ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ದೊರೆಯದ ‘ಶುದ್ಧ ನೀರು’

ನಗರಸಭೆ – ಭೂ ಸೇನಾ ನಿಗಮದ ನಡುವೆ ಮುಸುಕಿನ ಗುದ್ದಾಟ; ಘಟಕಗಳಿಗೆ ಪೂರೈಕೆಯಾಗದ ನೀರು
Last Updated 5 ಮಾರ್ಚ್ 2018, 7:43 IST
ಅಕ್ಷರ ಗಾತ್ರ

ಹುಣಸೂರು: ನಗರಸಭೆ ವ್ಯಾಪ್ತಿಯಲ್ಲಿ ತಲಾ ₹ 8.25 ಲಕ್ಷದಲ್ಲಿ ನಿರ್ಮಿಸಿರುವ 7 ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

ಹೌದು. ಇಲ್ಲಿವರೆಗೆ ಈ ಘಟಕಗಳಿಂದ ನಗರದ ಜನರಿಗೆ ಒಂದು ಹನಿ ನೀರು ಕೂಡ ದಕ್ಕಿಲ್ಲ. ಕಳೆದ ನವೆಂಬರ್ ತಿಂಗಳಿನಲ್ಲಿ ಶಾಸಕ ಮಂಜುನಾಥ್ ಉದ್ಘಾಟಿಸಿದ್ದಾರೆ. ಆದರೆ, ಇಲ್ಲಿವರೆಗೂ ಕಾರ್ಯಾರಂಭ ಮಾಡಿಲ್ಲ. ಇವುಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಬಗ್ಗೆ ನಗರಸಭೆ ಹಾಗೂ ಭೂಸೇನಾ ನಿಗಮದ ನಡುವೆ ಹಗ್ಗ– ಜಗ್ಗಾಟ ಉಂಟಾಗಿದೆ.

ಘಟಕಗಳ ಕಾರ್ಯಾರಂಭಕ್ಕೆ ಆಗ್ರಹಿಸಿ ಸ್ಥಳೀಯ ಸಂಘ– ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಿ, ನಾಗರಿಕರಿಗೆ ಶುದ್ಧ ಕುಡಿಯುವ ನೀರು ಭಾಗ್ಯ ನೀಡುವಂತೆ ಒತ್ತಾಯಿಸಿದರೂ ಸಂಬಂಧಿಸಿದ ಇಲಾಖೆ ಮೌನವಾಗಿದೆ.

‘ನಗರಸಭೆ ವ್ಯಾಪ್ತಿಯಲ್ಲಿ 7 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಶಾಸಕರು ಚಾಲನೆ ನೀಡಿದ್ದಾರೆ. ಇವುಗಳಿಗೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕೆಂಬುದು ಸಂಬಂಧಿಸಿದ ಇಲಾಖೆಯ ವಾದ. ಆದರೆ, ಕಾವೇರಿ ನೀರಿನ ಸಂಪರ್ಕ ನೀಡಿದರೆ, ಮನೆಗಳಿಗೆ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದೆ. ಹೀಗಾಗಿ, ನಗರಸಭೆ ಸದಸ್ಯರೂ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಪ್ರತ್ಯೇಕವಾಗಿ ಕೊಳವೆಬಾವಿ ಕೊರೆಯಿಸಿ ಸಂಪರ್ಕ ನೀಡಬೇಕಿದೆ’ ಎಂದು ನಗರಸಭೆ ಅಧ್ಯಕ್ಷ ಶಿವಕುಮಾರ್ ಪ್ರಜಾವಾಣಿಗೆ ತಿಳಿಸಿದರು.

‘ಘಟಕಗಳ ಕಾಮಗಾರಿ ನಡೆಸಿದ ಭೂ ಸೇನಾ ನಿಗಮದ ಅಧಿಕಾರಿಗಳು ನೀರಿನ ಸಂಪರ್ಕ ಕಲ್ಪಿಸುವ ಕುರಿತು ಆಲೋಚಿಸಬೇಕಿತ್ತು. ಇಲ್ಲವೆ, ಘಟಕ ಸ್ಥಾಪಿಸುವ ಸ್ಥಳದಲ್ಲಿ ನೀರಿನ ಲಭ್ಯತೆ ಕುರಿತು ನಗರಸಭೆ ಜತೆ ಚರ್ಚಿಸಬೇಕಿತ್ತು. ಆದರೆ, ಅವರಿಗೆ ತೋಚಿದ ಸ್ಥಳದಲ್ಲಿ ಘಟಕ ನಿರ್ಮಿಸಿದ್ದಾರೆ. ಈಗ ವಿನಾಕಾರಣ ನಗರಸಭೆ ದೂಷಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಘಟಕಗಳಿಗೆ ಕೊಳವೆಬಾವಿ ಸಂಪರ್ಕ ಕಲ್ಪಿಸಿ ಒಂದು ವರ್ಷದ ನಿರ್ವಹಣೆ ಮಾಡಿದ ಬಳಿಕ ನಮಗೆ ಹಸ್ತಾಂತರಿಸಲಿ. ಇಲ್ಲವೆ ನಗರಸಭೆಗೆ ಸಂಬಂಧಿಸಿದ ಇಲಾಖೆ ನಿರ್ವಹಣಾ ವೆಚ್ಚ ಪಾವತಿಸಲಿ’ ಎಂದರು.

ಭೂ ಸೇನಾ ನಿಗಮದ ಎಇಇ ರವೀಂದ್ರ ಪ್ರತಿಕ್ರಿಯಿಸಿ, ‘ಈಗಾಗಲೇ ಅಧಿಕೃತವಾಗಿ ನಗರಸಭೆಗೆ ಹಸ್ತಾಂತರಿ ಸುವ ಎಲ್ಲ ಪ್ರಕ್ರಿಯೆ ಮುಗಿದಿದೆ. ಘಟಕಗಳ ನಿರ್ವಹಣೆಗೆ ಸರ್ಕಾರವೇ ಒಂದು ವರ್ಷ ಕಾಲ ತಿಂಗಳಿಗೆ ₹ 3 ಸಾವಿರ ನೀಡಲು ಮುಂದಾಗಿದೆ. ಹೀಗಾಗಿ, ನಗರಸಭೆಗೆ ಯಾವುದೇ ಹೊರೆ ಆಗುವುದಿಲ್ಲ. ಘಟಕಕ್ಕೆ ನೀರಿನ ಸಂಪರ್ಕ ನೀಡುವ ಜವಾಬ್ದಾರಿ ನಗರ ಸಭೆಗೆ ಸೇರಿದೆ’ ಎಂದು ಹೇಳುತ್ತಾರೆ.

‘ಹುಣಸೂರು ರೋಟರಿ ಸಂಸ್ಥೆ ನಿರ್ವಹಣೆಗೆ ಮುಂದಾಗಿದೆ. ಇದಕ್ಕೆ ಹಸ್ತಾಂತರಿಸಲು ಶಾಸಕರು ಆಸಕ್ತರಿ ದ್ದಾರೆ. ನಗರಸಭೆ ಸುಪರ್ದಿಗೆ ಪಡೆದು ನಂತರ ರೋಟರಿಗೆ ಹಸ್ತಾಂತರಿಸುವು ದರಿಂದ ಯಾವುದೇ ಗೊಂದಲ ಇಲ್ಲದೆ ಘಟಕದ ಪ್ರಯೋಜನ ಸಾರ್ವಜನಿಕರಿಗೆ ಸಿಗಲಿದೆ’ ಎಂದು ಹೇಳಿದರು.

ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ‘ಸಾರ್ವಜನಿಕ ಹಣದಿಂದ ನಿರ್ಮಿಸಿದ ಘಟಕಗಳು 5 ತಿಂಗಳಿಂದ ಬಳಕೆ ಬಾರದೆ ತುಕ್ಕು ಹಿಡಿದಿವೆ. ನಗರದಲ್ಲಿ 70 ಸಾವಿರ ಜನಸಂಖ್ಯೆ ಇದ್ದು, ಬೇಸಿಗೆ ಆರಂಭವಾಗಿದೆ. ನಗರಸಭೆ, ಭೂಸೇನಾ ನಿಗಮದ ನಡುವಿನ ಮುಸುಕಿನ ಗುದ್ದಾ ಟದಿಂದಾಗಿ ನಾಗರಿಕರಿಗೆ ಶುದ್ಧ ನೀರು ಇಲ್ಲವಾಗಿದೆ’ ಎಂದು ದೂರುತ್ತಾರೆ.

‘ಬೇಸಿಗೆ ಆರಂಭವಾಗಿದೆ. ಹುಣಸೂರು ಕಾಲರಾ ರೋಗಕ್ಕೆ ಹೆಸರುವಾಸಿ. ಇಂತಹ ಸಂದರ್ಭದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇದೆ. ಕುಡಿಯುವ ನೀರಿನಲ್ಲಿ ರಾಜಕೀಯ ಬೆರಸದೆ ಶುದ್ಧ ನೀರು ಒದಗಿಸಲು ಮುಂದಾಗಬೇಕು’ ಎಂದು ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಶ್ರೀನಿವಾಸಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT