7

ರಾಜ್ಯಸಭೆ: ಜೆಡಿಎಸ್‌ ಜತೆ ಕಾಂಗ್ರೆಸ್‌ ಹೊಂದಾಣಿಕೆ ಇಲ್ಲ

Published:
Updated:
ರಾಜ್ಯಸಭೆ: ಜೆಡಿಎಸ್‌ ಜತೆ ಕಾಂಗ್ರೆಸ್‌ ಹೊಂದಾಣಿಕೆ ಇಲ್ಲ

ಮೈಸೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 23ರಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಸ್ಪಷ್ಟಪಡಿಸಿದರು.

‘ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಮಂಗಳವಾರ ದೆಹಲಿಗೆ ಹೊರಟಿದ್ದೇನೆ. 3ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ಅಲ್ಲಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವಾಗಿ ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನರ ಹೊರತಾಗಿ ಯಾವ ಪಕ್ಷದ ಅಗತ್ಯವೂ ಇಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಜೆಡಿಎಸ್– ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ತೊಂದರೆ ಆಗದು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಒಲವು ಹೊಂದಿದ ಮತದಾರರ ಮೇಲೆಯೂ ಇದು ಪ್ರಭಾವ ಬೀರದು’ ಎಂದು ಹೇಳಿದರು.

‘ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರದು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಬಿಜೆಪಿಗೆ ರಾಜ್ಯದ ಜನ ಮತ ಹಾಕುವುದಿಲ್ಲ ಎಂಬ ವಿಶ್ವಾಸವಿದೆ. ಕೋಮುವಾದಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ. ಬಿಜೆಪಿ ಮಣಿಸಲು ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅಗತ್ಯವಿದೆ’ ಎಂದರು.

ಮೈಸೂರು ಭಾಗದಲ್ಲಿ ರಾಹುಲ್ ಪ್ರಚಾರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾರ್ಚ್ 20ರಿಂದ 25ರ ವರೆಗೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮಾರ್ಚ್ 25ರಂದು ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry