ಸಿನಿಮಾಕ್ಕೆ ₹1.95 ಕೋಟಿ, ಸಮಾರಂಭಕ್ಕೆ ₹2.2 ಕೋಟಿ!

ಶುಕ್ರವಾರ, ಮಾರ್ಚ್ 22, 2019
21 °C
10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಸಿನಿಮಾಕ್ಕೆ ₹1.95 ಕೋಟಿ, ಸಮಾರಂಭಕ್ಕೆ ₹2.2 ಕೋಟಿ!

Published:
Updated:
ಸಿನಿಮಾಕ್ಕೆ ₹1.95 ಕೋಟಿ, ಸಮಾರಂಭಕ್ಕೆ ₹2.2 ಕೋಟಿ!

ಬೆಂಗಳೂರು: ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರಮುಖ ಭಾಗವಾದ ಸಿನಿಮಾ ಪ್ರದರ್ಶನಗಳಿಗೆ ಆದ ಖರ್ಚು ₹1.95 ಕೋಟಿ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಖರ್ಚು ₹2.2 ಕೋಟಿ! ಬಾಲಿವುಡ್‍ ನಟಿ ಕರೀನಾ ಕಪೂರ್ ಅವರಿಗೆ ದುಬಾರಿ ಸಂಭಾವನೆ ಸಲ್ಲಿಕೆ ಸೇರಿದಂತೆ, 10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ದುಂದು ವೆಚ್ಚ ಮಾಡಲಾಗಿದೆ ಎಂದು ಚಿತ್ರೋದ್ಯಮದಲ್ಲಿ ಎದ್ದಿರುವ ಗುಲ್ಲಿನ ಹಿನ್ನೆಲೆಯಲ್ಲಿ, ಚಿತ್ರೋತ್ಸವಕ್ಕೆ ಸಂಬಂಧಿಸಿದ ಕೆಲವರನ್ನು 'ಪ್ರಜಾವಾಣಿ' ಸಂಪರ್ಕಿಸಿದಾಗ ಹೊರಬಿದ್ದ ಅಂಕಿ ಅಂಶಗಳು ಮೂಗಿಗಿಂತಲೂ ಮೂಗುತಿ ಭಾರ ಎನ್ನುವ ಮಾತಿಗೆ ಉದಾಹರಣೆಯಂತಿದ್ದವು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಿನಿಮೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್, ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಚಟುವಟಿಕೆಗಳ ವೆಚ್ಚದ ವಿವರಗಳನ್ನು ನೀಡಿದರು.

‘ಚಿತ್ರೋತ್ಸವಕ್ಕೆಂದು ರಾಜ್ಯ ಬಜೆಟ್‍ನಲ್ಲಿ ₹ 4 ಕೋಟಿ ನಿಗದಿಪಡಿಸಲಾಗಿತ್ತು. ಸಿನಿಮಾಗಳನ್ನು ತರಿಸಿಕೊಳ್ಳುವುದಕ್ಕೆ ಹಾಗೂ ಪ್ರದರ್ಶಿಸಲಿಕ್ಕೆ ಇಷ್ಟು ಹಣ ಸಾಕು. ಇದರ ಹೊರತಾದ ವೆಚ್ಚಗಳು ನನ್ನ ಹೊಣೆಗಾರಿಕೆಗೆ ಸಂಬಂಧಿಸಿದವುಗಳಲ್ಲ’ ಎಂದು ಹೇಳಿದರು.

11 ತೆರೆಗಳಲ್ಲಿ ಪ್ರದರ್ಶನಗೊಂಡ 200 ಅಂತರರಾಷ್ಟ್ರೀಯ ಸಿನಿಮಾಗಳ ಆಯ್ಕೆ ಮತ್ತು ಅವುಗಳನ್ನು ತರಿಸಿಕೊಳ್ಳಲಿಕ್ಕೆ ಸುಮಾರು ₹65 ಲಕ್ಷ, ಚಿತ್ರಮಂದಿರಗಳ ಬಾಡಿಗೆ ₹60 ಲಕ್ಷ ಹಾಗೂ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಬರುವ ಅತಿಥಿಗಳ ಆತಿಥ್ಯಕ್ಕೆ ₹70 ಲಕ್ಷ - ಇದಿಷ್ಟು ಚಿತ್ರೋತ್ಸವಕ್ಕೆ ಆಗಿರುವ ವಿವಿಧ ಖರ್ಚುಗಳ ಬಗ್ಗೆ ವಿದ್ಯಾಶಂಕರ್‍ ಅವರು ನೀಡಿದ ಸ್ಥೂಲ ಲೆಕ್ಕಾಚಾರ. ಇದರಾಚೆಗಿನ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳ ಖರ್ಚು ವೆಚ್ಚಗಳ ಬಗ್ಗೆ ಅವರಲ್ಲಿ ಮಾಹಿತಿಯಿಲ್ಲ.

ಕರೀನಾ ಕಪೂರ್ ಅವರನ್ನು ಕರೆಸುವ ನಿರ್ಣಯ ಯಾರದು ಹಾಗೂ ಈ ನಿರ್ಣಯವನ್ನು ಯಾವ ಹಂತದಲ್ಲಿ ಕೈಗೊಳ್ಳಲಾಯಿತು ಎನ್ನುವ ಬಗ್ಗೆಯೂ ಉತ್ಸವದ ನಿರ್ದೇಶಕರಿಗೆ ಮಾಹಿತಿಯಿಲ್ಲ.

ಗುಣಮಟ್ಟದ ಕೊರತೆ: ಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆಯಿದ್ದ ಕೆಲವು ಚಿತ್ರಗಳನ್ನು ವಿದೇಶಿ ವಿಭಾಗಕ್ಕೆ ಸೇರಿಸುವ ಮೂಲಕ ಅವುಗಳಿಗೆ ಪ್ರಶಸ್ತಿ ತಪ್ಪಿಸುವ ಪ್ರಯತ್ನ ನಡೆದಿದೆ ಹಾಗೂ ಪೊಳ್ಳು ಸಿನಿಮಾಗಳಿಗೆ ಸ್ಪರ್ಧೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎನ್ನುವ ಆರೋಪದ ಬಗ್ಗೆ ಸ್ಪಷ್ಟವಾಗಿ ಉತ್ತರಿಸದ ಅವರು, ಕನ್ನಡ ಸಿನಿಮಾಗಳ ಸ್ಪರ್ಧಾತ್ಮಕ ವಿಭಾಗದಲ್ಲಿ ಚಿತ್ರಗಳ ಗುಣಮಟ್ಟ ಸರಿಯಾಗಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿರುವುದನ್ನು ಒಪ್ಪಿಕೊಂಡರು. ಜನಪ್ರಿಯ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಕುರಿತು ನನಗೆ ಸಮ್ಮತಿಯಿಲ್ಲ ಎಂದರು.

ಈ ಬಾರಿಯ ಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಜನಪ್ರಿಯ ಚಿತ್ರಗಳಿಗೆ ಪ್ರಶಸ್ತಿ ನೀಡುವ ಪರಿಪಾಠದ ಕುರಿತು ಆಕ್ಷೇಪ ವ್ಯಕ್ತವಾದುದನ್ನು ನೆನಪಿಸಿಕೊಂಡರು.

ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೆ ಕೂಡ ಜನಪ್ರಿಯ ಚಿತ್ರಗಳಿಗೆ ಪ್ರಶಸ್ತಿ ನೀಡುವ ಬಗ್ಗೆ ಸಮ್ಮತಿಯಿಲ್ಲ. 'ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದ ಸಿನಿಮಾಗಳಿಗೆ ಪ್ರಶಸ್ತಿ ಕೊಡುವ ಅಭ್ಯಾಸ ವಿಶ್ವದ ಯಾವ ಚಿತ್ರೋತ್ಸವದಲ್ಲೂ ಇಲ್ಲ. ಸಿನಿಮಾ ಮಾಧ್ಯಮವನ್ನು ಸ್ವತಂತ್ರ ಅಭಿವ್ಯಕ್ತಿಯ ರೂಪದಲ್ಲಿ ದುಡಿಸಿಕೊಳ್ಳುವವರಿಗೆ ಮನ್ನಣೆ ನೀಡುವುದು ಚಿತ್ರೋತ್ಸವಗಳ ಉದ್ದೇಶ. ಹೀಗಿರುವಾಗ ಯಾವ ಯಾವುದೋ ಸಿನಿಮಾಕ್ಕೆ ಪ್ರಶಸ್ತಿ ನೀಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಕಳೆದುಕೊಳ್ಳುತ್ತೇವೆ' ಎನ್ನುವುದು ಅವರ ಅನಿಸಿಕೆ.

ತಮ್ಮ ಮಾತಿಗೆ ಉದಾಹರಣೆಯನ್ನಾಗಿ ಅವರು ಕಾನ್‍ ಚಿತ್ರೋತ್ಸವವನ್ನು ಉದಾಹರಿಸಿದರು. 'ಕಾನ್‍ ಚಿತ್ರೋತ್ಸವಕ್ಕೆ ಬೆಲೆಯಿರುವುದು ಅಲ್ಲಿ ನಡೆಯುವ ಪಾರ್ಟಿಗಳ ಕಾರಣಕ್ಕಲ್ಲ. ಅಲ್ಲಿ ಪ್ರಶಸ್ತಿ ಪಡೆಯುವ ಸಿನಿಮಾ ರಾತ್ರೋರಾತ್ರಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆಯುತ್ತದೆ' ಎಂದರು.

ಕನ್ನಡ ಸಿನಿಮಾಗಳ ಪ್ರಶಸ್ತಿ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಹಾಗೂ ರಾಷ್ಟ್ರೀಯ ಪುರಸ್ಕಾರ ಗಳಿಸಿದ ಚಿತ್ರಗಳನ್ನು ಮೊದಲ ಹಂತದಲ್ಲೇ ನಿರಾಕರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಚಿತ್ರೋತ್ಸವದ ಜ್ಯೂರಿಗಳಲ್ಲೊಬ್ಬರಾಗಿದ್ದ ನಿರ್ದೇಶಕ ಉಮಾಶಂಕರ ಸ್ವಾಮಿ ಕೂಡ ಕನ್ನಡ ಸಿನಿಮಾಗಳ ಆಯ್ಕೆಯ ಪ್ರಾಥಮಿಕ ಹಂತದಲ್ಲಿ ಸಮಸ್ಯೆಗಳಿವೆ ಎಂದರು. 'ಸ್ಪರ್ಧೆಯಲ್ಲಿ ಇರಲೇಬೇಕಾಗಿದ್ದ ಅಮರಾವತಿ, ಬ್ಯೂಟಿಫುಲ್‍ ಮನಸುಗಳು ರೀತಿಯ ಚಿತ್ರಗಳನ್ನು ಹೊರಗಿಡಲಾಗಿದೆ. ಸಾಮಾನ್ಯ ಪ್ರೇಕ್ಷಕ ಕೂಡ ತಿರಸ್ಕರಿಸಬಹುದಾದ ಕೆಲವು ಚಿತ್ರಗಳನ್ನು ಅಂತಿಮ ಹಂತಕ್ಕೆ ಕಳುಹಿಸಲಾಗಿದೆ' ಎಂದು ಆರೋಪಿಸಿದರು.

ಕನ್ನಡದವರು ಏಕೆ ಬೇಡ?: ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್‍ ತಾರೆಯರನ್ನು ಕರೆತರುವ ಪ್ರವೃತ್ತಿಯ ಬಗ್ಗೆಯೂ ಕಾಸರವಳ್ಳಿ ಆಕ್ಷೇಪ ವ್ಯಕ್ತಪಡಿಸಿದರು. 'ನಾವು ಯಾರನ್ನು ಕರೆತರುತ್ತಿದ್ದೇವೆಯೋ ಅವರಿಗೆ ಕನ್ನಡ ಸಿನಿಮಾದೊಂದಿಗೆ ಸಂಬಂಧ ಇರುವುದಿಲ್ಲ. ಅಂತರರಾಷ್ಟ್ರೀಯ ಸಿನಿಮಾಗಳ ಅರಿವೂ ಇರುವುದಿಲ್ಲ' ಎಂದು ವಿಷಾದಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಗೂ ನಿರೂಪಣೆಗೆ ಪರಭಾಷೆಯವರನ್ನು ಆಹ್ವಾನಿಸುವ ಬದಲು, ಕನ್ನಡ ಕಲಾವಿದರನ್ನು ಏಕೆ ಕರೆಯಬಾರದು ಎಂದು ಪ್ರಶ್ನಿಸಿದ ಅವರು, 'ಸಿನಿಮೋತ್ಸವ ಬಾಲಿವುಡ್‍ ತಾರೆಯರ ಪ್ರದರ್ಶನ ವೇದಿಕೆ ಅಥವಾ ಫ್ಯಾಷನ್‍ ಷೋ ಅಲ್ಲ' ಎಂದರು.

ಕರೀನಾಗೆ ₹1.20 ಕೋಟಿ?

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್‍ ನಟಿ ಕರೀನಾ ಕಪೂರ್‍ ಅವರಿಗೆ ₹1.2 ಕೋಟಿ ನೀಡಲಾಗಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನೀಡುತ್ತಿದೆ.

ಅಕಾಡೆಮಿಯ ಪದಾಧಿಕಾರಿಯೊಬ್ಬರ ಪ್ರಕಾರ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದ ನಿರ್ವಹಣೆಯನ್ನು ವಹಿಸಿಕೊಂಡಿದ್ದ ಇವೆಂಟ್‍ ಮ್ಯಾನೇಜ್‍ಮೆಂಟ್‍ ಸಂಸ್ಥೆಯೊಂದಕ್ಕೆ ₹ 2.2 ಕೋಟಿ ನೀಡಲಾಗಿದೆ. ಇದರಲ್ಲಿ ಕರೀನಾ ಅವರಿಗೆ ನೀಡಿರುವ ಸಂಭಾವನೆಯೂ ಸೇರಿದೆ.

ಬಜೆಟ್‍ನಲ್ಲಿ ₹ 4 ಕೋಟಿ ನಿಗದಿಪಡಿಸಿದ್ದರೂ, ಒಟ್ಟು ₹ 10 ಕೋಟಿ ಮೊತ್ತವನ್ನು ಸರ್ಕಾರ ಚಿತ್ರೋತ್ಸವಕ್ಕಾಗಿ ನೀಡಿದೆ. ಖರ್ಚು ವೆಚ್ಚದ ವಿವರಗಳನ್ನು ಪಡೆಯಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ಸಂಪರ್ಕಕ್ಕೆ ದೊರೆಯಲಿಲ್ಲ. ಸಿನಿಮೋತ್ಸವದೊಂದಿಗೆ ಬಾಬು ಅವರ ಅಧಿಕಾರಾವಧಿ ಮುಗಿದಿದ್ದು, ಅವರು ಫೋನ್‍ ಸಂಪರ್ಕಕ್ಕೆ ಸಿಗುತ್ತಿಲ್ಲ.

ಉದ್ಘಾಟನಾ ಸಮಾರಂಭ ಅನಗತ್ಯ

ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳನ್ನು ಅದ್ದೂರಿಯಾಗಿ ನಡೆಸುವುದನ್ನು ನಾನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದೇನೆ. ಔಪಚಾರಿಕವಾಗಿ ನಡೆಯಬೇಕಾದ ಚಟುವಟಿಕೆಗಳನ್ನು, ಯಾರನ್ನೋ ಮೆಚ್ಚಿಸಲಿಕ್ಕಾಗಿ ದುಂದು ವೆಚ್ಚ ಮಾಡಬಾರದು ಎನ್ನುವುದು ಕಾಸರವಳ್ಳಿ ಅವರ ಸ್ಪಷ್ಟ ಅಭಿಪ್ರಾಯ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕರೀನಾ ಕಪೂರ್‍ ಅವರಿಗೆ ದುಬಾರಿ ಮೊತ್ತ ಪಾವತಿಸಲಾಗಿದೆ ಎನ್ನುವ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಅವರು, ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಭಾಗವಹಿಸುವವರಿಗೆ ₹ 10 ಸಾವಿರ ರೂಪಾಯಿ ದೊರೆಯುವುದೂ ಕಷ್ಟ ಎಂದು ವಿಷಾದಿಸಿದರು.

ಇದನ್ನೂ ಓದಿ...

ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ದಶಕದ ಸಂಭ್ರಮ

ಸಿನಿಮಾ ಋತು ನೂರೆಂಟು ನೆನಪು...

ಜೀವಮಾನ ಸಾಧನೆ: ಮಣಿರತ್ನಂಗೆ ‘ಬೆಂಗಳೂರು ಸಿನಿಮೋತ್ಸವ’ ಪ್ರಶಸ್ತಿ

ಸಿನಿಮೋತ್ಸವ: ಒಂದು ಮೌಲ್ಯಮಾಪನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry