ಸಿಐಡಿ ಹೆಗಲಿಗೆ ತನಿಖೆ ಹೊಣೆ

7
2008ರಲ್ಲಿ ನಡೆದಿದ್ದ 98 ಮಾರ್ಕೊಪೊಲೋ ಬಸ್‌ ಖರೀದಿ ಅವ್ಯವಹಾರ

ಸಿಐಡಿ ಹೆಗಲಿಗೆ ತನಿಖೆ ಹೊಣೆ

Published:
Updated:
ಸಿಐಡಿ ಹೆಗಲಿಗೆ ತನಿಖೆ ಹೊಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಕುರಿತು ಭಾರಿ ವಾಕ್ಸಮರ ನಡೆಯುತ್ತಿರುವಾಗಲೇ  ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 98 ಮಾರ್ಕೊಪೊಲೋ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಈ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗಾಗಿ ಸದ್ಯವೇ ಗೃಹ ಇಲಾಖೆ ಅಧಿಸೂಚನೆ ಹೊರಡಿಸಲಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಸದನ ಸಮಿತಿ ತನಿಖೆ ನಡೆಸಿತ್ತು. ತಾಂತ್ರಿಕವಾಗಿ ಸೂಕ್ತವಲ್ಲದ ಬಸ್ ಖರೀದಿಸಲಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಇದನ್ನು ಆಧರಿಸಿ ಸಿಐಡಿ ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದರು.

2008 ರಲ್ಲಿ ಸಾರಿಗೆ ಸಚಿವ ಆರ್‌. ಅಶೋಕ್‌ ರಾಜ್ಯೋತ್ಸವ ಕೊಡುಗೆ ಎಂದು ಮಾರ್ಕೊಪೊಲೋ ಬಸ್‌ಗಳನ್ನು ಬೆಂಗಳೂರಿಗೆ ಪರಿಚಯಿಸಿದ್ದರು. ‘ಹವಾ ನಿಯಂತ್ರಿತ ಟಾಟಾ ಮಾರ್ಕೊಪೊಲೋ ಬಸ್‌ಗಳನ್ನು ವೊಲ್ವೊ ಬಸ್‌ ದರದ ಮೂರನೇ ಒಂದರಷ್ಟು ಅಂದರೆ ಪ್ರತಿ ಬಸ್‌ಗೆ ₹ 30.49 ಲಕ್ಷ ಕೊಟ್ಟು ಖರೀದಿಸುತ್ತಿದ್ದೇವೆ’ ಎಂದು ಆ ಸಂದರ್ಭದಲ್ಲಿ ಅಶೋಕ್‌ ತಿಳಿಸಿದ್ದರು.

ಜೆನರ್ಮ್‌(ಜವಾಹರಲಾಲ್‌ ನೆಹರೂ ನ್ಯಾಷನಲ್‌ ಅರ್ಬನ್‌ ರಿನೀವಲ್‌ ಮಿಷನ್‌) ಯೋಜನೆಯಡಿ ಬಿಎಂಟಿಸಿಗೆ ಬಸ್ಸುಗಳ ಖರೀದಿಗೆ ಕೇಂದ್ರ ಸರ್ಕಾರ ₹ 16 ಕೋಟಿ ಅನುದಾನ ನೀಡಿತ್ತು. ರಾಜ್ಯ ಸರ್ಕಾರ ₹ 14 ಕೋಟಿ ನೀಡಿತ್ತು.

ಈ ಬಸ್ಸುಗಳ ನಿರ್ವಹಣೆ ಬಗ್ಗೆ ಪ್ರಯಾಣಿಕರು ಮತ್ತು ಚಾಲಕರಿಂದ ಸಾಕಷ್ಟು ದೂರುಗಳು ಬಂದವು.  ಅವುಗಳೆಂದರೆ, ಕರ್ಕಶ ಸದ್ದು, ಕಡಿಮೆ ವೇಗ, ಕಳಪೆ ಗುಣಮಟ್ಟದ ಹವಾನಿಯಂತ್ರಿತ ವ್ಯವಸ್ಥೆ, ಪ್ರತಿ ಕಿ.ಮೀಗೆ 1.4 ಲೀಟರ್‌ ಇಂಧನ ಬಳಕೆ ಮತ್ತು ಅಧಿಕ ಪ್ರಮಾಣದ ಮಾಲಿನ್ಯ.

ವೇಗ ಹೆಚ್ಚಿಸಲು ಬಸ್‌ಗಳಿಂದ ಹವಾನಿಯಂತ್ರಣ ವ್ಯವಸ್ಥೆಯನ್ನು ತೆಗೆದು ಹಾಕಲಾಯಿತು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಸಾರಿಗೆ ಸಚಿವ ಆರ್‌.ರಾಮಲಿಂಗಾರೆಡ್ಡಿ ಬಸ್ಸುಗಳನ್ನು ಪೂರೈಕೆ ಮಾಡಿದ್ದ ಟಾಟಾ ಮೋಟಾರ್ಸ್‌ ಮತ್ತು ಬ್ರೆಜಿಲ್‌ನ ಮಾರ್ಕೊಪೊಲೋಗೆ ಪತ್ರ ಬರೆದು, ಕಳಪೆ ಬಸ್ಸುಗಳನ್ನು ಪೂರೈಕೆ ಮಾಡಿದ್ದಕ್ಕೆ ₹ 30 ಕೋಟಿ ಮರುಪಾವತಿ ಮಾಡಬೇಕೆಂದು ಆಗ್ರಹಿಸಿದ್ದರು.

ಕಳಪೆ ಬಸ್ಸುಗಳನ್ನು ಐದು ವರ್ಷ ಓಡಿಸಿದ್ದರಿಂದ ಸಾರಿಗೆ ಸಂಸ್ಥೆಗೆ ₹ 70 ಕೋಟಿ ನಷ್ಟವಾಗಿದೆ. ಪ್ರತಿ ಬಸ್ಸಿಗೆ ಕಿ.ಮೀಗೆ ₹ 27 ರಷ್ಟು ನಷ್ಟ ಉಂಟಾಗುತ್ತಿದೆ. ಇನ್ನಷ್ಟು ನಷ್ಟ ಆಗುವುದನ್ನು ತಪ್ಪಿಸಲು 98 ಬಸ್ಸುಗಳನ್ನು ಗುಜರಿಗೆ ಹಾಕಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು. ಬಳಿಕ ಬಸ್ಸುಗಳ ಖರೀದಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ(ವೆಚ್ಚ) ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.

ಕೇಂದ್ರ ಸೂಚನೆ ಮೇರೆಗೆ ಖರೀದಿ: ಅಶೋಕ್

‘2008 ರಲ್ಲಿ ಮಾರ್ಕೊಪೊಲೋ ಬಸ್ಸುಗಳ ಖರೀದಿ ಕೇಂದ್ರ ಸರ್ಕಾರದ ಸೂಚನೆ ಮತ್ತು ಟೆಂಡರ್‌ ಷರತ್ತಿನ ಅನ್ವಯವೇ ಆಗಿತ್ತು. ಇದರಲ್ಲಿ ನಮ್ಮ ಪಾತ್ರ ಇರಲಿಲ್ಲ’ ಎಂದು ಬಿಜೆಪಿ ನಾಯಕ ಆರ್‌.ಅಶೋಕ್‌ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಜೆನರ್ಮ್‌ ಯೋಜನೆಯಡಿ 22 ರಾಜ್ಯಗಳಿಗೆ 2000 ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು. ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆ ಜಾಗತಿಕ ಟೆಂಡರ್‌ ಕರೆದಿತ್ತು. ಯುಪಿಎ ಸರ್ಕಾರವೇ ಟೆಂಡರ್‌ ಅಂತಿಮಗೊಳಿಸಿ ಟಾಟಾ ಮಾರ್ಕೊಪೊಲೋ ನೀಡಲು ನಿರ್ಧರಿಸಿತು. ಬಸ್ಸುಗಳ ಖರೀದಿ ಪ್ರಕ್ರಿಯೆ ಕೇಂದ್ರ ಸಾರಿಗೆ ಇಲಾಖೆ ನಿರ್ದೇಶನದಂತೆಯೇ ನಡೆದಿದೆ. ಕೇಂದ್ರ ಪಾಲುದಾರಿಕೆಯ ಈ ಯೋಜನೆಯಲ್ಲಿ ರಾಜ್ಯದ ಪಾತ್ರ ಕಡಿಮೆ ಇತ್ತು ಎಂದರು.

ಕೇಂದ್ರ ಸಾರಿಗೆ ಕಾರ್ಯದರ್ಶಿಯವರು ಟಾಟಾ ಕಂಪೆನಿ ಜತೆ ಮಾತುಕತೆ ನಡೆಸಿದ್ದರು. ಎಲ್ಲ ರಾಜ್ಯಗಳಿಗೂ ಮಾರ್ಕೊಪೊಲೋ ಖರೀದಿಸಲು ಸೂಚಿಸಲಾಗಿತ್ತು. 10 ವರ್ಷದ ಹಿಂದಿನ ಖರೀದಿ ಪ್ರಕ್ರಿಯೆಯನ್ನು ಈಗ ಪ್ರಸ್ತಾಪಿಸುವ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಅಶೋಕ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry