ಕಟ್ಟಡ, ಉದ್ಯಾನ, ಶಾಲೆಗೆ ಅಂಗವಿಕಲಸ್ನೇಹಿ ರೂಪ

ಭಾನುವಾರ, ಮಾರ್ಚ್ 24, 2019
31 °C

ಕಟ್ಟಡ, ಉದ್ಯಾನ, ಶಾಲೆಗೆ ಅಂಗವಿಕಲಸ್ನೇಹಿ ರೂಪ

Published:
Updated:
ಕಟ್ಟಡ, ಉದ್ಯಾನ, ಶಾಲೆಗೆ ಅಂಗವಿಕಲಸ್ನೇಹಿ ರೂಪ

ಬೆಂಗಳೂರು: ಬಿಬಿಎಂಪಿ 2017–18ನೇ ಸಾಲಿನಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ಶೇ 75ರಷ್ಟು ಬಳಕೆಯಾಗಿಲ್ಲ. ಇದನ್ನು ಬಳಸಿಕೊಂಡು ಬಿಬಿಎಂಪಿ ಕಟ್ಟಡ, ಉದ್ಯಾನ ಹಾಗೂ ಶಾಲೆಗಳನ್ನು ಅಂಗವಿಕಲಸ್ನೇಹಿಯಾಗಿ ರೂಪಿಸಲು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನಿರ್ಧರಿಸಿದೆ.

ಬಜೆಟ್‌ನ ಶೇ24ರಷ್ಟು ಅನುದಾನವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಬೇಕು. ಇದರಲ್ಲಿ ಶೇ3ರಷ್ಟು ಅನುದಾನವನ್ನು ಅಂಗವಿಕಲರ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು. ಈ ಅನುದಾನವನ್ನು ವ್ಯಕ್ತಿಗತ ಸೌಲಭ್ಯಗಳಿಗೆ ಧನಸಹಾಯ ನೀಡಲು ಬಳಸಲಾಗುತ್ತಿತ್ತು.

ಪಾಲಿಕೆಯ ಸದಸ್ಯರು ವಾರ್ಡ್‌ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ, ವಾರ್ಡ್ ಸಭೆಯ ಅನುಮೋದನೆ ಪಡೆದು ಜಂಟಿ ಆಯುಕ್ತರಿಗೆ ಸಲ್ಲಿಸಬೇಕು.

ಆದರೆ, ಬೊಮ್ಮನಹಳ್ಳಿ ವಲಯ ಹೊರತುಪಡಿಸಿ ಬಹುತೇಕ ವಲಯಗಳಲ್ಲಿ ಫಲಾನುಭವಿಗಳನ್ನು ಗುರುತಿಸಿಲ್ಲ ಎಂದು ಸಮಿತಿ ಅಧ್ಯಕ್ಷ ಅಬ್ದುಲ್‌ ರಕೀಬ್‌ ಝಾಕೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಕ್ರಮಗಳನ್ನು ಅವಧಿಯೊಳಗೆ ಅನುಷ್ಠಾನಗೊಳಿಸುವ ಉದ್ದೇಶದಿಂದ ಫಲಾನುಭವಿಗಳ ಪಟ್ಟಿ ಕಳುಹಿಸುವಂತೆ ಎಲ್ಲ ಪಾಲಿಕೆ ಸದಸ್ಯರಿಗೆ ಜನವರಿ 3ರಂದು ಪತ್ರ ಬರೆದಿದ್ದೇನೆ. ಆದರೆ, ಸದಸ್ಯರಿಂದ ಸ್ಪಂದನೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

2017–18ನೇ ಸಾಲಿನಲ್ಲಿ ಶೇ 25ರಷ್ಟು ಅನುದಾನ ಬಳಕೆಯಾಗಿದೆ. ಅಲ್ಲದೆ, 2015–16 ಹಾಗೂ 2016–17ರಲ್ಲಿ ಶೇ 10ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ. ಕೆಲ ವಾರ್ಡ್‌ಗಳಲ್ಲಿ ಅಂಗವಿಕಲ ಫಲಾನುಭವಿಗಳು ಸಿಗುತ್ತಿಲ್ಲ ಎಂದು ಸದಸ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಪಾಲಿಕೆಯ ಕೆಲ ಕಟ್ಟಡಗಳು, ಉದ್ಯಾನ, ಶಾಲೆಗಳು ಅಂಗವಿಕಲರಿಗೆ ಅನುಕೂಲಕರವಾಗಿಲ್ಲ. ಕಚೇರಿಗಳಿಗೆ ಬರಲು, ಹೋಗಲು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ, ಅಗತ್ಯ ಇರುವ ಕಡೆಗಳಲ್ಲಿ ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತದೆ. ಉದ್ಯಾನ ಹಾಗೂ ಶಾಲೆಗಳಲ್ಲಿ ವಿಶೇಷ ಶೌಚಾಲಯಗಳನ್ನು ನಿರ್ಮಿಸಲು ಸಮಿತಿಯು ತೀರ್ಮಾನಿಸಿದೆ ಎಂದು ಹೇಳಿದರು.

**

ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಪಾಲಿಕೆ ಸದಸ್ಯರ ಮೇಲಿದೆ.

– ಅಬ್ದುಲ್‌ ರಕೀಬ್‌ ಝಾಕೀರ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ

ಅಂಗವಿಕಲರ ಕಾರ್ಯಕ್ರಮಗಳ ವಿವರ

ಆರ್ಥಿಕ ಸಹಾಯ

* ಸಣ್ಣ ಉದ್ದಿಮೆದಾರರಿಗೆ ಸಹಾಯಧನ

* ಸಾರಥಿ ಯೋಜನೆಯಡಿ ಪ್ರಯಾಣಿಕರ ಹಾಗೂ ಸರಕು ಸಾಗಣೆ ಆಟೊರಿಕ್ಷಾಗಳಿಗೆ ಸಹಾಯಧನ

* ಆರ್ಥಿಕ ಸ್ವಾವಲಂಬನೆ ಯೋಜನೆಯಡಿ ಕಾರು, ಸರಕು ಸಾಗಣೆ ವಾಹನ ಖರೀದಿಗೆ ಧನಸಹಾಯ

* ಚಿಲ್ಲರೆ ಅಂಗಡಿ, ಟೆಲಿಫೋನ್‌ ಬೂತ್‌, ಸಂಗೀತ ಸಾಧನ, ತಳ್ಳುವ ಗಾಡಿ ಹಾಗೂ ಹೊಲಿಗೆ ಯಂತ್ರ

* ಅಂಗವಿಕಲರಿಗೆ ದ್ವಿಚಕ್ರ ವಾಹನ

* ವಕೀಲರಿಗೆ ಸಹಾಯಧನ ಹಾಗೂ ಆನ್‌ಲೈನ್‌ ಕಾನೂನು ಪುಸ್ತಕ ಭಂಡಾರಕ್ಕೆ 5 ವರ್ಷಗಳ ಚಂದಾ ಶುಲ್ಕ ಪಾವತಿ

* ವಿವಿಧ ವೈದ್ಯ ಪದ್ಧತಿಗಳ ವೈದ್ಯರಿಗೆ ವೈದ್ಯಕೀಯ ಸಲಕರಣೆ ಖರೀದಿಗೆ ಸಹಾಯಧನ

ಆರೋಗ್ಯ

* ಕೃತಕ ಅಂಗ ಜೋಡಣೆಗೆ ಧನಸಹಾಯ

* ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಹಾಯಧನ

* ಜೀವವಿಮೆ ಆರೋಗ್ಯ ಯೋಜನೆಯ ವಾರ್ಷಿಕ ಕಂತು ಪಾವತಿ

* ಗಾಲಿ ಕುರ್ಚಿ, ಕೃತಕ ಕಾಲು, ಕೈ, ಕನ್ನಡಕ ಹಾಗೂ ಊರುಗೋಲು ವಿತರಣೆ

ಶಿಕ್ಷಣ

* ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ

* ಬುದ್ಧಿಮಾಂಧ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ

* ಪದವಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗೆ ಸಹಾಯಧನ

* ಪಿಎಚ್‌.ಡಿ, ಎಂ.ಫಿಲ್‌ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು, ಕಾರ್ಯಾಗಾರಗಳಲ್ಲಿ ಭಾಗವಹಿಸುವ ವೆಚ್ಚ ಮರುಪಾವತಿ

* ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಆರ್ಥಿಕ ಸಹಾಯ

* ಕೌಶಲಾಭಿವೃದ್ಧಿ ತರಬೇತಿಕ್ರೀಡೆ

* ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ಈ ವರ್ಷ ₹63 ಕೋಟಿ

2018–19ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ₹63 ಕೋಟಿ ಮೀಸಲಿರಿಸಲಾಗಿದೆ. ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಸಹಾಯ, ಜೈಪುರ ಕಾಲು ಜೋಡಣೆ, ಮೂರು ಚಿತ್ರಗಳ ವಾಹನ ವಿತರಣೆ, ಊರುಗೋಲು ವಿತರಣೆ, ವೈದ್ಯಕೀಯ ಸಹಾಯ ಹಾಗೂ ಶಿಕ್ಷಣ ಶುಲ್ಕ ಮರುಪಾವತಿ, ಶ್ರವಣ ಸಾಧನ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry