ಬದುಕು ನೀಡಿದ ಡೊಣ್ಣ ಮೆಣಸಿನಕಾಯಿ

7

ಬದುಕು ನೀಡಿದ ಡೊಣ್ಣ ಮೆಣಸಿನಕಾಯಿ

Published:
Updated:
ಬದುಕು ನೀಡಿದ ಡೊಣ್ಣ ಮೆಣಸಿನಕಾಯಿ

ಕುಕನೂರು: ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಮೀಸಲಾಗಿ ಆರಕ್ಕೇರದೇ ಮೂರಕ್ಕಿಳಿಯದೇ ಸೊರಗಿ ಹೋಗಿದ್ದ ಸಮೀಪದ ದ್ಯಾಂಪುರ ಗ್ರಾಮದ ಬಸವರಾಜ ಭೀಮರೆಡ್ಡೆಪ್ಪ ಬಿಡನಾಳ ಕ್ಯಾಪ್ಸಿಕಂ ಬೆಳೆಯಿಂದ ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಕಠಿಣ ಪರಿಶ್ರಮ, ಛಲ ಇದ್ದರೆ ಚಿಕ್ಕ ಬೆಳೆಯಲ್ಲೂ ಆರ್ಥಿಕ ಲಾಭ ಗಳಿಸಬಹುದು ಎಂಬುದನ್ನು ತೋರಿಸಿ ಮಾದರಿಯಾಗಿದ್ದಾರೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಆಸಕ್ತಿಯ ಪ್ರತಿಫಲವಾಗಿ 20 ಗುಂಟೆ ಜಮೀನಿನಲ್ಲಿ ಕ್ಯಾಪ್ಸಿಕಂ(ಡೊಣ್ಣ ಮೆಣಸಿನಕಾಯಿ)ಬೆಳೆ ಬೆಳೆದು ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

‘ನಮಗ ಬೇರೆ ಭಾಷೆಗಳ ತೊಡಕ ಐತ್ರಿ, ಇನ್ನು ಸ್ವಲ್ಪ ದಿವಸ ತಡ್ರಿ, ನಾನೇ ನೇರವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳಿಸುವ ವಿಧಾನ ತಿಳ್ಕೊಂತೀನಿ’ ಎಂದು ಹೇಳುವ ಅವರು ಓದಿದ್ದು ಏಳನೇ ತರಗತಿ. ದೆಹಲಿ, ಛತ್ತಿಸಗಡ, ಮುಂಬೈಗೆ ತಮ್ಮ ಫಸಲನ್ನು ತಲುಪಿಸಿ, ಅಲ್ಲಿಂದ ಮಧ್ಯವರ್ತಿಗಳ ಮೂಲಕ ಸೌದಿಅರೇಬಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ ದೇಶಗಳ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಕುಕನೂರಿನ ಕ್ಯಾಪ್ಸಿಕಂ ಅನ್ನು ರಫ್ತು ಮಾಡುತ್ತಾರೆ.

ಪಾಲಿಹೌಸ್‌ನಲ್ಲಿ (ಹಸಿರು ಮನೆ) ಬೆಳೆದಿರುವ ಹಸಿರು, ಕೆಂಪು ಹಾಗೂ ಹಳದಿ ಬಣ್ಣದ ಡೊಣ್ಣ ಮೆಣಸಿನ ಕಾಯಿ ಗಿಡತುಂಬ ಫಸಲು ನೀಡಿವೆ. ಆರಂಭಿಕ ಲಾಭದಿಂದ ಉತ್ತೇಜಿತರಾಗಿರುವ ಅವರು ಇತರರಿಗೂ ಈ ಬೆಳೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಪಾಲಿಹೌಸ್‌ನಲ್ಲಿ ಬೆಳೆಯುವ ವಿಧಾನ: ‘ಸುಮಾರು ಇಪ್ಪತ್ತು ಗುಂಟೆ ಜಾಗದಲ್ಲಿ ಮೂರು ಅಡಿ ಅಗಲದ 38 ಬೆಡ್‌ಗಳನ್ನು (ಎತ್ತರದ ಮಣ್ಣಿನ ಸಾಲು) ನಿರ್ಮಿಸಲಾಗಿದೆ. ಸಾಲಿನಲ್ಲಿರುವ ಮಣ್ಣನ್ನು ಸಡಿಲಗೊಳಿಸಿ, ಅಗತ್ಯ ಗೊಬ್ಬರ ಹಾಕಿ, ನೀರು ಪೂರೈಸಲು ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 16 ಸೆಂಟಿಮೀಟರ್‌ಗೆ ಒಂದೊಂದರಂತೆ ನಾಟಿ ಮಾಡಿರುವ 6000ದಷ್ಟು ಸಸಿಗಳು 12–13 ಅಡಿ ಎತ್ತರಕ್ಕೆ ಬೆಳೆದಿವೆ. ಸಸಿಗಳಿಗೆ ಅಗತ್ಯ ಬೆಳಕು ಮತ್ತು ಗಾಳಿ ಸಿಗುವ ವ್ಯವಸ್ಥೆಯನ್ನು ಹಸಿರುಮನೆ ಮಾಡುತ್ತದೆ’ ಎಂದು ಬಸವರಾಜ ಹೇಳಿದರು.

‘ಬೀದರ್‌ನಿಂದ ₹14ಕ್ಕೆ ಒಂದರಂತೆ ಸಸಿಗಳನ್ನು ತಂದಿದ್ದೇನೆ. ನಾಟಿ ಮಾಡಿದ 70 ದಿನಗಳಲ್ಲಿ ಕಾಯಿ ಬಿಡಲು ಆರಂಭವಾಗುತ್ತದೆ. 90 ದಿನದಲ್ಲಿ ಕಾಯಿ ಕೊಯ್ಲು ಮಾಡುವ ಹಂತಕ್ಕೆ ಬರುತ್ತವೆ. ಪ್ರತಿ ಗಿಡದಲ್ಲಿ 3–4 ಕೆ.ಜಿ ಕಾಯಿಗಳು ಸಿಗುತ್ತವೆ. ಪ್ರತಿ ಕಾಯಿ 250–280 ಗ್ರಾಂ ತೂಗುತ್ತದೆ. ಐದು ತಿಂಗಳವರೆಗೆ 10ಟನ್‌ ಕ್ಯಾಪ್ಸಿಕಂ ಬೆಳೆದು ₹ 8 ಲಕ್ಷದಿಂದ ₹10 ಲಕ್ಷ ಆದಾಯ ಗಳಿಸಬಹುದು. ಸದ್ಯ ಹಸಿರು ಕಾಯಿ ಪ್ರತಿ ಕೆ.ಜಿ.ಗೆ ₹ 25ರಿಂದ ₹30 ಇದೆ. ಹಳದಿ ಮತ್ತು ಕೆಂಪು ಕಾಯಿಗಳು ಪ್ರತಿ ಕೆಜಿಗೆ ₹ 80ರಿಂದ ₹100ವರೆಗೆ ಮಾರಾಟವಾಗುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.

ಹೋಟೆಲ್‌ಗಳಲ್ಲಿ ಹೆಚ್ಚಿನ ಬೇಡಿಕೆ: ‘ಪ್ರತಿ ವಾರಕ್ಕೆ 3ರಿಂದ 5 ಟನ್‌ ಕ್ಯಾಪ್ಸಿಕಂ ಬೆಳೆಯನ್ನು ಕಟಾವು ಮಾಡಲಾಗುತ್ತದೆ. 20 ಕೆ.ಜಿ. ರಟ್ಟಿನ ಬಾಕ್ಸ್‌ನಲ್ಲಿ ಕಾಯಿಗಳನ್ನು ಪ್ಯಾಕ್‌ ಮಾಡಿ, ಹುಬ್ಬಳ್ಳಿ ಮೂಲಕ ಛತ್ತಿಸ್‌ಗಡ, ಕಲ್ಕತ್ತಾ, ದುಬೈ, ಹಾಗೂ ಬೆಳಗಾವಿ ಮಾರುಕಟ್ಟೆಗೆ ಕಳುಹಿಸುತ್ತೇವೆ. ಚೈನೀಸ್‌ ಹೊಟೇಲ್‌ಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ’ ಎನ್ನುತ್ತಾರೆ.

‘ಅರ್ಧ ಎಕರೆ ಜಮೀನಿನಲ್ಲಿ ₹17 ಲಕ್ಷ ಬ್ಯಾಂಕ್‌ನಲ್ಲಿ ಸಾಲ ಮಾಡಿ ಪಾಲಿಹೌಸ್‌ ನಿರ್ಮಿಸಿದೆ. ಸರ್ಕಾರ ₹ 8 ಲಕ್ಷ 70 ಸಾವಿರ ಸಹಾಯಧನ ನೀಡಿದೆ. ಮೊದಲು ಚಿಕ್ಕುಹಣ್ಣು ಹಾಕಿದ್ದೆ. ಈಗ ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಂ ಹಾಕಿದ್ದೇನೆ. ಎಂಟರಿಂದ ಹತ್ತು ತಿಂಗಳು ಈ ಬೆಳೆ ಬರುತ್ತದೆ. ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿರುವುದರಿಂದ ರಫ್ತು ಮಾಡುವವರು ತೋಟಕ್ಕೇ ಬಂದು ಖರೀದಿಸುತ್ತಿದ್ದಾರೆ. ಪಾಲಿ ಹೌಸ್‌ ಪದ್ಧತಿಯಿಂದ ಇಳುವರಿ ಮತ್ತು ಗುಣಮಟ್ಟ ಹೆಚ್ಚುವುದಲ್ಲದೆ ರೋಗಗಳು ಕಡಿಮೆ. ನೀರು ಕೂಡ ಉಳಿತಾಯ’ ಎಂದು ವಿವರಿಸಿದರು.

ಜೀವಾಮೃತ ಮತ್ತು ಸಾವಯವ ಔಷಧಿ: ನೀರಿನೊಂದಿಗೆ ದ್ವಿದಳ ಧಾನ್ಯದ ಹಿಟ್ಟು, ಮಣ್ಣು, ಸಗಣಿ, ಗಂಜಲದ ಮಿಶ್ರಣದ ಜೀವಾಮೃತ ತಯಾರಿಸಿ ಒಂದೊಂದು ಗಿಡಕ್ಕೂ ಒಂದೊಂದು ಲೋಟವನ್ನು15 ದಿನಗಳಿಗೊಮ್ಮೆ ನೀಡುತ್ತೇನೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಉತ್ತಮ ಇಳುವರಿಯೂ ಲಭ್ಯ’ ಎನ್ನುತ್ತಾರೆ ಅವರು.

ಬಸವರಾಜ ಅವರ ಸಂಪರ್ಕಕ್ಕೆ ಮೊ:9980361673

**

ಕಡಿಮೆ ವೆಚ್ಚದಲ್ಲಿ, ಹೆಚ್ಚು ಆದಾಯ ಗಳಿಸಬಲ್ಲ ಕ್ಯಾಪ್ಸಿಕಂ ರೈತರ ಕೈ ಹಿಡಿದಿದೆ. ಬಣ್ಣದ ಬೆಳೆ, ಲಾಭದಾಯಕವೂ ಹೌದು.

–ಕೃಷ್ಣ ಉಕುಂದ್‌, ಉಪ ನಿರ್ದೇಶಕ ತೋಟಗಾರಿಕಾ ಇಲಾಖೆ

*

ಮಂಜುನಾಥ ಎಸ್‌.ಅಂಗಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry