ಕಾಂಗ್ರೆಸ್‌ನಿಂದ ಬೆಂಗಳೂರನ್ನು ರಕ್ಷಿಸಿ ಎಂದು ಸರಣಿ ಆರೋಪಗಳ ಟ್ವೀಟ್‌ ಮಾಡಿದ ಬಿಜೆಪಿ

ಶನಿವಾರ, ಮಾರ್ಚ್ 23, 2019
34 °C

ಕಾಂಗ್ರೆಸ್‌ನಿಂದ ಬೆಂಗಳೂರನ್ನು ರಕ್ಷಿಸಿ ಎಂದು ಸರಣಿ ಆರೋಪಗಳ ಟ್ವೀಟ್‌ ಮಾಡಿದ ಬಿಜೆಪಿ

Published:
Updated:
ಕಾಂಗ್ರೆಸ್‌ನಿಂದ ಬೆಂಗಳೂರನ್ನು ರಕ್ಷಿಸಿ ಎಂದು ಸರಣಿ ಆರೋಪಗಳ ಟ್ವೀಟ್‌ ಮಾಡಿದ ಬಿಜೆಪಿ

ಬೆಂಗಳೂರು: ನಗರದಲ್ಲಿನ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಆಕ್ಷಾಂಕೆಯಿಂದಾಗಿ ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಪ್ರತಿದಿನ ಪ್ರಬಲಗೊಳಿಸುತ್ತಿದೆ. ಅದಕ್ಕಾಗಿ ‘ಬೆಂಗಳೂರು ರಕ್ಷಿಸಿ’ ಅಭಿಯಾನ ಹಮ್ಮಿಕೊಂಡಿದ್ದಲ್ಲದೆ. ‘ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ನೀಡಿದ ಭರವಸೆ ಏನು, ಐದು ವರ್ಷಗಳ ಬಳಿಕ ನಗರದ ವಾಸ್ತವ ಸ್ಥಿತಿ ಏನಿದೆ’ ಎಂಬುದರ ಕುರಿತು ಟ್ವೀಟ್‌ಗಳನ್ನು ಮಾಡಿದೆ. 

‘ನಗರದಲ್ಲಿನ 350 ಕಿ.ಮೀ.ನಷ್ಟು ವಿಸ್ತರಿಸಿರುವ 268 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿ ಕಾಂಗ್ರೆಸ್‌ ಹೇಳಿತ್ತು. ಆದರೆ, ರಸ್ತೆಗಳಲ್ಲಿ 24 ಸಾವಿರ ಗುಂಡಿಗಳನ್ನು ಕಾಣುವಂತಾಯಿತು. ರಸ್ತೆಗಳ ಅಭಿವೃದ್ಧಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಉದಾಹರಣೆಗೆ ಕೆಂಪೇಗೌಡ ಬಡಾವಣೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕೇವಲ 12 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ₹ 468 ಕೋಟಿ ವ್ಯಯಿಸಲಾಗಿದೆ’ ಎಂದು ಆರೋಪಿಸಿದೆ.

‘₹ 650 ಕೋಟಿ ವೆಚ್ಚದಲ್ಲಿ 12 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂದಿದ್ದರು. ಈ ಯೋಜನೆಯಲ್ಲಿ ಕೇವಲ 16 ಕಿ.ಮೀ. ರಸ್ತೆ ಒಳಗೊಂಡಿದೆ. ಪ್ರತಿ ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 39 ಕೋಟಿ ಖರ್ಚು ಮಾಡಲಾಗಿದೆ. ಈ ಯೋಜನೆ ಕಾಂಗ್ರೆಸ್‌ ನಾಯಕರಿಗೆ ಸಂಪತ್ತು ಗಳಿಕೆಯ ಮೂಲವಾಗಿದೆ’

‘334 ಕಿ.ಮೀ. ಉದ್ದದ ರಾಜಕಾಲುವೆಗಳನ್ನು ₹ 1,528 ಕೋಟಿಯಿಂದ ಅಭಿವೃದ್ಧಿ ಪಡಿಸುವುದಾಗಿ 2015ರಲ್ಲಿ ಹೇಳಿತ್ತು. ಎರಡು ವರ್ಷ ಯಾವುದೇ ಕಾಮಗಾರಿ ಆರಂಭವಾಗಲಿಲ್ಲ. ನಗರದಲ್ಲಿ  2017ರಲ್ಲಿ  ಜಲಪ್ರವಾಹ ಉಂಟಾಗಿ ಸಾವಿರಾರು ಕೋಟಿಯ ಆಸ್ತಿ ಹಾನಿಯಾದ ಬಳಿಕ, ಕಾಮಗಾರಿ ಆರಂಭಿಸಿತು. ಆ ಕಾಮಗಾರಿಗಳಿಂದ ಈಗ ಭ್ರಷ್ಟಾಚಾರದ ನಾತ ಬರುತ್ತಿದೆ’

‘ನಗರದ ಕೆರೆಗಳು ಕಳೆ, ನೊರೆ, ಬೆಂಕಿಯಿಂದ ನಲುಗುತ್ತಿವೆ. ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಕೆರೆ ಅಭಿವೃದ್ಧಿಗೆ ನೀಡಿದ ₹ 887 ಕೋಟಿ ಬಳಕೆಯಾಗದೆ ಮರಳಿದೆ. ಗಾರ್ಬೆಜ್‌ ಮಾಫಿಯಾದಿಂದ ಘನತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ’

‘ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳ ರಸ್ತೆಗಳನ್ನೆ ಆಯ್ದುಕೊಂಡು ವೈಟ್‌ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಯೋಜನೆಗೆ ₹ 1,490 ಕೋಟಿ ಖರ್ಚು ಮಾಡಲಾಗುತ್ತಿದೆ. ಚುನಾವಣೆಗೆ ಹಣ ಸಂಗ್ರಹಿಸಿಲು ಇದು ಒಂದು ಮೂಲವಾಗಿದೆ. ಸುಸ್ಥಿತಿಯಲ್ಲಿರುವ ರಸ್ತೆಗಳನ್ನೆ ಇದಕ್ಕಾಗಿ ಅಗೆಯಲಾಗುತ್ತಿದೆ. ಹಾಳಾಗಿರುವ ರಸ್ತೆಗಳ ಕಡೆ ಗಮನ ಹರಿಸುತ್ತಿಲ್ಲ’

‘ನಗರದ ಹಸಿರು ಹೆಚ್ಚಿಸಲು ನಾಲ್ಕು ಹೊಸ ಟ್ರೀಪಾರ್ಕ್‌ (ಮರಗಳ ಉದ್ಯಾನ) ನಿರ್ಮಿಸುವುದಾಗಿ ಹೇಳಿದ್ದಿರಿ. ಆದರೆ, ಉಕ್ಕಿನ ಸೇತುವೆ ನಿರ್ಮಾಣಕ್ಕೆ 800 ಮರಗಳನ್ನು ಕಡಿಯಲು ಮುಂದಾದಿರಿ. ಜನವಿರೋಧದಿಂದ ಅದು ತಪ್ಪಿತು. ಈಗ ರಾಜ್ಯ ಮರಗಳ ರಕ್ಷಣಾ ಕಾಯ್ದೆಯನ್ನೆ ತಿದ್ದುಪಡಿ ಮಾಡಲು ನಿರ್ಧರಿಸಿದ್ದಿರಿ. ಪರಿಸರದ ಬಗ್ಗೆ ನಿಮ್ಮ ನಿರ್ಲಕ್ಷದಿಂದಾಗಿ ನಗರ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಿದೆ’

‘ಕಾಂಗ್ರೆಸ್‌ ಆಡಳಿತದ ಬಿಬಿಎಂಪಿ ವರಮಾನ ಸಂಗ್ರಹದಲ್ಲೂ ಸೋತಿದೆ. ಕಳೆದ ವರ್ಷ ₹ 10 ಸಾವಿರ ಕೋಟಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ ₹ 7,531 ಕೋಟಿ ಸಂಗ್ರಹಿಸಲಾಯಿತು. ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವನ್ನು ಸರಿಯಾಗಿ ವಿನಿಯೋಗಿಸಲಿಲ್ಲ’.

‘ನಗರದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದಾಗ, ನಮ್ಮನೆ ಸುಳ್ಳುಗಾರರೆಂದು ಜರಿದಿರಿ. ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ನಗರದಲ್ಲಿ 1,206 ಕೊಲೆ, 3,755 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಸರಗಳ್ಳತನ, ಮಾದಕ ವಸ್ತುಗಳ ಮಾಫಿಯಾ ದಿನಾಲೂ ಸುದ್ದಿಯಾಗುತ್ತಿದೆ.  ಮಹಿಳಾ ದೌರ್ಜನ್ಯ ಕುರಿತು 15 ಸಾವಿರ ದೂರುಗಳು ದಾಖಲಾಗಿವೆ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry