ಕ್ಷೇತ್ರದ ಜನ ದಕ್ಷಿಣೆ ನೀಡಿ ಮತ ಕೊಟ್ಟಿದ್ದರು!

7
ಗುಳೇದಗುಡ್ಡ ಕ್ಷೇತ್ರ: ಮೊದಲ ಚುನಾವಣೆ ಸ್ಮರಿಸಿಕೊಂಡ ಎಸ್‌. ಜಿ. ನಂಜಯ್ಯನಮಠ

ಕ್ಷೇತ್ರದ ಜನ ದಕ್ಷಿಣೆ ನೀಡಿ ಮತ ಕೊಟ್ಟಿದ್ದರು!

Published:
Updated:
ಕ್ಷೇತ್ರದ ಜನ ದಕ್ಷಿಣೆ ನೀಡಿ ಮತ ಕೊಟ್ಟಿದ್ದರು!

ಬಾಗಲಕೋಟೆ: ಆರಿಸಿ ಬಂದು ಮುಖ ತೋರಿಸಬೇಕು ಎಂದು ತಾಕೀತು ಮಾಡುತ್ತಲೇ ಅಂದಿನ ಕೆಪಿಸಿಸಿ ಅಧ್ಯಕ್ಷ ಕೆ.ಎಚ್.ಪಾಟೀಲರು ಕೈಯಲ್ಲಿ ಬಿ ಫಾರಂ ಇಟ್ಟರು. ಜೊತೆಗೆ ಖರ್ಚಿಗೆಂದು ₹10 ಸಾವಿರ ಇಡುಗಂಟು. ಆದರೆ ಕ್ಷೇತ್ರಕ್ಕೆ ಬಂದು ಹಳ್ಳಿಗಳಿಗೆ ಪ್ರಚಾರಕ್ಕೆ ಹೋದರೆ ‘ನಮ್‌ ಸ್ವಾಮಿಗೋಳ್ ಬಂದ್ರು’ ಎಂದು ನಮಸ್ಕರಿಸುತ್ತಿದ್ದ ಜನರೇ ದಕ್ಷಿಣೆ ನೀಡಿ ಆದರಿಸುತ್ತಿದ್ದರು. ಅಂದು ಅವರ ಪ್ರೀತಿಯ ಫಲ 1700 ಮತಗಳ ಅಂತರದ ಜಯ ಕೈ ಹಿಡಿದಿತ್ತು..

ಹೀಗೆಂದು 1985ರ ಚುನಾವಣೆಯಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ದಿನಗಳ ನೆನಪಿಗೆ ಜಾರಿದವರು ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ.

‘ಆಗ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಟಿ.ಜನಾಲಿ ನಮ್ಮ ಸೀಮೆಗೇ ಶ್ರೀಮಂತರು. ಹಾಗಾಗಿ ಆ ಚುನಾವಣೆ ಪಕ್ಷಗಳ ಬದಲಿಗೆ ಶ್ರೀಮಂತರು–ಸಾಮಾನ್ಯರ ನಡುವಿನ ಹೋರಾಟ ಎಂಬಂತೆ ಬಿಂಬಿತವಾಗಿತ್ತು. ಅದಕ್ಕೂ ಮುನ್ನ ಅವಿಭಜಿತ ವಿಜಯಪುರ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಆಗ ಲೋಕಸಭೆಗೆ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲರ ಪರ ಹಳ್ಳಿ ಹಳ್ಳಿ ಸುತ್ತಿದ್ದೆನು. ಗುಳೇದಗುಡ್ಡ ಕ್ಷೇತ್ರ ವೀರೇಂದ್ರ ಪಾಟೀಲರಿಗೆ 32 ಸಾವಿರ ಮತಗಳ ಲೀಡ್ ದೊರಕಿಸಿಕೊಟ್ಟಿತ್ತು. ವೀರೇಂದ್ರ ಪಾಟೀಲರ ಗೆಲುವಿಗೆ ನಡೆಸಿದ್ದ ಶ್ರಮವೇ ಅಂದು ಬಿ ಫಾರಂ ಸಿಗಲು ಕಾರಣ’ ಎಂದು ಸ್ಮರಿಸುತ್ತಾರೆ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಎರಡು ಬಾರಿ ಶಾಸಕ ಹೀಗೆ ರಾಜಕೀಯ ಬದುಕಿನ ಹಲವು ಏಳು–ಬೀಳುಗಳನ್ನು ಕಂಡಿರುವ ಶಂಕರಯ್ಯ ಗದಿಗಯ್ಯ ನಂಜಯ್ಯನಮಠ, ಜಾತಿ,ಹಣ, ತೋಳ್ಬಲದ ರಾಜಕಾರಣದ ಈಗಿನ ದಿನಮಾನಗಳಲ್ಲಿ ಅದೆಲ್ಲವನ್ನೂ ಮೀರಿದ ಭಾವತಂತುಗಳನ್ನು ಮತದಾರರಲ್ಲಿ ಮೂಡಿಸಿದ್ದಾರೆ. ಹಳ್ಳಿಗಾಡಿನ ನಿರಂತರ ಒಡನಾಟ ಗ್ರಾಮೀಣರ ನಾಡಿಮಿಡಿತ ಅರ್ಥೈಸಿಕೊಳ್ಳಲು ಅವರಿಗೆ ನೆರವಾಗಿದೆ. ಜೊತೆಗೆ ಅಗಾಧ ಓದು ಅವರಲ್ಲೊಬ್ಬ ಚಿಂತಕನನ್ನು ರೂಪಿಸಿದೆ. ಹಾಗಾಗಿ ನಂಜಯ್ಯನಮಠ ಕಾಂಗ್ರೆಸ್ ಪಕ್ಷದ ಚಿಂತಕರ ಚಾವಡಿಯ ಕಾಯಂ ಸದಸ್ಯ. ಈಗಲೂ ಕೆಪಿಸಿಸಿ ವಕ್ತಾರಿಕೆ ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ನೀರು, ನೈರ್ಮಲ್ಯ ಸಮಿತಿ ಅಧ್ಯಕ್ಷ ಗಾದಿ ಅವರನ್ನು ಜನರ ಮಧ್ಯೆ ಜೋಪಾನವಾಗಿರಿಸಿದೆ.

ಸೂಳೇಭಾವಿಯ ಪ್ರಭಾವ: ‘ಹುಟ್ಟೂರು ಸೂಳೇಭಾವಿಯ ಪರಿಸರ ಬಾಲ್ಯದಲ್ಲಿ ನನ್ನ ಭಾವಕೋಶದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ’ ಎಂದು ನಂಜಯ್ಯನಮಠ ಹೇಳುತ್ತಾರೆ.

‘ವರ್ಷವಿಡೀ ಅಲ್ಲಿ ನಾಟಕ, ದೊಡ್ಡಾಟ, ಸಣ್ಣಾಟ, ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸುತ್ತಿದ್ದೆವು. ಜನಪದರು, ಸೂಫಿ ಸಂತರ ಚಿಂತನೆಗಳ ಹರಿವು, ಜನರ ಮುಗ್ಧತೆ, ನಿಷ್ಕಲ್ಮಶ ಪ್ರೀತಿ ಸಮ್ಮಿಳಿತಗೊಂಡು ಮಲಪ್ರಭಾ ತಟದ ನಮ್ಮೂರಿಗೆ ವಿಶಿಷ್ಟ ಪ್ರಾಜ್ಞತೆ ತಂದುಕೊಟ್ಟಿದೆ. ಅದೇ ನನ್ನ ವ್ಯಕ್ತಿತ್ವ ರೂಪಿಸಿದೆ’ ಎನ್ನುತ್ತಾ ಭಾವುಕರಾಗುತ್ತಾರೆ. ‘ಜೊತೆಗೆ ಹುನಗುಂದ, ಗುಳೇದ ಗುಡ್ಡದಿಂದ ಎರಡು ಬಾರಿ ಶಾಸಕ ರಾಗಿ ಜನಾನುರಾಗಿತನವನ್ನೇ ಬದುಕಾಗಿ ಸಿಕೊಂಡಿದ್ದ ಅಪ್ಪ ಗದಿಗಯ್ಯ ಅವರ ವ್ಯಕ್ತಿತ್ವವೂ ನನ್ನನ್ನು ಪ್ರಭಾವಿಸಿದೆ’ ಎನ್ನುತ್ತಾರೆ.

ಗುಳೇದಗುಡ್ಡ ಎಂಬ ಜೀವದಾಯಿನಿ: ‘ಕುಟುಂಬದ ರಾಜಕೀಯ ಬದುಕಿಗೆ ಮೂರು ಬಾರಿ ನೆಲೆ ಕೊಟ್ಟ ಗುಳೇದಗುಡ್ಡದ ಬಗ್ಗೆ ನಂಜಯ್ಯನಮಠರಿಗೆ ಇನ್ನಿಲ್ಲದ ಪ್ರೀತಿ. ಕ್ಷುದ್ರತೆಯ ಕರಿ ನೆರಳು ಸೋಂಕದ ಅ ಊರು ನನ್ನ ಪಾಲಿನ ಜೀವದಾಯಿನಿ’ ಎನ್ನುತ್ತಾರೆ. ಕ್ಷೇತ್ರದ ಎಲ್ಲಾ ಹಳ್ಳಿಗಳ ಪ್ರಮುಖರು, ಮುಖಂಡರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಹೆಸರಿಡಿದು ಕರೆದು ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆ ಪ್ರಕಟಿಸುವಷ್ಟು ಸಲುಗೆ ಅವರದ್ದು.

ಸ್ನೇಹಮಯ ರಾಜಕಾರಣ: ‘ಗುಳೇದಗುಡ್ಡಕ್ಕೆ ಇನ್ನೂ ನಗರೀಕರಣದ ಹಮ್ಮು ಬಿಮ್ಮು ತಾಗಿಲ್ಲ. ಊರಿನ ಎಲ್ಲರೂ ಎಲ್ಲರನ್ನೂ ಬಲ್ಲವರೇ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದು ಪರಸ್ಪರ ಮುಖ ನೋಡದಷ್ಟು ಕ್ರೂರವಲ್ಲ. ಅಲ್ಲಿಯ ರಾಜಕಾರಣವೂ ಅಷ್ಟೇ. ಮೇಟಿ, ಶೀಲವಂತರ, ನಾನು ರಾಜಕೀಯ ಎದುರಾಳಿಗಳಾಗಿದ್ದರೂ ಯಾವತ್ತೂ ಆತ್ಮೀಯ ಸ್ನೇಹಿತರೇ ಆಗಿದ್ದೆವು. ವಿರೋಧ ಏನಿದ್ದರೂ ಪಕ್ಷದ ವೇದಿಕೆಗೆ ಮಾತ್ರ ಸೀಮಿತ. ಯಾರೇ ಗೆದ್ದರೂ ಊರಿನ ಹಿತದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತಿದ್ದೆವು. ಅದು ಊರಿನ ಆರೋಗ್ಯ ಕಾಪಿಟ್ಟಿತ್ತು’ ಎಂದು ನಂಜಯ್ಯನಮಠ ನೆನಪಿಸಿಕೊಳ್ಳುತ್ತಾರೆ.

‘ಅದು 2004ರ ಚುನಾವಣೆ. ಗುಳೇದಗುಡ್ಡ ಕ್ಷೇತ್ರ ಅಸ್ತಿತ್ವ ಕಳೆದುಕೊಳ್ಳುವ ಮುನ್ನ ನಡೆದ ಕೊನೆಯ ಚುನಾವಣೆ. ಮತ ಎಣಿಕೆ ವೇಳೆ ಬಿಜೆಪಿಯ ಶೀಲವಂತರ ಮೊದಲ ಸ್ಥಾನದಲ್ಲಿದ್ದರು. ಮೇಟಿ ಎರಡನೇ ಹಾಗೂ ನಾನು ಮೂರನೇ ಸ್ಥಾನದಲ್ಲಿದ್ದೆ. ಇನ್ನೇನು ಸೋತೇ ಬಿಡುತ್ತೇನೆ ಎಂದು ತಿಳಿದ ಹುಲ್ಲಪ್ಪ ಮನೆಗೆ ಹೊರಟರು. ಆಗ ನಾನು ವಾಪಸ್ ಕರೆದೆ. ಆಗಿನ್ನೂ ಬಿಜೆಪಿ ಅಷ್ಟಾಗಿ ಪ್ರಭಾವಿಯಾಗಿಲ್ಲದ ಕಮತಗಿ, ಸೂಳೇಭಾವಿ ಭಾಗದ ಮತ ಎಣಿಕೆ ಇನ್ನೂ ಆರಂಭವಾಗಿರಲಿಲ್ಲ. ಹೋಗಬೇಡ. ಇನ್ನೂ ಅವಕಾಶವಿದೆ ಎಂದು ಹೇಳಿದೆ. ಅದರಂತೆ ಮುಂದಿನ ಎರಡು ಸುತ್ತಿನ ಎಣಿಕೆ ವೇಳೆ ಮೇಟಿಗೆ ಲೀಡ್ ಸಿಕ್ಕು ಗೆದ್ದು

ಬಿಟ್ಟರು. ಗುರುಗಳೇ ನಾನು ಮನೆಗೆ ಹೊರಟಿದ್ದೆ. ವಾಪಸ್ ಕರೆದಿರಿ ಎಂದವರೇ ಅಲ್ಲಿಯೇ ನಮಸ್ಕರಿಸಿದರು. ಹೀಗೆ ನಮ್ಮ ನಡುವೆ ಅಪ್ಯಾಯತೆ ಇತ್ತು. ಅದೊಮ್ಮೆ ಚುನಾವಣಾ ಪ್ರಚಾರ ಸಭೆಗೆ ಗುಳೇದಗುಡ್ಡದ ಕಡೆಗೆ ಬರುತ್ತಿದ್ದೆ. ಕಮತಗಿ ಸೇತುವೆ ಮೇಲೆ ಕಾರು ಕೆಟ್ಟಿತು. ಹಿಂದೆ ಬಿಜೆಪಿ ಪ್ರಚಾರ ವಾಹನ ಬಂತು. ಅದಕ್ಕೆ ಕೈ ಅಡ್ಡ ಹಾಕಿದೆ. ಕೂರಿಸಿಕೊಂಡವರೇ ಗುಳೇದಗುಡ್ಡದ ಸಭೆಗೆ ಕರೆತಂದುಬಿಟ್ಟರು’ ಎಂದು ಆ ಕಾಲಕ್ಕೆ ಜಾರುತ್ತಾರೆ.

***

ನೇಕಾರನ ಹೆಂಡತಿ ಬೆತ್ತಲೆ!

ಮೊದಲ ಬಾರಿಗೆ ಶಾಸಕರಾದ ವೇಳೆ ವಿಧಾನಸಭೆ ಅಧಿವೇಶನದಲ್ಲಿ ನೇಕಾರರ ಸಂಕಷ್ಟಗಳನ್ನು ಸರ್ಕಾರದ ಎದುರು ಬಿಚ್ಚಿಟ್ಟಿದ್ದ ನಂಜಯ್ಯನಮಠ, ‘ನೇಕಾರನ ಹೆಂಡತಿಯೇ ಬೆತ್ತಲೆ ಇದ್ದಾಳೆ’ ಎಂದು ತೀಕ್ಷ್ಮ ಮಾತುಗಳಿಂದ ಸರ್ಕಾರವನ್ನು ಚುಚ್ಚಿದ್ದರು.

‘ಇದೇ ಸಾಲು ಅಂದಿನ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿತ್ತು. ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದು, ಬಾಲ್ಯದಿಂದಲೂ ಒಡನಾಟ ಅವರ ಸಂಕಷ್ಟಗಳನ್ನು ಹತ್ತಿರದಿಂದ ಕಾಣಲು ನೆರವಾಗಿತ್ತು. ಅಂದು ಅಧಿವೇಶನದಲ್ಲಿ ಅಷ್ಟೊಂದು ಅಧಿಕಾರಯುತವಾಗಿ ಆಡಿದ್ದ ಮಾತುಗಳೆಲ್ಲವೂ ಅನುಭವಜನ್ಯ. ಪಕ್ಷಭೇದ ಮರೆತು ಎಲ್ಲಾ ಸದಸ್ಯರೂ ಆಗ ತಲೆದೂಗಿದ್ದರು. ಸರ್ಕಾರ ಆಗಿನಿಂದ ನೇಕಾರರ ಸಮಸ್ಯೆ ಗಂಭೀರವಾಗಿ ಪರಿಗಣಿಸಲು ಆರಂಭಿಸಿತು. ಕಾಲ ಕಾಲಕ್ಕೆ ಅವರ ನಿರೀಕ್ಷೆಗಳಿಗೆ ಅಷ್ಟಿಷ್ಟು ಸ್ಪಂದನೆ ಮಾಡತೊಡಗಿತು’ ಎಂದು ನಂಜಯ್ಯನಮಠ ಸ್ಮರಿಸುತ್ತಾರೆ.

**

ಬಾಗಲಕೋಟೆ, ಬಾದಾಮಿ, ಹುನಗುಂದ ಮೂರು ಕಡೆಗೂ ಗುಳೇದಗುಡ್ಡ ಕ್ಷೇತ್ರ ಹಂಚಿಹೋಗಿದೆ. ಹಾಗಾಗಿ ಮೂರು ಕಡೆಗೂ ನಿಲ್ಲುವ ನೈತಿಕತೆ ನನಗಿದೆ. ಆದರೆ, ನಾನಾಗಿಯೇ ಟಿಕೆಟ್ ಕೇಳಲ್ಲ.

–ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry