ಒಬ್ಬನ ನಿಯಂತ್ರಣದಲ್ಲಿ ನ್ಯಾಯಾಂಗ

ಭಾನುವಾರ, ಮಾರ್ಚ್ 24, 2019
32 °C
ದವೆ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಆಕ್ರೋಶ

ಒಬ್ಬನ ನಿಯಂತ್ರಣದಲ್ಲಿ ನ್ಯಾಯಾಂಗ

Published:
Updated:
ಒಬ್ಬನ ನಿಯಂತ್ರಣದಲ್ಲಿ ನ್ಯಾಯಾಂಗ

ನವದೆಹಲಿ: ‘ಒಬ್ಬ ವ್ಯಕ್ತಿ ಇಡೀ ನ್ಯಾಯಾಂಗವನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ಹಿರಿಯ ವಕೀಲ ದುಷ್ಯಂತ ದವೆ ಹೇಳಿದ್ದು ಸುಪ್ರೀಂ ಕೋರ್ಟ್‌ ಆಕ್ರೋಶಕ್ಕೆ ಕಾರಣವಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್‌. ಲೋಯ ಸಾವಿನ ಪ್ರಕರಣದ ಬಗೆಗಿನ ವಿಚಾರಣೆ ಸಂದರ್ಭದಲ್ಲಿ ದವೆ ಈ ಹೇಳಿಕೆ ನೀಡಿದರು.

‘ಇದು ಬಹಳ ಸ್ಥೂಲವಾದ ಹೇಳಿಕೆ. ಇಂತಹ ಹೇಳಿಕೆಗಳನ್ನು ಪುನರಾವರ್ತಿಸಬೇಡಿ’ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ಹೇಳಿದರು.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಶಾ ಅವರನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಯಾಕೆ ಮೇಲ್ಮನವಿ ಸಲ್ಲಿಸಿಲ್ಲ ಎಂದು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯನ್ನು ಪೀಠದಿಂದ ಬದಲಾಯಿಸಲಾಗಿದೆ. ಇಶ್ರತ್‌ ಜಹಾಂ ಎನ್‌ಕೌಂಟರ್‌ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದ್ದ ನ್ಯಾಯಮೂರ್ತಿ ಜಯಂತ್‌ ಎಂ. ಪಟೇಲ್‌ ಅವರನ್ನು ವರ್ಗಾಯಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿದ್ದ ಪಟೇಲ್‌ ಬಳಿಕ ರಾಜೀನಾಮೆ ನೀಡಿದರು ಎಂದು ಬಾಂಬೆ ವಕೀಲರ ಸಂಘದ ಪರವಾಗಿ ದವೆ ವಾದ ಮಂಡಿಸಿದ ದವೆ ಹೇಳಿದರು. ‌

‘ಒಬ್ಬರ ಬಳಿಕ ಒಬ್ಬರಂತೆ ನ್ಯಾಯಮೂರ್ತಿಗಳಿಗೆ ಇಂತಹ ಶಿಕ್ಷೆ ವಿಧಿಸುವುದು ಆತಂಕಕಾರಿ. ಒಬ್ಬ ವ್ಯಕ್ತಿ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಿಸುವಂತೆ ಕಾಣಿಸುತ್ತಿದೆ’ ಎಂದು ದವೆ ಆರೋಪಿಸಿದರು.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಲೋಯ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಹಾಗಾಗಿ ದವೆ ಅವರು ಪರೋಕ್ಷವಾಗಿ ಶಾ ಅವರನ್ನೇ ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ದವೆ ಹೇಳಿಕೆಯನ್ನು ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ಬಲವಾಗಿ ಖಂಡಿಸಿದರು. ‘ಇದು ದುರದೃಷ್ಟಕರ. ಇಂತಹ ಸ್ಥೂಲ ಹೇಳಿಕೆಗಳಿಗೆ ಅವಕಾಶ ಕೊಡಬೇಡಿ’ ಎಂದು ನ್ಯಾಯಪೀಠವನ್ನು ಅವರು ಕೇಳಿಕೊಂಡರು. ಈ ಇಬ್ಬರು ಮಹಾರಾಷ್ಟ್ರ ಸರ್ಕಾರದ ಪರವಾಗಿ ವಾದಿಸುತ್ತಿದ್ದಾರೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರೂ ದವೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ದವೆ, ಶಾ ಅವರಿಗೆ 15 ವರ್ಷ ಮೆಹ್ತಾ ಅವರು ವಕೀಲರಾಗಿದ್ದರು. ಹಾಗಾಗಿ ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ವಕೀಲರಿಗೆ ನೆರವಾಗುವ ಹಕ್ಕು ಮೆಹ್ತಾಗೆ ಇಲ್ಲ ಎಂದರು.

ಲೋಯ ಅವರ ಸಾವಿನ ಬಗ್ಗೆ ಅನುಮಾನ ಇದೆ ಎಂಬ ಅರ್ಥದ ವರದಿಯೊಂದು ‘ಕ್ಯಾರವಾನ್‌’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸಿ ಮಾತನಾಡಿದ ದವೆ, ಲೋಯ ಸಾವಿನ ಬಗ್ಗೆ ತನಿಖೆ ನಡೆಯಬೇಕು ಎಂದು ನ್ಯಾಯಮೂರ್ತಿಗಳು, ಲೋಯ ಅವರ ಸಹೋದ್ಯೋಗಿಗಳು ಒಂದೇ ಧ್ವನಿಯಲ್ಲಿ ಯಾಕೆ ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.

‘ಈ ಪ್ರಕರಣದ ತನಿಖೆಗೆ ಆದೇಶಿಸಲು ಸುಪ್ರೀಂ ಕೋರ್ಟ್‌ಗೆ ಅಧಿಕಾರ ಇದೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಸ್ವತಂತ್ರ ತನಿಖೆಗೆ ಆದೇಶಿಸುವಾಗ ಅದು ಭಾವಾವೇಶದಿಂದ ಕೂಡಿರಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry