‘ಬೆಳೆ ಹಾನಿಗೆ ಶಾಸಕರೇ ಕಾರಣ’

7
ಸಿಂಧನೂರು: ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ

‘ಬೆಳೆ ಹಾನಿಗೆ ಶಾಸಕರೇ ಕಾರಣ’

Published:
Updated:

ಸಿಂಧನೂರು: ‘ಶಾಸಕ ಹಂಪನಗೌಡ ಬಾದರ್ಲಿ ಅವರು ರೈತರ ನೋವಿಗೆ ಸ್ಪಂದಿಸುವ ಬದಲು ಮಾಧ್ಯಮಗಳಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡಿದ್ದಾರೆ. ರೈತರ ಬೇಸಿಗೆ ಬೆಳೆ ಹಾನಿಗೆ ಅವರೇ ಕಾರಣವೇ ಹೊರತು ನಾನಲ್ಲ’ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಮಾ.15 ರವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ತಾಲ್ಲೂಕು ಘಟಕದಿಂದ ಶನಿವಾರ ಇಲ್ಲಿನ ಮಿನಿವಿಧಾನಸೌಧ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರೈತರ ಬೆಳೆಗೆ ನೀರು ಸಿಗಬೇಕು ಎಂಬ ಕಳಕಳಿಯಿಂದ ಹೋರಾಟ ನಡೆಸಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದೇನೆ ಹೊರತು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿಲ್ಲ’ ಎಂದರು.

ನೀರಿನ ವಿಷಯದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ರಾಜಕಾರಣ ಮಾಡುತ್ತಾರೆ. ತೆಲಂಗಾಣದಿಂದ 4 ಟಿಎಂಸಿ ನೀರು ತರುವುದಾಗಿ ಭರವಸೆ ನೀಡಿದ್ದರಿಂದ ರೈತರು ಶಾಸಕರನ್ನು ನಂಬಿ, ಲಕ್ಷಾಂತರ ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ. ಮಾ.5ರ ವರೆಗೆ ನೀರು ಹರಿ ಬಿಟ್ಟಿದ್ದರೂ ನಿಗದಿತ ಪ್ರಮಾಣದಲ್ಲಿ ಗೇಜ್ ಮೂಲಕ ನೀರು ಬರುತ್ತಿಲ್ಲ. ಇದರಿಂದ ರೈತರ ಬೆಳೆಗಳಿಗೆ ನೀರು ತಲುಪದೆ ಒಣಗಿ ಹಾನಿಯಾಗುತ್ತಿವೆ’ ಎಂದು ದೂರಿದರು.

‘ಹಳ್ಳ, ನದಿ, ಕೆರೆಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಜಿಲ್ಲಾಡಳಿತ ಕುಡಿಯುವ ನೀರಿಗಾಗಿ ಸಂಗ್ರಹಿಸಿದ ನೀರನ್ನು ಏಪ್ರಿಲ್ 1 ರಿಂದ 10 ರವರೆಗೆ ಹಾಗೂ ಜೂನ್ 1 ರಿಂದ 10 ರವರೆಗೆ ಎರಡು ಬಾರಿ ಕೆರೆಗಳನ್ನು ತುಂಬಿಸಲು ನಿರ್ಧರಿಸಿದೆ. ಏಪ್ರಿಲ್ ಬದಲಾಗಿ ಮಾರ್ಚ್‌ನಲ್ಲಿಯೇ ನೀರನ್ನು ತುಂಬಿಸಿದರೆ ಸುಮಾರು ಎರಡರಿಂದ ಎರಡುವರೆ ತಿಂಗಳು ನೀರಿಗೆ ತೊಂದರೆಯಾಗುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಸತ್ಯನಾರಾಯಣ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಕಾರ್ಯಾಧ್ಯಕ್ಷ ಮಲ್ಲೇಶಗೌಡ ಬಸಾಪೂರು, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಡಿ.ನದೀಮ್ಮುಲ್ಲಾ, ಕಾರಟಗಿಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ ಮಾತನಾಡಿದರು.

ತಹಶೀಲ್ದಾರ್ ವೆಂಕನಗೌಡ ಆರ್.ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಲಾಯಿತು. ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗೋವಿಂದರಾಜ, ಉದಯಗೌಡ ಗಿಣಿವಾರ, ಮುಖಂಡರಾದ ನೀಲಕಂಠರಾವ್ ಜಾಗೀರದಾರ್, ಆರ್.ಪಾಲಾಕ್ಷಗೌಡ, ಪಂಪಾರೆಡ್ಡಿ, ಚಂದ್ರಭೂಪಾಲ ನಾಡಗೌಡ, ಬಿ.ಹರ್ಷ, ಕೆ.ಜಿಲಾನಿಪಾಷಾ, ಧರ್ಮನಗೌಡ ಮಲ್ಕಾಪುರ, ಸಾಯಿರಾಮಕೃಷ್ಣ, ದಾಸರಿ ಸತ್ಯನಾರಾಯಣ, ರಾಘವೇಂದ್ರ ಪವಾರ್, ರಾಮರಾವ್ ಜಾಲಿಹಾಳಕ್ಯಾಂಪ್, ವೆಂಕಟೇಶ ನಂಜಲದಿನ್ನಿ, ಬಸವರಾಜರೆಡ್ಡಿ ಚನ್ನಳ್ಳಿ, ಶಂಕರಗೌಡ ಎಲೆಕೂಡ್ಲಿಗಿ, ತಿಮ್ಮಾರೆಡ್ಡಿ ಹುಡಾ, ಸುಮಿತ್ ತಡಕಲ್, ವೀರೇಶ ಹಟ್ಟಿ, ಸೈಯ್ಯದ್ ಆಸೀಫ್, ಬಾಬಾ ಕೋಟೆ ಇದ್ದರು.

**

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುವ ವಿಚಾರದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ದಿನಕ್ಕೊಂದು ಹೇಳಿಕೆ ನೀಡಿ ರೈತರ ದಿಕ್ಕು ತಪ್ಪಿಸಿ, ಬೆಳೆದ ಬೆಳೆಗಳನ್ನು ಹಾನಿಯಾಗುವಂತೆ ಮಾಡಿದ್ದಾರೆ.

-ವೆಂಕಟರಾವ್ ನಾಡಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry