ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

7
ಮೂರು ರಾಷ್ಟ್ರಗಳ ಟ್ವೆಂಟಿ–20 ಕ್ರಿಕೆಟ್ ಸರಣಿಗೆ ಇಂದು ಚಾಲನೆ

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Published:
Updated:
ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಕೊಲಂಬೊ: ಯಶಸ್ಸಿನ ಶಿಖರದಲ್ಲಿರುವ ಭಾರತ ತಂಡದವರು ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಒಳಗೊಂಡ ‘ನಿದಾಸ್‌’ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ‘ಯುವ ಭಾರತ’ ತಂಡ ಶ್ರೀಲಂಕಾವನ್ನು ಮಂಗಳವಾರ ಎದುರಿಸಲಿದೆ.

ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಉತ್ತಮ ಸಾಮರ್ಥ್ಯ ತೋರಿಸಲು ಯುವ ಆಟಗಾರರಿಗೆ ಈ ಟೂರ್ನಿ ಅವಕಾಶ ಒದಗಿಸಲಿದೆ.

ಈ ಕ್ರಿಕೆಟ್ ಋತುವಿನಲ್ಲಿ ಎಲ್ಲ ಮಾದರಿಯಲ್ಲಿ ಒಟ್ಟು 18 ಬಾರಿ ಶ್ರೀಲಂಕಾವನ್ನು ಎದುರಿಸಿರುವ ಭಾರತ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದೆ. ಈ ಟೂರ್ನಿಯ ಆರಂಭದಲ್ಲೂ ಇದೇ ಲಯವನ್ನು ಮುಂದುವರಿಸುವುದು ತಂಡದ ಉದ್ದೇಶ.

ಆರು ಮಂದಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಭಾರತ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದಾರೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವರು. ಋಷಭ್‌ ಪಂತ್‌, ದೀಪಕ್ ಹೂಡ ಮತ್ತು ಮಹಮ್ಮದ್ ಸಿರಾಜ್‌ ಮೊದಲಾದವರು ಟೂರ್ನಿಯ ಪ್ರಮುಖ ಆಕರ್ಷಣೆ ಆಗಲಿದ್ದಾರೆ.

ರೋಹಿತ್ ಶರ್ಮಾಗೆ ಮಹತ್ವದ ಟೂರ್ನಿ

ಶ್ರೀಲಂಕಾ ಪ್ರವಾಸದಲ್ಲಿ ಮತ್ತು ಆ ತಂಡದ ಭಾರತ ಪ್ರವಾಸದಲ್ಲಿ ಉತ್ತಮ ಆಟ ಆಡಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಿಂಚಲಿಲ್ಲ. ಹೀಗಾಗಿ ಈ ಟೂರ್ನಿ ಅವರಿಗೆ ಮಹತ್ವದ್ದಾಗಲಿದೆ. ಶಿಖರ್ ಧವನ್‌, ಸುರೇಶ್ ರೈನಾ ಮುಂತಾದ ಅನುಭವಿ ಆಟಗಾರರು ತಂಡದಲ್ಲಿರುವುದು ರೋಹಿತ್‌ ಅವರ ಭರವಸೆ ಹೆಚ್ಚಿಸಿದೆ.

ಸುರಂಗಾ ಲಕ್ಮಲ್‌, ದುಷ್ಮಂತ ಚಮೀರ ಮತ್ತು ದಾಸುನ್‌ ಶಾನಕ ಅವರ ದಾಳಿಯನ್ನು ಎದುರಿಸಲು ಭಾರತದ ಅನುಭವಿಗಳಿಗೆ ಕಷ್ಟಕರವಾಗದು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಇಳಿಯಲು ಸಾಧ್ಯವಾಗದೇ ಇದ್ದರೆ ಕೆ.ಎಲ್‌.ರಾಹುಲ್ ಈ ಟೂರ್ನಿಯ ಪಂದ್ಯಗಳಲ್ಲಿ ಹೊರಗುಳಿಯಬೇಕಾದೀತು. ಯಾಕೆಂದರೆ ಸುರೇಶ್ ರೈನಾ ತಂಡದಲ್ಲಿ ಇರುವುದರಿಂದ ರಾಹುಲ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾದೀತು. ಆದರೆ ಆ ಸ್ಥಾನದಲ್ಲಿ ಮನೀಷ್ ಪಾಂಡೆ ಈಗಾಗಲೇ ಭದ್ರವಾಗಿದ್ದಾರೆ.

ದಿನೇಶ್ ಕಾರ್ತಿಕ್‌ ಐದನೇ ಕ್ರಮಾಂಕ

ದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹೀಗಾಗಿ ಆರನೇ ಕ್ರಮಾಂಕಕ್ಕಾಗಿ ದೀಪಕ್ ಹೂಡ ಮತ್ತು ರಿಷಭ್‌ ಪಂತ್‌ ನಡುವೆ ಸ್ಪರ್ಧೆ ಏರ್ಪಡಲಿದೆ. ಸ್ಪಿನ್ ವಿಭಾಗವನ್ನು ವಾಷಿಂಗ್ಟನ್ ಸುಂದರ್ ಮತ್ತು ಯಜುವೇಂದ್ರ ಚಾಹಲ್‌ ನಿರ್ವಹಿಸಲಿದ್ದಾರೆ. ಜಯದೇವ ಉನದ್ಕತ್ ಜೊತೆ ಹೊಸ ಚೆಂಡನ್ನು ಹಂಚಿಕೊಳ್ಳಲು ಶಾರ್ದೂಲ್ ಠಾಕೂರ್ ಸಜ್ಜಾಗಿದ್ದಾರೆ. ಆಲ್‌ರೌಂಡರ್‌ ಅಥವಾ ಮೂರನೇ ವೇಗಿಗೆ ತಂಡದಲ್ಲಿ ಸ್ಥಾನ ನೀಡಲು ಆಡಳಿತ ಮುಂದಾದರೆ ಮಹಮ್ಮದ್ ಸಿರಾಜ್ ಅಥವಾ ವಿಜಯ್‌ ಶಂಕರ್ ಪೈಕಿ ಒಬ್ಬರಿಗೆ ಅವಕಾಶ ಸಿಗಲಿದೆ. ಹೆಚ್ಚುವರಿ ಸ್ಪಿನ್ನರ್ ಬೇಕೆಂದರೆ ಅಕ್ಷರ್ ಪಟೇಲ್‌ ಲಭ್ಯ ಇದ್ದಾರೆ.

ಮಿಂಚುವ ಪ್ರಯತ್ನದಲ್ಲಿ ಲಂಕನ್ನರು: ದಿನೇಶ್‌ ಚಾಂದಿಮಲ್‌, ಉಪುಲ್ ತರಂಗ, ಕುಶಾಲ್‌ ಮೆಂಡಿಸ್‌, ಕುಶಾಲ್ ಪೆರೇರ, ಸುರಂಗಾ ಲಕ್ಮಲ್‌ ಮುಂತಾದವರನ್ನು ಒಳಗೊಂಡಿದ್ದರೂ ಆತಿಥೇಯ ತಂಡಕ್ಕೆ ಇತ್ತೀಚೆಗೆ ಗೆಲುವು ಮರೀಚಿಕೆಯಾಗಿದೆ. ಆದ್ದರಿಂದ ಈ ಟೂರ್ನಿಯಲ್ಲಿ ಲಯಕ್ಕೆ ಮರಳಲು ಆಟಗಾರರು ಪ್ರಯತ್ನಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry