‘ಶೇಪ್ ಆಫ್ ವಾಟರ್‌’ಅತ್ಯುತ್ತಮ ಚಿತ್ರ

ಗುರುವಾರ , ಮಾರ್ಚ್ 21, 2019
27 °C

‘ಶೇಪ್ ಆಫ್ ವಾಟರ್‌’ಅತ್ಯುತ್ತಮ ಚಿತ್ರ

Published:
Updated:
‘ಶೇಪ್ ಆಫ್ ವಾಟರ್‌’ಅತ್ಯುತ್ತಮ ಚಿತ್ರ

ಲಾಸ್ ಏಂಜಲೀಸ್: ‘ದಿ ಶೇಪ್ ಆಫ್ ವಾಟರ್’ ಚಿತ್ರವು 90ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಗೆದ್ದುಕೊಂಡಿದೆ. ‘ಅತ್ಯುತ್ತಮ ಚಿತ್ರ’ ಸೇರಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಇದು ಬಾಚಿಕೊಂಡಿದೆ. ಚಿತ್ರದ ನಿರ್ದೇಶಕ ಗಿಲೆರ್ಮೊ ಡೆಲ್ ಟೊರೊ ಅವರು ಅತ್ಯುತ್ತಮ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕ್ರಿಸ್ಟೋಫರ್‌ ನೋಲನ್‌ (ಚಿತ್ರ: ಡನ್‌ಕಿರ್ಕ್‌), ಜಾರ್ಡನ್‌ ಪೀಲೆ (ಚಿತ್ರ: ಗೆಟ್‌ ಔಟ್‌) ಸೇರಿ ಇತರ ನಿರ್ದೇಶಕರು ಪ್ರಶಸ್ತಿಯ ಪೈಪೋಟಿಯಲ್ಲಿದ್ದರು.

ಚಿತ್ರ ನಿರ್ಮಾಣವೂ ಟೊರೊ ಅವರದ್ದೇ ಆಗಿದ್ದು, ಆಸ್ಕರ್‌ನಲ್ಲಿ ಮೆಕ್ಸಿಕನ್ ಚಿತ್ರ ನಿರ್ಮಾಪಕರು ಮತ್ತೆ ಪಾರಮ್ಯ ಸಾಧಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಇನ್ನುಳಿದಂತೆ ಸಂಗೀತ (ಅಲೆಕ್ಸಾಂಡ್ರೆ ಡೆಸ್ಪ್ಲಾಟ್‌) ಮತ್ತು ನಿರ್ಮಾಣ ವಿನ್ಯಾಸ ವಿಭಾಗದಲ್ಲೂ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

‘ಡನ್‌ಕ್ರಿಕ್’ ಚಿತ್ರವು ಮೂರು ಪ್ರಶಸ್ತಿಗಳನ್ನು ಪಡೆದಿದ್ದರೆ, ‘ತ್ರೀ ಬಿಲ್‌ಬೋರ್ಡ್ಸ್ ಔಟ್‌ಸೈಡ್ ಎಬ್ಬಿಂಗ್ ಮಿಸ್ಸೌರಿ’, ‘ ಡಾರ್ಕೆಸ್ಟ್ ಅವರ್’, ‘ ಕೊಕೊ’, ‘ಬ್ಲೇಡ್ ರನ್ನರ್ 2049’ ಚಿತ್ರಗಳು ತಲಾ ಎರಡು ಪ್ರಶಸ್ತಿ ಗೆದ್ದುಕೊಂಡಿವೆ.

ಗೆರೆ ಅಳಿಸೋಣ: ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ವೇಳೆ ಟೊರೊ ಅವರು, ಅಮೆರಿಕ ಹಾಗೂ ಮೆಕ್ಸಿಕೊ ನಡುವೆ ಗೋಡೆ ನಿರ್ಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ಅಲ್ಫಾನ್ಸೊ, ಅಲೆಜಂಡ್ರೊ ಅವರಂತೆ (ಇಬ್ಬರೂ ಮೆಕ್ಸಿಕನ್ನರು ಹಾಗೂ ಆಸ್ಕರ್ ಪ್ರಶಸ್ತಿ ವಿಜೇತರು) ಹಾಗೂ ನಿಮ್ಮಂತೆ ನಾನು ಕೂಡಾ ವಲಸಿಗ. ಮರಳಿನ ಮೇಲೆ ಮೂಡಿರುವ ಗೆರೆಯನ್ನು ಅಳಿಸಲು ನಮ್ಮ ಅತ್ಯುದ್ಭುತವಾದ ಕಲೆ ಮೂಲಕ ಯತ್ನಿಸುತ್ತಿದ್ದೇವೆ. ಈ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸುವಂತೆ ಜಗತ್ತು ಹೇಳುತ್ತಿರುವುದರಿಂದ ಇದನ್ನು ನಾವು ಮುಂದುವರಿಸಬೇಕಿದೆ’ ಎಂದರು.

ಗ್ಯಾರಿ ಓಲ್ಡ್‌ಮನ್, ಫ್ರಾನ್ಸಿಸ್ ಮೆಕ್‌ಡೋರ್‌ಮನ್ ಶ್ರೇಷ್ಠರು

‘ಡಾರ್ಕೆಸ್ಟ್ ಅವರ್‌’ನಲ್ಲಿ ಬ್ರಿಟನ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಪಾತ್ರ ನಿರ್ವಹಿಸಿರುವ ಗ್ಯಾರಿ ಓಲ್ಡ್‌ಮನ್ ಅತ್ಯುತ್ತಮ ನಟ ಹಾಗೂ ‘ತ್ರೀ ಬಿಲ್‌ಬೋರ್ಡ್ ಔಟ್‌ಸೈಡ್ ಎಬ್ಬಿಂಗ್, ಮಿಸ್ಸೌರಿ’ ಚಿತ್ರಕ್ಕಾಗಿ ಫ್ರಾನ್ಸಿಸ್ ಮೆಕ್‌ಡಾರ್ಮಾಂಡ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

ಶಶಿ ಕಪೂರ್, ಶ್ರೀದೇವಿ ಸ್ಮರಣೆ

ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಶಶಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರನ್ನು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮರಿಸಲಾಯಿತು.

ಕಳೆದೊಂದು ವರ್ಷದಲ್ಲಿ ಮರೆಯಾದ ಕಲಾವಿದರನ್ನು ಸ್ಮರಿಸುವ ಪದ್ಧತಿ ಇದೆ. ಡಿಸೆಂಬರ್ 4ರಂದು ನಿಧನರಾದ ಶಶಿ ಕಪೂರ್ ಅವರು ’ದೀವಾರ್’, ’ಕಭೀ ಕಭೀ’, ‘ನಮಕ್ ಹಲಾಲ್’, ‘ಕಾಲಾ ಪತ್ತರ್‌’ನಂತಹ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿದ್ದರು.  ಫೆಬ್ರುವರಿ 24ರಂದು ನಿಧನರಾದ ನಟಿ ಶ್ರೀದೇವಿ ಮಹಿಳಾ ಸೂಪರ್‌ಸ್ಟಾರ್ ಎಂದೇ ಹೆಸರಾಗಿದ್ದರು.

ತಮಿಳು, ತೆಲುಗು, ಹಿಂದಿ, ಮಲಯಾಳ ಭಾಷೆಗಳಲ್ಲೂ ನಟಿಸಿದ್ದರು. ಇವರ ಜೊತೆ ಬಿಲ್ ಪ್ಯಾಕ್ಸ್‌ಟನ್, ಜೆಮ್ಸ್ ಬಾಂಡ್ ಪಾತ್ರ ಮಾಡಿದ್ದ ರೋಜರ್ ಮೂರ್, ನಟಿ ಮೇರಿ ಗೋಲ್ಡ್‌ಬರ್ಗ್ ಮೊದಲಾದವರನ್ನು ನೆನಪಿಸಿಕೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry