ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕಾಯ್ದೆ ರೂಪಿಸಲು ಆಗ್ರಹ

ವಿಮುಕ್ತ ದೇವದಾಸಿ ತಾಯಂದಿರು ಮತ್ತು ಮಕ್ಕಳ ವೇದಿಕೆ ಸದಸ್ಯರ ಪ್ರತಿಭಟನೆ
Last Updated 6 ಮಾರ್ಚ್ 2018, 11:24 IST
ಅಕ್ಷರ ಗಾತ್ರ

ಹಾವೇರಿ: ದೇವದಾಸಿ ತಾಯಂದಿರು, ಮಕ್ಕಳು ಹಾಗೂ ಮೊಮ್ಮಕ್ಕಳ ಸಮಗ್ರ ಪುನರ್ವಸತಿ ಕಾಯ್ದೆ ರೂಪಿಸಲು ಒತ್ತಾಯಿಸಿ, ವಿಮುಕ್ತ ದೇವದಾಸಿ ತಾಯಂದಿರು ಮತ್ತು ಮಕ್ಕಳ ವೇದಿಕೆಯ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಬಳಿಕ, ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ಅವರಿಗೆ ಮನವಿ ಸಲ್ಲಿಸಿದರು.

ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಸರ್ಕಾರ 1982ರಲ್ಲಿ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಮತ್ತೆ 2010ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ದೇವದಾಸಿ ಪದ್ಧತಿ ನಿಷೇಧಕ್ಕೆ ಪೂರಕ ಅಂಶಗಳಿವೆ ಹೊರತು, ಪುನರ್ವಸತಿಗೆ ಯಾವುದೇ ರೀತಿಯ ಅವಕಾಶಗಳಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ವೇದಿಕೆಯ ಮುಖಂಡ ಯಮನೂರಪ್ಪ ಕೊಪ್ಪದ ಮಾತನಾಡಿ, ‘ಸರ್ಕಾರ ದೇವದಾಸಿ ತಾಯಂದಿರು, ಮಕ್ಕಳು ಹಾಗೂ ಮೊಮ್ಮಕ್ಕಳ
ಸಮಗ್ರ ಪುನರ್ವಸತಿ ಕಾಯ್ದೆ ರೂಪಿಸಲು ಹಿಂದೇಟು ಹಾಕುತ್ತಿರುವುದರಿಂದ, ರಾಜ್ಯದ ಎಷ್ಟೋ ದೇವದಾಸಿ ಕುಟುಂಬಗಳು ಕಷ್ಟದಲ್ಲಿ ಸಿಲುಕಿವೆ. ದೇವದಾಸಿ ಕುಟುಂಬಗಳ ಪೈಕಿ ಶೇ 45ರಷ್ಟು ಜನರಿಗೆ ನಿವೇಶನ ಹಾಗೂ ಶೇ 55 ಜನರಿಗೆ ವಸತಿ ಸೌಲಭ್ಯಗಳಿಲ್ಲ.
ಅದಕ್ಕಾಗಿ ನಮಗೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ದೇವದಾಸಿ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ಹಾಗೂ ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕಲ್ಪಿಸಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಮರುಪರಿಶೀಲಿಸಿ, ಸಮಗ್ರವಾದ ಕಾಯ್ದೆ ರೂಪಿಸಬೇಕು. ದೇವದಾಸಿ ಮಕ್ಕಳ ಮದುವೆಗೆ ಸರ್ಕಾರ ವಿಶೇಷ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸಬೇಕು. ಮಕ್ಕಳಿಗೆ ಕೌಶಲ ತರಬೇತಿ ಹಾಗೂ ಕುಟುಂಬಕ್ಕೆ ಆರೋಗ್ಯ ಚೀಟಿ, ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಅವರು ಆಗ್ರಹಿಸಿದರು.

ನಾಗರಾಜ ಪೂಜಾರ, ಮರಿಯಪ್ಪ ಪೂಜಾರ, ಯಲ್ಲವ್ವ ಹುಚ್ಚಪ್ಪನವರ, ಶಾಂತವ್ವ ಪೂಜಾರ, ದುರ್ಗವ್ವ ಉಜ್ಜೇರ, ಮಂಜಪ್ಪ ಪೂಜಾರ, ನಾಗರಾಜ ಉಜ್ಜೇರ, ಮಲ್ಲವ್ವ ಅಣ್ಣೇರ, ಕೊಶವ್ವ ಉಜ್ಜೇರ, ದುರ್ಗವ್ವ ಅಂಟ್ಟೇರ ಹಾಗೂ ಸನಿತಾ ಬುರುಡೇರ ಇದ್ದರು.
***
‘ಸಹಾಯವಾಣಿ ಆರಂಭಿಸಿ’
‘ದೇವದಾಸಿ ಪದ್ಧತಿ ನಿಷೇಧಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿಯನ್ನು ಹೊಣೆಗಾರರನ್ನಾಗಿ ಮಾಡಬೇಕು. ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೇವದಾಸಿ ಸಹಾಯವಾಣಿಯನ್ನು ಸ್ಥಾಪಿಸಬೇಕು’ ಎಂದು ವಿಮುಕ್ತ ದೇವದಾಸಿ ತಾಯಂದಿರು ಮತ್ತು ಮಕ್ಕಳ ವೇದಿಕೆ ಮುಖಂಡ ಯಮನೂರಪ್ಪ ಕೊಪ್ಪದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT