ಅನಧಿಕೃತ ಜಾಹೀರಾತು ಫಲಕ ತೆರವಿಗೆ ಒಕ್ಕೊರಲ ಆಗ್ರಹ

7

ಅನಧಿಕೃತ ಜಾಹೀರಾತು ಫಲಕ ತೆರವಿಗೆ ಒಕ್ಕೊರಲ ಆಗ್ರಹ

Published:
Updated:
ಅನಧಿಕೃತ ಜಾಹೀರಾತು ಫಲಕ ತೆರವಿಗೆ ಒಕ್ಕೊರಲ ಆಗ್ರಹ

ಬೆಂಗಳೂರು: ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಹೋರ್ಡಿಂಗ್‌ಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆಯೇ ತೆರವುಗೊಳಿಸಬೇಕು ಎಂದು ಪಾಲಿಕೆಯ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಒತ್ತಾಯಿಸಿದರು.

ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಬಜೆಟ್‌ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಅನಧಿಕೃತ ಜಾಹೀರಾತು ಫಲಕಗಳ ನಿಯಂತ್ರಣಕ್ಕಾಗಿ ಹೊಸ ನಿಯಮಗಳನ್ನು ಸಿದ್ಧಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕಳೆದ ವರ್ಷವೂ  ಇದೇ ಮಾತನ್ನು ಹೇಳಲಾಗಿತ್ತು. ಈ ಕುರಿತು ಒಮ್ಮೆ ಸಭೆಯನ್ನೂ ನಡೆಸಲಾಗಿತ್ತು. ಆದರೂ, ಈ ಹಾವಳಿ ಕಡಿಮೆ ಆಗಿಲ್ಲ’ ಎಂದು ದೂರಿದರು.

ರಾಜಕಾಲುವೆ, ಪಾದಚಾರಿ ಮಾರ್ಗಗಳ ಮೇಲೆ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. ಕೆಲ ಏಜೆನ್ಸಿಗಳು ಪಾಲಿಕೆಯ ಆಸ್ತಿಗಳಲ್ಲಿ ಹೋರ್ಡಿಂಗ್‌ಗಳನ್ನು ಅಳವಡಿಸಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿವೆ. ರಸ್ತೆಯಿಂದ 30 ಅಡಿ ದೂರದಲ್ಲಿ ಹೋರ್ಡಿಂಗ್‌ಗಳನ್ನು ಹಾಕಬೇಕು. ಅದರಲ್ಲಿ ಕನ್ನಡಕ್ಕೆ ಒತ್ತು ನೀಡಬೇಕು ಎಂಬ ನಿಯಮ ಬೈಲಾದಲ್ಲಿ ಇದೆ. ಈ ನಿಯಮವೂ ಪಾಲನೆ ಆಗುತ್ತಿಲ್ಲ. ಆದರೂ, ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.  ಜಾಹೀರಾತು ಏಜೆನ್ಸಿಗಳಿಂದ ಆಯುಕ್ತರಿಗೆ ಕಮಿಷನ್‌ ಹೋಗುತ್ತಿದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿಯ ಗುರುಮೂರ್ತಿ, ‘ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳೇ ಹೋರ್ಡಿಂಗ್‌ ಅಳವಡಿಸುತ್ತಿದ್ದಾರೆ. ಇದರಿಂದ ಸಾಕಷ್ಟು ದುಡ್ಡೂ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಬಿ.ಎನ್‌.ಮಂಜುನಾಥ ರೆಡ್ಡಿ, ‘ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ನಗರಸಭೆಗಳ ವ್ಯಾಪ್ತಿಯಲ್ಲಿ ಶೇ 90 ಭಾಗದಷ್ಟು ಹೋರ್ಡಿಂಗ್‌ಗಳು, ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರ ಒಡೆತನದಲ್ಲಿವೆ. ಇವುಗಳಿಂದ ಪಾಲಿಕೆಗ ಆದಾಯ ಬರುತ್ತಿಲ್ಲ’ ಎಂದರು.

‘ಹೋರ್ಡಿಂಗ್‌ ತೆರವುಗೊಳಿಸುವ ಗುತ್ತಿಗೆ ಪಡೆಯಲು ಮುಂದಾಗುವವರಿಗೆ ಕೆಲವರು ಬೆದರಿಕೆ ಹಾಕುತ್ತಾರೆ. ಅಧಿಕಾರಿಗಳು ಈ ಟೆಂಡರ್‌ಗಳನ್ನು ಹಾಗೆಯೇ ಇಡುತ್ತಾರೆ. ಮರು ಟೆಂಡರ್‌ ಕರೆಯುವುದಿಲ್ಲ’ ಎಂದು ದೂರಿದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ಸದಸ್ಯರು ತಮ್ಮ ವಾರ್ಡ್‌ನಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಪಟ್ಟಿಯನ್ನು ಕೊಟ್ಟರೆ, ಕೂಡಲೇ ತೆರವುಗೊಳಿಸುತ್ತೇವೆ’ ಎಂದರು.

‘ಫಲಕ ತೆರವು ಕಾರ್ಯಾಚರಣೆ ಕೈಗೊಂಡರೆ ಪ್ರಭಾವಿಗಳಿಂದ ಒತ್ತಡ ತರುತ್ತಾರೆ. ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ’ ಎಂದು ಕೆಲ ಸದಸ್ಯರು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ್‌, ‘ಯಾವುದೇ ಒತ್ತಡಕ್ಕೆ ಮಣಿಯದೆ ಅನಧಿಕೃತ ಜಾಹೀರಾತು ಫಲಕ, ಹೋರ್ಡಿಂಗ್‌ಗಳನ್ನು ತೆರವುಗೊಳಿಸಲು ಆಯುಕ್ತರು ಮುಂದಾಗಬೇಕು. ಅವರ ಬೆಂಬಲಕ್ಕೆ ಎಲ್ಲ ಸದಸ್ಯರು ನಿಲ್ಲಬೇಕು. ಈ ಕುರಿತು ನಿರ್ಣಯವನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ಮೇಯರ್‌, ‘ದುಬೈನ ಸ್ಥಳೀಯ ಸಂಸ್ಥೆಯು ಜಾಹೀರಾತು ಫಲಕ, ಪಾರ್ಕಿಂಗ್‌ ಹಾಗೂ ಒಎಫ್‌ಸಿ ಶುಲ್ಕಗಳಿಂದ ಬರುವ ಆದಾಯದಲ್ಲಿ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಪಾಲಿಕೆ ಹೆಜ್ಜೆ ಇಡಬೇಕಿದೆ’ ಎಂದರು.

‘ನಗರದಲ್ಲಿ ಸಂಗ್ರಹಿಸುವ ಸೆಸ್‌ ಪಾಲಿಕೆಗೆ ನೀಡಲಿ’

ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆರೋಗ್ಯ ಉಪಕರ (ಸೆಸ್‌), ಗ್ರಂಥಾಲಯ ಸೆಸ್‌, ಭಿಕ್ಷಕರ ಸೆಸ್‌, ಕಾರ್ಮಿಕರ ಸೆಸ್‌ ಹಾಗೂ ಮನರಂಜನಾ ಶುಲ್ಕಗಳನ್ನು ಪಾಲಿಕೆಗೆ ನೀಡುವಂತೆ ನಿರ್ಣಯ ಕೈಗೊಂಡು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಪದ್ಮನಾಭರೆಡ್ಡಿ ಸಲಹೆ ನೀಡಿದರು.

ಪಾಲಿಕೆ ಅಧೀನದಲ್ಲಿ ಅನೇಕ ಆಸ್ಪತ್ರೆಗಳಿದ್ದು, ಅವುಗಳ ನಿರ್ವಹಣೆಯನ್ನು ಆರೋಗ್ಯ ಸೆಸ್‌ನಿಂದ ನಡೆಸಬೇಕು. ಎಲ್ಲ ವಾರ್ಡ್‌ಗಳಲ್ಲಿರುವ ಕಾರ್ಮಿಕ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ನೀಡಬೇಕು. ಇಲ್ಲಿನ ಎಲ್ಲ ಗ್ರಂಥಾಲಯಗಳು, ಭಿಕ್ಷುಕರ ಪುನರ್ವಸತಿ ಕೇಂದ್ರಗಳನ್ನೂ ಬಿಬಿಎಂಪಿ ಸುಪರ್ದಿಗೆ ಪಡೆದು, ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ಮನರಂಜನಾ ಶುಲ್ಕವನ್ನು ಸ್ಥಳೀಯ ಸಂಸ್ಥೆಗಳೇ ಸಂಗ್ರಹಿಸುತ್ತಿವೆ. ರಾಜ್ಯದಲ್ಲೂ ಈ ವ್ಯವಸ್ಥೆ ಜಾರಿಗೊಳ್ಳಬೇಕು. ರಾಜ್ಯ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ₹1 ಮೂಲಸೌಕರ್ಯ ಸೆಸ್‌ ಸಂಗ್ರಹಿಸುತ್ತಿದೆ. ಅದರ ಪಾಲನ್ನು ಪಾಲಿಕೆಗೂ ನೀಡಬೇಕು. ಮೆಟ್ರೊ ನಿಲ್ದಾಣಕ್ಕೆ ಉತ್ತಮ ರಸ್ತೆ, ಪಾದಚಾರಿ ಮಾರ್ಗವನ್ನು ಒದಗಿಸುವುದು ಪಾಲಿಕೆ.  ಹೀಗಾಗಿ, ಮೆಟ್ರೊ ಆದಾಯದಲ್ಲಿ ಪಾಲಿಕೆಗೂ ಪಾಲು ಸಿಗಬೇಕು. ಬಿಎಂಟಿಸಿ ಆದಾಯದಲ್ಲೂ ಪಾಲು ಬೇಕು ಎಂದರು.

ಸೇವಾ ಶುಲ್ಕ ವಸೂಲಿಯೂ... ಚಿತ್ರ ನಿರ್ಮಾಣವೂ...!

‘ವಿಧಾನಸೌಧ ಕಟ್ಟಡದ ಸೇವಾ ಶುಲ್ಕವನ್ನು ಕಟ್ಟಿಲ್ಲ. ಆಯುಕ್ತರು ವಿಧಾನಸೌಧಕ್ಕೆ ಕೂಡಲೇ ಬೀಗ ಜಡಿಯಬೇಕು. ಹಾಗೆ ಮಾಡಿದರೆ, ಎನ್‌.ಮಂಜುನಾಥ ಪ್ರಸಾದ್‌ ಐಎಎಸ್‌ ಎಂಬ ಸಿನಿಮಾ ನಿರ್ಮಿಸುತ್ತೇನೆ’ ಎಂದು ಪದ್ಮನಾಭ ರೆಡ್ಡಿ ವ್ಯಂಗ್ಯವಾಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಮೇಯರ್‌, ‘ಹೂಡಿಕೆ ನೀವು ಮಾಡಿ, ಹೀರೋ ನಾನು, ವಿಲನ್‌ ನೀವು’ ಎಂದು ಕಿಚಾಯಿಸಿದರು.

‘ಹೀರೋಯಿನ್‌ ಯಾರು’ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು. ಮೇಯರ್‌, ‘ಹೀರೋಯಿನ್‌ ಉಪಮೇಯರ್‌’ ಎಂದು ಮುಗುಳ್ನಕ್ಕರು.

ಪದ್ಮನಾಭ ರೆಡ್ಡಿ, ‘ಬೆಸ್ಕಾಂನವರು ಪಾಲಿಕೆಯ ಜಾಗದಲ್ಲಿ ಕಂಬ ನೆಡುತ್ತಾರೆ. ವಿದ್ಯುತ್‌ ಪರಿವರ್ತಕಗಳನ್ನು ಹಾಕುತ್ತಾರೆ. ಆದರೂ, ನಾವು ಪಾಲಿಕೆಯ ಕಟ್ಟಡಗಳ ವಿದ್ಯುತ್‌ ಬಿಲ್‌ ಅನ್ನು ಬೆಸ್ಕಾಂಗೆ ಕಟ್ಟುವುದಿಲ್ಲವೇ? ಅದೇ ರೀತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕವನ್ನೂ ವಸೂಲಿ ಮಾಡಬೇಕು. ಒಡಿಶಾದಲ್ಲಿ ಪ್ರತಿ ಯುನಿಟ್‌ ವಿದ್ಯುತ್‌ ದರದ ಪೈಕಿ 15 ಪೈಸೆಯನ್ನು ಸ್ಥಳೀಯ ಸಂಸ್ಥೆಗಳಿಗೆ

ನೀಡಲಾಗುತ್ತಿದೆ. ಅದೇ ವ್ಯವಸ್ಥೆ ಇಲ್ಲೂ ಜಾರಿಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಒಬ್ಬ ವಕೀಲಗೆ 211 ಪ್ರಕರಣ ಹಂಚಿಕೆ’

‘ಕಾನೂನು ವಿಭಾಗದಲ್ಲಿ 87 ವಕೀಲರಿದ್ದು, 1,598 ಪ್ರಕರಣಗಳಿಗೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ್ದಾರೆ. ಆದರೆ, ಈ ಪೈಕಿ 25 ವಕೀಲರಿಗೆ ಯಾವುದೇ ಪ್ರಕರಣವನ್ನು ಹಂಚಿಕೆ ಮಾಡಿಲ್ಲ. ಕೆಂಪಣ್ಣ ಅವರಿಗೆ 211 ಪ್ರಕರಣಗಳು, ಪ್ರಶಾಂತ್‌ 173, ಮಾಳಿ ಪಾಟೀಲ 78, ಜಯಪ್ರಕಾಶ್‌ 42, ಜ್ಞಾನಮೂರ್ತಿ 38 ಪ್ರಕರಣಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು ಎಂಟು ಜನರಿಗೆ 844 ಪ್ರಕರಣಗಳನ್ನು ಹಂಚಿಕೆ ಮಾಡಿದ್ದು, ಇವರು ಒಂದೇ ಜಾತಿಗೆ ಸೇರಿದ್ದಾರೆ. ಇಂತಹ ಕಾನೂನು ಸಲಹೆಗಾರರು ನಮಗೆ ಬೇಕೇ’ ಎಂದು ಪದ್ಮನಾಭ ರೆಡ್ಡಿ ಪ್ರಶ್ನಿಸಿದರು.

ವಾಕ್ಸಮರಕ್ಕೆ ಕಾರಣವಾದ ‘ಕೆಂಪೇಗೌಡ’

ನಾಡಪ್ರಭು ಕೆಂಪೇಗೌಡರು ಎಡಗೈಯಲ್ಲಿ ಕತ್ತಿ ಹಿಡಿದಿರುವ ಚಿತ್ರವನ್ನು ಬಿಬಿಎಂಪಿ ಬಜೆಟ್‌ ಅಂದಾಜುಗಳ ಪುಸ್ತಕದ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಪದ್ಮನಾಭ ರೆಡ್ಡಿ ದೂರಿದರು.

ಇದಕ್ಕೆ ಉತ್ತರಿಸಿದ ಮೇಯರ್‌, ‘ಕೆಂಪೇಗೌಡರ ಚಿತ್ರವನ್ನು ಮಿರರ್‌ ಎಫೆಕ್ಟ್‌ ರೀತಿಯಲ್ಲಿ ಮುದ್ರಿಸಲಾಗಿದೆ. ಈ ಬಗ್ಗೆ ಈಗಾಗಲೇ ಕ್ಷಮೆ ಕೋರಿದ್ದೇನೆ. ಬೇಕಿದ್ದರೆ, ಇನ್ನೊಮ್ಮೆ ಕ್ಷಮೆ ಕೋರುತ್ತೇನೆ’ ಎಂದರು.

ಬಿ.ಎನ್‌.ಮಂಜುನಾಥ ರೆಡ್ಡಿ, ‘ಬಿಜೆಪಿ ರಾಜ್ಯ ಘಟಕ ಪ್ರಕಟಿಸಿರುವ ಲೆಕ್ಕಕೊಡಿ ಆರೋಪಪಟ್ಟಿ ಪುಸ್ತಕದಲ್ಲಿ ಬೆಂಗಳೂರಿನ ಫೋಟೋಗಳೆಂದು ಬೇರೆ ರಾಜ್ಯಗಳ ಫೋಟೋಗಳನ್ನು ಬಳಕೆ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿದರು.

ಪದ್ಮನಾಭ ರೆಡ್ಡಿ, ‘ರಾಜ್ಯ ಸರ್ಕಾರವು ಸೌರ ಪಾರ್ಕ್‌ ಎಂದು ವಿದೇಶವೊಂದರಲ್ಲಿರುವ ಸೌರ ಪೌರ್ಕ್‌ನ ಚಿತ್ರವನ್ನು ಪ್ರಕಟಿಸಿಲ್ಲವೇ’ ಎಂದು ಪ್ರಶ್ನಿಸಿದರು.

ಮಂಜುನಾಥ ರೆಡ್ಡಿ, ‘ಕೆಂಪೇಗೌಡರ ವಸ್ತುಸಂಗ್ರಹಾಲಯವನ್ನು ಬಿಜೆಪಿಯವರು ಅಡವಿಟ್ಟಿದ್ದರು’ ಎಂದು ದೂರಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಸಭೆಯಲ್ಲಿ ವ್ಯಕ್ತವಾದ ಬೇಡಿಕೆಗಳು

* ಮಡಿವಾಳ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಮಾಲೀಕರಿಂದ ಪರಿಷ್ಕೃತ ಬಾಡಿಗೆ ವಸೂಲಿ ಮಾಡಬೇಕು.

* ಎಂ.ಜಿ.ರಸ್ತೆಯ ಪಬ್ಲಿಕ್‌ ಯುಟಿಲಿಟಿ ಕಟ್ಟಡದ ಮಳಿಗೆಗಳಿಗೂ ಈಗಿನ ಮಾರುಕಟ್ಟೆಯ ದರಕ್ಕೆ ಬಾಡಿಗೆಯನ್ನು ನೀಡಬೇಕು. ವಿಪ್ರೊ, ಇನ್ಫೊಸಿಸ್‌ನಂತಹ ಸಂಸ್ಥೆಗಳಿಗೆ ಇವುಗಳನ್ನು ನೀಡಿದರೆ, ಚದರಡಿಗೆ ₹100ರಂತೆ ಬಾಡಿಗೆ ನೀಡುತ್ತವೆ. ಇದರಿಂದ ಸುಮಾರು ₹40 ಕೋಟಿ ಆದಾಯ ಬರುತ್ತದೆ.

* ಪ್ರತಿ ಮೊಬೈಲ್‌ ಟವರ್‌ಗೆ ₹50 ಸಾವಿರ ಶುಲ್ಕ ವಸೂಲಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ದೆಹಲಿ, ಚೆನ್ನೈನಂತಹ ನಗರಗಳಲ್ಲಿ ಪ್ರತಿ ಟವರ್‌ಗೆ ₹5 ಲಕ್ಷ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

*

ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 17 ಕೆರೆಗಳನ್ನು ಅಡಮಾನ ಇಡಲಾಗಿತ್ತು ಎಂದು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ.

–ಪದ್ಮನಾಭರೆಡ್ಡಿ, ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry