ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ನಿರ್ದೇಶಕ, ಸಂಗೀತ ಪ್ರತಿಪಾದಕ

Last Updated 6 ಮಾರ್ಚ್ 2018, 6:26 IST
ಅಕ್ಷರ ಗಾತ್ರ

ಪೊಲೆಂಡ್‌ನ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಸಂಸ್ಥೆ ‘ಥಿಯೇಟರ್‌ ಜಾರ್‌’. ವಿಭಿನ್ನ ರಂಗಪ್ರಸ್ತುತಿಗಳನ್ನು ಜನರ ಮುಂದಿಡುತ್ತಾ, ವಿವಿಧ ದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಇತ್ತೀಚೆಗಷ್ಟೇ ಥಿಯೇಟರ್‌ ಓಲಿಂಪಿಕ್‌ ನೆಪದಲ್ಲಿ ಬೆಂಗಳೂರಿಗೆ ಬಂದಿದ್ದ ಥಿಯೇಟರ್‌ ಜಾರ್‌ ತಂಡ ‘ಸಿಸೇರಿಯನ್‌ ಸೆಕ್ಷನ್‌’ ಎನ್ನುವ ನಾಟಕವನ್ನು ಪ್ರದರ್ಶಿಸಿತು. ಈ ರಂಗತಂಡದ ಸಂಸ್ಥಾಪಕ ಹಾಗೂ ರಂಗಪ್ರಸ್ತುತಿಯ ಸಂಯೋಜಕರಾದ ಜೆರೊಸ್ಲಾವ್‌ ಫ್ರೆಟ್‌ 'ಮೆಟ್ರೊ' ಮಾತಿಗೆ ದನಿಯಾದರು.

ರಂಗಭೂಮಿ ಪಯಣ ಪ್ರಾರಂಭವಾದುದರ ಬಗ್ಗೆ ಹೇಳಿ...
ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಗ್ರೊತೊವಸ್ಕಿ ಸಂಸ್ಥೆಯ ನಿರ್ದೇಶಕನಾಗಿದ್ದೇನೆ. ರಂಗಭೂಮಿಗೆ ಸಂಬಂಧಿಸಿದ ಶಾಲೆಯೊಂದರಲ್ಲಿ ಉಪನ್ಯಾಸಕನಾಗಿದ್ದೇನೆ. ಥಿಯೇಟರ್‌ ಜಾರ್‌ನ ಸಂಸ್ಥಾಪಕನೂ ಹೌದು. ಜಾರ್ಜಿಯಾ, ಅರ್ಮೇನಿಯಾ ಹಾಗೂ ಇರಾನ್‌ನಲ್ಲಿರುವ ಸಾಂಪ್ರದಾಯಿಕ ಸಂಗೀತಗಳ ಬಗೆಗೆ ಸಂಶೋಧನೆಯನ್ನೂ ಮಾಡಿದ್ದೇನೆ. ’ಗಾಸ್ಪೆಲ್ಸ್‌ ಆಫ್‌ ಚೈಲ್ಡ್‌ಹುಡ್‌’, "ಮೆಡಿಯೇಸ್‌ ಆನ್‌ ಗೆಟ್ಟಿಂಗ್‌ ಅಕ್ರಾಸ್‌', "ಸಿಸೇರಿಯನ್‌ ಸೆಕ್ಷನ್‌' ರಂಗಪ್ರಸ್ತುತಿಗಳನ್ನು ಮಾಡಿರುವೆ. ನನ್ನೆಲ್ಲಾ ರಂಗಪ್ರಸ್ತುತಿಯಲ್ಲಿ ಸಂಗೀತವೇ ಪ್ರಧಾನ. ಸಂಗೀತ, ಸಾಹಿತ್ಯ ಹಾಗೂ ಕಲಾತ್ಮಕ ಅಂಶಗಳೇ ಹೆಚ್ಚಾಗಿ ಇರುತ್ತವೆ.

ನಿಮ್ಮ ನಾಟಕದ ಮೂಲವಸ್ತು ಏನಾಗಿರುತ್ತದೆ?
‘ಥಿಯೇಟರ್‌ ಜಾರ್‌’ ಖಂಡಿತ ನಾಟಕಗಳನ್ನು ಮಾಡುವುದಿಲ್ಲ. ಸಿದ್ಧ ಸಾಹಿತ್ಯವನ್ನಿಟ್ಟುಕೊಂಡು ಅದನ್ನು ನಿರ್ದೇಶಿಸುವ ನಿರ್ದೇಶಕನೂ ನಾನಲ್ಲ. ನನ್ನೆಲ್ಲಾ ಪ್ರಸ್ತುತಿಗಳೂ ಸಂಗೀತ ಪ್ರಧಾನವಾಗಿಯೇ ಇರುತ್ತವೆ. ಧ್ವನಿ, ಸಂಗೀತ, ಕಲಾತ್ಮಕ ಚಲನೆಗಳ ಮೂಲಕ ವಿಭಿನ್ನ ವಿಷಯಗಳನ್ನು ಪ್ರಸ್ತುತಪಡಿಸುತ್ತೇವೆ. ಬೆಂಗಳೂರಿನಲ್ಲಿ ಪ್ರದರ್ಶಿಸಿದ ‘ಸಿಸೇರಿಯನ್‌ ಸೆಕ್ಷನ್‌’ ಪ್ರಸ್ತುತಿ ಕೂಡ ಅಷ್ಟೇ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಮನಸ್ಥಿತಿಗೆ ಬಂದಿರುವ ವ್ಯಕ್ತಿಯೊಬ್ಬನ ಹೃದಯ ಹಾಗೂ ಮನಸು ಹೇಗೆಲ್ಲಾ ವರ್ತಿಸುತ್ತದೆ ಎನ್ನುವುದನ್ನು ತೋರಿಸುವ ಒಂದು ರೂಪಕವಷ್ಟೇ. ಆತ್ಮಹತ್ಯೆ ಸರಿಯೋ, ತಪ್ಪೋ ಎನ್ನುವುದನ್ನು ನಾನು ಹೇಳುತ್ತಿಲ್ಲ. ಆ ಸ್ಥಿತಿಗೆ ಬಂದ ವ್ಯಕ್ತಿಯ ನಡವಳಿಕೆ ಹೇಗಿರುತ್ತದೆ ಎನ್ನುವುದನ್ನು ರಂಗದಲ್ಲಿ ಬಿಂಬಿಸುವ ಪ್ರಯತ್ನವಷ್ಟೇ.

ಈ ರಂಗಪ್ರಸ್ತುತಿಗೆ ಪ್ರತಿಕ್ರಿಯೆ ಹೇಗಿದೆ?
‘ಸಿಸೇರಿಯನ್‌ ಸೆಕ್ಷನ್‌’ ಅನ್ನು ಮೂರು ವಿಭಾಗಗಳಲ್ಲಿ ಸಂಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದು 2ನೇ ಕಂತು. ಎಂಟು ವರ್ಷದ ಹಿಂದೆ ದೆಹಲಿಯಲ್ಲಿ ಪ್ರದರ್ಶಿಸಿದ್ದೆವು. ಹತ್ತು ವರ್ಷಗಳಿಂದ ಪ್ರಪಂಚದಾದ್ಯಂತ ಪ್ರದರ್ಶಿಸಿದ್ದೇವೆ. 200ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ರಂಗಭೂಮಿಯ ಸಿದ್ಧ ಮಾದರಿಗೆ ಅಂಟಿಕೊಳ್ಳದೆ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿರುವ ನಮ್ಮ ಪ್ರಯತ್ನವನ್ನು ಅನೇಕರು ಮೆಚ್ಚಿದ್ದಾರೆ. ಕೆಲವರು ಇಂಥ ಪ್ರಯೋಗ ಎಲ್ಲಿಯೂ ನೋಡಿಲ್ಲ, ರಂಗಭೂಮಿಯಲ್ಲಿ ನೋಡಿದ ಅತ್ಯುತ್ತಮ ಪ್ರದರ್ಶನ ಇದು ಎಂದರು. ಹಾಗೇ ಕೆಲವರಿಂದ ಕೆಟ್ಟ ಅಭಿಪ್ರಾಯಗಳೂ ಬಂದಿವೆ.

ಬೆಂಗಳೂರಿನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಹೇಗೆನಿಸಿತು?
ಥಿಯೇಟರ್‌ ಒಲಿಂಪಿಕ್‌ ಭಾಗವಾಗಿ ಪ್ರದರ್ಶನ ನೀಡಿದೆವು. ಸ್ಟುಡಿಯೊ ವಾತಾವರಣ ‘ಸಿಸೇರಿಯನ್‌ ಸೆಕ್ಷನ್‌’ ಪ್ರಸ್ತುತಪಡಿಸುವುದಕ್ಕೆ ಸೂಕ್ತ ವೇದಿಕೆ. ಆದರೆ ಇಂಥ ವೇದಿಕೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು. ದೂರದಲ್ಲಿ ಕುಳಿತು ಬೆಳಕಿನ ವಿನ್ಯಾಸ ಮಾಡುತ್ತಾ ಕುಳಿತಿದ್ದೆ. ನನಗೆ ಇಂಥ ವೇದಿಕೆಯಲ್ಲಿ ನಮ್ಮ ಚಿಂತನೆಯನ್ನು ಪ್ರಸ್ತುತಪಡಿಸುವುದು ತುಂಬಾ ಸವಾಲಿನ ಕೆಲಸ ಎನಿಸಿತು. ಇಲ್ಲಿಯ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಬೇಕಿತ್ತು ಎನಿಸಿತು. ಸಮುದ್ರವೊಂದರಲ್ಲಿ ಬಿಟ್ಟು ಈಜಾಡು ಎಂದಂಥ ಭಾವನೆ ಉಂಟಾಯಿತು. ಈ ವೇದಿಕೆ ನೃತ್ಯ, ಸಂಗೀತ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ರಂಗಪ್ರಸ್ತುತಿಗೆ ಸ್ಟುಡಿಯೊ ಇದ್ದರೇ ಒಳ್ಳೆಯದು.

ಭಾರತೀಯ ನಾಟಕಗಳನ್ನು ಯಾವುದಾದರೂ ನೋಡಿದ್ದೀರಾ?
ನಾಟಕಗಳನ್ನು ನೋಡಿಲ್ಲ. ಆದರೆ ಇಲ್ಲಿಯ ಸಾಂಪ್ರದಾಯಿಕ ಕಲೆಯನ್ನು ನೋಡಿ ಅದರ ಚೆಲುವನ್ನು ಅನುಭವಿಸಿದ್ದೇನೆ. ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯಗಳನ್ನು ಸಾಕಷ್ಟು ನೋಡಿದ್ದೇನೆ. ದಕ್ಷಿಣ ಭಾರತದ ಜನಪ್ರಿಯ ಕಥಕ್ಕಳಿ ನೃತ್ಯವನ್ನು ನೋಡಿದ್ದೇನೆ.

ಮುಂದಿನ ಯೋಜನೆ...
ನಾನು ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದು ಕಡಿಮೆ. ‘ಸಿಸೇರಿಯನ್‌ ಸೆಕ್ಷನ್‌’ ಕಲ್ಪನೆ ದಶಕ ಸಮೀಪಿಸುತ್ತಿದೆ. ಒಂದೇ ಪ್ರಸ್ತುತಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ. ಆಯಾ ಕಾಲ, ಪೀಳಿಗೆಗೆ ತಕ್ಕಂತೆ ಪ್ರಸ್ತುತಿಯಲ್ಲಿಯೂ ಬದಲಾವಣೆಗಳಿರುತ್ತವೆ. ಈಗ ಹೊಸ ಯೋಜನೆ ‘ವಿಟ್ನೆಸ್‌ ಆ್ಯಕ್ಷನ್‌’ ತಯಾರಿಯಲ್ಲಿದ್ದೇವೆ. ಇದು ಸಂಗೀತ ಪ್ರಧಾನವಾದದ್ದು. ಈ ಮುಂಚೆ ‘ಅರ್ಮೇನಿ, ಸಿಸ್ಟರ್ಸ್‌ ಪರ್ಫಾರ್ಮೆನ್ಸ್‌’ ಪ್ರಯೋಗ ಮಾಡಿದ್ದೆ. ಅರ್ಮೇನಿಯಾದ ಸಂಗೀತ ಸಂಸ್ಕೃತಿಯನ್ನೇ ಇಟ್ಟುಕೊಂಡು ಮಾಡಿದ ಪ್ರಯೋಗವದು. ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ನೀವು ಸಂಗೀತ ಕಲಿತಿದ್ದೀರಾ?
ಇಲ್ಲ. ಆದರೆ ಬೇರೆ ಬೇರೆ ದೇಶದಲ್ಲಿರುವ ಸಂಗೀತಜ್ಞರ ಮೂಲಕ ಸಂಗೀತದ ಬಗೆಗೆ ಅಧ್ಯಯನ ಮಾಡಿದ್ದೇನೆ. ಅರ್ಮೇನಿಯಾ ಸಂಗೀತ ನನಗೆ ಹೆಚ್ಚು ಇಷ್ಟ. ಅರ್ಮೇನಿಯಾ ಸಂಗೀತವನ್ನು ಯಾರೂ ಶೈಕ್ಷಣಿಕವಾಗಿ ಕಲಿಸುವುದಿಲ್ಲ. ಹಳ್ಳಿಯಲ್ಲಿರುವ ಕೆಲ ಕುಟುಂಬಗಳಲ್ಲಿ ಹಾಡುವವರಿದ್ದಾರೆ. ಅಂಥವರನ್ನು ಹುಡುಕಿ ವರ್ಷಾನುಗಟ್ಟಲೆ ಆ ಬಗ್ಗೆ ಅಧ್ಯಯನ ಮಾಡಿದ್ದೇನೆ. ನನ್ನ ಸಂಯೋಜನೆಯಲ್ಲಿ ಅದು ಪ್ರತಿಫಲಿಸಿದೆ.
***
ರಂಗ ಸಂಯೋಜನಾಗಿ ಬೆಂಗಳೂರಿನಲ್ಲಿ ಸಿಕ್ಕ ಪ್ರತಿಕ್ರಿಯೆ ಹೇಗನ್ನಿಸಿತು?
ಇಲ್ಲಿಯ ಜನರ ನಿರ್ಲಕ್ಷ್ಯ ಭಾವ ನನ್ನನ್ನು ತುಸು ಕಾಡಿತು. ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳದೆ ಇರುವುದು, ಅದರ ಬಗ್ಗೆ ಲಕ್ಷ್ಯ ವಹಿಸದೇ ಇರುವ ಜನರು ಅನೇಕರು ಇಲ್ಲಿದ್ದಾರೆ. ಇನ್ನೊಬ್ಬರು ಏನು ಮಾಡುತ್ತಿದ್ದಾರೆ, ಏನು ಹೇಳುತ್ತಿದ್ದಾರೆ ಎಂದು ಕೇಳುವ ತಾಳ್ಮೆ ಭಾರತೀಯರಿಗೆ ಕಡಿಮೆ. ಭಾರತೀಯರು ಪ್ರದರ್ಶನ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆಯೇ ಹೊರತು ರಂಗಭೂಮಿ ಸಂಸ್ಕೃತಿಗೆ ತೆರೆದುಕೊಂಡಿಲ್ಲ. ಪ್ರದರ್ಶನವು ರಂಗಭೂಮಿಯ ಭಾಗ. ಕೇಳುವುದಕ್ಕೇ ಒಂದೇ ಎನಿಸುತ್ತದೆ. ಆದರೆ ವ್ಯತ್ಯಾಸ ಇದೆ. ಬಹಳ ಬೇಸರದಿಂದಲೇ ಈ ಮಾತು ಹೇಳುತ್ತಿದ್ದೇನೆ.
***
ಥಿಯೇಟರ್ ಒಲಂಪಿಕ್ಸ್‌: ‘ಪರಿಂದೆ‌’ ನಾಟಕ ಪ್ರದರ್ಶನ. ನಿರ್ದೇಶನ–ಸತೀಶ್ ಆನಂದ್. ತಂಡ–ಅಬಿನವ್ ಭಾರತಿ. ಭಾಷೆ–ಹಿಂದಿ ಆಯೋಜನೆ–ರಾಷ್ಟ್ರೀಯ ನಾಟಕ ಶಾಲೆ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 7

ಥಿಯೇಟರ್ ಒಲಂಪಿಕ್ಸ್‌: ‘ನಾಗಾನಂದಂ’ ನಾಟದ ಪ್ರದರ್ಶನ. ನಿರ್ದೇಶನ–ಕಾವಲಂ ಪದ್ಮನಾಭನ್. ತಂಡ–ದೇಸಾಕ್ಸಿ. ಭಾಷೆ–ಹಿಂದಿ, ಸಂಸ್ಕೃತ. ಆಯೋಜನೆ–ರಾಷ್ಟ್ರೀಯ ನಾಟಕ ಶಾಲೆ. ಸ್ಥಳ–ಕಲಾಗ್ರಾಮ, ಮಲ್ಲತ್ತಹಳ್ಳಿ. ಸಂಜೆ.7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT