ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿಗರ ಅಟ್ಟಹಾಸ: ಲೆನಿನ್ ಪ್ರತಿಮೆ ಕೆಡವಿ, ಎಡಪಕ್ಷ ಕಚೇರಿಗಳ ಮೇಲೆ ಆಕ್ರಮಣ

7

ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿಗರ ಅಟ್ಟಹಾಸ: ಲೆನಿನ್ ಪ್ರತಿಮೆ ಕೆಡವಿ, ಎಡಪಕ್ಷ ಕಚೇರಿಗಳ ಮೇಲೆ ಆಕ್ರಮಣ

Published:
Updated:
ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿಗರ ಅಟ್ಟಹಾಸ: ಲೆನಿನ್ ಪ್ರತಿಮೆ ಕೆಡವಿ, ಎಡಪಕ್ಷ ಕಚೇರಿಗಳ ಮೇಲೆ ಆಕ್ರಮಣ

ಅಗರ್ತಲಾ: 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ಆಡಳಿತ ಅಂತ್ಯಗೊಂಡು ಬಿಜೆಪಿ ಸರ್ಕಾರ ಗದ್ದುಗೆಗೇರಿದ ತಕ್ಷಣವೇ ತ್ರಿಪುರಾದಲ್ಲಿ ಸಿಪಿಎಂ ಕಚೇರಿಗಳ ಮೇಲೆ ಆಕ್ರಮಣ ನಡೆದಿದೆ. ದಕ್ಷಿಣ ತ್ರಿಪುರಾದ ಬೆಲೋನಿಯಾದಲ್ಲಿ ಸ್ಥಾಪಿಸಿದ್ದ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ.

ಬಿಜೆಪಿ ಕಾರ್ಯಕರ್ತರೇ ಬುಲ್ಡೋಜರ್ ತಂದಿದ್ದು  ಪ್ರತಿಮೆಯನ್ನು ಕೆಡವಿದಾಗ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತ್ರಿಪುರಾದ ರಾಜ್ಯಪಾಲ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದು, ಹೊಸ ಸರ್ಕಾರ ರಚನೆ ಆಗುವವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಕಳೆದ 48 ಗಂಟೆಗಳಲ್ಲಿ ತ್ರಿಪುರಾದಲ್ಲಿ ನಡೆದ ಚುನಾವಣೋತ್ತರ ಸಂಘರ್ಷ ಪ್ರಕರಣದಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ರಾತ್ರಿ ತ್ರಿಪುರಾದ ಕೆಲವು ಪ್ರದೇಶಗಳಲ್ಲಿ ಸಂಘರ್ಷ ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ ನಾಲ್ಕು ದೂರುಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ತ್ರಿಪುರಾದ ಸಿಧಾಯಿ ಜಿಲ್ಲೆಯಲ್ಲಿ  ಸಿಪಿಐ (ಎಂ) ಕಚೇರಿಗೆ ಬೆಂಕಿ ಇಟ್ಟ ಪ್ರಕರಣ ಮತ್ತು ಉತ್ತರ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಗಳು  ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಿಯಂತ್ರಣ) ಪ್ರದೀಪ್ ಡೇ ಅವರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿಪಿಎಂ ಕಚೇರಿ ಧ್ವಂಸವಾದ ಚಿತ್ರವನ್ನು ಟ್ವೀಟ್ ಮಾಡಿರುವ ಸಿಪಿಎಂ, ರಾಜ್ಯದಲ್ಲಿ ಬಿಜೆಪಿ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದೆ.

ಎಡಪಕ್ಷಗಳ ಕಚೇರಿ ಮೇಲೆ ನಡೆದ ಆಕ್ರಮಣದಲ್ಲಿ 240ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಮತ್ತು ಎಡಪಕ್ಷ ನಾಯಕರ ಮನೆ ಮೇಲೂ ದಾಳಿ ನಡೆದಿದೆ ಎಂದು ಸಿಪಿಎಂ ಕಾರ್ಯದರ್ಶಿ ಹರಿಪದ ದಾಸ್ ಆರೋಪಿಸಿದ್ದಾರೆ.  ಮಾರ್ಚ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಬೆಂಬಲಿಗರು ಮತ್ತು ಇಂಡೀಜೆನಸ್ ಪೀಪಲ್ಸ್ ಫ್ರಂಚ್ ಆಫ್ ತ್ರಿಪುರಾ (ಐಪಿಎಫ್‍ಟಿ) ಕಾರ್ಯಕರ್ತರು ಎಡಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿ ಪಕ್ಷದ ಕಚೇರಿಗಳನ್ನು ಧ್ವಂಸ ಮಾಡಿದ್ದಾರೆ ಎಂದು  ದಾಸ್ ಆರೋಪಿದ್ದಾರೆ.

1, 539 ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದು ಸುಮಾರು 500 ಪ್ರದೇಶಗಳಲ್ಲಿ ರಬ್ಬರ್ ತೋಟ, ಚಿಕ್ಕಪುಟ್ಟ ಅಂಗಡಿಗಳ ಮೇಲೆ ಅತಿಕ್ರಮಣ ಮಾಡಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮತ್ತು  ಕೇಂದ್ರ ಸಮಿತಿ ಸದಸ್ಯ ಬಿಜನ್ ಧಾರ್ ಹೇಳಿದ್ದಾರೆ.

ಅದೇ ವೇಳೆ ಸಿಪಿಎಂ ಕಾರ್ಯಕರ್ತರು ಬಿಜೆಪಿಯ 49 ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಇದರಲ್ಲಿ 17 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಾಗ್ಯೂ, ಚುನಾವಣೋತ್ತರ ಸಂಘರ್ಷದಲ್ಲಿ ಭಾಗಿಯಾದರೆ ಅಂಥಾ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತ್ರಿಪುರಾದ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry