ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಉದ್ಘಾಟನೆಗೆ ಬಂದ ನಿತ್ಯಾನಂದ ಸ್ವಾಮೀಜಿ

Last Updated 5 ಮಾರ್ಚ್ 2018, 20:29 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಾಣವಾಗಿರುವ ಅಭಯ ಆಂಜನೇಯ ದೇಗುಲದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ಸೋಮವಾರ ಪಾಲ್ಗೊಂಡರು. ಈ ಸಂದರ್ಭ ಅವರ ಅನುಯಾಯಿಗಳು ಹಾಗೂ ಮಾಧ್ಯಮದವರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಬೆಳಿಗ್ಗೆ 8ಗಂಟೆಗೆ ನಿತ್ಯಾನಂದ ಅವರು ದೇವಸ್ಥಾನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ, 11ರ ಸುಮಾರಿಗೆ ಅವರು ಸ್ಥಳಕ್ಕೆ ಧಾವಿಸಿದರು. ಅವರ ಆಶ್ರಮದ ಶಿಷ್ಯಂದಿರು ಹಾಗೂ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ ಕರೆದೊಯ್ದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಅಲ್ಲಿಂದ ನಿರ್ಗಮಿಸಿದರು.

ಮಾಧ್ಯಮಗಳ ಭಯ: ತಮ್ಮ ಮೇಲೆ ಅತ್ಯಾಚಾರ ಆರೋಪ ಕೇಳಿಬಂದ ನಂತರ ಜಿಲ್ಲೆಯಲ್ಲಿ ನಿತ್ಯಾನಂದ ಪಾಲ್ಗೊಂಡ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿತ್ತು. ಮೂರ್ನಾಲ್ಕು ವರ್ಷದಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಬೆಳಿಗ್ಗೆಯಿಂದಲೇ ಧ್ಯಾನಪೀಠದ ಕಾರ್ಯಕರ್ತರು ದೇವಸ್ಥಾನದ ಸುತ್ತ ನೆರೆದಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮಾಧ್ಯಮದವರ ಮುಂದೆ ಕಾಣಿಸಿಕೊಳ್ಳಲು ನಿತ್ಯಾನಂದ ಇಷ್ಟಪಡಲಿಲ್ಲ. 10 ಗಂಟೆ ಸುಮಾರಿಗೆ ರಾಮನಗರಕ್ಕೆ ಬಂದರೂ ಕಾರಿನಲ್ಲಿಯೇ ಕಾಲ ಕಳೆದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಪತ್ರಕರ್ತರಿಗೆ ಆಮಂತ್ರಣ ಪತ್ರಿಕೆಗಳನ್ನು ತಲುಪಿಸಿದ್ದರು. ಆದರೆ, ಧ್ಯಾನಪೀಠದ ಶಿಷ್ಯಂದಿರು ಮಾಧ್ಯಮದವರನ್ನು ಹೊರಗೆ ಕಳುಹಿಸುವಂತೆ ಕೋರಿದ್ದರಿಂದ ಅಲ್ಲಿಂದ ನಿರ್ಗಮಿಸುವಂತೆ ಆಯೋಜಕರು ಒತ್ತಡ ಹೇರತೊಡಗಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯತು.

ಈ ಸಂದರ್ಭ ನಿತ್ಯಾನಂದ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಅಷ್ಟೇ ತರಾತುರಿಯಲ್ಲಿ ಓಡುತ್ತಾ ಕಾರನ್ನೇರಿ ಅಲ್ಲಿಂದ ನಿರ್ಗಮಿಸಿದರು. ವಿಡಿಯೊ ಚಿತ್ರೀಕರಣ ಮಾಡದಂತೆ ಭಕ್ತರು ಪತ್ರಕರ್ತರಿಗೆ ತಡೆಯೊಡ್ಡಿದರು.

‘ದೇವಸ್ಥಾನದ ಟ್ರಸ್ಟ್‌ಗೆ ಬಿಡದಿ ಪೀಠದಿಂದ ಕಾಣಿಕೆ ಸಂದಾಯವಾಗಿದೆ. ಅವರ ನೇತೃತ್ವದಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಆಯೋಜಕರು ತಿಳಿಸಿದರು.

‘ಬ್ರಹ್ಮಾಂಡ’ ಖ್ಯಾತಿಯ ನರೇಂದ್ರ ಶರ್ಮ ಸ್ವಾಮೀಜಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT