4

ಬ್ರಾಹ್ಮಣವಾದಿ ಪಕ್ಷಗಳಿಂದ ನ್ಯಾಯ ಸಿಗದು

Published:
Updated:
ಬ್ರಾಹ್ಮಣವಾದಿ ಪಕ್ಷಗಳಿಂದ ನ್ಯಾಯ ಸಿಗದು

ಬಾಗಲಕೋಟೆ: ‘ಚುನಾವಣೆ ಕಾರಣಕ್ಕಾಗಿ ಕರ್ನಾಟಕದಲ್ಲಿ ಬಸವಣ್ಣನ ಜಪ ನಡೆಯುತ್ತಿದೆಯೇ ಹೊರತು ಸ್ವತಂತ್ರ ಧರ್ಮದ ಮನ್ನಣೆ ಕೊಡಿಸಲು ಅಲ್ಲ. ಬ್ರಾಹ್ಮಣವಾದಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಬಸವ ಅನುಯಾಯಿಗಳಿಗೆ ಖಂಡಿತ ನ್ಯಾಯ ಸಿಗುವುದಿಲ್ಲ’ ಎಂದು ಭಾರತೀಯ ರಿಪಬ್ಲಿಕ್ ಪಕ್ಷದ ಅಧ್ಯಕ್ಷ ಪ್ರಕಾಶ ಅಂಬೇಡ್ಕರ್ ಹೇಳಿದರು.

ಪ್ರಜಾ ಪರಿವರ್ತನಾ ಪಕ್ಷ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಏಕತಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಬ್ರಾಹ್ಮಣರ ಪಕ್ಷ. ಇನ್ನು, ಗುಜರಾತ್‌ ಚುನಾವಣೆ ಪ್ರಚಾರದ ವೇಳೆ ತಾನು ಜನಿವಾರಧಾರಿ ಹಿಂದೂ ಎಂದು ರಾಹುಲ್‌ಗಾಂಧಿ ಹೇಳಿಕೊಂಡಿ ದ್ದಾರೆ. ಜನಿವಾರ ಧರಿಸುವ ಅಧಿಕಾರ ಯಾರದ್ದು? ಬಸವೇಶ್ವರರು 12ನೇ ಶತಮಾನದಲ್ಲಿ ಯಾರ ವಿರುದ್ಧ ಸಾಮಾಜಿಕ ಆಂದೋಲನ ರೂಪಿಸಿದ್ದರು’ ಎಂದು ನೆರೆದವರನ್ನು ಪ್ರಶ್ನಿಸಿದ ಪ್ರಕಾಶ ಅಂಬೇಡ್ಕರ್‌, ‘ಹಾಗಿದ್ದ ಮೇಲೆ ಜನಿವಾರಧಾರಿ ನಾಯಕನ ಪಕ್ಷವಾಗಲೀ, ಬಿಜೆಪಿಯಿಂದಾಗಲೀ ಸ್ವತಂತ್ರ ಧರ್ಮದ ಮನ್ನಣೆ ಕೊಡಿಸಲು ಸಾಧ್ಯವೇ?’ ಎಂದು ಕೇಳಿದರು.

‘ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಇಷ್ಟೆಲ್ಲಾ ಆಟ ಕಟ್ಟುತ್ತಿರಲಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಸ್ವತಂತ್ರ ಧರ್ಮ ಮನ್ನಣೆ ಬಗ್ಗೆ ಒಕ್ಕೊರಲ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಬಹುದಿತ್ತು’ ಎಂದರು.

‘ಅಂಬೇಡ್ಕರ್ ಬದುಕಿದ್ದರೆ, ಇದನ್ನೆಲ್ಲಾ ಬಸವಣ್ಣನ ಅನುಯಾಯಿಗಳಿಗೆ ತಿಳಿಸಿ ಹೇಳುತ್ತಿದ್ದರು. ಆ ಕೆಲಸವನ್ನು ಇಂದು ನಾವೇ ಮಾಡಬೇಕು. ನೀವು ಬಾಯಿ ಬಿಡದಿದ್ದರೆ ಈ ಹುನ್ನಾರಗಳು ಜಗತ್ತಿಗೆ ತಿಳಿಯುವುದು ಹೇಗೆ? ನಾವು ಯುದ್ಧ ಗೆಲ್ಲುವುದು ಯಾವಾಗ? ಈ ವಿಚಾರದಲ್ಲಿ ನಾವೆಲ್ಲರೂ ಬಾಬಾಸಾಹೇಬರಾಗಬೇಕು’ ಎಂದು ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಕಿವಿಮಾತು ಹೇಳಿದರು.

ಸರ್ಕಾರಿ ಉದ್ಯೋಗ ಎಲ್ಲಿ?:‘1990ರಲ್ಲಿ ಕರ್ನಾಟಕದಲ್ಲಿ 75 ಲಕ್ಷ ಸರ್ಕಾರಿ ಉದ್ಯೋಗಗಳು ಇದ್ದವು. ಖಾಸಗೀಕರಣ, ಗುತ್ತಿಗೆ ವ್ಯವಸ್ಥೆ ಪರಿಣಾಮ ಈಗ 35 ಲಕ್ಷಕ್ಕೆ ಇಳಿಕೆಯಾಗಿವೆ. ಉಳಿದ 40 ಲಕ್ಷ ಉದ್ಯೋಗ ಎಲ್ಲಿ ಹೋದವು? ಇದರಿಂದ ದಲಿತರಿಗೆ ಆಗಿರುವ ಅನ್ಯಾಯವೇನು ಎಂಬುದು ಈ ಚುನಾವಣೆಯಲ್ಲಿ ಆದ್ಯತೆಯ ವಿಚಾರವಾಗಬೇಕು’ ಎಂದು ಪ್ರಕಾಶ ಹೇಳಿದರು.

‘ಚುನಾವಣೆ ಎಂದ ತಕ್ಷಣಕಾಂಗ್ರೆಸ್ ಮತ್ತು ಬಿಜೆಪಿ ಹೆಸರನ್ನು ಮಾತ್ರ ಮುನ್ನೆಲೆಗೆ ತರುತ್ತಿದ್ದೇವೆ. ಉಳಿದ ಪಕ್ಷಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಅವರೆಲ್ಲಾ ಅಸಮರ್ಥರೇ, ಇಲ್ಲವೇ ಓಟಿಗೆ ₹1000 ಕೊಡುವುದಿಲ್ಲ ಎಂಬ ಕಾರಣವೇ’ ಎಂದು ಪ್ರಶ್ನಿಸಿದರು. ‘ಈ ಚುನಾವಣೆಯಲ್ಲಿ ಕನಿಷ್ಠ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತಾದ ಅಂಬೇಡ್ಕರ್‌ವಾದಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡೋಣ’ ಎಂದರು.

‘ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ’

‘ದಲಿತರು, ದುರ್ಬಲರು ತಮ್ಮನ್ನು ತಾವು ರಕ್ಷಿಸಿಕೊಂಡು ಘನತೆಯಿಂದ ಬದುಕುವುದು ಬಸವಣ್ಣನ ಆಶಯವಾಗಿತ್ತು. ಸಂವಿಧಾನದ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್ ಅದನ್ನು ಈಡೇರಿಸಿದ್ದರು. ಹಿಂದೆ ಮನುವಾದಿ ವ್ಯವಸ್ಥೆಯಲ್ಲಿ ಈ ಅವಕಾಶ ಇರಲಿಲ್ಲ. ಬಿಜೆಪಿಯವರು ಈಗ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ. ಅದು ಅವರ ಅಜೆಂಡಾ. ಆದರೆ, ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಹೊಣೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ಮತ ಬಿಜೆಪಿಗೆ ಹೋಗಬಾರದು. ನಿಮ್ಮ ಹಳ್ಳಿ, ಕೇರಿ, ಪಟ್ಟಣದ ಎಲ್ಲರಿಂದಲೂ ಈ ಶಪಥ ಮಾಡಿಸಿ’ ಎಂದು ಪ್ರಕಾಶ ಅಂಬೇಡ್ಕರ್‌ ನೆರೆದವರಿಗೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry