ಚಿನ್ನಕ್ಕೆ ಗುರಿ ಇಟ್ಟ ಮನು ಭಾಕರ್‌

7

ಚಿನ್ನಕ್ಕೆ ಗುರಿ ಇಟ್ಟ ಮನು ಭಾಕರ್‌

Published:
Updated:
ಚಿನ್ನಕ್ಕೆ ಗುರಿ ಇಟ್ಟ ಮನು ಭಾಕರ್‌

ನವದೆಹಲಿ: ನಿಖರ ಗುರಿ ಹಿಡಿದ ಭಾರತದ ಮನು ಭಾಕರ್‌, ಮೆಕ್ಸಿಕೊದ ಗುವಾಡಲಾಜರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ರವಿಕುಮಾರ್‌ ಕಂಚಿಗೆ ಕೊರಳೊಡ್ಡಿದ್ದಾರೆ.

ಭಾನುವಾರ ನಡೆದ ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಭಾಕರ್‌ 237.5 ಸ್ಕೋರ್‌ ಕಲೆಹಾಕಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ಅಕ್ಟೋಬರ್‌ನಲ್ಲಿ ಬ್ಯೂನಸ್‌ ಐರಿಸ್‌ನಲ್ಲಿ ನಡೆಯುವ ಯೂತ್‌ ಒಲಿಂ‍ಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾಕರ್‌, ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಅವರು ಚಿನ್ನಕ್ಕೆ ಮುತ್ತಿಕ್ಕಿದರು.

24 ಶಾಟ್‌ಗಳ ಫೈನಲ್‌ನಲ್ಲಿ ಭಾಕರ್‌ ಆರಂಭದಿಂದಲೂ ನಿಖರ ಗುರಿ ಹಿಡಿದು ಕೃತಕ ಹಕ್ಕಿಗಳನ್ನು ಹೊಡೆದುರುಳಿಸಿದರು. ಕೊನೆಯ ಶಾಟ್‌ನಲ್ಲಿ ಅವರು 10.8 ಸ್ಕೋರ್‌ ಹೆಕ್ಕಿದರು. ಈ ಮೂಲಕ ಮೆಕ್ಸಿಕೊದ ಅಲೆಕ್ಸಾಂಡ್ರಾ ಜವಾಲಾ ಅವರ ಸವಾಲು ಮೀರಿದರು.

ವಿಶ್ವಕಪ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಜವಾಲಾ ಇಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಅವರು 237.1 ಸ್ಕೋರ್‌ ಸಂಗ್ರಹಿಸಿದರು.

ಈ ವಿಭಾಗದ ಕಂಚಿನ ಪದಕ ಫ್ರಾನ್ಸ್‌ನ ಸೆಲಿನೆ ಗೊಬರ್‌ವಿಲ್ಲೆ ಅವರ ಪಾಲಾಯಿತು. ಸೆಲಿನೆ 217.0 ಸ್ಕೋರ್‌ ಕಲೆಹಾಕಿದರು.

ಭಾರತದ ಯಶಸ್ವಿನಿ ಸಿಂಗ್‌ ದೇಸ್ವಾಲ್‌ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಅಮೋಘ ಸಾಮರ್ಥ್ಯ ತೋರಿದ ಅವರು 196.1 ಸ್ಕೋರ್‌ ಗಳಿಸಿ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.

‘ಚೊಚ್ಚಲ ಪ್ರಯತ್ನದಲ್ಲೇ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದು ಅತೀವ ಖುಷಿ ನೀಡಿದೆ. ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಲು ಪ್ರಯತ್ನಿಸುತ್ತೇನೆ’ ಎಂದು ಭಾಕರ್‌ ಹೇಳಿದ್ದಾರೆ.

ರವಿಗೆ ಕಂಚು: ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಭಾರತದ ರವಿಕುಮಾರ್‌ ಕಂಚಿನ ಸಾಧನೆ ಮಾಡಿದರು. ಅವರು ವಿಶ್ವಕಪ್‌ನಲ್ಲಿ ಗೆದ್ದ ಮೊದಲ ಪದಕ ಇದಾಗಿದೆ.

ರವಿ, ಹೋದ ವರ್ಷ ಮೂರು ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಪದಕದ ಸಾಧನೆ ಮೂಡಿಬಂದಿರಲಿಲ್ಲ.

ಕಂಚಿನ ಪದಕಕ್ಕಾಗಿ ನಡೆದ ‘ಶಾಟ್‌ ಆಫ್‌’ನಲ್ಲಿ ರವಿ 226.4 ಪಾಯಿಂಟ್ಸ್‌ ಗಳಿಸಿ ಭಾರತದ ದೀಪಕ್‌ ಕುಮಾರ್‌ ಅವರನ್ನು ಸೋಲಿಸಿದರು. ದೀಪಕ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹಂಗರಿಯ ಇಸ್ತ್‌ವಾನ್‌ ಪೆನಿ ಈ ವಿಭಾಗದ ಚಿನ್ನ ಗೆದ್ದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಪೆನಿ 249.5 ಸ್ಕೋರ್‌ ಕಲೆಹಾಕಿದರು. ಆಸ್ಟ್ರಿಯಾದ ಅಲೆಕ್ಸಾಂಡರ್‌ ಸ್ಕಿಮಿರಲ್‌ 248.7 ಸ್ಕೋರ್‌ ಗಳಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು.

ಭಾರತಕ್ಕೆ 5 ಪದಕ: ಭಾರತದ ಖಾತೆಯಲ್ಲಿ ಈಗ ಐದು ಪದಕಗಳಿದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಶಹಜಾರ್‌ ರಿಜ್ವಿ ಮತ್ತು ಜಿತು ರಾಯ್‌ ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದಿದ್ದರು. ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಮೆಹುಲಿ ಘೋಷ್‌ ಕಂಚಿನ ಸಾಧನೆ ಮಾಡಿದ್ದರು.

‘ಭಾಕರ್‌ ಮತ್ತು ರವಿ ಅವರು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲೂ ಹೀಗೆ ಪದಕ ಗೆಲ್ಲಲಿ’ ಎಂದು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್‌ ಸಿಂಗ್ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry