ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಜನಸುರಕ್ಷಾ ಯಾತ್ರೆಯ ಮಹಾಸಂಗಮ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ವಿರೋಧಿಸಿ ನಡೆಸುತ್ತಿರುವ ‘ಮಂಗಳೂರು ಚಲೋ– ನಾಡ ಜನರ ರಕ್ಷಣೆಗಾಗಿ ಜನಸುರಕ್ಷಾ ಯಾತ್ರೆ’ ಮಹಾಸಂಗಮ ಮಂಗಳವಾರ ನಗರದ ಜ್ಯೋತಿ ಚಿತ್ರಮಂದಿರದ ಬಳಿಯ ಅಂಬೇಡ್ಕರ್‌ ವೃತ್ತದಲ್ಲಿ ನಡೆಯಲಿದೆ.

ಅಲ್ಲಿಂದ ಹೊರಡುವ ಬೃಹತ್‌ ಪಾದಯಾತ್ರೆ ನೆಹರೂ ಮೈದಾನದಲ್ಲಿ ಸಭೆ ಸೇರಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆ ವಹಿಸುವರು.

ಸಂಸದರಾದ ಅನಂತ ಕುಮಾರ್‌ ಹೆಗಡೆ ಮತ್ತು ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಇದೇ 3ರಂದು ಅಂಕೋಲದಿಂದ ಹೊರಟಿರುವ ಯಾತ್ರೆ, ಮಂಗಳವಾರ ಉಡುಪಿಯ ಕಾಪುವಿನಲ್ಲಿ ಸಾರ್ವಜನಿಕ ಸಭೆಯ ಬಳಿಕ ಮಂಗಳೂರು ನಗರ ತಲುಪಲಿದೆ. ಇತ್ತ ಸಂಸದ ನಳಿನ್‌ಕುಮಾರ್ ಕಟೀಲ್‌ ಮತ್ತು ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಮಡಿಕೇರಿಯಿಂದ ಹೊರಟಿರುವ ಯಾತ್ರೆಯು ಬೈಕಂಪಾಡಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಬಳಿಕ ಕದ್ರಿ ದೇವಸ್ಥಾನದಿಂದ ಅಂಬೇಡ್ಕರ್‌ ವೃತ್ತದವರೆಗೆ ಪಾದಯಾತ್ರೆ ಮೂಲಕ ಸಾಗಲಿದೆ. ಯಾತ್ರೆಯ ಎರಡೂ ಬಣಗಳು ಅಂಬೇಡ್ಕರ್‌ ವೃತ್ತದಲ್ಲಿ ಸಂಗಮವಾಗಲಿದ್ದು, ನೆಹರೂ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಬಿಜೆಪಿ ವಕ್ತಾರ ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ವಾಗ್ದಾಳಿ: ಮಡಿಕೇರಿಯಿಂದ ಹೊರಟ ಜನಸುರಕ್ಷಾ ಯಾತ್ರೆ ಸೋಮವಾರ, ಬಂಟ್ವಾಳ ಕ್ಷೇತ್ರದ ಮೆಲ್ಕಾರ್‌ನಲ್ಲಿ ಕೆಲ ತಿಂಗಳ ಹಿಂದೆ ಹತ್ಯೆಯಾದ ಶರತ್‌ ಮಡಿವಾಳ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಳಿಕ ಪಾದಯಾತ್ರೆ ಮೂಲಕ ಸಾಗಿತು. ಬಿ.ಸಿ.ರೋಡ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ್‌ ಜೋಷಿ, ‘ಕಾಂಗ್ರೆಸ್‌ ಹಿಂದೆಯೂ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತ ಬಂದಿದೆ. ಆದ್ದರಿಂದಲೇ ಮುಸ್ಲಿಮರಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಾಗಿದೆ. ಕಾಂಗ್ರೆಸ್‌ ಅನುಸರಿಸಿದ ನೀತಿಯಿಂದ ಮುಸ್ಲಿಮರೂ ಉದ್ಧಾರವಾಗಲಿಲ್ಲ, ಹಿಂದೂಗಳೂ ಉದ್ಧಾರ ಆಗಲಿಲ್ಲ’ ಎಂದು ಟೀಕಿಸಿದರು.

ಮೂಡುಬಿದಿರೆಯ ಸ್ವರಾಜ್‌ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಶಾಸಕ ಸಿ.ಟಿ. ರವಿ, ‘ಕಮ್ಯುನಲ್‌ ಮತ್ತು ಕ್ರಿಮಿನಲ್‌ಗಳಿಗೆ ರಾಜಾಶ್ರಯ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಬೇಕು. ಎನ್‌ಕೌಂಟರ್‌ನಲ್ಲಿ ಸತ್ತವರಿಗೆ ಪರಿಹಾರ ನೀಡಿದ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಈ ಸರ್ಕಾರದಿಂದಾಗಿ ಕರ್ನಾಟಕದ ಜನರ ಬದುಕು ಅಸುರಕ್ಷಿತವಾಗಿದೆ’ ಎಂದರು.

ಬೈಂದೂರು ಮತ್ತು ಕುಂದಾಪುರದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಅನಂತ ಕುಮಾರ್‌ ಹೆಗಡೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT