ಅಗ್ಗದ ಸ್ಮಾರ್ಟ್‌ಫೋನ್‌ಗಳ ಸುತ್ತ...

7

ಅಗ್ಗದ ಸ್ಮಾರ್ಟ್‌ಫೋನ್‌ಗಳ ಸುತ್ತ...

Published:
Updated:
ಅಗ್ಗದ ಸ್ಮಾರ್ಟ್‌ಫೋನ್‌ಗಳ ಸುತ್ತ...

ಈಗೇನಿದ್ದರೂ ಸ್ಮಾರ್ಟ್‌ಫೋನ್‌ಗಳ ಕಾಲ. ಬೇಸಿಕ್‌ ಹ್ಯಾಂಡ್‌ಸೆಟ್‌ಗಳು ನೋಡಲೂ ಸಿಗುತ್ತಿಲ್ಲ ಎನ್ನುವಷ್ಟು ಅವುಗಳ ತಯಾರಿಕೆ ಕಡಿಮೆ ಆಗಿದೆ. ಸ್ಮಾರ್ಟ್‌ಫೋನ್‌ಗಳ ಆವಿಷ್ಕಾರವನ್ನು ಎರಡು ರೀತಿಯಲ್ಲಿ ಹೇಳಬಹುದು. ಒಂದು– ಫೋನ್‌ಗಳ ಗಾತ್ರ ದೊಡ್ಡದಾಗುತ್ತಿರುವುದು. ಮತ್ತೊಂದು ಅವುಗಳ ಬೆಲೆ ಹೆಚ್ಚುತ್ತಿರುವುದು.

ಇದಕ್ಕೆ ಈಚಿನ ಉದಾಹರಣೆಗಳೆಂದರೆ ಮಾರುಕಟ್ಟೆಯ ಅಗ್ರ ಮೊಬೈಲ್‌ ತಯಾರಿಕಾ ಕಂಪನಿಗಳಾದ ಆ್ಯಪಲ್‌ ಮತ್ತು ಸ್ಯಾಮ್ಸಂಗ್‌. ಸ್ಯಾಮ್ಸಂಗ್‌ ಈ ವಾರ ತನ್ನ ಹೊಸ ಮಾದರಿಯ ಗ್ಯಾಲಕ್ಸಿ ಎಸ್‌9 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಅದರ ಆರಂಭಿಕ ಬೆಲೆ ₹47,000 ಇದೆ.‌ ಇದಕ್ಕಿಂತ ಸ್ವಲ್ಪ ದೊಡ್ಡ ಗಾತ್ರದ ಸ್ಕ್ರೀನ್‌ ಇರುವ ಸ್ಮಾರ್ಟ್‌ಫೋನ್‌ಗೆ ₹55,000. ಕೆಲ ವರ್ಷಗಳ ಹಿಂದೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಗ್ಯಾಲಕ್ಸಿ ಸರಣಿಯ ಫೋನ್‌ಗಳ ಬೆಲೆ ₹42 ಸಾವಿರದ ಆಸುಪಾಸಿನಲ್ಲಿತ್ತು.

ಆ್ಯಪಲ್‌ ಐಫೋನ್‌ಗಳ ಬೆಲೆಯೂ ಏರಿಕೆ ಆಗಿದೆ. ಕಳೆದ ವರ್ಷ ಬಿಡುಗಡೆಯಾದ ಐಫೋನ್‌ 8ರ ಆರಂಭಿಕ ಬೆಲೆ ₹45,500 ಇತ್ತು. ನಂತರ ಪರಿಚಯಿಸಿದ ಐಫೋನ್‌ ಎಕ್ಸ್‌ನ ಅತ್ಯುನ್ನತ ಶ್ರೇಣಿಯ ಹ್ಯಾಂಡ್‌ಸೆಟ್‌ನ ಬೆಲೆ ₹65,000 ಇತ್ತು.

ಏರುತ್ತಿರುವ ಬೆಲೆಯಿಂದಾಗಿ ಸ್ಮಾರ್ಟ್‌ಫೋನ್‌ಗಳು ದುಬಾರಿ ಮನೆಬಳಕೆ ಉತ್ಪನ್ನಗಳಾಗಿ ಮಾರ್ಪಟ್ಟಿವೆ. ಆದರೆ, ಎಲ್ಲರ ಮನೆಗಳಲ್ಲಿಯೂ ಕಾಣಸಿಗುವ ಟಿವಿಗಳ ಬೆಲೆ ಇಳಿಕೆಯಾಗಿ, ವಿವಿಧ ಕಂಪನಿಗಳು ರಿಯಾಯ್ತಿ ದರ ಘೋಷಿಸುತ್ತಿದ್ದರೂ ಗ್ರಾಹಕರು ಅದರೆಡೆಗೆ ಮನಸು ಮಾಡದೆ, ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಖರ್ಚು ಮಾಡುತ್ತಿರುವುದು ಈಚಿನ ಹೊಸ ಬೆಳವಣಿಗೆಯಾಗಿದೆ.

‘ಸ್ಮಾರ್ಟ್‌ಫೋನ್‌ಗಳು ನಿತ್ಯಜೀವನದ ಅಗತ್ಯ ವಸ್ತುವಾಗಿ ಮಾರ್ಪಟ್ಟಿವೆ. ಹೀಗಾಗಿ ಅವುಗಳ ಬೆಲೆ ಬಗ್ಗೆ ಗ್ರಾಹಕರು ತೀರಾ ಚಿಂತಿತರಾಗಿರುವುದಿಲ್ಲ’ ಎಂದು ಬೆಲೆ ನಿಗದಿ ಮಾಡುವ ಮತ್ತು ಮಾರಾಟ ಸಮಾಲೋಚನಾ ಸಂಸ್ಥೆ ರೆವೆನ್ಯೂ ಅನೆಲಿಟಿಕ್ಸ್‌ನ ಪಾಲುದಾರ ಜಾರೆಡ್‌ ವೀಸೆಲ್‌ ಅಭಿಪ್ರಾಯಪಡುತ್ತಾರೆ.

ಪರಿಸ್ಥಿತಿ ಹೀಗಿದ್ದರೂ ಹಲವರು ಪ್ರತಿ ವರ್ಷ ಫ್ಯಾನ್ಸಿ ಫೋನ್‌ಗಳಿಗಾಗಿ ಹೆಚ್ಚು ಹಣ ಸುರಿಯುವುದಿಲ್ಲ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾ ಕಂಪನಿ ಹುವಾವೆ, ಫೋನ್‌ ತಯಾರಿಕಾ ಕಂಪೆನಿಗಳಲ್ಲಿ 3ನೇ ಸ್ಥಾನದಲ್ಲಿತ್ತು ಎಂದು ಐಡಿಸಿ ವರದಿ ತಿಳಿಸಿದೆ. ಇದಕ್ಕೆ ಕಾರಣ ಕಡಿಮೆ ಬೆಲೆಯ ಹಾನರ್‌ ಫೋನ್‌ಗಳು ಸೇರಿದಂತೆ ಮತ್ತಿತರ ಉಪಕರಣಗಳ ಮಾರಾಟದಿಂದ ಕಂಪನಿ ಮೂರನೇ ಸ್ಥಾನ ಗಳಿಸಿತ್ತು. ದುಬಾರಿಯಲ್ಲದ ಫೋನ್‌ಗಳನ್ನು ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ ಎಂಬುದೂ ಇದರಿಂದ ತಿಳಿಯುತ್ತದೆ.‌

ಸ್ಮಾರ್ಟ್‌ಫೋನ್‌ಗಳಿಗೆ ಕಡಿಮೆ ಖರ್ಚು ಮಾಡುವವರಿಗೂ ಹಲವು ಆಯ್ಕೆಗಳಿವೆ. ಆದರೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಎಂದಿಗೂ ಅತ್ಯುತ್ತಮವಾಗಿರುವುದಿಲ್ಲ ಎಂಬ ಮಾತೂ ಇದೆ. ₹13,000ದಿಂದ ₹20,000ದವರೆಗೆ ಖರ್ಚು ಮಾಡಿ ಕೊಳ್ಳುವ ಸ್ಮಾರ್ಟ್‌ಫೋನ್‌ಗಳನ್ನು ಕರೆ ಮಾಡಲು, ಗೂಗಲ್‌ ಮ್ಯಾಪ್‌ ಬಳಸಲು ಮತ್ತು ಟೆಕ್ಸ್ಟ್‌ಮೆಸೇಜ್‌ ಕಳುಹಿಸಲು ಬಳಸಬಹುದು. ಇವೆಲ್ಲದರ ಜತೆಗೆ ಕಡಿಮೆ ಗುಣಮಟ್ಟದ ಸ್ಕ್ರೀನ್‌ ಮತ್ತು ಅಷ್ಟೇನೂ ಪ್ರಭಾವಶಾಲಿಯಲ್ಲದ ಕ್ಯಾಮರಾ ಇರುತ್ತದೆ.

ಹಾಗಿದ್ದರೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲವೇ? ಅವು ದಿನಬಳಕೆಗೆ ಸರಿ ಹೊಂದುವುದಿಲ್ಲವೇ? ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸಾಧಕ ಬಾಧಕಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ನಕಾರಾತ್ಮಕ ಅಂಶಗಳು

* ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಇರುವುದಿಲ್ಲ. ಆಧುನಿಕ ಕ್ಯಾಮೆರಾ ಸೆನ್ಸರ್‌ಗಳನ್ನು ಒಳಗೊಂಡಿರುವುದಿಲ್ಲ. ಅಲ್ಲದೆ, ಕ್ಯಾಮೆರಾ ಕಾರ್ಯಕ್ಷಮತೆಯೂ ವೇಗವಾಗಿರುವುದಿಲ್ಲ. ಕಡಿಮೆ ಬೆಳಕಿನಲ್ಲಿ ಚಿತ್ರ ಸೆರೆ ಹಿಡಿಯುವುದೂ ಕಷ್ಟ. ಆಪ್ಟಿಕಲ್‌ ಇಮೇಜ್‌ ಸ್ಟೆಬಿಲೈಸೇಷನ್‌ನಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿರುವುದಿಲ್ಲ.

* ಈಚಿನ ಸಾಕಷ್ಟು ಫೋನ್‌ಗಳಲ್ಲಿ ಇರುವ ಇನ್‌ಫ್ರಾರೆಡ್‌ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆಯನ್ನೂ ಅಳವಡಿಸಿರುವುದಿಲ್ಲ. ಸ್ಮಾರ್ಟ್‌ಫೋನ್‌ನ ಪ್ರಾಸೆಸರ್‌ ಕೂಡ ವೇಗವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ಗ್ರಾಫಿಕ್ಸ್‌ ಒಳಗೊಂಡ ಗೇಮ್ಸ್‌ ಆಡಲು ಆಗುವುದಿಲ್ಲ.

* ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ದೊಡ್ಡದಾಗಿರುವುದಿಲ್ಲ ಮತ್ತು ಆಕರ್ಷಕವಾಗಿರುವುದಿಲ್ಲ. ಈಚಿನ ಫ್ಯಾನ್ಸಿ ಸ್ಮಾರ್ಟ್‌ಫೋನ್‌ಗಳು ಆರ್ಗ್ಯಾನಿಕದ ಲೈಟ್‌ ಎಮಿಟಿಂಗ್ ಡಯೋಡ್‌ (ಒಎಲ್‌ಇಡಿ) ಸ್ಕ್ರೀನ್‌ ಒಳಗೊಂಡಿರುತ್ತವೆ. ಹಾಗಾಗಿ ಅವುಗಳಲ್ಲಿ ಬಣ್ಣಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

* ಕಾಲಕಾಲಕ್ಕೆ ಬದಲಾಗುವ ವಿವಿಧ ಸಾಫ್ಟ್‌ವೇರ್‌ಗಳ ಅಪ್‌ಡೇಟ್‌ ಮಾದರಿ ಸಿಗುವುದಿಲ್ಲ. ಹೊಸ ಫೀಚರ್ಸ್‌ ಮತ್ತು ಫೋನ್‌ ಭದ್ರತೆಗೆ ಈ ಅಪ್‌ಡೇಟೆಡ್‌ ಸಾಫ್ಟ್‌ವೇರ್‌ಗಳು ಅಗತ್ಯ. ಈಗಿನ ಕಡಿಮೆ ಬೆಲೆಯ ಆಂಡ್ರಾಯ್ಡ್‌ ಫೋನ್‌ನಲ್ಲಿ ಒಂದು ಮುಖ್ಯವಾದ ಸಾಫ್ಟ್‌ವೇರ್‌ ಮತ್ತು 18 ತಿಂಗಳ ಅವಧಿಯ ಕೆಲ ಸೆಕ್ಯುರಿಟಿ ಅಪ್‌ಡೇಟ್‌ಗಳು ಇರುತ್ತವೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಕೊಳ್ಳುವುದರಿಂದ ಆಗುವ ಲಾಭವೇನು?

* ಉತ್ತಮ ಗುಣಮಟ್ಟದ ಕ್ಯಾಮೆರಾ: ಹಲವು ಕಂಪೆನಿಗಳು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ–ರೆಸಲೂಷನ್‌ ಸೆನ್ಸರ್‌ಗಳನ್ನು ಅಳವಡಿಸಿರುತ್ತವೆ. ‘ಮೂರು ವರ್ಷಗಳ ಹಿಂದಿನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಇರುತ್ತಿದ್ದ ಕ್ಯಾಮೆರಾಕ್ಕಿಂತ ಈಗ ದೊರಕುತ್ತಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾ ಅಳವಡಿಸಲಾಗಿರುತ್ತದೆ’ ಎನ್ನುತ್ತಾರೆ ವೈರ್‌ಕಟರ್‌ ಸಂಸ್ಥೆಯ ಹಿರಿಯ ಸಂಪಾದಕ ನೆಥನ್‌ ಎಡ್ವರ್ಡ್ಸ್‌.

* ಅಂತರ್ಜಾಲದ ಮಾಹಿತಿ ಓದಲು, ವಿಡಿಯೊ ಮತ್ತು ಚಿತ್ರಗಳನ್ನು ನೋಡಲು ಸಾಕಾಗುವಷ್ಟು ದೊಡ್ಡ ಸ್ಕ್ರೀನ್‌ ಇರುತ್ತದೆ. ಬಜೆಟ್‌ ಫೋನ್‌ಗಳು ಈಗಲೂ ಹಳೆಯ ಎಲ್‌ಸಿಡಿ ತಂತ್ರಜ್ಞಾನವನ್ನೇ ಬಳಸುತ್ತಿದ್ದರೂ ಅದರಲ್ಲೇ ಸುಧಾರಿತ ವರ್ಷನ್‌ ಬಳಸುತ್ತಿವೆಯಾದ್ದರಿಂದ ಉತ್ತಮ ಎನ್ನಬಹುದು.

* ಬ್ರೌಸಿಂಗ್, ಕರೆ ಮಾಡುವುದು, ಇ–ಮೇಲ್‌ ಬಳಕೆ, ಕಡಿಮೆ ಮೆಮೊರಿಯ ಆ್ಯಪ್‌ಗಳನ್ನು ಬಳಸುವುದಕ್ಕೆ ಈ ಫೋನ್‌ಗಳು ಸಹಕಾರಿ. ಹೆಚ್ಚು ಮೆಮೊರಿಯ ಆ್ಯಪ್‌ಗಳನ್ನು ಬಳಸಲು, ಕೆಲವು ಗೇಮ್‌ಗಳನ್ನು ಆಡಲು ಈ ಫೋನ್‌ಗಳು ಸಹಕರಿಸುವುದಿಲ್ಲ.

ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಹಣ ಖರ್ಚು ಮಾಡುವುದರ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ನಿಮ್ಮ ಕೆಲಸಕ್ಕೆ ಸಹಕಾರಿಯಾಗುತ್ತದೆ ಎಂದಾದರೆ, ಮನಸ್ಸಿಗೆ ಖುಷಿ ನೀಡುವ ಆಟಗಳನ್ನು ಆಡಬಹುದು ಎಂದಾದರೆ ನೀವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗೆ ಹೆಚ್ಚು ವ್ಯಯಿಸುತ್ತೀರಿ.

ಕನಿಷ್ಠ ಕೆಲಸ ಮಾಡುವ, ನಿಮ್ಮ ಅಗತ್ಯಗಳನ್ನು ಪೂರೈಸುವ, ಆಧುನಿಕ ತಂತ್ರಜ್ಞಾನಕ್ಕೆ ಕೂಡಲೇ ತೆರೆದುಕೊಳ್ಳಲು ಮನಸಿಲ್ಲದಿರುವವರಿಗೆ ಬಜೆಟ್‌ ಫೋನ್‌ಗಳು ಉತ್ತಮ.

ಸ್ಮಾರ್ಟ್‌ಫೋನ್‌ ಆಯ್ಕೆ ಹೇಗೆ?

* ವೈರ್‌ಕಟರ್ ಸಂಸ್ಥೆ ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಗೆ ಬಿಡುಗಡೆಯಾದ ವಿವಿಧ ಕಂಪೆನಿಗಳ ಕಡಿಮೆ ಬೆಲೆಯ ಅಗ್ರ 20 ಸ್ಮಾರ್ಟ್‌ಫೋನ್‌ಗಳನ್ನು ಪರೀಕ್ಷಿಸಿ, ಕೆಲವುಗಳ ಬಗ್ಗೆ ವಿವರಿಸಿದೆ.

* ಮೊಟೊರೊಲಾ ಕಂಪೆನಿಯ ಮೊಟೊ ಜಿ5 ಪ್ಲಸ್‌: ಅಂದಾಜು ₹15 ಸಾವಿರ. ಇದು ಉತ್ತಮ ಗುಣಮಟ್ಟದ ಕ್ಯಾಮೆರಾ, 5.2 ಇಂಚಿನ ಸ್ಕ್ರೀನ್‌, ಫಾಸ್ಟ್‌ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಮತ್ತು ಸಾಕಷ್ಟು ಸ್ಟೋರೇಜ್‌ ಮೆಮೊರಿ ಹೊಂದಿದೆ. ಇದಕ್ಕಿಂತ ಸ್ವಲ್ಪ ಹೆಚ್ಚು ಎನಿಸುವ ₹20 ಸಾವಿರದ ಮೊಟೊ ಎಕ್ಸ್‌4 ಸ್ಮಾರ್ಟ್‌ಫೋನ್‌, ವಾಟರ್‌–ರೆಸಿಸ್ಟೆಂಟ್‌ ಗುಣ ಹೊಂದಿದೆ.

* ಹುವಾವೆ ಕಂಪೆನಿಯ ₹13 ಸಾವಿರದ ಹಾನರ್ 7ಎಕ್ಸ್‌ ಸ್ಮಾರ್ಟ್‌ಫೋನ್‌ ಉತ್ತಮ ಗುಣಮಟ್ಟದ ಕ್ಯಾಮೆರಾ, ಮೊಟೊ ಜಿ5 ಪ್ಲಸ್‌ಗಿಂತ ದೊಡ್ಡ ಸ್ಕ್ರೀನ್‌ ಹೊಂದಿದೆ. ಆದರೆ, ಇದು ಹಳೆಯ ಸ್ವರೂಪದ ಆ್ಯಂಡ್ರಾಯ್ಡ್‌ ಒಳಗೊಂಡಿದೆ.

* ನೀವೇನಾದರೂ ಐಫೋನ್‌ ಕೊಳ್ಳಲು ಮನಸು ಮಾಡಿದರೆ, ಹಳೆಯ ಮಾದರಿಯ ಐಫೋನ್‌ಗಳನ್ನು ಖರೀದಿಸಿ. ಆ್ಯಪಲ್ ಕಂಪೆನಿ 2015ರಲ್ಲಿ ಬಿಡುಗಡೆ ಮಾಡಿದ ಐಫೋನ್‌ 6ಎಸ್‌ ಅನ್ನು ಈಗಲೂ ಮಾರಾಟ ಮಾಡುತ್ತಿದೆ. ಇದು ಗುಣಮಟ್ಟದ ಕ್ಯಾಮೆರಾ ಮತ್ತು ಉತ್ತಮ ಸ್ಕ್ರೀನ್‌ ಹೊಂದಿದೆ. ಆ್ಯಪಲ್ ಮೂಲಕ ಖರೀದಿಸಿದರೆ ₹29 ಸಾವಿರ ಇದ್ದು, ಇತರೆಡೆಗಳಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ದೊರೆಯಬಹುದು. ಆ್ಯಪಲ್‌ ಫೋನ್‌ಗಳ ಹೆಗ್ಗಳಿಕೆ ಏನೆಂದರೆ ಕಂಪೆನಿಯು ಐದು ವರ್ಷಗಳವರೆಗೆ (ಅಂದರೆ 2020ರವರೆಗೆ) ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಸಹಕಾರ ನೀಡುತ್ತದೆ. ಒಟ್ಟಾರೆ ಹಿಂದಿಗಿಂತ ಈಗ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯಾಗಿದ್ದು, ಕನಿಷ್ಠ ಫೀಚರ್‌ಗಳಿದ್ದರೆ ಸಾಕು ಎನ್ನುವವರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವುದು ವಾಸಿ.

ಬ್ರಿಯಾನ್‌ ಎಕ್ಸ್‌. ಚೆನ್‌(ನ್ಯೂಯಾರ್ಕ್‌ ಟೈಮ್ಸ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry