ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟಿಸ್‌

7
ಅನಧಿಕೃತ ಬ್ಯಾನರ್‌, ಬಂಟಿಂಗ್‌, ಕಟೌಟ್‌ ಹಾವಳಿ ತಡೆಯಲು ವಿಫಲ

ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟಿಸ್‌

Published:
Updated:
ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟಿಸ್‌

ಮಂಗಳೂರು: ನಗರದ ಎಲ್ಲೆಡೆ ಅನಧಿಕೃತ ಬ್ಯಾನರ್‌, ಬಂಟಿಂಗ್‌ ಮತ್ತು ಕಟೌಟ್‌ಗಳನ್ನು ಅಳವಡಿಸಿರುವುದನ್ನು ತಡೆಯಲು ವಿಫಲವಾದ ಹಾಗೂ ತೆರವುಗೊಳಿಸದ ಆರೋಪದ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಅಲ್ಲಲ್ಲಿ ಅನಧಿಕೃತ ಬ್ಯಾನರ್‌, ಬಂಟಿಂಗ್‌ ಹಾಗೂ ಕಟೌಟ್‌ಗಳನ್ನು ಅಳವಡಿಸಿರುವುದನ್ನು ಗಮನಿಸಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಪಘಾತಗಳು ಆಗುವ ಸಾಧ್ಯತೆಯೂ ಇದೆ. ಅಲ್ಲದೇ ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸಿದಂತೆಯೂ ಆಗುತ್ತಿದೆ.

ಈ ರೀತಿ ರಸ್ತೆಗಳ ಬದಿ ಹಾಗೂ ಮಧ್ಯದಲ್ಲಿ ಅವ್ಯವಸ್ಥಿತವಾಗಿ ಬ್ಯಾನರ್‌, ಬಂಟಿಂಗ್, ಕಟೌಟ್‌ಗಳನ್ನು ಅಳವಡಿಸಿರುವುದು ಕ್ರಮಬದ್ಧವಲ್ಲ. ತಾವು ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಈ ಬಗ್ಗೆ ಗಮನಹರಿಸದೇಮೌನ ವಹಿಸಿರುವುದು ಸಂದೇಹಕ್ಕೆ ಎಡೆಮಾಡಿಕೊಡುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ಈ ರೀತಿ ಬ್ಯಾನರ್‌, ಬಂಟಿಂಗ್‌ ಮತ್ತು ಕಟೌಟ್‌ಗಳನ್ನು ಅಳವಡಿಸಿರುವುದಕ್ಕೆ ಅನುಮತಿ ನೀಡಲಾಗಿದೆಯೇ? ಅನುಮತಿ ನೀಡಿದಲ್ಲಿ ಯಾವ ಮಾನದಂಡ ಮತ್ತು ನಿಯಮಗಳ ಅನುಸಾರ ನೀಡಲಾಗಿದೆ? ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ರೀತಿ ಅನಧಿಕೃತವಾಗಿ ಬ್ಯಾನರ್‌, ಬಂಟಿಂಗ್‌, ಕಟೌಟ್‌ ಅಳವಡಿಸುವುದನ್ನು ತಡೆಯಲು ಹಾಗೂ ಈಗಾಗಲೇ ಅಳವಡಿಸಿರುವುದನ್ನು ತೆರವು ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ವಿವರಣೆ ಒದಗಿಸಬೇಕು’ ಎಂದು ಆಯುಕ್ತರಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದಾರೆ.

ಅನಧಿಕೃತವಾಗಿ ಈ ರೀತಿ ಅಳವಡಿಸಿರುವುದನ್ನು ತಡೆಯಲು ವಿಫಲರಾದ ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದರ ಬಗ್ಗೆ ತಕ್ಷಣವೇ ವಿವರಣೆ ನೀಡಬೇಕು. ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry