ಅಭಿವೃದ್ಧಿ ವಂಚಿತ ಬಂಡಿಹಾಳ

7
ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮಸ್ಥರ ಆರೋಪ

ಅಭಿವೃದ್ಧಿ ವಂಚಿತ ಬಂಡಿಹಾಳ

Published:
Updated:
ಅಭಿವೃದ್ಧಿ ವಂಚಿತ ಬಂಡಿಹಾಳ

ಯಲಬುರ್ಗಾ: ತಾಲ್ಲೂಕಿನ ಯರೀಭಾಗದ ಗಡಿ ಪ್ರದೇಶದಲ್ಲಿರುವ ಬಂಡಿಹಾಳ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಪ್ರಮುಖ ರಸ್ತೆಯನ್ನು ಹೊರತುಪಡಿಸಿದರೆ ವಿವಿಧ ಓಣಿಗಳಲ್ಲಿ ಉತ್ತಮ ರಸ್ತೆ ಇಲ್ಲ. ಚರಂಡಿಗಳಿಲ್ಲದ ಕಾರಣ ಸಿಸಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಕುಡಿಯುವ ನೀರಿಗಾಗಿ ನಿರ್ಮಿಸಿರುವ ಎರಡು ದೊಡ್ಡ ಟ್ಯಾಂಕ್‌ಗಳು ಉಪಯೋಗಕ್ಕೆ ಬಾರದಂತಾಗಿದೆ. ನಿರ್ಮಾಣಗೊಂಡು ಹತ್ತು ವರ್ಷಗಳೆ ಕಳೆದರೂ ನೀರು ಪೂರೈಸುವ ಕೆಲಸ ಆಗಿಲ್ಲ. ಪ್ಲೋರೈಡ್ ಯುಕ್ತ ನೀರು ಸೇವನೆಯಿಂದ ಗ್ರಾಮಸ್ಥರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಗ್ರಾಮದಲ್ಲಿರುವ ಎರಡು ಕೆರೆಗಳ ಪೈಕಿ ಒಂದು ಜಾನುವಾರುಗಳಿಗೆ ಸೀಮಿತವಾಗಿದೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದ್ದರಿಂದ ನೀರಿನ ಪ್ರಮಾಣ ಕಡಿಮೆ ಇದೆ. ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಮುಖಂಡ ಕೋಟ್ರೋಶ ದೂರುತ್ತಾರೆ.

‘ಸಮುದಾಯ ಭವನ ಶಿಥಿಲಾವಸ್ಥೆಗೆ ತಲುಪಿದೆ. ಇದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದರ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವಿದೆ. ಅಲ್ಲಿಯ ಮಕ್ಕಳು ಭವನದ ಕೆಳಗಡೆ ಆಟವಾಡುವುದರಿಂದ ಆತಂಕ ಎದುರಿಸುವಂತಾಗಿದೆ’ ಎಂಬುದು ಪಾಲಕರ ದೂರು.

‘ಬಾಲಕರ ಮತ್ತು ಬಾಲಕಿಯ ಶಾಲೆಗೆ ಕೊಠಡಿಗಳ ಕೊರತೆಯಿದ್ದು ಅವುಗಳಿಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ಚುವರಿ ಕೊಠಡಿಗಳನ್ನು ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಬೇರೆ ಶಾಲೆಗೆ ಮಂಜೂರಾದ ಶಾಲೆಗಳನ್ನು ಬಂಡಿಹಾಳ ಶಾಲೆಗೆ ವರ್ಗಾಯಿಸಿದ್ದಾರೆ. ಅಲ್ಲಿಯ ಗ್ರಾಮಸ್ಥರು ವಿರೋಧಿಸಿದರೆ ಮತ್ತೆ ಇಲ್ಲಿಯ ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆಯಾಗಲಿದೆ’ ಎಂದು ಶೇಖರಗೌಡ ಮಾಲಿಪಾಟೀಲ ಹೇಳುತ್ತಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕದಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಆಶ್ರಯ ಮನೆಯಲ್ಲಿ ನಡೆಯುವ ಈ ಆಸ್ಪತ್ರೆಯನ್ನು ಶೀಘ್ರ ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಣಮಟ್ಟದ ಸಿಸಿ ರಸ್ತೆ, ಚರಂಡಿ, ಹೆಚ್ಚುವರಿ ಶಾಲಾ ಕೊಠಡಿ, ಕುಡಿವ ನೀರು ಹಾಗೂ ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಸೌಲಭ್ಯಗಳು ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

***

ಸರ್ಕಾರದ ಅನೇಕ ಯೋಜನೆಗಳು ಗ್ರಾಮದಲ್ಲಿ ಅನುಷ್ಠಾನಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ.

– ಶರಣು ಕಳಸಪ್ಪನವರ, ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry