ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭ ಮಾಡಿದ ವನಿತೆಯರು

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸೋಲ್‌: ಲಾಲ್ರೆಮ್‌ಸಿಯಾಮಿ ಕೈಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ತಂಡ ದಕ್ಷಿಣ ಕೊರಿಯಾ ಎದುರಿನ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದೆ.

ಜಿನ್‌ಚುನ್‌ ರಾಷ್ಟ್ರೀಯ ಅಥ್ಲೆಟಿಕ್‌ ಕೇಂದ್ರದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ಭಾರತ 1–0 ಗೋಲಿನಿಂದ ವಿಜಯಿಯಾಯಿತು.

ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ವನಿತೆಯರಿಗೆ ಐದನೇ ನಿಮಿಷ‌‌ದಲ್ಲಿ ಲಾಲ್ರೆಮ್‌ಸಿಯಾಮಿ ಮುನ್ನಡೆ ತಂದುಕೊಟ್ಟರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ಆವರಣ ಪ್ರವೇಶಿಸಿದ ಲಾಲ್ರೆಮ್‌ಸಿಯಾಮಿ, ಕೊರಿಯಾದ ಗೋಲ್‌ಕೀಪರ್‌ ಮಿಜಿನ್‌ ಹಾನ್‌ ಅವರನ್ನು ವಂಚಿಸಿ ಚೆಂಡನ್ನು ಗುರಿ ತಲುಪಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ರಾಣಿ ರಾಂಪಾಲ್‌ ಬಳಗ ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಿತು.18ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಕೊರಿಯಾ ಗೋಲ್‌ಕೀಪರ್‌ ಹಾನ್‌ ಸೊಗಸಾಗಿ ತಡೆದರು.

21ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳುವ ಅವಕಾಶ ಲಭ್ಯವಾಗಿತ್ತು. ಆದರೆ ರಾಣಿ ಪಡೆಗೆ ಇದರ ಲಾಭ ಎತ್ತಿಕೊಳ್ಳಲು ಆಗಲಿಲ್ಲ. 23ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಕೊರಿಯಾದ ಆಟಗಾರ್ತಿ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಸ್ವಾತಿ ತಡೆದರು. ಹೀಗಾಗಿ ಆತಿಥೇಯರ ಸಮಬಲದ ಆಸೆ ಕೈಗೂಡಲಿಲ್ಲ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಕೊರಿಯಾ ತಂಡ ಅಂತಿಮ ಕ್ವಾರ್ಟರ್‌ನಲ್ಲಿ ಅಮೋಘ ಆಟ ಆಡಿತು. ಭಾರತವೂ ಮಿಂಚಿತು. ಉಭಯ ತಂಡಗಳಿಗೆ ತಲಾ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿದ್ದವು ಆದರೆ ಗೋಲು ಗಳಿಸಲು ಯಾರಿಗೂ ಆಗಲಿಲ್ಲ.

ಸರಣಿಯ ಎರಡನೇ ಪಂದ್ಯ ಮಂಗಳವಾರ ಜರುಗಲಿದೆ.

200ನೇ ಪಂದ್ಯ ಆಡಿದ ರಾಣಿ: ಭಾರತ ತಂಡದ ನಾಯಕಿ ರಾಣಿ ರಾಂಪಾಲ್‌, ಸೋಮವಾರ 200ನೇ ಅಂತರರಾಷ್ಟ್ರೀಯ ಪಂದ್ಯ ಆಡಿದರು. ಮೋನಿಕಾ 100 ಪಂದ್ಯಗಳನ್ನು ಆಡಿದ ಹಿರಿಮೆ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT