ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದ ನೈಸ್‌ ಮುಖ್ಯಸ್ಥ ಖೇಣಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ, ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಸೋಮವಾರ ಕಾಂಗ್ರೆಸ್‌ ಸೇರಿದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ತಮ್ಮ ಕರ್ನಾಟಕ ಮಕ್ಕಳ ಪಕ್ಷವನ್ನು (ಕೆಎಂಪಿ) ಖೇಣಿ ಕಾಂಗ್ರೆಸ್‌ ಜೊತೆ ವಿಲೀನಗೊಳಿಸಿದರು.

ಬಳಿಕ ಮಾತನಾಡಿದ ಪರಮೇಶ್ವರ, ‘ಯಾವುದೇ ಷರತ್ತು ಇಲ್ಲದೆ ಖೇಣಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹೈಕಮಾಂಡ್‌ ಕೂಡ ಒಪ್ಪಿಗೆ ನೀಡಿದೆ. ಅವರ ಸೇರ್ಪಡೆಯಿಂದ ಬೀದರ್ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಖೇಣಿ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿಲ್ಲ. ಜಿಲ್ಲಾ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆದು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದೂ ಸ್ಪಷ್ಟಪಡಿಸಿದರು.

ಶಿವಕುಮಾರ್ ಮಾತನಾಡಿ, ‘ನಾವು ನೈಸ್ ಸಂಸ್ಥೆಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಆ ಸಂಸ್ಥೆಯಲ್ಲಿ ಖೇಣಿ ಪಾಲುದಾರರಿರಬಹುದು. ಆದರೆ, ನೈಸ್ ಸಂಸ್ಥೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ಅಧಿಕಾರ ದುರ್ಬಳಕೆಗೆ ಯಾರಿಗೂ ಅವಕಾಶ ನೀಡುವುದಿಲ್ಲ. ಖೇಣಿ ಪರ ನಿಂತು ಕಾನೂನು ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ’ ಎಂದರು.

‘ನನ್ನ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲ್ಲುವ ಶಕ್ತಿ ಇದೆ. ಸ್ಥಿರ ಸರ್ಕಾರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ’ ಎಂದು ಖೇಣಿ ಸಮರ್ಥಿಸಿಕೊಂಡರು.

ಮಾಜಿ ಸಚಿವ ಆರ್.ಎನ್. ನಾಯಕ್ ಕೂಡ ಇದೇ ಸಂರ್ಭದಲ್ಲಿ ಕಾಂಗ್ರೆಸ್‍ ಸೇರಿದರು.

ರಾಜ್ಯ ರಾಜಕಾರಣದಲ್ಲಿ ತೀವ್ರ ಏರುಪೇರು ಸಾಧ್ಯತೆ: ದೇವೇಗೌಡ
ನವದೆಹಲಿ:
‘ಕಾಂಗ್ರೆಸ್‌ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ಶಾಸಕ ಅಶೋಕ್ ಖೇಣಿ ಅವರನ್ನು ಸೇರಿಸಿಕೊಂಡಿದೆ. ಆದರೆ, ಈ ನಿರ್ಧಾರದಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಏರುಪೇರಾಗುವ ಸಾಧ್ಯತೆ ಇದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ಕಾಗೋಡು ತಿಮ್ಮಪ್ಪ, ರಮೇಶ್‌ ಕುಮಾರ್ ಮತ್ತಿತರರು ಖೇಣಿ ಅವರನ್ನು ಟೀಕಿಸಿದ್ದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ನೇತೃತ್ವದ ಸದನ ಸಮಿತಿ ಖೇಣಿ ಕುರಿತು ವರದಿ ನೀಡಿದೆ. ಆದರೂ ಕಾಂಗ್ರೆಸ್‌ ಅವರಿಗೆ ಮಣೆ ಹಾಕಿದೆ ಎಂದರು.

ಖೇಣಿ ಮೊದಲು ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದರು. ಬಿಜೆಪಿಯವರು ಅವರನ್ನು ದೂರವಿರಿಸಿ ಸಭ್ಯತೆ ಮೆರೆದಿದ್ದಾರೆ. ಆದರೆ, ಕಾಂಗ್ರೆಸ್‌ ಮುಖಂಡರು ಈ ಕುರಿತು ಗಮನ ಹರಿಸಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಂದು ಸ್ಥಾನ ಬಿಟ್ಟುಕೊಡಬೇಕು ಎಂಬ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕುತ್ತಿಲ್ಲ. ಈ ನಡೆಯಿಂದ ಆಗುವ ಪರಿಣಾಮಗಳನ್ನು ಆ ಪಕ್ಷ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡಿ ರಾಜ್ಯಸಭೆ ಚುನಾವಣೆ ಕುರಿತು ಚರ್ಚಿಸಲಿದ್ದಾರೆ. ಬುಧವಾರ ಜೆಡಿಎಸ್‌ ಮುಖಂಡರ ಸಭೆ ನಡೆಯಲಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ವಿವಿಧೆಡೆ ಕಾಂಗ್ರೆಸ್‌ಗೆ ಪಕ್ಷ ನೀಡಿರುವ ಬೆಂಬಲದ ಕುರಿತೂ ಸಮಗ್ರವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

ಜೆಡಿಎಸ್‌ ಪಕ್ಷವು ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸದೆ ಕಾಂಗ್ರೆಸ್‌ ಪಕ್ಷಕ್ಕೆ ಪರೋಕ್ಷವಾಗಿ ನೆರವು ನೀಡಿತ್ತು. ನಂಜನಗೂಡಿನಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದಲ್ಲಿ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಕಾಂಗ್ರೆಸ್‌ನ ಈಗಿನ ವರ್ತನೆ ಗಮನಿಸಿದರೆ ನಾವು ನೀಡಿರುವ ಬೆಂಬಲದ ಕುರಿತು ಮರುಪರಿಶೀಲನೆ ನಡೆಸುವ ಕಾಲ ಬಂದಿದೆ ಎಂದು ದೇವೇಗೌಡ ಹೇಳಿದರು.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸುವಂತೆ ಸಿಪಿಐ ಮತ್ತು ಸಿಪಿಎಂ ಮುಖಂಡರನ್ನು ಕೋರಲಾಗಿದೆ. ಇದುವರೆಗೆ ಆ ಪಕ್ಷದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ವಿವರಿಸಿದರು.

ಡಾ. ಅಜಯಸಿಂಗ್ ಅಸಮಾಧಾನ

ಡಾ. ಅಜಯಸಿಂಗ್

ಜೇವರ್ಗಿ (ಕಲಬುರ್ಗಿ ಜಿಲ್ಲೆ): ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದಕ್ಕೆ ಶಾಸಕ ಡಾ. ಅಜಯಸಿಂಗ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ತಂದೆ ದಿವಂಗತ ಎನ್.ಧರ್ಮಸಿಂಗ್ ಅವರು ಬೀದರ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದರು. ಸಹೋದರ ವಿಜಯಸಿಂಗ್ ಅವರು ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಇಷ್ಟಿದ್ದರೂ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಷಯವನ್ನು ನಮ್ಮ ಕುಟುಂಬದವರ ಗಮನಕ್ಕೆ ತರದೇ ಇರುವುದು ಬೇಸರ ಉಂಟು ಮಾಡಿದೆ’ ಎಂದು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಖೇಣಿ ಸೇರ್ಪಡೆ ಕುರಿತು ಬೆಳಿಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ ಅವರು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಹೇಳಿದರು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT