ಹುನ್ನಿಗೆರೆಯಲ್ಲಿ ವಿಲ್ಲಾ ನಿರ್ಮಿಸಲಿರುವ ಬಿಡಿಎ

7

ಹುನ್ನಿಗೆರೆಯಲ್ಲಿ ವಿಲ್ಲಾ ನಿರ್ಮಿಸಲಿರುವ ಬಿಡಿಎ

Published:
Updated:
ಹುನ್ನಿಗೆರೆಯಲ್ಲಿ ವಿಲ್ಲಾ ನಿರ್ಮಿಸಲಿರುವ ಬಿಡಿಎ

ಬೆಂಗಳೂರು: ಆಲೂರಿನಲ್ಲಿ ನಿರ್ಮಿಸಿದ್ದ ವಿಲ್ಲಾಗಳಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಉತ್ತೇಜನಗೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತುಮಕೂರು ರಸ್ತೆ ಬಳಿ ದಾಸನಪುರ ಹೋಬಳಿಯ ಹುನ್ನಿಗೆರೆಯಲ್ಲಿ ನವೀನ ಮಾದರಿಯ ವಿಲ್ಲಾಗಳನ್ನು ನಿರ್ಮಿಸಲು ಮುಂದಾಗಿದೆ.

ಹುನ್ನಿಗೆರೆಯಲ್ಲಿ ಬಿಡಿಎ 30 ಎಕರೆ ಹೊಂದಿದೆ. ಇಲ್ಲಿ 3 ಕೊಠಡಿಗಳು, ಸಭಾಂಗಣ ಹಾಗೂ ಅಡುಗೆ ಮನೆಯನ್ನು ಒಳಗೊಂಡ (ಬಿಎಚ್‌ಕೆ) 150 ಹಾಗೂ 4 ಬಿಎಚ್‌ಕೆಯ 150 ವಿಲ್ಲಾಗಳನ್ನು ನಿರ್ಮಿಸಲಾಗುತ್ತದೆ ಎಂದು ಪ್ರಾಧಿಕಾರದ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿ ಎನ್‌.ಜಿ.ಗೌಡಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಆಲೂರಿನಲ್ಲಿ 27 ಎಕರೆ 24 ಗುಂಟೆಯಲ್ಲಿ 452 ವಿಲ್ಲಾಗಳನ್ನು ಬಿಡಿಎ 2016ರಲ್ಲಿ ನಿರ್ಮಿಸಿತ್ತು. ಅವೆಲ್ಲವೂ ಮಾರಾಟವಾಗಿವೆ.

ಆಲೂರಿನಲ್ಲಿ ಎರಡು ವಿಲ್ಲಾಗಳು ಒಂದೇ ಗೋಡೆಯನ್ನು ಹಂಚಿಕೊಳ್ಳುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿತ್ತು. ಈ ಬಗ್ಗೆ ಕೆಲವು ಗ್ರಾಹಕರು ಅತೃಪ್ತಿ ವ್ಯಕ್ತಪಡಿಸಿದ್ದರು. ಈ ಬಾರಿ ಕಟ್ಟಡ ವಿನ್ಯಾಸಗೊಳಿಸುವಾಗ ಬಿಡಿಎ ಎಚ್ಚರ ವಹಿಸಿದೆ. ಪ್ರತಿಯೊಂದು ಕಟ್ಟಡವೂ ಸ್ವತಂತ್ರವಾಗಿರುವಂತೆ ನೋಡಿಕೊಂಡಿದೆ.

‘ಹೊಸ ವಿಲ್ಲಾಗಳಲ್ಲಿ ಕಾರು, ಬೈಕುಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಿದ್ದೇವೆ. ನಿರ್ಮಾಣಕ್ಕೆ ಯಾವ ರೀತಿಯ ಸಾಮಗ್ರಿಗಳನ್ನು ಬಳಸಬೇಕು, ಅಳವಡಿಸುವ ಟೈಲ್ಸ್‌ಗಳು ಯಾವ ಗುಣಮಟ್ಟದ್ದಾಗಿರಬೇಕು ಎಂಬುದನ್ನೂ ಟೆಂಡರ್‌ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿದೆ’ ಎಂದು ಗೌಡಯ್ಯ ತಿಳಿಸಿದರು.

ವಿಲ್ಲಾ ಖರೀದಿಸುವವರಿಗೆ ಜಾಗದ ಮಾಲೀಕತ್ವವೂ ಸಿಗಲಿದೆ. ಇಲ್ಲಿ ಪ್ರತಿ ಚದರ ಅಡಿ ಜಾಗಕ್ಕೆ ₹ 2,000 ದರ ಇದೆ. ಜಾಗದ ಮೌಲ್ಯವೇ ₹ 35 ಲಕ್ಷ ಆಗಲಿದೆ. 3 ಬಿಎಚ್‌ಕೆಯದ್ದಕ್ಕೆ ಅಂದಾಜು ₹ 62 ಲಕ್ಷ ಹಾಗೂ 4 ಬಿಎಚ್‌ಕೆಯದ್ದಕ್ಕೆ ಅಂದಾಜು ₹ 65 ಲಕ್ಷ ದರ ನಿಗದಿಪಡಿಸುವ ಚಿಂತನೆಯನ್ನು ಬಿಡಿಎ ಹೊಂದಿದೆ. ಆಲೂರಿನ ವಿಲ್ಲಾಗಳಿಗೆ ಹೋಲಿಸಿದರೆ, ಇವುಗಳು ದುಬಾರಿ. ಆಲೂರಿನಲ್ಲಿ 2 ಬಿಎಚ್‌ಕೆಯವುಗಳನ್ನು₹ 30 ಲಕ್ಷಕ್ಕೆ ಹಾಗೂ 3 ಬಿಎಚ್‌ಕೆಯವುಗಳನ್ನು ₹ 50 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು.

‘ಎರಡು ವರ್ಷಗಳಲ್ಲಿ ಕಟ್ಟಡ ಸಾಮಗ್ರಿಗಳ ದರ ಹೆಚ್ಚಳ ಆಗಿದೆ. ಇಲ್ಲಿ ಜಾಗದ ಮೌಲ್ಯವೂ ಹೆಚ್ಚು ಇದೆ. ಹಾಗಾಗಿ ಆಲೂರಿಗಿಂತ ಇಲ್ಲಿ ದರ ಸ್ವಲ್ಪ ಜಾಸ್ತಿ ಇರುತ್ತದೆ. ಎಷ್ಟು ದರ ನಿಗದಿಪಡಿಸಬೇಕು ಎಂಬುದನ್ನು ನಿಖರವಾಗಿ ನಿರ್ಧರಿಸಿಲ್ಲ. ನಿರ್ಮಾಣ ವೆಚ್ಚ ಮತ್ತು ಜಾಗದ ಮೌಲ್ಯವನ್ನು ಆಧರಿಸಿ ದರ ನಿಗದಿಪಡಿಸಲಾಗುತ್ತದೆ’ ಎಂದು ಗೌಡಯ್ಯ ತಿಳಿಸಿದರು.

ಈ ಹಿಂದೆ, ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಿ ವಿಲ್ಲಾಗಳನ್ನು ಹಂಚಿಕೆ ಮಾಡಬೇಕಿತ್ತು. ಇದಕ್ಕೆ ಸಮಯ ತಗಲುತ್ತಿತ್ತು. ಈ ಬಾರಿ ನೇರ ಮಾರಾಟ ವಿಧಾನ ಅನುಸರಿಸಲಾಗುತ್ತದೆ. ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದವರಿಗೆ ತಕ್ಷಣವೇ ವಿಲ್ಲಾ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

1 ಬಿಎಚ್‌ಕೆಯ 320 ಫ್ಲ್ಯಾಟ್‌ ನಿರ್ಮಾಣ

ಹುನ್ನಿಗೆರೆಯಲ್ಲಿ ವಿಲ್ಲಾಗಳ ಸಮೀಪದಲ್ಲೇ 1 ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ಬಿಡಿಎ ನಿರ್ಮಿಸಲಿದೆ.

‘ಈ ವಸತಿ ಸಮುಚ್ಚಯದ ಪ್ರತಿ ಕಟ್ಟಡದಲ್ಲಿ 16 ಫ್ಲ್ಯಾಟ್‌ಗಳು ಇರಲಿವೆ. ಇದರ ಅಂದಾಜು ವೆಚ್ಚ ₹11 ಲಕ್ಷ ಆಗಲಿದೆ’ ಎಂದು ಗೌಡಯ್ಯ ತಿಳಿಸಿದರು.

ಮೆಜೆಸ್ಟಿಕ್‌ನಿಂದ 18 ಕಿ.ಮೀ ದೂರ

ಹುನ್ನಿಗೆರೆ ಮೆಜೆಸ್ಟಿಕ್‌ನಿಂದ ಅಂದಾಜು 18 ಕಿ.ಮೀ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ (ಬಿಐಇಸಿ) 4 ಕಿ.ಮೀ ದೂರದಲ್ಲಿದೆ. ತುಮಕೂರು ರಸ್ತೆಯ ಅಗರವಾಲ್‌ ಭವನದಿಂದ 3 ಕಿ.ಮೀ ಒಳಗೆ ಇವೆ. ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯಲ್ಲಿ ಬಿಐಇಸಿವರೆಗೆ ಮೆಟ್ರೊ ಸಂಪರ್ಕ ಸಿಗಲಿದೆ.

ಅಂಕಿ ಅಂಶ

300–  ವಿಲ್ಲಾಗಳು ನಿರ್ಮಾಣಗೊಳ್ಳಲಿವೆ.

1,750 ಚದರ ಅಡಿ– ಹುನ್ನಿಗೆರೆಯ ವಿಲ್ಲಾಗಳ ವಿಸ್ತೀರ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry