ತೆಂಗಿನ ಗರಿ ಚಿತ್ತಾರ

ಶುಕ್ರವಾರ, ಮಾರ್ಚ್ 22, 2019
27 °C

ತೆಂಗಿನ ಗರಿ ಚಿತ್ತಾರ

Published:
Updated:
ತೆಂಗಿನ ಗರಿ ಚಿತ್ತಾರ

ಮನೆಗೆ ಪೂಜೆಗಾಗಿ ಬಂದಿದ್ದ ನೆಂಟರಿಗೆ ದೇವರ ಮಂಟಪದ ಎಡ ಬಲದಲ್ಲಿ ಇಟ್ಟಿದ್ದ ಶೋಪೀಸ್‌ ಮೇಲೆಯೇ ಕಣ್ಣು. ತಿಳಿಹಸಿರು, ಗಾಢ ಹಸಿರು ಹಾಗೂ ಕೆಂಪು ರಿಬ್ಬನ್‌ನಿಂದ ಅಲಂಕರಿಸಿದ್ದ ಆ ಸುರುಳಿಯಾಕಾರದ ಕಣ್ಸೆಳೆಯುವ ಕಲಾಕೃತಿಯನ್ನು ದೂರದಿಂದ ನೋಡಿದರೆ ಅದು ತೆಂಗಿನ ಎಳೆಯ ಗರಿಗಳಿಂದ ಮಾಡಿದ್ದು ಎಂಬ ನಂಬಿಕೆಯೇ ಬರುತ್ತಿರಲಿಲ್ಲ.

ಬಿಟಿಎಂ ಲೇಔಟ್‌ನ ಗೀತಾ ಸೋಮಶೇಖರ್‌ ಅವರಿಗೆ ಚಿಕ್ಕಂದಿನಿಂದಲೂ ಹವ್ಯಾಸಗಳ ಮೇಲೆ ಆಸಕ್ತಿ ಇತ್ತು. ಜಾನೂರ್‌ ಕಲೆ, ರಂಗೋಲಿ, ಥಾಯ್‌ ಆರ್ಟ್‌, ತರಕಾರಿ ಕೆತ್ತನೆ ಹಾಗೂ ಕೈಗೆ ಮೆಹೆಂದಿ ಹಾಕುವುದು ಇವರ ಹವ್ಯಾಸಗಳು. ಗೀತಾ ಅವರು ಗೃಹಿಣಿಯಾಗಿರುವುದರಿಂದ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಈ ಹವ್ಯಾಸಗಳ ಮೂಲಕ ಸಮಯದ ಸದುಪಯೋಗ ಮಾಡಿಕೊಳ್ಳುತ್ತಾರೆ.

ಜಾನೂರ್‌ ಆರ್ಟ್‌ ಇಂಡೋನೆಷ್ಯಾ ಮೂಲದು. ಈ ಕಲೆಯಲ್ಲಿ ಗೀತಾ ಅವರದು ಪಳಗಿದ ಕೈ. ಬಾಳೆದಿಂಡು ಹಾಗೂ ತೆಂಗಿನ ಎಳೆಗಳನ್ನು ಬಳಸಿಕೊಂಡು ವಿವಿಧ ಕಲಾಕೃತಿಗಳನ್ನು ಮಾಡುತ್ತಾರೆ. ದೀಪದ ಸ್ಟ್ಯಾಂಡ್‌, ದೇವರಿಗೆ ವಿವಿಧ ನಮೂನೆಯ ಹಾರಗಳು, ಬೇರೆಬೇರೆ ಕಾರ್ಯಕ್ರಮಗಳಿಗೆ ವಿಭಿನ್ನ ವಿನ್ಯಾಸದ ಶೋಪೀಸ್‌ಗಳು, ಅರಿಶಿನ ಶಾಸ್ತ್ರಕ್ಕೆ ಬಟ್ಟಲು, ಆರತಿ ತಟ್ಟೆ ಮೊದಲಾದವುಗಳನ್ನು ಮಾಡುತ್ತಾರೆ. ಅಲಂಕಾರ ಅಥವಾ ಕಾರ್ಯಕ್ರಮಗಳಿಗೆ ಮಾಡುವ ಕಲಾಕೃತಿಗಳಿಗೆ ನೈಜ ಹೂವುಗಳಿಂದ ಅಲಂಕರಿಸಿರುವುದು ಬಲು ಆಕರ್ಷಕವಾಗಿವೆ.

ಇತ್ತೀಚೆಗೆ ಮದುಮಗಳಿಗೆ ಅರಿಶಿನ, ಮೆಹೆಂದಿ ಶಾಸ್ತ್ರಕ್ಕೆ ಹೂವುಗಳಿಂದ ಮಾಡುವ ಆಭರಣಗಳನ್ನು ಹಾಕುತ್ತಾರೆ. ಇಂಥದ್ದೇ ಆಭರಣಗಳನ್ನು ಜಾನೂರ್‌ ಕಲೆಯಲ್ಲಿ ಗೀತಾ ಮಾಡುತ್ತಾರೆ. ಒಡ್ಯಾಣ, ಸೊಂಟದಪಟ್ಟಿ, ಹಾರಗಳು, ಪಾಪಡಿಬೊಟ್ಟು, ಜಡೆಗಳನ್ನು ತೆಂಗಿನ ಎಳೆಗರಿಗಳಿಂದ ಮಾಡಿ ಕೊಡುತ್ತಾರೆ. ‘ಈಗ ಇದೂ ಫ್ಯಾಷನ್‌ ಆಗಿದೆ. ಹೆಚ್ಚು ಜನರು ಕೇಳಿಕೊಂಡು ಬರುತ್ತಾರೆ’ ಎನ್ನುತ್ತಾರೆ ಗೀತಾ.

‘ಜಾನೂರ್‌ ಕಲೆ ಮಾಡಲು ಸುಲಭ. ಆದರೆ ಇದಕ್ಕೆ ತುಂಬ ಸಮಯ ಬೇಕು. ಮಧ್ಯಮ ಗಾತ್ರದ ಒಂದು ಕಲಾಕೃತಿ ಮಾಡಲು ಸುಮಾರು ಒಂದು ಗಂಟೆ ಸಮಯ ಬೇಕು. ಕಲಾಕೃತಿಗೆ ಅಗತ್ಯವಾದ ಬಾಳೆದಿಂಡು ಹಾಗೂ ತೆಂಗಿನ ಎಳೆಗರಿಗಳನ್ನು ಸಿಟಿ ಮಾರ್ಕೆಟ್‌ನಿಂದ ತರುತ್ತೇನೆ. ಈ ತೆಂಗಿನ ಗರಿಗಳನ್ನು ಒದ್ದೆ ಮಾಡಿ ಕಟ್ಟಿ ಇಟ್ಟರೆ ಒಂದು ವಾರ ಚೆನ್ನಾಗಿರುತ್ತದೆ. ಅಷ್ಟರಲ್ಲಿ ವಿನ್ಯಾಸ ಮಾಡಬೇಕು. ಆದರೆ ವಿನ್ಯಾಸಗೊಳಿಸಿದ ಕಲಾಕೃತಿ ಹೆಚ್ಚೆಂದರೆ ಎರಡು ದಿನ ಬಾಳಿಕೆ. ಬಳಿಕ ಬಾಡಿ ಹೋಗುತ್ತದೆ’ ಎಂದು ಗೀತಾ ವಿವರಣೆ ನೀಡುತ್ತಾರೆ. ಗೀತಾ ಅವರು ಈ ಕಲೆಯನ್ನು ಲಾಲ್‌ಬಾಗ್‌ನಲ್ಲಿ ನಡೆದ ಜಾನೂರ್‌ ಆರ್ಟ್‌ ಕಾರ್ಯಾಗಾರದಲ್ಲಿ ಕಲಿತುಕೊಂಡಿದ್ದಾರೆ.

ಜಾನೂರ್‌ ಕಲೆಯಂತೆಯೇ ಬಾಳೆಎಲೆಯನ್ನು ಬಳಸಿಕೊಂಡು ಮಾಡುವ ಕಲೆ ಥಾಯ್‌ ಆರ್ಟ್‌. ಇದು ಥಾಯ್ಲೆಂಡ್‌ನದು. ಬಾಳೆಎಲೆ ಒಳಗೆ ಥರ್ಮಕೋಲ್‌ಗಳನ್ನು ಬಳಸಿ ಮದುವೆ ಮಂಟಪ, ದೀಪದ ಮಂಟಪ ಹೀಗೆ ವಿವಿಧ ಬಗೆಯ ಕಲಾಕೃತಿಗಳನ್ನು ಕೈಯಲ್ಲೇ ಗೀತಾ ಮಾಡುತ್ತಾರೆ. ಗೀತಾ ಕೈಯಲ್ಲಿ ಅರಳಿದ ಥಾಯ್‌ ಕಲಾಕೃತಿಗಳು ಸೊಗಸಾಗಿವೆ.

ಪೇಪರ್‌ ಅನ್ನು ಯಾವುದೇ ಗಮ್‌, ಪಿನ್‌ಗಳ ಸಹಾಯವಿಲ್ಲದೇ ಕೈಯಲ್ಲಿಯೇ ಮಡಚಿ ವಿನ್ಯಾಸ ಮಾಡುವ ಕಲೆ ಒರಿಗಾಮಿ. ಗೀತಾ ಅವರಿಗೆ ಒರಿಗಾಮಿಯಲ್ಲೂ ಆಸಕ್ತಿ.  ಹಂಸ, ದೋಣಿ, ಕೈ ಚೀಲ , ಮೀನು, ಹಾರಾಡುವ ಹಕ್ಕಿ ಮೊದಲಾದ ವಿನ್ಯಾಸಗಳನ್ನು ಪೇಪರ್‌ ಬಳಸಿ ಮಾಡಿದ್ದಾರೆ. ಬಣ್ಣ ಬಣ್ಣದ ಪೇಪರ್‌ಗಳನ್ನು ಉಪಯೋಗಿಸಿ ಮಾಡಿರುವುದು ಗೀತಾ ಅವರ ಹವ್ಯಾಸದ ಜಾಣ್ಮೆಯನ್ನು ತಿಳಿಸುತ್ತವೆ. ರಂಗೋಲಿ ರಚನೆ, ಕೈಯಲ್ಲಿ ಮೆಹೆಂದಿ ಚಿತ್ತಾರ, ತರಕಾರಿಗಳಲ್ಲಿ ವಿವಿಧ ಬಗೆಯ ಚಿತ್ತಾರ  ಹೀಗೆ ಸಕಲ ಕಲೆಗಳನ್ನು ರೂಢಿಸಿಕೊಂಡ ಕಲಾವಿದೆ ಗೀತಾ ಸೋಮೆಶ್ವರ್‌.ಗೀತಾ

ಮದುವೆ, ನಾಮಕರಣ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಜಾನೂರ್‌, ಥಾಯ್‌ ಕಲಾಕೃತಿಗಳು ಬೇಕಾದಲ್ಲಿ ಗೀತಾ ಮಾಡಿಕೊಡುತ್ತಾರೆ. ಭವಿಷ್ಯದಲ್ಲಿ ಹೊಸ ಹೊಸ ವಿನ್ಯಾಸದ ಕಲಾಕೃತಿಗಳನ್ನು ರಚಿಸಬೇಕು ಎಂಬುದು ಇವರ ಮನದಾಸೆ. ಕಲಾಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಇರುವ ಜಾನೂರ್‌, ಥಾಯ್‌, ಒರಿಗಾಮಿ, ಮೆಹೆಂದಿ , ತರಕಾರಿ ಕೆತ್ತನೆ ಬಗ್ಗೆ ತರಗತಿಗಳನ್ನು ನಡೆಸುತ್ತಾರೆ. ಸಂಪರ್ಕಕ್ಕೆ ಮೊ– 99450 53177

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry