ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ದ್ವಂದ್ವ ಪ್ರಶ್ನಿಸುವ ದಲಿತ ಚಳವಳಿ

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟದ ಕವಲುಗಳ ಕೆದಕಿದ ಕವಿ ಎಲ್. ಹನುಮಂತಯ್ಯ
Last Updated 6 ಮಾರ್ಚ್ 2018, 11:04 IST
ಅಕ್ಷರ ಗಾತ್ರ

ದಾವಣಗೆರೆ: ‘ಅಸಮಾನತೆಯೇ ನೆಲದ ನ್ಯಾಯ ಎನ್ನುವಂಥ ಪರಂಪರೆಯನ್ನು ಪ್ರಶ್ನಿಸುತ್ತಾ ಬಂದಿರುವುದು ದಲಿತ ಚಳವಳಿಗಳು. ವಚನ ಚಳಿವಳಿಯೇ ಮೊದಲ ದಲಿತ ಚಳವಳಿ’ ಎಂದು ಕವಿ ಎಲ್. ಹನುಮಂತಯ್ಯ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿರುವ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಅವರು ಸೋಮವಾರ ದಲಿತ ಚಳವಳಿ ಹಾಗೂ ದಲಿತ ಸಾಹಿತ್ಯದ ಬೇರುಗಳು ಹಾಗೂ ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಸಪ್ತರ್ಷಿಗಳೆಲ್ಲ ಕೆಳ ಸಮುದಾಯದವರೇ. ಅವರನ್ನು ಗೌರವಿಸುವ ಸಮುದಾಯಗಳು ಅವರ ಸಮಾಜದವರನ್ನು ನಿಕೃಷ್ಟವಾಗಿ ಕಾಣುತ್ತಾ ಬಂದಿವೆ. ಇದನ್ನು ಪ್ರಶ್ನಿಸುವುದೇ ದಲಿತ ಸಾಹಿತ್ಯದ ಮೊದಲ ಮೌಲ್ಯವಾಗಿದೆ ಎಂದರು.

ಚರ್ಮಗಾರಿಕೆ ಕೆಲಸದಲ್ಲಿ ನಿರತನಾಗಿದ್ದ ಮಾದಾರ ದೂಳಯ್ಯನಿಗೆ ಉಳಿಮೊನೆಯಲ್ಲಿ ಶಿವ ಪ್ರತ್ಯಕ್ಷನಾದ. ಆಗ ದೂಳಯ್ಯ, ‘ನಿನ್ನ ಕಾವಿನ ಭಕ್ತರಲ್ಲಿಗೆ ಹೋಗಿ ಮುಕ್ತಿ ಮಾಡು’ ಎಂದು ಸ್ವಾಭಿಮಾನದಿಂದ ದೇವರಿಗೇ ಹೇಳಿದ್ದ. ಅಂಥ ಸ್ವಾಭಿಮಾನದಿಂದ ಹುಟ್ಟುವುದೇ ದಲಿತ ಸಾಹಿತ್ಯ ಎಂದು ವಿಶ್ಲೇಷಿಸಿದರು.

ಪುಷ್ಪಕ ವಿಮಾನ, ರಾಕೆಟ್ ಎಂದೋ ಬಳಕೆಯಾದುದನ್ನು ಉಲ್ಲೇಖಿಸುವ ಪರಂಪರೆಯು ಅವೈಜ್ಞಾನಿಕವಾದುದನ್ನೂ ಕಾಪಾಡಿಕೊಳ್ಳುತ್ತದೆ. ಅದನ್ನು ಪ್ರಶ್ನಿಸದೇ ಅನ್ಯ ಮಾರ್ಗವಿಲ್ಲ. ರಾಜಕೀಯ ಅಭಿವೃದ್ಧಿಯಲ್ಲೂ ಇದೇ ದ್ವಂದ್ವವಿದೆ. ‘ನಾವೆಲ್ಲ ಒಂದು, ನಾವೆಲ್ಲ ಹಿಂದೂ’ ಎನ್ನುತ್ತಾರೆ. ಅಕಸ್ಮಾತ್ತಾಗಿ ಸಣ್ಣ ವರ್ಣಸಂಕರವಾದರೂ ಬಂಧುಗಳನ್ನು ಕೊಂದುಹಾಕುವ ಮನಸ್ಥಿತಿ ಇದೆ. ಇನ್ನೊಂದು ಧರ್ಮವನ್ನು ದ್ವೇಷಿಸಿ, ತನ್ನದನ್ನು ಮಾತ್ರ ಹೊಗಳಿ ಬೀಗುವ ಮೂಲಭೂತವಾದವೇ ಅಶಾಂತಿಗೆ, ಅರಾಜಕತೆಗೆ ಕಾರಣ ಎಂದು ಹೇಳಿದರು.

ವಿದ್ಯಾವಂತರಲ್ಲೂ ಹೆಚ್ಚುತ್ತಿರುವ ಜಾತಿ ಪ್ರಜ್ಞೆ, ಭ್ರಷ್ಟಾಚಾರ ಆತಂಕಕಾರಿ ಎಂದ ಹನುಮಂತಯ್ಯ, ಈಗಿನ ದಲಿತ ಸಾಹಿತ್ಯ ಇಂಥ ಅಂಶಗಳನ್ನು ಒಳಗೊಳ್ಳಬೇಕು ಎಂದು ಸಲಹೆ ನೀಡಿದರು.

ಡೊಳ್ಳು ಬಾರಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ದಲಿತರೇ ಬರೆದ ಸಾಹಿತ್ಯ ಹಾಗೂ ದಲಿತ ಕೇಂದ್ರಿತ ಸಾಹಿತ್ಯದ ನಡುವಿನ ವ್ಯತ್ಯಾಸ ಕುರಿತು ಜಿಜ್ಞಾಸೆ ವ್ಯಕ್ತಪಡಿಸಿದರು. ದಲಿತ ಕೇಂದ್ರಿತ ಸಾಹಿತ್ಯವು ಒಂದು ಮನೋಧರ್ಮದ ಅಧ್ಯಯನ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಪಿ. ವೀರೇಂದ್ರ ಕುಮಾರ್, ದ್ವಾರನಕುಂಟೆ ಪಾತಣ್ಣ, ದಲಿತ ಚಿಂತಕಿ ಜಯದೇವಿ ಗಾಯಕವಾಡ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ವಿಭಾಗದ ಸಹಾಯಕ ನಿರ್ದೇಶಕ ಕುಮಾರ್ ಬಾಬು ಬೆಕ್ಕೇರಿ ವೇದಿಕೆ ಮೇಲೆ ಇದ್ದರು.

ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಕಾರ್ಯಕ್ರಮ ನಿರೂಪಿಸಿದರು. ರಂಗಪ್ಪ ಹಾಗೂ ತಂಡದವರು ಹೋರಾಟದ ಗೀತೆಗಳನ್ನು ಹಾಡಿದರು.
***
ಸಮ್ಮೇಳನಾಧ್ಯಕ್ಷರ ಉವಾಚ

* ಕೋಲಾರದಲ್ಲಿ ಜೀತಕ್ಕಿದ್ದವನ ಮಗ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾದ. ಅವನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಜಮೀನ್ದಾರನ ಮಗ ಸಾಮಾನ್ಯ ದರ್ಜೆಯಲ್ಲಿ ಪಾಸಾದ. ಇದರಿಂದ ಕೋಪಗೊಂಡ ಜನ ಹುಡುಗನನ್ನು ಕಂಬಕ್ಕೆ ಕಟ್ಟಿ ಹೊಡೆದು ಕೊಂದರು. ಇಂಥವನ್ನು ಕಂಡೇ ದಲಿತ ಚಳವಳಿಗಳು ಹುಟ್ಟಿದವು.
* ದಲಿತ ಹೋರಾಟ ಕಣ್ಣೆದುರೇ ಛಿದ್ರವಾಗಿ ಒಡೆದು, ಹಲವಾರು ಗುಂಪುಗಳಾಗಿಬಿಟ್ಟಿದೆ. ಈಗಿನ ಪೀಳಿಗೆಗೆ ದಲಿತ ಸಾಹಿತ್ಯ ಹುಟ್ಟಿದ್ದು ಹೇಗೆಂದೇ ತಿಳಿದಿಲ್ಲ. ಅದನ್ನು ಇಂಥ ಸಮ್ಮೇಳನಗಳು ತಿಳಿಸಬೇಕು.
* ಜಿ.ಡಿ.ಪಿ (ಒಟ್ಟು ಆಂತರಿಕ ಉತ್ಪನ್ನ) ಶ್ರೀಮಂತಿಕೆಯ ಉತ್ಪನ್ನ ಆಗದೆ, ಸರ್ವರ ಆದಾಯದ ಉತ್ಪನ್ನ ಆಗಬೇಕು. ಶ್ರೀಮಂತರಲ್ಲೇ ಶೇ 90ರಷ್ಟು ಸಂಪತ್ತು ಸೇರಿದೆ. ಆಸ್ತಿ ಕಡಿಮೆ ಇರುವವರಲ್ಲಿ ದಲಿತರೇ ಹೆಚ್ಚು. ಈ ಮಾನವ ಸೂಚ್ಯಂಕ ಬದಲಾಗಬೇಕು.
* ಈಗ ಹುಸಿ ಜಾತ್ಯತೀತ ಪ್ರಜ್ಞೆಯ ಪ್ರಸ್ತಾಪವಾಗುತ್ತಿದೆ. ಇಂಥ ಪರಂಪರೆಯ ಮೌಲ್ಯದ ಜತೆ ಸಂಘರ್ಷಕ್ಕೆ ನಿಲ್ಲುವವನೇ ಚಳವಳಿಗಾರ.
****
ಪುಸ್ತಕ ಪ್ರಾಧಿಕಾರದ ಹೊಸ ನಡೆಗಳು

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ‘2014–15ರ ಸಾಲಿನ ಕೃತಿಗಳ ಸಗಟು ಖರೀದಿಯನ್ನು ಪ್ರಾಧಿಕಾರ ಪ್ರಾರಂಭಿಸಿದೆ. ಖರೀದಿಸಿದ ಪುಸ್ತಕಗಳನ್ನು ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪೂರೈಸಲಾಗುವುದು. ಹೈಸ್ಕೂಲು ಮಕ್ಕಳಲ್ಲಿ ಓದಿನ ಚುಟುವಟಿಕೆ ಉತ್ತೇಜಿಸುವ ಕಾರ್ಯಕ್ರಮ, ಕಾಲೇಜುಗಳಲ್ಲಿ ಜಾಣ ಜಾಣೆಯರ ಬರಹ ಪ್ರಾರಂಭಿಸುವ ಯೋಜನೆ ಜಾರಿಗೆ ಬಂದಿವೆ, ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿಗಳ ಪ್ರಕಟಣೆಗೆ ನೀಡುವ ಸಹಾಯಧನವನ್ನು ₹ 10 ಸಾವಿರದಿಂದ ₹ 15 ಸಾವಿರಕ್ಕೆ ಏರಿಸಲಾಗಿದೆ. 35 ಯುವಕ–ಯುವತಿಯರಿಗೆ ಮಾತ್ರ ಸಿಗುತ್ತಿದ್ದ ನೆರವು ಈಗ 40 ಮಂದಿಗೆ ವಿಸ್ತರಣೆಗೊಂಡಿದೆ. ಮಾರ್ಚ್ 10ರಂದು ಪ್ರಕಾಶಕರ ಸಮ್ಮೇಳನವನ್ನೂ ಹಮ್ಮಿಕೊಂಡಿದ್ದೇವೆ. ಪ್ರಾಧಿಕಾರದ ಬೆಳ್ಳಿಹಬ್ಬಕ್ಕೆ ಇಂಥ ಕಾರ್ಯಕ್ರಮಗಳಿಂದ ಮೆರುಗು ಬಂದಿದೆ’ ಎಂದು ಮಾಹಿತಿ ನೀಡಿದರು.
***
ಜನಪದ ಕಲಾತಂಡಗಳ ಮೆರವಣಿಗೆ
ದಲಿತ ಸಾಹಿತ್ಯ ಸಮ್ಮೇಳನವು ಸೋಮವಾರ ಬೆಳಿಗ್ಗೆ ವಿವಿಧ ಜನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ತಮಟೆ ಬಡಿಯುವ ಮೂಲಕ ಸಮ್ಮೇಳನಾಧ್ಯಕ್ಷ ಎಲ್. ಹನುಮಂತಯ್ಯ ಮೆರವಣಿಗೆಯನ್ನು ಉದ್ಘಾಟಿಸಿದ್ದೇ ಅಲ್ಲದೆ, ಖುದ್ದು ಗುಂಡಿ ಸರ್ಕಲ್‌ನಿಂದ ಕುವೆಂಪು ಕನ್ನಡ ಭವನದವರೆಗೆ ನಡೆದೇ ಸಾಗಿದರು. ತಮಟೆ ವಾದ್ಯ, ಅರೆ, ಡೊಳ್ಳು ಕುಣಿತ, ಕಹಳೆ, ನಗಾರಿ, ಗಾರುಡಿ ಗೊಂಬೆಗಳು, ಕೋಲಾಟ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT