ಬಾರದ ಮಾವಿನ ಹೂವು: ರೈತರಲ್ಲಿ ಆತಂಕ

ಶನಿವಾರ, ಮಾರ್ಚ್ 23, 2019
28 °C
ಅಲ್ಲಲ್ಲಿ ಹೆಚ್ಚಿರುವ ಅಂಟು ನೊಣದ ಹಾವಳಿ; ಹೂವಿನ ರಕ್ಷಣೆಗೆ ರೈತರಿಂದ ಅಗತ್ಯವಾದ ಔಷಧ ಸಿಂಪಡಣೆ

ಬಾರದ ಮಾವಿನ ಹೂವು: ರೈತರಲ್ಲಿ ಆತಂಕ

Published:
Updated:
ಬಾರದ ಮಾವಿನ ಹೂವು: ರೈತರಲ್ಲಿ ಆತಂಕ

ಶ್ರೀನಿವಾಸಪುರ: ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಹಾಗೂ ಈಗ ಹೆಚ್ಚಿರುವ ಚಳಿಯ ಪರಿಣಾಮವಾಗಿ ಮಾವಿನ ಹೂ ಬರುವುದು ನಿಧಾನವಾಗಿದ್ದು, ರೈತರಲ್ಲಿ ಆತಂಕ ಹೆಚ್ಚಿದೆ.

ಜನವರಿ ಮೊದಲ ವಾರದಲ್ಲಿ ಮಾವಿನ ಹೂವು ಬರಲು ಪ್ರಾರಂಭವಾಗುವುದು ಸಾಮಾನ್ಯ ವಿದ್ಯಮಾನ. ಈ ಬಾರಿ ವಾಡಿಕೆಯಿಂತೆ ಹೂ ಕಾಣಿಸಿಕೊಂಡಿದೆಯಾದರೂ, ವ್ಯಾಪಕವಾಗಿ ಬರುತ್ತಿಲ್ಲ.

ಬೆಳೆಗಾರರು ಹೂವಿನ ರಕ್ಷಣೆ ಹಾಗೂ ಹೂವು ಬರಲು ಅಗತ್ಯವಾದ ಔಷಧ ಸಿಂಪರಣೆ ಮಾಡುತ್ತಿದ್ದಾರೆ. ಹತ್ತಾರು ಔಷಧ ಕಂಪನಿಗಳ ಪ್ರತಿನಿಧಿಗಳು ಮಾವು ಬೆಳೆಗಾರರನ್ನು ಭೇಟಿಯಾಗಿ ಅವರವರ ಕಂಪನಿಯ ಔಷಧ ಬಳಸುವಂತೆ ಮನವೊಲಿಸುತ್ತಿದ್ದಾರೆ.

ಮಾವಿನ ಕಾಯಿ ವ್ಯಾಪಾರಿಗಳು ಹಾಗೂ ಮಂಡಿ ಮಾಲೀಕರು, ಮಾವು ಬೆಳೆಗಾರರಿಗೆ ಸಾಲವಾಗಿ ಔಷಧ ಖರೀದಿಸಿ ಕೊಡುತ್ತಿದ್ದಾರೆ. ಅದಕ್ಕೆ ಬದಲಾಗಿ ಸುಗ್ಗಿ ಸಂದರ್ಭದಲ್ಲಿ ಔಷಧ ನೀಡಿದವರಿಗೆ ಕಾಯಿ ಮಾರಾಟ ಮಾಡಬೇಕಾಗುತ್ತದೆ. ಇದೇ ಮುಂತಾದ ವ್ಯವಸ್ಥೆಗಳಿಂದಾಗಿ ರೈತರು, ಏನೆಲ್ಲಾ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಔಷಧ ಸಿಂಪಡಣೆ ಮಾಡುವುದರಿಂದ ಬೆಳೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.

ಬಾದಾಮಿ ಹಾಗೂ ತೋತಾಪುರಿ ಮಾವಿನ ಮರಗಳಲ್ಲಿ ದಟ್ಟವಾಗಿ ಹೂ ಬರುತ್ತಿದೆ. ಹೆಚ್ಚಿನ ಸಂಖ್ಯೆಯ ಮರಗಳು ಚಳಿಗೆ ಸೆಟೆದು ನಿಂತಿದ್ದವು. ಚಳಿ ಕಡಿಮೆಯಾದಂತೆ ಮಾವಿನ ಹೂ ಬರುವ ವೇಗ ಹೆಚ್ಚಾಗಿದೆ. ಎಳೆ ಗಿಡಗಳಲ್ಲಿ ದಟ್ಟವಾಗಿ ಹೂ ಕಾಣಿಸಿಕೊಂಡಿದೆಯಾದರೂ, ವಯಸ್ಸಾದ ಮರಗಳಲ್ಲಿ ಹೂವಿನ ಪ್ರಮಾಣ ತೀರಾ ಕಡಿಮೆ ಕಂಡುಬರುತ್ತಿದೆ. ಕೆಲವು ಕಡೆ ಬಾದಾಮಿ ಜಾತಿಯ ಮಾವಿನ ಮರಗಳಲ್ಲಿ ಇನ್ನೂ ಹೂವು ಬಂದಿಲ್ಲ. ಮರಗಳು ಹೂವಿನೊಂದಿಗೆ ಚಿಗುರುತ್ತಿರುವುದರಿಂದ ಅಲ್ಲಲ್ಲಿ ಅಂಟು ನೊಣದ ಹಾವಳಿ ಕಂಡುಬಂದಿದೆ.

ವಾತಾವರಣದಲ್ಲಿ ಉಷ್ಟಾಂಶ ಕಡಿಮೆ ಇದ್ದಲ್ಲಿ, ಮಾವಿನ ಮರಗಳಲ್ಲಿ ಏಕ ಪ್ರಕಾರವಾಗಿ ಹೂವು ಬರುವುದಿಲ್ಲ. ಆದ್ದರಿಂದ ಬೆಳೆಗಾರರು ಹೂ ಬಾರದ ಮರಗಳಿಗೆ ಸಲ್ಫರ್‌ ಔಷಧವನ್ನು 1 ಲೀಟರ್‌ ನೀರಿಗೆ 3 ಮಿಲಿ ಲೀಟರ್‌ನಂತೆ ಬೆರೆಸಿ ಮರದ ಎಲ್ಲ ಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು ಎಂದು ತಿಳಿಸಲಾಗಿತ್ತು. ಜಿಗಿ ಹುಳು ಇದ್ದಲ್ಲಿ 1 ಲೀಟರ್‌ ನೀರಿಗೆ 2 ಮಿಲಿ ಲೀಟರ್‌ ಬೇವಿನ ಎಣ್ಣೆ ಸೇರಿಸಿ ಸಿಂಪಡಿಸಬೇಕು ಎಂದು ತಾಲ್ಲೂಕು ತೊಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ಔಷಧ ಸಿಂಪಡಣೆ ಮಾಡಬೇಕು. ಔಷಧ ಸಿಂಪಡಣೆ ಮಾಡುವ ಮುನ್ನ ಕೃಷಿ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು ಹಾಗೂ ಅಂಗಡಿಯಲ್ಲಿ ಖರೀದಿಸಿದ ಔಷಧಗಳಿಗೆ ಅಗತ್ಯವಾದ ರಸೀದಿ ಪಡೆಯುವುದು ಕ್ಷೇಮಕರ ಎಂದು ಸಲಹೆ

ಮಾಡಿದರು.

ಅಂಟು ನೊಣ ಹಾವಳಿ ತಡೆಗೆ ಸೈಫರ್‌ ಮಿಥ್ರಿನ್‌ ಔಷಧವನ್ನು ಒಂದು ಲೀಟರ್‌ ನೀರಿಗೆ 2 ಮಿಲಿ ಲೀಟರ್‌ನಂತೆ ಬೆರೆಸಿ ಗಿಡ ಅಥವಾ ಮರದ ಎಲ್ಲ ಭಾಗಕ್ಕೆ ಬೀಳುವಂತೆ ಸಿಂಪಡಣೆ ಮಾಡಬೇಕು. ಈ ಕಾರ್ಯ ಒಟ್ಟಾಗಿ ನಡೆಯಬೇಕು. ಇಲ್ಲೊಂದು ಕಡೆ, ಅಲ್ಲೊಂದು ಕಡೆ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

***

ಈ ಬಾರಿ ಮಾವಿನ ಮರಗಳಲ್ಲಿ ಹುಸಿ ಹೂವಿನ ಪ್ರಮಾಣ ಹೆಚ್ಚಿದೆ. ಹೂವು ಬಂದಿದೆಯಾದರೂ, ಹೀಚು ಕಟ್ಟುತ್ತಿಲ್ಲ. ಹೂವು ಉದುರುತ್ತಿದೆ. ಇದು ಇಳುವರಿ ಮೇಲೆ ದುಷ್ಟರಿಣಾಮ ಬೀರಿದೆ.

– ಪಿ.ಎಂ.ವೆಂಕಟೇಶರೆಡ್ಡಿ, ಕೃಷಿಕ

***

ವರ್ಷದಿಂದ ವರ್ಷಕ್ಕೆ ಮಾವಿನ ಬೆಳೆ ಸಮಸ್ಯಾತ್ಮಕವಾಗುತ್ತಿದೆ. ಹೂವಿಗೆ ಬೂದು ರೋಗ, ಹುಳು ಬಾಧೆ ಹಾಗೂ ಅಂಟು ನೊಣದ ಹಾವಳಿ ಕಂಡುಬಂದಿದೆ

–ಸಿ.ವಿ.ಶಿವಪ್ರಸಾದ್‌, ಮಾವು ಬೆಳೆಗಾರ

***

ಮಾವಿನ ಬೆಳೆ ರಕ್ಷಣೆಗೆ ಮಾವು ಬೆಳೆಗಾರರು ಸಾಂಘಿಕ ಪ್ರಯತ್ನ ಮಾಡಬೇಕು. ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ರೋಗ ತಡೆಯಲು ಸಾಧ್ಯವಿಲ್ಲ. 

–ವಿ.ಆನಂದರೆಡ್ಡಿ, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry