ಬಿಜೆಪಿ ಪಾದಯಾತ್ರೆಗೆ ಮುಖಾಮುಖಿಯಾದ ರೈ

7

ಬಿಜೆಪಿ ಪಾದಯಾತ್ರೆಗೆ ಮುಖಾಮುಖಿಯಾದ ರೈ

Published:
Updated:

ಮಂಗಳೂರು: ಪುತ್ತೂರಿನಲ್ಲಿ ಭಾನುವಾರ ಸಂಜೆ ಬಿಜೆಪಿಯ ಜನಸುರಕ್ಷಾ ಪಾದಯಾತ್ರೆಯ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಾರು ಹಾದುಹೋದದ್ದು ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು.

ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ, ಅವರ ಮೇಲಿನ ಹಲ್ಲೆ ಖಂಡಿಸಿ ಕುಶಾಲನಗರದಿಂದ ಹೊರಟಿದ್ದ ಜನಸುರಕ್ಷಾ ಯಾತ್ರೆ ಭಾನುವಾರ ಸಂಜೆ ಪುತ್ತೂರು ನಗರ ತಲುಪಿತ್ತು. ಸಂಸದರಾದ ನಳಿನ್‌ಕುಮಾರ್ ಕಟೀಲ್‌ ಮತ್ತು ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಸಂಜೆ 5.30ರ ಸುಮಾರಿಗೆ ಪುತ್ತೂರಿನ ಬೈಪಾಸ್‌ ರಸ್ತೆಯಲ್ಲಿ ಪಾದಯಾತ್ರೆ ಆರಂಭವಾಗಿತ್ತು.

ಅದೇ ಸಮಯಕ್ಕೆ ಸುಳ್ಯ ಕಡೆಯಿಂದ ಸಚಿವ ರೈ ಅವರಿದ್ದ ಕಾರು ಮತ್ತು ಬೆಂಗಾವಲು ವಾಹನಗಳು ಬಂದವು. ಅಶ್ವಿನಿ ವೃತ್ತದಲ್ಲಿ ಸಚಿವರನ್ನು ಭೇಟಿಯಾದ ಪೊಲೀಸ್ ಅಧಿಕಾರಿಗಳು ಬೈಪಾಸ್‌ ರಸ್ತೆಯ ಬದಲಿಗೆ ನಗರದ ಮಧ್ಯಭಾಗದ ಮುಖ್ಯರಸ್ತೆಯ ಮೂಲಕ ಹೋಗುವಂತೆ ಮನವಿ ಮಾಡಿದರು. ಅದನ್ನು ಒಪ್ಪಿದ ಸಚಿವರು ಆ ಮಾರ್ಗವಾಗಿ ಹೋಗುತ್ತಿದ್ದರು.

ಅಷ್ಟರಲ್ಲೇ ಪಾದಯಾತ್ರೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ‘ಮೋದಿ, ಮೋದಿ...’ ಎಂದು ಜೋರಾಗಿ ಘೋಷಣೆ ಕೂಗಲಾರಂಭಿಸಿದರು. ತಕ್ಷಣವೇ ವಾಹನವನ್ನು ಹಿಂದಕ್ಕೆ ತಿರುಗಿಸುವಂತೆ ಸಚಿವರು ಚಾಲಕನಿಗೆ ಸೂಚಿಸಿದರು. ಬೈಪಾಸ್‌ ಮೂಲಕವೇ ಹೋಗುವುದಾಗಿ ಪೊಲೀಸರಿಗೆ ತಿಳಿಸಿ, ಅದೇ ಮಾರ್ಗದಲ್ಲಿ ಹೊರಟರು.

ಬಿಜೆಪಿ ಪಾದಯಾತ್ರೆ ಮುಖಾಮುಖಿಯಾಗುತ್ತಿದ್ದಂತೆ ಒಂದೆರಡು ನಿಮಿಷ ಕಾರು ನಿಲ್ಲಿಸಿದ ಸಚಿವರು, ವಾಹನದ ಗಾಜನ್ನು ಕೆಳಕ್ಕೆ ಇಳಿಸಿದರು. ಮತ್ತೆ ಬಿಜೆಪಿ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಲಾರಂಭಿಸಿದರು. ಬಳಿಕ ಸಚಿವರು ಅಲ್ಲಿಂದ ನಿರ್ಗಮಿಸಿದರು.

ರಮಾನಾಥ ರೈ ಮತ್ತು ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ ಮುಖಾಮುಖಿಯಾದ ದೃಶ್ಯಾವಳಿ ಇರುವ ವಿಡಿಯೊ ತುಣುಕನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್‌ ಆಗುತ್ತಿದೆ.

ವಿದ್ಯುತ್‌ ವ್ಯತ್ಯಯ ನಾಳೆ

ಮಂಗಳೂರು: ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಇದೇ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5ಗಂಟೆಯವರೆಗೆ ಬೈಂದೂರು ಉಪವಿಭಾಗ ವ್ಯಾಪ್ತಿಯ ನಾಗೂರು, ಕಾಲ್ತೋಡು, ಯಡ್ತರೆ, ಕಂಬದಕೋಣೆ, ಬಿಜೂರು, ಕೆರ್ಗಾಲ್, ಹಳಗೇರಿ, ಬವಳಾಡಿ, ಹೇರೂರು, ಉಳ್ಳೂರು-2, ಮರವಂತೆ, ನಾವುಂದ, ಕಿರಿಮಂಜೇಶ್ವರ, ಹೇರಂಜಾಲು, ಕಾಲ್ತೋಡು, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ಸೇನಾಪುರ, ಬಡಾಕೆರೆ, ಕುಂದಬಾರಂದಡಿ, ಹಡವು, ತ್ರಾಸಿ, ಹೊಸಾಡು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry