ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರ ಹತ್ಯೆ ಖಂಡಿಸಿ ಪ್ರತಿಭಟನೆ

ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಗುಂಡಿನ ದಾಳಿ: ಆರು ಮಂದಿ ಸಾವು
Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಚೆಕ್‌ಪೋಸ್ಟ್‌ ಬಳಿ ಭಾನುವಾರ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಈ ಮಧ್ಯೆ ನಾಗರಿಕರ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಕಣಿವೆ ರಾಜ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ನಾಲ್ವರ ಹತ್ಯೆ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಶ್ಮೀರದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು, ಉದ್ದೇಶಪೂರ್ವಕವಾಗಿ ನಾಗರಿಕರನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಪ್ರತ್ಯೇಕತಾವಾದಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

ಕಾಶ್ಮೀರ ವಿ.ವಿ ಸೋಮವಾರ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಿತು.  ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಗುರುವಾರದವರೆಗೆ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಮೂರು ತಿಂಗಳ ಚಳಿಗಾಲದ ರಜೆ ನಂತರ ಸೋಮವಾರ ಶಾಲೆಗಳು ಪುನರಾರಂಭವಾಗಬೇಕಿತ್ತು. ಜನರು ಪ್ರತಿಭಟನೆ ನಡೆಸಬಹುದು ಎಂದು ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ರೈಲು ಸೇವೆ ರದ್ದುಪಡಿಸಲಾಗಿದೆ.

ಭಾನುವಾರ ನಾಲ್ಕು ಮಂದಿ ಮೃತಪಟ್ಟಿದ್ದರು. ಈ ನಾಲ್ವರು ಮೃತಪಟ್ಟ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ಗೌಹರ್‌ ಲೋನ್ (24) ಎಂಬುವವರ ಮೃತದೇಹ  ಪತ್ತೆಯಾಗಿತ್ತು. ಸೈದ್‌ಪೊರಾದ ಉದ್ಯಾನದಲ್ಲಿ ಮತ್ತೊಬ್ಬ ಉಗ್ರನ ಮೃತದೇಹ ದೊರಕಿದೆ. ಇವನನ್ನು ಆಶಿಕ್‌ ಭಟ್‌ ಎಂದು ಗುರುತಿಸಲಾಗಿದ್ದು, ಲಷ್ಕರ್–ಎ–ತಯ್ಯಿಬಾ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಎಂದು ಹೇಳಲಾಗಿದೆ.

ಭಾನುವಾರ ರಾತ್ರಿ ಶೋಪಿಯಾನ್‌ನ ವಾಹನ ತಪಾಸಣಾ ಕೇಂದ್ರದ ಬಳಿ ಸೇನಾ ಪಡೆ ಸಿಬ್ಬಂದಿ ವಾಹನವೊಂದನ್ನು ತಡೆದಾಗ, ನಿಲ್ಲಿಸದೆ ಮುಂದೆ ಹೋದದ್ದರಿಂದ ಅದರ ಮೇಲೆ ಗುಂಡು ಹಾರಿಸಿದ್ದರು. ಅದರಲ್ಲಿದ್ದ ಒಬ್ಬ ಉಗ್ರ ಮತ್ತು ಉಗ್ರಗಾಮಿಗಳಿಗೆ ಸಹಕರಿಸುತ್ತಿದ್ದರು ಎನ್ನಲಾದ ಇತರ ಮೂವರು ಮೃತಪಟ್ಟಿದ್ದರು.

ಯಾಸಿನ್‌ ಮಲಿಕ್‌ ವಶಕ್ಕೆ: ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ ಅಧ್ಯಕ್ಷ ಯಾಸಿನ್‌ ಮಲ್ಲಿಕ್‌  ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಮೆಹಬೂಬಾ ಸಂತಾಪ
ಶ್ರೀನಗರ:
ಶೋಪಿಯಾನ್‌ ಗುಂಡಿನ ದಾಳಿಯಲ್ಲಿ ನಾಗರಿಕರು ಮೃತಪಟ್ಟಿರುವುದಕ್ಕೆ ಜಮ್ಮು ಮತ್ತು ಕಾಶ್ಮಿರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.

‘ಶೋಪಿಯಾನ್‌ ಗುಂಡಿನ ದಾಳಿಯಲ್ಲಿ ಇನ್ನಷ್ಟು ನಾಗರಿಕರು ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ ಎಂದು ಮೆಹಬೂಬಾ ಟ್ವೀಟ್‌ ಮಾಡಿದ್ದಾರೆ.

ಆರೋಪಿ ಎಂದು ಹೆಸರಿಸಿಲ್ಲ: ಸರ್ಕಾರ
ನವದೆಹಲಿ:
ಜನವರಿ 27ರಂದು ಶೋಪಿಯಾನ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್‌ ಆದಿತ್ಯ ಕುಮಾರ್ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆದಿತ್ಯ ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಕರಮ್‌ವೀರ್ ಸಿಂಗ್‌ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗನ ವಿರುದ್ಧ ಸುಳ್ಳು ಆರೋಪ ಹೊರಿಸಿ, ಎಫ್‌ಐಆರ್‌ ದಾಖಲಿಸಲಾಗಿದೆ. ಅದನ್ನು ರದ್ದುಪಡಿಸುವಂತೆ ಕೋರಿ ‘ಸುಪ್ರೀಂ’ನಲ್ಲಿ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರಿದ್ದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.

ಆದಿತ್ಯ ಕುಮಾರ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಫೆಬ್ರುವರಿ 12ರಂದು ಸುಪ್ರೀಂ ಕೋರ್ಟ್‌ ಅದೇಶಿಸಿತ್ತು. ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿಯವರೆಗೂ ಪ್ರಕರಣದ ಕುರಿತು ಯಾವುದೇ ತನಿಖೆ ನಡೆಸಬಾರದು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT