ಈಶಾನ್ಯದಲ್ಲಿ ಬಿಜೆಪಿ ಜೈತ್ರಯಾತ್ರೆ: ಕಳೆಗುಂದಿದ ಕಾಂಗ್ರೆಸ್

7

ಈಶಾನ್ಯದಲ್ಲಿ ಬಿಜೆಪಿ ಜೈತ್ರಯಾತ್ರೆ: ಕಳೆಗುಂದಿದ ಕಾಂಗ್ರೆಸ್

Published:
Updated:
ಈಶಾನ್ಯದಲ್ಲಿ ಬಿಜೆಪಿ ಜೈತ್ರಯಾತ್ರೆ: ಕಳೆಗುಂದಿದ ಕಾಂಗ್ರೆಸ್

ಬಿಜೆಪಿಯ ಮಾತೃಸಂಸ್ಥೆ ಆರ್.ಎಸ್.ಎಸ್.ನ ಎರಡನೆಯ ಸರಸಂಘಚಾಲಕ ಎಂ.ಎಸ್. ಗೊಳ್ವಲಕರ್ ವಿರಚಿತ 'ಬಂಚ್ ಆಫ್ ಥಾಟ್ಸ್' ಹೊತ್ತಿಗೆ ಸಂಘಪರಿವಾರದ ಬಹುಮಾನ್ಯ ಹೊತ್ತಿಗೆ. ಅದರಲ್ಲಿ ಮುಸ್ಲಿಮರು, ಕ್ರೈಸ್ತರು ಹಾಗೂ ಕಮ್ಯುನಿಸ್ಟರನ್ನು ದೇಶದ ಮೂರು ಮುಖ್ಯ ಆಂತರಿಕ ಅಪಾಯಗಳೆಂದು ಗುರುತಿಸಲಾಗಿದೆ. ಹೀಗಾಗಿ ಬಿಜೆಪಿ ಮತ್ತು ಸಿಪಿಎಂ ಸೈದ್ಧಾಂತಿಕವಾಗಿ ತೀವ್ರ ವಿರುದ್ಧ ಧ್ರುವಗಳ ಪಕ್ಷಗಳು. ಕೇರಳದಲ್ಲಿ ಕಮ್ಯುನಿಸ್ಟ್ ಮತ್ತು ಆರ್.ಎಸ್.ಎಸ್. ನಡುವಣ ಮಾರಣಾಂತಿಕ ಸಂಘರ್ಷ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿತ್ತು. ಇಂತಹ ಸಂದರ್ಭದಲ್ಲಿ ತ್ರಿಪುರಾದ ಕೆಂಪು ಕಿಲ್ಲೆಯನ್ನು ಉರುಳಿಸಿದ ಐತಿಹಾಸಿಕ ಗೆಲುವು ಬಿಜೆಪಿ ಮತ್ತು ಸಂಘಪರಿವಾರದ ಪಾಲಿಗೆ ಸವಿದಷ್ಟೂ ತೀರದ ಸಿಹಿ. ಈ ರಾಜ್ಯದಲ್ಲಿ 25 ವರ್ಷಗಳ ಸತತ ಸರ್ಕಾರ ನಡೆಸಿದ ಎಡರಂಗ ತಾನು ನಿರೀಕ್ಷಿಸಿದ್ದಕ್ಕಿಂತ ಬಲವಾದ ಆಡಳಿತವಿರೋಧಿ ಅಲೆಯನ್ನು ಎದುರಿಸಿದ್ದು ವಾಸ್ತವ. ನೇತಾರ ನೆಟ್ಟಗಿದ್ದರೆ ಸಾಲದು, ಕಾರ್ಯಕರ್ತರಿಗೆ ಅಧಿಕಾರದ ಅಹಂಕಾರದ ಕಾಯಿಲೆ ತಗುಲಬಾರದು. ತ್ರಿಪುರಾದಲ್ಲಿ ಸೋತಿರುವ ಎಡರಂಗ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ಮೇಲ್ನೋಟದ ವ್ಯಾಖ್ಯಾನಗಳು ಹೇಳುತ್ತಿರುವಂತೆ ಈ ಸಾಧನೆ ಕೇವಲ ಐದು ವರ್ಷದಲ್ಲಿ ಕೈಗೂಡಿದ್ದಲ್ಲ. ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ಸಂಸ್ಕಾರ ಕೇಂದ್ರ ಮುಂತಾದ ಆರ್.ಎಸ್.ಎಸ್. ಅಂಗಸಂಸ್ಥೆಗಳು ಈಶಾನ್ಯ ಭಾರತದಲ್ಲಿ ಹಲವಾರು ದಶಕಗಳಿಂದ ಸದ್ದಿಲ್ಲದೆ ಕೆಲಸ ಮಾಡುತ್ತಿವೆ. ನೂರಾರು ಶಾಲೆಗಳು, ಹಾಸ್ಟೆಲುಗಳು, ಆಸ್ಪತ್ರೆಗಳನ್ನು ನಡೆಸಲಾಗುತ್ತಿದೆ. ಆರ್.ಎಸ್.ಎಸ್.ನ ನಿತ್ಯ ಶಾಖೆಗಳು, ಸಾಪ್ತಾಹಿಕ ಮಿಲನಗಳು, ಮಾಸಿಕ ಮಂಡಲಿಗಳು ಜರುಗುತ್ತಿವೆ. ಈ ಸಂಘಟನೆಯ ನೂರಾರು ಪೂರ್ಣಾವಧಿ ಕಾರ್ಯಕರ್ತರು ಸರದಿಯ ಮೇಲೆ ದಶಕಗಳಿಂದ ಈ ಸೀಮೆಯಲ್ಲಿ ದುಡಿಯುತ್ತಿದ್ದಾರೆ. ಮೋದಿ-ಶಾ ಜೋಡಿ ಅತ್ಯಂತ ಆಕ್ರಮಣಕಾರಿಯಾಗಿ ಬಿಜೆಪಿಯ ಜೈತ್ರಯಾತ್ರೆಯನ್ನು ರೂಪಿಸುತ್ತಿರುವುದು ಹೌದು. ಇವರಿಬ್ಬರ ಸಂಘಟನಾ ಚಾತುರ್ಯವೂ ಅದ್ವಿತೀಯವೇ. ಆದರೆ ಈಶಾನ್ಯ ಭಾರತದಲ್ಲಿ ಬಿಜೆಪಿ ದಾಪುಗಾಲಿಗೆ ಅನುಕೂಲವಾಗುವಂತೆ ರಸ್ತೆಯನ್ನು ಮಟ್ಟಸಗೊಳಿಸಿದ ಬೇರುಮಟ್ಟದ ಕೆಲಸವನ್ನು ಆರ್.ಎಸ್.ಎಸ್. ಈಗಾಗಲೇ ಮಾಡಿತ್ತು. ಈ ಎರಡು ಅಂಶಗಳ ಜೊತೆಯಲ್ಲಿ ಬಿಜೆಪಿಯ ಈಶಾನ್ಯದ ದಿಗ್ವಿಜಯಕ್ಕೆ ಮತ್ತೊಂದು ಮಹತ್ವದ ಕಾರಣವಿದೆ. ಅದು ಈ ಸೀಮೆಯಲ್ಲಿ ಪ್ರಬಲ ಅಸ್ತಿತ್ವ ಹೊಂದಿದ್ದ ಕಾಂಗ್ರೆಸ್ ಪಕ್ಷದ ಅವನತಿ. ದೇಶದ ಎಲ್ಲೆಡೆ ಕುಸಿತವನ್ನೇ ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಎದೆ ಸೆಟೆಸಿ ಸೆಣೆಸುವ ಇಚ್ಛಾಶಕ್ತಿಯನ್ನೇ ಕಳೆದುಕೊಂಡಂತೆ ತೋರುತ್ತಿದೆ.

ಗೋವಾ ಮತ್ತು ಮಣಿಪುರದ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾದರೂ ಅಧಿಕಾರವನ್ನು ಬೆಳ್ಳಿತಟ್ಟೆಯಲ್ಲಿಟ್ಟು ಬಿಜೆಪಿಗೆ ಒಪ್ಪಿಸಿದ ಉದಾಹರಣೆ ಇನ್ನೂ ಹಸಿರಾಗಿದೆ. ತನಗೆ ಒದಗಿರುವ ಈ ದುಃಸ್ಥಿತಿಯಿಂದ ಮೇಲೇಳಲು ಮೇಘಾಲಯದಲ್ಲೂ ಸಾಧ್ಯವಾಗಲಿಲ್ಲ. ‘ಬೇಟೆಯನ್ನು ಬೆನ್ನುಹತ್ತಿ ಹಿಡಿದು ಕೊಲ್ಲುವ' ರಾಜಕೀಯ ಪಕ್ಷವೊಂದರ ಸ್ವಭಾವವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಬಿಜೆಪಿಯ ಗೆಲುವಿನ ಹಸಿವಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ಜೀರ್ಣಾಗ್ನಿ ಮಂದವಾದಂತೆ ಕಂಡು ಬರುತ್ತಿದೆ. ಗಡಿಭಾಗದ ಗುಡ್ಡಗಾಡಿನ ಈಶಾನ್ಯ ಸೀಮೆಯ ಪುಟ್ಟ ರಾಜ್ಯಗಳು ಲಾಗಾಯ್ತಿನಿಂದಲೂ ಕೇಂದ್ರದ ನೆರವನ್ನು ನೆಚ್ಚಿಕೊಂಡು ಬಂದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನೇ ಹೆಚ್ಚು ಆದರಿಸುತ್ತ ಬಂದಿರುವುದೂ ಹೌದು. ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿದ್ದಂತೆ ಈಗಿನ ಕರೆಯುವ ಹಸು ಬಿಜೆಪಿಯನ್ನು ನೆಚ್ಚಿರುವ ಪ್ರವೃತ್ತಿಯಲ್ಲಿ ಒಡೆದು ಕಾಣುವ ವಿಶೇಷವೇನೂ ಇಲ್ಲ. ಆದರೆ ಕ್ರಮವಾಗಿ ಶೇ 90 ಮತ್ತು ಶೇ 84ರಷ್ಟು ಕ್ರೈಸ್ತ ಜನಸಂಖ್ಯೆ ಹೊಂದಿದ ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳು ಹಿಂದುತ್ವ ಸಿದ್ಧಾಂತಕ್ಕೆ ಒಲಿಯುವುದಿಲ್ಲವೆಂದು ಬಿಜೆಪಿ ಕೈಚೆಲ್ಲಿ ಕುಳಿತಿಲ್ಲ. ಸ್ಥಳೀಯ ಮಿತ್ರಪಕ್ಷಗಳೊಂದಿಗೆ ಸೇತುವೆ ಕಟ್ಟಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸತೊಡಗಿದೆ. ಭಾರತವನ್ನು ಅಡಿಯಿಂದ ಮುಡಿಯವರೆಗೆ ವ್ಯಾಪಿಸುವ ಬಿಜೆಪಿ ಸಂಕಲ್ಪಶಕ್ತಿಯ ದ್ಯೋತಕವಿದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry