ಲಾರಿ ಚಾಲಕನ ಮಗಳು ಈಗ ಸಬ್ ಇನ್ಸ್‌ಪೆಕ್ಟರ್

7
ಸಾಧನೆಗೆ ಅಡ್ಡಿಯಾಗದ ಬಡತನ

ಲಾರಿ ಚಾಲಕನ ಮಗಳು ಈಗ ಸಬ್ ಇನ್ಸ್‌ಪೆಕ್ಟರ್

Published:
Updated:
ಲಾರಿ ಚಾಲಕನ ಮಗಳು ಈಗ ಸಬ್ ಇನ್ಸ್‌ಪೆಕ್ಟರ್

ಸಿಂಧನೂರು: ಸಿಂಧನೂರಿನ ಮಹಿಬೂಬಿಯಾ ಕಾಲೊನಿಯ ಕೊಳಚೆ ಪ್ರದೇಶದ ಲಾರಿ ಚಾಲಕನ ಮಗಳು ಈಗ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದಾರೆ.

ಚಂದ್ರಶೇಖರ ಮತ್ತು ಸುಲೋಚನಾ ಅವರ ಪುತ್ರಿ ವಿ.ಶ್ವೇತಾ ಈಗ ನಿಸ್ತಂತು ವಿಭಾಗದ ಸಬ್ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡವರು.

ಆಗಸ್ಟ್‌ನಲ್ಲಿ ಪೊಲೀಸ್‌ ಇಲಾಖೆಯ ನಿಸ್ತಂತು(ವೈರ್‌ಲೆಸ್‌) ವಿಭಾಗದ ಒಂದೇ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಗೆ ಸಹಸ್ರಾರು ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್ ಗಳಿಸಿದ ಇಬ್ಬರಿಗೆ ಸಂದರ್ಶನ ನಡೆಸಲಾಗಿತ್ತು. ಈ ಇಬ್ಬರಲ್ಲಿ ಸಿಂಧನೂರಿನ ವಿ.ಶ್ವೇತಾ ಆಯ್ಕೆಯಾಗಿದ್ದಾರೆ.

ಕಡುಬಡತನದ ಕುಟುಂಬದಲ್ಲಿ ಜನಿಸಿದ ಶ್ವೇತಾ ಅವರಿಗೆ ಯಾವುದೇ ರೀತಿಯ ಶೈಕ್ಷಣಿಕ ಪರಿಸರವಿಲ್ಲ. ತಂದೆ ಅವಿದ್ಯಾವಂತ. ತಾಯಿಯೂ ಸಹ ಅಷ್ಟೇನೂ ಓದಿದವರಲ್ಲ. ಆದರೆ ಮಗಳಿಗೆ ಉತ್ತಮ ಶಿಕ್ಷಣ ನೀಡಲೇಬೇಕೆಂದು ಅವರು ನಿರ್ಧರಿಸಿದರು.

ಶ್ವೇತಾ ಬಿ.ಎಸ್ಸಿ ಓದುವ ವೇಳೆ ತಂದೆ ಅವರು ಅನಾರೋಗ್ಯಕ್ಕೆ ಒಳಗಾದರು. ಮೂರು–ನಾಲ್ಕು ವರ್ಷದವರೆಗೆ ಅವರ ಆರೋಗ್ಯ ಸುಧಾರಿಸಲಿಲ್ಲ. ಆದರೂ ಶ್ವೇತಾ ಎದೆಗುಂದಲಿಲ್ಲ. ಪದವಿ ವಿದ್ಯಾಭ್ಯಾಸ ಮಾಡುತ್ತ ಶ್ವೇತಾ ವಿವಿಧ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯ ಬೋಧಿಸಿ ಕುಟುಂಬವನ್ನು ನಿರ್ವಹಿಸಿದರು.

ಶ್ವೇತಾ ಅವರು ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ಎಸ್ಎಸ್ಎಲ್‌ಸಿ ವರೆಗೆ ನಗರದ ಮೀನಾಕ್ಷಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 2010ರಲ್ಲಿ ಶೇ 68 ಫಲಿತಾಂಶ ಪಡೆದು ತೇರ್ಗಡೆಯಾದರು. ನಂತರ ಆರ್‌ಜಿಎಂ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ಪಿಯುಸಿ ದ್ವಿತೀಯ ತರಗತಿಯಲ್ಲಿ ಶೇ 55 ಫಲಿತಾಂಶ ಗಳಿಸಿದರು. ನಂತರ ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಪೂರ್ಣಗೊಳಿಸಿದರು. ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪೊಲೀಸ್ ಕಾನ್‌ಸ್ಟೆಬಲ್‌ ಹುಸೇನಪ್ಪ ನಾಯಕ ಅವರಿಂದ ಉಚಿತ ಮಾರ್ಗದರ್ಶನ ಪಡೆದರು. ತಮ್ಮ ಸಾಧನೆಗೆ ಹುಸೇನಪ್ಪ ನಾಯಕ ಅವರು ತುಂಬಾ ನೆರವಾಗಿದ್ದಾರೆ ಎಂದು ಶ್ವೇತಾ ನೆನಪಿಸಿಕೊಳ್ಳುತ್ತಾರೆ.

‘ವಿಜ್ಞಾನ ವಿದ್ಯಾರ್ಥಿನಿಯಾದ ನನಗೆ ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಭೂಗೋಳ, ಮಾನಸಿಕ ಸಾಮರ್ಥ್ಯ, ಕನ್ನಡ ವ್ಯಾಕರಣ ಮತ್ತಿತರ ವಿಷಯಗಳು ಸಂಪೂರ್ಣ ಹೊಸತು. ಅವುಗಳಲ್ಲಿ ಅಭಿರುಚಿ ಹುಟ್ಟಿಸಿ ನನ್ನ ಬದುಕಿಗೆ ಹೊಸ ತಿರುವು ನೀಡಿದ ಹುಸೇನಪ್ಪ ನಾಯಕ ಅವರಿಗೆ ಚಿರಋಣಿ’ ಎಂದು ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಹಸ್ರಾರು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿ, ಬದುಕು ರೂಪಿಸಿಕೊಳ್ಳಲು ಹುಸೇನಪ್ಪ ನಾಯಕ ನೆರವಾಗಿದ್ದಾರೆ. ನಾನೂ ಸಹ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ, ಮಾರ್ಗದರ್ಶನ ನೀಡುತ್ತೇನೆ. ಭ್ರಷ್ಟಾಚಾರದಿಂದ ದೂರವಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಅವರು ತಿಳಿಸಿದರು.

***

ಬಡ ಹೆಣ್ಣುಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಉಚಿತ ತರಬೇತಿ ದೊರೆಯಲು ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುವೆ.

– ವಿ. ಶ್ವೇತಾ.

***


ಶ್ವೇತಾ ಬಗ್ಗೆ ತುಂಬಾ ಹೆಮ್ಮೆಯಿದೆ. ಎಷ್ಟೆಲ್ಲಾ ಸಂಕಷ್ಟ, ನೋವು ಅನುಭವಿಸಿದರೂ ಸವಾಲುಗಳನ್ನು ಸ್ವೀಕರಿಸುತ್ತ ಆಕೆ ಸಾಧನೆ ಮಾಡಿದ್ದಾರೆ.

–ಚಂದ್ರಶೇಖರ, ಶ್ವೇತಾ ತಂದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry