು. ತಾಪಮಾನವು 35 ತಲುಪುತ್ತಿದ್ದಂತೆ ಜನರಿಗೆ ಬಾಯಾರಿಕೆ, ಬಳಲಿಕೆ ಅನುಭವ ಶುರುವಾದಂತಿದೆ.

ಮನೆಗಳ ಕಿಟಕಿ, ಬೆಳಕಿಂಡಿಗಳಿಂದ ಸೂಸುವ ಬೆಳಕಿನ ಕಿರಣಗಳು ಪ್ರಖರಗೊಂಡಿವೆ. ಮನೆಯೊಳಗಿದ್ದರೂ, ಹೊರಗೆ ಬಂದರೂ ಸಾಮಾನ್ಯ ದಿನಗಳಲ್ಲಿ ಸೇವಿಸುತ್ತಿದ್ದ ನೀರಿನ ಪ್ರಮಾಣಕ್ಕಿಂತ ಈಗ ಎರಡುಪಟ್ಟು ನೀರು ಕುಡಿಯಬೇಕಿದೆ. ನಗರದಾದ್ಯಂತ ನೀರಿನ ಬಾಟಲಿ ಹಾಗೂ ನೀರಿನ ಪ್ಯಾಕೇಟ್‍ಗಳ ಮಾರಾಟ ಭರಾಟೆ ಹೆಚ್ಚಾಗುತ್ತಿರುವುದು ಇದಕ್ಕೆ ಸಾಕ್ಷಿ.

ಬೇಸಿಗೆಯಲ್ಲಿ ತಂಪು ಹುಡುಕುವವರಿಗೆ ಆಸರೆ ನೀಡುವ ಪದಾರ್ಥಗಳು, ಪಾನೀಯಗಳು, ಹಣ್ಣು- ಹಂಪಲುಗಳು, ಮಡಿಕೆಗಳು, ಕೂಲರ್‍ಗಳು, ಹವಾ ನಿಯಂತ್ರಕಗಳು, ಬೀಸಣಿಕೆಗಳು, ಬಿಳಿಬಣ್ಣದ ತೆಳುವಾದ ಬಟ್ಟೆಗಳು, ಇನ್ವರ್ಟರ್‍ಗಳು ಮಾರುಕಟ್ಟೆಯಲ್ಲಿ ಯತ್ತೇಚ್ಚವಾಗಿ ಲಗ್ಗೆ ಇಟ್ಟಿವೆ. ಪ್ರಮುಖವಾಗಿ, ಜನರಿಗೆ ಉಚಿತವಾಗಿ ನೀರು ಕೊಟ್ಟು ದಾಹ ಹಿಂಗಿಸುವ ಸೇವಾ ಮನೋಭಾವದ ಸರ್ಕಾರೇತರ ಸಂಘ-ಸಂಸ್ಥೆಗಳು ಕೂಡಾ ಅರವಟಿಗೆ ಹಾಕುವ ತಯಾರಿ ಮಾಡಿಕೊಂಡಿದ್ದಾರೆ.

ಬಾಯೊಳಗೆ ಹಾಕಿದ ತಕ್ಷಣ ತಂಪಿನ ಅನುಭವ ನೀಡುವ ಪಾನೀಯಗಳನ್ನು ಜನರು ಬೇಸಿಗೆಯಲ್ಲಿ ಹೆಚ್ಚು ಇಷ್ಟ ಪಡುತ್ತಾರೆ. ಸ್ವಲ್ಪ ತಿಳಿವಳಿಕೆ ಇರುವ ಜನರು; ದೇಹದೊಳಗೆ ತಂಪು ಕಾಯ್ದಿರಿಸಿಕೊಳ್ಳಲು; ಹಣ್ಣು-ಹಂಪಲು, ತಾಳೆಹಣ್ಣು, ಎಳೆನೀರು ಮೊರೆ ಹೋಗುತ್ತಿದ್ದಾರೆ. ಕಳೆದ ವರ್ಷ ಬೇಸಿಗೆ ಆರಂಭದಲ್ಲಿ ₹ 30 ಕ್ಕೆ ಸಿಗುತ್ತಿದ್ದ ಒಂದು ಎಳೆನೀರು ಕಾಯಿ, ಈ ವರ್ಷ ಈಗಗಾಗಲೇ ₹ 35 ಕ್ಕೆ ಮಾರಾಟವಾಗುತ್ತಿದೆ. ಕ್ರಮೇಣ ಎಳೆನೀರಿನ ದರವು ಹೆಚ್ಚಳವಾಗುವ ಸಾಧ್ಯತೆ ಕಂಡು ಬರುತ್ತಿದೆ.

ಆರ್‌ಟಿಒ ವೃತ್ತದಿಂದ ಬಸವೇಶ್ವರ ವೃತ್ತ ಹಾಗೂ ಶಕ್ತಿನಗರದವರೆಗೂ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ತಳ್ಳುವ ಗಾಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಹಣ್ಣು-ಹಂಪಲು ಜನರಿಗೆ ಕೈ ಬೀಸುತ್ತಿವೆ. ಮಾರುಕಟ್ಟೆಯಲ್ಲಿ ತರಹೇವಾರಿ ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಶರಬತ್, ಐಸ್‍ಕ್ರಿಮ್ ಮಾರಾಟ ಮಳಿಗೆಗಳ ಎದುರು ಜನಜಂಗುಳಿ ನೆರೆಯುತ್ತಿದೆ. ಮಹಾವೀರ ವೃತ್ತದ ಪಕ್ಕದಲ್ಲಿ ಹಣ್ಣಿನ ರಸ ಮಾರಾಟ ಅಂಗಡಿಗಳಲ್ಲಿ ಸರದಿ ನಿಲ್ಲುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾ ದಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆಯೂ ಅಧಿಕವಾಗುತ್ತಿದೆ.

2017 ರಲ್ಲಿ ಮಾರ್ಚ್ ತಿಂಗಳು ಗರಿಷ್ಠ ತಾಪಮಾನವು 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಹಿಂದಿನ 10 ವರ್ಷಗಳಲ್ಲಿ ಮಾರ್ಚ್ ತಿಂಗಳು ದಾಖಲಾದ ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ಕೆಳಗೆ ಹೋಗಿಲ್ಲ. ಮಾರ್ಚ್ ತಿಂಗಳು ಸರ್ವಕಾಲಿಕ ಗರಿಷ್ಠ ತಾಪಮಾನವು 44.6 ಡಿಗ್ರಿ ಸೆಲ್ಸಿಯಸ್ 1992 ರಲ್ಲಿ ದಾಖಲಾಗಿತ್ತು.

**

ಬಿಸಿಲು ಈಗ ಶುರುವಾಗಿದೆ. ಜನರು ಚಹಾ ಬದಲು ಮಜ್ಜಿಗೆ ಕುಡಿಯುವುದಕ್ಕೆ ಕೇಳುತ್ತಿದ್ದಾರೆ. ಜುಲೈವರೆಗೂ ಮಜ್ಜಿಗೆ ವ್ಯಾಪಾರ ನಡೆಯುತ್ತದೆ.

-ರಷೀದ್, ಮಜ್ಜಿಗೆ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry