ಕೊಳಲಿನ ಹಬ್ಬ

7

ಕೊಳಲಿನ ಹಬ್ಬ

Published:
Updated:
ಕೊಳಲಿನ ಹಬ್ಬ

ಈ ದೇವಾಲಯದಲ್ಲಿ ವರ್ಷಕ್ಕೊಂದು ಉತ್ಸವ. ಅದು ಶ್ರೀಕೃಷ್ಣನ ಕೊಳಲಿನ ಉತ್ಸವ. ದೇವಾಲಯದಲ್ಲಿ ಜತನದಿಂದ ಕಾಯ್ದಿಟ್ಟಿರುವ ಕೊಳಲನ್ನು ತೆಗೆದು ಪೂಜಿಸುವ ಗೊಲ್ಲ ಜನಾಂಗದವರ ಹಬ್ಬವಿದು. ಅಲೆಅಲೆಯಾಗಿ ತೇಲಿ ಬರುವ ಶ್ರೀಕೃಷ್ಣನ ಕೊಳಲಿನ ನಿನಾದ. ಶ್ವೇತವಸ್ತ್ರ ಧರಿಸಿ ಹಬ್ಬದಲ್ಲಿ ಪಾಲ್ಗೊಳ್ಳುವ ಮಹಿಳೆಯರು. ಪ್ರತಿ ಮನೆಯಲ್ಲಿಯೂ ಸುಧಾಮನ ನೆನಪಲ್ಲಿ ಅವಲಕ್ಕಿ ತಿನಿಸು. ಸಂಭ್ರಮಿಸುವ ಮಕ್ಕಳು. ಕೊಡಗಿನ ನಿಸರ್ಗದ ನಡುವೆ ಹುದುಗಿರುವ ಪುಟ್ಟ ಗ್ರಾಮ ಅಯ್ಯಂಗೇರಿ ಎಂಬಲ್ಲಿ ಮೂರು ದಿನಗಳ ಕಾಲ ನಡೆಯುವ ‘ಚಿನ್ನತಪ್ಪ’ ಹಬ್ಬದಲ್ಲಿ ಕಂಡು ಬರುವ ಸುಂದರ ದೃಶ್ಯಗಳು.

ಭಾಗಮಂಡಲದಿಂದ ಆರು ಕಿ.ಮೀ. ದೂರದಲ್ಲಿ ರುವ ಪುಟ್ಟ ಗ್ರಾಮ ಅಯ್ಯಂಗೇರಿ. ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. ಅಂತರ. ಇಲ್ಲಿರುವ ಶ್ರೀಕೃಷ್ಣನದು ಎನ್ನಲಾದ ಪುರಾತನ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸುವುದೇ ‘ಚಿನ್ನತಪ್ಪ’ ಹಬ್ಬದ ವಿಶೇಷ. ಈ ವರ್ಷ ಮಾರ್ಚ್ 9 ಮತ್ತು 10ರಂದು ಶ್ರೀಕೃಷ್ಣನ ಕೊಳಲಿನ ಉತ್ಸವ ಚಿನ್ನತಪ್ಪ ಜರುಗಲಿದೆ.

ಸುತ್ತಲೂ ಬೆಟ್ಟದಿಂದ ಆವೃತಗೊಂಡು, ಕಾಫಿ ತೋಟ ಹಾಗೂ ಗದ್ದೆ ಬಯಲಿನ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳಿಂದ ಕೂಡಿರುವ ನಿಸರ್ಗ ರಮಣೀಯ ತಾಣವಾಗಿರುವ ಅಯ್ಯಂಗೇರಿ ಇಲ್ಲಿರುವ ಕೃಷ್ಣ ದೇಗುಲ ಹಾಗೂ ವರ್ಷಕ್ಕೊಮ್ಮೆ ನಡೆಯುವ ‘ಚಿನ್ನತಪ್ಪ’ ಹಬ್ಬದಿಂದ ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ. ಗೊಲ್ಲ ಜನಾಂಗದವರು ನಡೆಸುವ ಈ ಹಬ್ಬ ಪ್ರತಿವರ್ಷ ಬೇಸಿಗೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯದೊಂದಿಗೆ ನೆರವೇರುತ್ತದೆ.

ಶ್ರೀಕೃಷ್ಣ ಕೊಳಲಿನ ರೂಪದಲ್ಲಿ ಇಲ್ಲಿ ನೆಲೆಗೊಂಡಿದ್ದಾನೆ ಎಂಬುದು ಜನರ ನಂಬಿಕೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವನಿಗೆ ಶ್ರೀಕೃಷ್ಣ ಪರಮಾತ್ಮ ಧರಿಸುವ ಆಭರಣ ತೊಡಿಸುವರು.‌ ಎತ್ತು ಪೋರಾಟ ಎಂಬ ಸಾಂಪ್ರದಾಯಿಕ ಆಚರಣೆಯಲ್ಲಿ ಎತ್ತುಗಳನ್ನು ಗದ್ದೆಯಲ್ಲೇ ಮೂರು ಸುತ್ತು ಓಡಿಸುತ್ತಾರೆ. ಬಿಳಿ ಸೀರೆ ಉಟ್ಟ ಹದಿನಾರು ಕುಟುಂಬದ ಮಹಿಳೆಯರು ಚೆಂಬುಚೆರ್ಕ್ (ಅಕ್ಕಿ ಬೈವಾಡು) ಒಪ್ಪಿಸುವ ಪದ್ಧತಿ ಇದೆ. ಇಲ್ಲಿ ಗೊಲ್ಲ ಜನಾಂಗದವರೇ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದು ಬಂದಿದೆ.

ಶ್ರೀಕೃಷ್ಣ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಆಚರಿಸಲ್ಪಡುವ ಚಿನ್ನತಪ್ಪ ಹಬ್ಬದಲ್ಲಿ ಶ್ರೀಕೃಷ್ಣನ ಕೊಳಲನ್ನು ಊದಲಾಗುತ್ತದೆ. ನೀಲವರ್ಣದ ಆಗಸ ದಲ್ಲಿ ಪ್ರಾತಃಕಾಲದ ಹೊತ್ತು ಸೂರ್ಯ ಮೇಲೆದ್ದು ಬರುವಾಗ ನೀವಲ್ಲಿದ್ದರೆ ಶ್ರೀಕೃಷ್ಣನ ಕೊಳಲ ಕರೆ ಆಲಿಸ ಬಹುದು. ಪ್ರತಿವರ್ಷ ಬೆಳಗಿನ ಆಚರಣೆಯೊಂದಿಗೆ ಆರಂಭಗೊಳ್ಳುವ ಉತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ, ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ... ಹೀಗೆ ಮರುದಿನ ಬೆಳಗಿನ ಜಾವ ಎರಡು ಗಂಟೆ ವರೆಗೆ ಜರಗುತ್ತದೆ. ಪಟ್ಟಣಿ ಹಬ್ಬ ವೀಕ್ಷಿಸಲು ಅಸಂಖ್ಯಾತ ಭಕ್ತರು ಬಂದು ಸೇರುತ್ತಾರೆ. ಊರ ಮಂದ್‍ನಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಶ್ರೀಕೃಷ್ಣನನ್ನು ಪೂಜಿಸುವುದರೊಂದಿಗೆ

ವಿಶೇಷ ಸಾಂಸ್ಕೃತಿಕ ಚಟುವಟಿಕೆ ಗಳು ನಡೆಯುತ್ತವೆ. ಈ ಉತ್ಸವದ ವೈಶಿಷ್ಟ್ಯ ಕೊಳಲು. ಇಂಥ ನೀರವತೆಯ ತಾಣದಲ್ಲಿ ಶ್ರೀಕಷ್ಣನ ಕೊಳಲು ಬಂದುದಾದರೂ ಹೇಗೆ? ಕೆಲವು ಹಿರಿಯರ ಪ್ರಕಾರ, ಶ್ರೀಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಆ ಊರವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರಂತೆ.

ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ನಿತ್ಯ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಿಲ್ಲ. ಪಟ್ಟಣಿ ಹಬ್ಬಕ್ಕಂತೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಆದಿನ ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಮಹಿಳೆ ಶ್ವೇತವಸ್ತ್ರ ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾಳೆ. ಸಂಜೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕುವ ಸಂಪ್ರದಾಯ ನೆರವೇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry