ಅಣ್ಣಿಗೇರಿ ತಾಲ್ಲೂಕು ಅಸ್ತಿತ್ವಕ್ಕೆ

7
ತಾಲ್ಲೂಕು ಕೇಂದ್ರದ ಹೊರವಲಯದಲ್ಲಿ ತಹಶೀಲ್ದಾರ್‌ ಕಚೇರಿ ಉದ್ಘಾಟನೆ

ಅಣ್ಣಿಗೇರಿ ತಾಲ್ಲೂಕು ಅಸ್ತಿತ್ವಕ್ಕೆ

Published:
Updated:

ಅಣ್ಣಿಗೇರಿ: ಜಿಲ್ಲೆಯ ಏಳನೇ ತಾಲ್ಲೂಕಾಗಿ ಅಣ್ಣಿಗೇರಿ ಅಸ್ತಿತ್ವಕ್ಕೆ ಬಂದಿತು. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರು, ನಗರದ ಹೊರವಲಯದ ಕಟ್ಟಡದಲ್ಲಿ ಆರಂಭವಾದ ತಹಶೀಲ್ದಾರ್‌ ಕಚೇರಿಯನ್ನು ಸೋಮವಾರ ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ಹಲವು ವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ, ತಾಲ್ಲೂಕು ಕೇಂದ್ರದ ಮಾನ್ಯತೆ ಸಿಗುತ್ತಿರಲಿಲ್ಲ. ಆದರೆ, ಮುಖ್ಯಮಂತ್ರಿಗಳು ಆಸಕ್ತಿ ವಹಿಸಿದ ಪರಿಣಾಮ ಅಣ್ಣಿಗೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 21 ಗ್ರಾಮಗಳು ಹಾಗೂ 74 ಸಾವಿರ ಜನಸಂಖ್ಯೆ ಇದ್ದರೂ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಾಲ್ಲೂಕು ಕೇಂದ್ರಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ’ ಎಂದರು.

‘ಅಣ್ಣಿಗೇರಿ ತಾಲ್ಲೂಕಿಗಿಂತಲೂ ಹೆಚ್ಚು ನಮಗೆ ತಲೆಬಿಸಿಯಾಗಿದ್ದು, ಅಳ್ನಾವರ ತಾಲ್ಲೂಕು. ಈ ಹಿಂದೆ ಆ ಪಟ್ಟಣ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. ಮತದಾರರ ಋಣ ತೀರಿಸಬೇಕಿತ್ತು. ಹಾಗಾಗಿ, 13 ಗ್ರಾಮಗಳು, 36 ಸಾವಿರ ಜನಸಂಖ್ಯೆ ಇದ್ದರೂ, ಅಳ್ನಾವರ ಇಂದು ತಾಲ್ಲೂಕು ಕೇಂದ್ರವಾಗಿದೆ’ ಎಂದು ತಿಳಿಸಿದರು.

‘ತಾಲ್ಲೂಕು ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸುತ್ತೇವೆ. ನೂತನ ತಹಶೀಲ್ದಾರ್‌ ಕಚೇರಿ ಪಟ್ಟಣದ ಹೊರವಲಯದಲ್ಲಿದೆ. ಹಾಗಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದಿಂದ ಕಚೇರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ‘ತಾಲ್ಲೂಕು ರಚನೆ ಹೋರಾಟ ಸಮಿತಿ ಸದಸ್ಯರಷ್ಟೇ ಅಲ್ಲದೇ, ಪಟ್ಟಣದ ಜನತೆ ತಾಲ್ಲೂಕು ಕೇಂದ್ರ ಬೇಕು ಎಂದು ಬಯಸಿದ್ದರು. ಅದೀಗ ಸಾಕಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಹಿಂದಿನ ಕಂದಾಯ ಸಚಿವ ವಿ. ಶ್ರೀನಿವಾಸ್‌ ಪ್ರಸಾದ್‌ ಅವರು ಬೇಡಿಕೆಗೆ ಸಕಾರಾತ್ಮಕ

ವಾಗಿ ಸ್ಪಂದಿಸಿದ್ದರಿಂದ ತಾಲ್ಲೂಕು ರಚನೆಯ ಕನಸು ನನಸಾಗಿದೆ’ ಎಂದರು.

ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ನಾವೂ, ತಾಲ್ಲೂಕು ಕೇಂದ್ರದ ಸ್ವಾಮಿಗಳಾಗಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ’ ಎಂದು ಚಟಾಕಿ ಹಾರಿಸಿದರು.ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಪುರಸಭೆ ಅಧ್ಯಕ್ಷ ಭೀಮಪ್ಪ ಪಾ. ದ್ಯಾವನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ವೇದಿಕೆಯಲ್ಲಿದ್ದರು.ಹೋರಾಟ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

***

ಸಚಿವರ ಕಾಯ್ದು ವಾಪಸ್‌ ತೆರಳಿದ ಶೆಟ್ಟರ್‌

ಅಣ್ಣಿಗೇರಿ ತಾಲ್ಲೂಕು ಕೇಂದ್ರ ಉದ್ಘಾಟನೆ ಬೆಳಿಗ್ಗೆ 11.30ಕ್ಕೆ ನೆರವೇರಬೇಕಿತ್ತು. ಮಧ್ಯಾಹ್ನ 12ರ ಸುಮಾರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಬಂದರು. ಆದರೂ, ಜಿಲ್ಲಾ ಉಸ್ತುವಾರಿ ಸಚಿವರು ಬಂದಿರಲಿಲ್ಲ. ಕಚೇರಿ ಉದ್ಘಾಟಿಸಬೇಕಿದ್ದ ಸಿದ್ಧೇಶ್ವರ ಶ್ರೀಗಳು ಬರಲು ತಯಾರಾಗಿದ್ದರೂ, ಉಸ್ತುವಾರಿ ಸಚಿವರು ಇನ್ನೊಂದು ಕಾರ್ಯಕ್ರಮದಿಂದ ಬರಬೇಕಿರುವುದರಿಂದ ತಡವಾಗಿ ಹೊರಡುವಂತೆ ಮನವಿ ಮಾಡಲಾಗಿತ್ತು. ಶೆಟ್ಟರ್‌ ಅವರು, 40 ನಿಮಿಷ ಕಾಯ್ದರೂ ಕಾರ್ಯಕ್ರಮ ಆರಂಭವಾಗುವ ಲಕ್ಷಣಗಳು ಕಾಣದಿದ್ದಾಗ ವಾಪಸ್‌ ಹುಬ್ಬಳ್ಳಿಗೆ ತೆರಳಿದರು.

**

‘ತಾಲ್ಲೂಕು ರಚನೆ ಮಾಡಿದ್ದು ನಾವು!’

ಅಣ್ಣಿಗೇರಿ ತಾಲ್ಲೂಕು ಕೇಂದ್ರವನ್ನಾಗಿ ರಚನೆ ಮಾಡುವಲ್ಲಿ ಶ್ರಮಿಸಿದ್ದು ತಾವೇ ಎಂದು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಮುಖಂಡರು ಬೆನ್ನು ತಟ್ಟಿಕೊಂಡರು!

ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಜಗದೀಶ ಶೆಟ್ಟರ್‌, ‘ನಾನು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಣ್ಣಿಗೇರಿ ಹಾಗೂ ಅಳ್ನಾವರ ತಾಲ್ಲೂಕುಗಳನ್ನು ರಚನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅಲ್ಲದೇ, ಬಜೆಟ್‌ನಲ್ಲಿ ಒಟ್ಟು 43 ಹೊಸ ತಾಲ್ಲೂಕುಗಳಿಗೆ ತಲಾ ₹ 2 ಕೋಟಿಯಂತೆ ₹ 86 ಕೋಟಿ ಕೊಟ್ಟಿದ್ದೆ. ಇನ್ನೇನು ಸರ್ಕಾರದ ಅವಧಿ ಮುಗಿಯುತ್ತದೆ ಎಂದಾಗ ಈಗ ತಾಲ್ಲೂಕು ರಚನೆ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದರು.

ವೇದಿಕೆಯಲ್ಲಿ ಮಾತನಾಡಿದ ಸಚಿವ ವಿನಯ ಕುಲಕರ್ಣಿ, ‘ಬಹಳ ಕ್ಲಿಷ್ಟಕರವಾಗಿದ್ದ ತಾಲ್ಲೂಕು ರಚನೆಯನ್ನು ಮುಖ್ಯಮಂತ್ರಿಗಳ ವಿಶೇಷ ಪ್ರಯತ್ನದಿಂದ ಸಾಧ್ಯವಾಗಿಸಿದೆವು’ ಎಂದರು.

ಜೆಡಿಎಸ್‌ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ‘ಅಧಿವೇಶನದಲ್ಲಿ ತಾಲ್ಲೂಕು ರಚನೆ ಘೋಷಣೆ ಮಾಡಿಯೇ ಹೊರಗೆ ಬರುವೆ ಎಂದು ಪ್ರತಿಜ್ಞೆ ಮಾಡಿದ್ದೆ. ನನ್ನ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಅವರು, ಅಣ್ಣಿಗೇರಿ ತಾಲ್ಲೂಕು ಘೋಷಣೆ ಮಾಡಿದ್ದಾರೆ. ಅದರ ಪ್ರತಿಯನ್ನು ಹೋರಾಟಗಾರರಿಗೆ ತಕ್ಷಣವೇ ವಾಟ್ಸ್‌ ಆ್ಯಪ್‌ ಮೂಲಕ ಕಳಿಸಿಕೊಟ್ಟಿದ್ದೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಚಲೋ ಪಗಾರ ಕೊಡಬೇಕು. ನಾನು ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿಯೂ ನನಗೆ ಆಶೀರ್ವದಿಸುವ ಮೂಲಕ ಪಗಾರ ಕೊಡ್ರಿ’ ಎಂದು ಪಂಪ ಉತ್ಸವದ ವೇದಿಕೆಯಲ್ಲೇ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry