ಪ್ರಶ್ನೋತ್ತರ ಉಳಿಕೆ

7

ಪ್ರಶ್ನೋತ್ತರ ಉಳಿಕೆ

Published:
Updated:
ಪ್ರಶ್ನೋತ್ತರ ಉಳಿಕೆ

ಪಲ್ಲವಿ, ಬೆಂಗಳೂರು

* ಪ್ರಶ್ನೆ:ನಾನು ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವೆ. ವಿವಿಧ ಕಡಿತಗಳ ನಂತರ ₹ 15,000 ಕೈಗೆ ಬರುತ್ತದೆ. ಪಿತ್ರಾರ್ಜಿತ ಆಸ್ತಿಭಾರದಿಂದ ₹ 40 ಲಕ್ಷ ಬಂದಿದ್ದು, ವಿವಿಧ ಖಾಸಗಿ ಬ್ಯಾಂಕುಗಳ ನಿಶ್ಚಿತ ಠೇವಣಿಯಲ್ಲಿ ವಿನಿಯೋಗಿಸಿರುತ್ತೇನೆ. ಇದರಿಂದ ಬಂದ ಬಡ್ಡಿ ಹಣಕ್ಕೆ T.D.S. ಕಡಿತವಾಗುತ್ತದೆ. ನನ್ನ ಆದಾಯ ಮೂಲ ಸಂಬಳ ಹಾಗೂ ಬಡ್ಡಿ ಆಗಿರುವುದರಿಂದ Income Tax Return ಸಲ್ಲಿಸಬೇಕೇ? ಇದಕ್ಕೆ ಆದಾಯದ ಮೊತ್ತ ಎಷ್ಟಿರಬೇಕು. ಠೇವಣಿ ಅಲ್ಲದೆ ಬೇರಾವ ಮೂಲಗಳು ಹೆಚ್ಚಿನ ಆದಾಯ ಕೊಡುತ್ತವೆ ಹಾಗೂ ಸುರಕ್ಷಿತವಾಗಿವೆ ಎನ್ನುವುದರ ಮಾಹಿತಿ ಕೊಡಿ.

ಉತ್ತರ: ಹಿರಿಯ ನಾಗರಿಕರಲ್ಲದ ನಿಮ್ಮಂತ ವ್ಯಕ್ತಿಗಳು ವಾರ್ಷಿಕ ಒಟ್ಟು ಆದಾಯ (ನಿಮ್ಮ ವಿಚಾರದಲ್ಲಿ ಸಂಬಳ ಹಾಗೂ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ) ₹ 2.50 ಲಕ್ಷ ದಾಟಿದಲ್ಲಿ ತೆರಿಗೆಗೆ ಒಳಗಾಗುವುದಲ್ಲದೆ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ತೆರಿಗೆ ಉಳಿಸಲು ₹ 1.50 ಲಕ್ಷಗಳ ತನಕ 5 ವರ್ಷಗಳ ಬ್ಯಾಂಕ್ ಠೇವಣಿ ಮಾಡಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಲು ಅವಕಾಶವಿದೆ. ಹೀಗೆ ಠೇವಣಿ ಮಾಡಿ ಒಟ್ಟು ಆದಾಯ ₹ 2.50 ಲಕ್ಷಗಳೊಳಗೆ ತಂದರೆ, ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ಆದರೆ ರಿಟರ್ನ್ ಸಲ್ಲಿಸಲೇಬೇಕು. ಇಂದಿನ ದಿನಮಾನದಲ್ಲಿ ಮಧ್ಯಮ ವರ್ಗದ ಜನರಿಗೆ ಸುರಕ್ಷಿತ ಹೂಡಿಕೆ ಎಂದರೆ, ಬ್ಯಾಂಕ್ ಹಾಗೂ ಅಂಚೆ ಕಚೇರಿ ಠೇವಣಿಗಳು.

ರಾಮಕೃಷ್ಣ. ಎಲ್., ರಾಯಚೂರು

* ಪ್ರಶ್ನೆ: ಪ್ರಶ್ನೆ: ನಾನು ನಿವೃತ್ತ ನೌಕರ. ನನ್ನ ಪಿಂಚಣಿ ₹ 15,444. ನಾನು ನಿರುದ್ಯೋಗಿಗಳಾದ ಇಬ್ಬರು ಮಕ್ಕಳ ಹೆಸರಿಗೆ ತಲಾ ₹ 15 ಲಕ್ಷ ಹಾಗೂ ₹ 10 ಲಕ್ಷ ಮತ್ತು ಹೆಂಡತಿ ಹೆಸರಿಗೆ ₹ 10 ಲಕ್ಷ ಬ್ಯಾಂಕಿನಲ್ಲಿ ಇಡಲು ತೀರ್ಮಾನಿಸಿದ್ದೇನೆ. ತೆರಿಗೆ ವಿನಾಯಿತಿ ಹಾಗೂ ರಿಟರ್ನ್ ತುಂಬುವ ಕೆಲಸದಿಂದ ಪಾರಾಗಲು ಮಾರ್ಗದರ್ಶನ ಮಾಡಿರಿ.

ಉತ್ತರ: ನೀವು ನಿಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ ಕ್ರಮವಾಗಿ ₹ 15 ಲಕ್ಷ ಹಾಗೂ ₹ 10 ಲಕ್ಷ ಠೇವಣಿ ಇರಿಸಿರಿ. ಹೀಗೆ ಮಾಡಿದರೆ ಠೇವಣಿಯಿಂದ ಬರುವ ಬಡ್ಡಿಗೆ ನೀವು ತೆರಿಗೆ ಕೊಡುವ ಅವಶ್ಯವಿಲ್ಲ. ರಿಟರ್ನ್  ತುಂಬು ಅವಶ್ಯವೂ ಇಲ್ಲ. ನೀವು 15,444 ಪಿಂಚಣಿ ಪಡೆಯುವುದರಿಂದ ತೆರಿಗೆ ಉಳಿಸಲು ₹ 10 ಲಕ್ಷ ನಿಮ್ಮ ಹೆಂಡತಿ ಹೆಸರಿಗೆ ವರ್ಗಾಯಿಸುವ ಅವಶ್ಯವಿಲ್ಲ. ಇಲ್ಲಿ ಬರುವ ಬಡ್ಡಿ ಹಾಗೂ ನಿಮಗೆ ಬರುವ ಪಿಂಚಣಿ ಮೊತ್ತ ವಾರ್ಷಿಕವಾಗಿ ₹ 3 ಲಕ್ಷದೊಳಗೆ ಇರುವುದರಿಂದ, ನೀವು ಕೂಡಾ ಆದಾಯ ತೆರಿಗೆಗೆ ಒಳಗಾಗುವುದಿಲ್ಲ, ಜೊತೆಗೆ ರಿಟರ್ನ್ ತುಂಬುವ ಅವಶ್ಯವಿಲ್ಲ.

ಹೆಸರು– ಊರು ಬೇಡ

* ಪ್ರಶ್ನೆ: ನನ್ನೊಡನೆ  ₹ 10 ಲಕ್ಷ ಬ್ಯಾಂಕ್ ಠೇವಣಿ ಇದೆ. ಐ.ಟಿ. ರಿಟರ್ನ್ ಏಕೆ ತುಂಬಲಿಲ್ಲ ಎಂಬುದಾಗಿ  ನೋಟಿಸ್ ಬಂದಿದೆ. ಅದಕ್ಕೆ ಉತ್ತರಿಸಿದ್ದೇನೆ. ಅವರಿಂದ ಉತ್ತರ ಇಲ್ಲ. ನಾನು ನಿವೃತ್ತ ಶಿಕ್ಷಕ. ವಯಸ್ಸು 70. ಬ್ಯಾಂಕಿಗೆ 15ಎಚ್ ಪ್ರತೀ ವರ್ಷ ಸಲ್ಲಿಸುತ್ತೇನೆ. ನನ್ನ ವಾರ್ಷಿಕ ಪಿಂಚಣಿ  ₹ 3 ಲಕ್ಷದೊಳಗಿದೆ. ನಾನು ಪ್ರತೀ ವರ್ಷ ಐ.ಟಿ. ರಿಟರ್ನ್ ತುಂಬ ಬೇಕೇ?

ಉತ್ತರ: ನೀವು 15 ಎಚ್ ಬ್ಯಾಂಕಿಗೆ ಸಲ್ಲಿಸುವುದರಿಂದ ಬ್ಯಾಂಕಿನಲ್ಲಿ ನೀವು ಪಡೆಯುವ ಬಡ್ಡಿ ಮೂಲದಲ್ಲಿ ತೆರಿಗೆ ಮುರಿಯುವುದಿಲ್ಲವಾದರೂ, ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಎಷ್ಟು ಎನ್ನುವುದನ್ನು ಪ್ರಶ್ನೆಯಲ್ಲಿ ತಿಳಿಸಿಲ್ಲ. ಒಟ್ಟಿನಲ್ಲಿ ನಿಮ್ಮ ಆದಾಯ (Gross Income) ವಾರ್ಷಿಕವಾಗಿ ₹ 3 ಲಕ್ಷ ದಾಟಿದಲ್ಲಿ,  ₹ 3 ಲಕ್ಷಗಳಿಗೂ ಮಿಕ್ಕಿದ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಒಟ್ಟು ಆದಾಯ ಪರಿಗಣಿಸುವಾಗ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿ ಎರಡೂ ಲೆಕ್ಕ ತೆಗೆದುಕೊಳ್ಳಬೇಕಾಗುತ್ತದೆ. ತೆರಿಗೆ ಉಳಿಸಲು ಸೆಕ್ಷನ್ 80 ಸಿ. ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಬ್ಯಾಂಕ್ ಠೇವಣಿ ಮಾಡಬಹುದು. ಏನೇ ಇರಲಿ ಓರ್ವ ವ್ಯಕ್ತಿಯ ಒಟ್ಟು ಆದಾಯ ತನ್ನ ಮಿತಿಗಿಂತ ಹೆಚ್ಚಿಗೆ ಪಡೆದಲ್ಲಿ ತೆರಿಗೆಗೆ ಒಳಗಾಗದಿದ್ದರೂ, ಐ.ಟಿ. ರಿಟರ್ನ್ ತುಂಬಬೇಕು.

ಲೀನಾ, ಮಂಗಳೂರು

* ಪ್ರಶ್ನೆ: ನಾನು 84 ವರ್ಷ ವರ್ಷದ ನಿವೃತ್ತ ಶಿಕ್ಷಕಿ. ನನ್ನ ತಿಂಗಳ ಪಿಂಚಣಿ  ₹ 17,000. ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಂದ ಸಿಗುವ ಒಟ್ಟು ಬಡ್ಡಿ  ₹ 3.50 ಲಕ್ಷ. ನನಗೆ ಆದಾಯ ತೆರಿಗೆ ಬರುತ್ತದೆಯೇ. ಐ.ಟಿ. ರಿಟರ್ನ್ ತುಂಬಬೇಕೇ  ತಿಳಿಸಿರಿ. ಈ ವರ್ಷ ಜನಸಾಮಾನ್ಯರ ಆದಾಯ ತೆರಿಗೆ ಮಿತಿ  ₹ 2.50 ಲಕ್ಷ ಅಥವಾ  ₹ 3 ಲಕ್ಷ ತಿಳಿಸಿ

ಉತ್ತರ: 60 ವರ್ಷದೊಳಗಿರುವವರು  ₹ 2.50 ಲಕ್ಷಗಳ ತನಕ, 60–80 ವರ್ಷಗಳ ಅಂತರದಲ್ಲಿರುವವರು  ₹ 3 ಲಕ್ಷ, 80 ದಾಟಿದವರು  ₹ 5 ಲಕ್ಷಗಳ ತನಕ ಆದಾಯ ತೆರಿಗೆ ಮಿತಿಯಲ್ಲಿರುತ್ತಾರೆ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ  ₹ 2,04,000. ಬಡ್ಡಿ ಆದಾಯ  ₹ 3.50 ಲಕ್ಷ. ನಿಮ್ಮ ಒಟ್ಟು ವಾರ್ಷಿಕ ವರಮಾನ  ₹ 5,54,000 ಸಾವಿರಕ್ಕೆ ತೆರಿಗೆ ಸಲ್ಲಿಸಬೇಕು. ತೆರಿಗೆ ಉಳಿಸಲು  ₹ 54,000, 5 ವರ್ಷಗಳ ಬ್ಯಾಂಕ್ ಠೇವಣಿ ಮಾಡಬಹುದು. ಹೀಗೆ ಠೇವಣಿ ಮಾಡಿದರೂ, ನಿಮ್ಮ ಒಟ್ಟು ಆದಾಯ  ₹ 5 ಲಕ್ಷ ದಾಟಿರುವುದರಿಂದ ನೀವು ಐ.ಟಿ. ರಿಟರ್ನ್ ಸಲ್ಲಿಸಬೇಕಾಗುತ್ತದೆ. ನಿಮಗೆ ತುಂಬಿದ ಜೀವನ ಕರುಣಿಸಿದ ಭಗವಂತ ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.

ಎಂ.ಎಸ್. ವೀರೇಶಯ್ಯ, ದಾವಣಗೆರೆ

* ಪ್ರಶ್ನೆ: ನಾನು ಅಕ್ಟೋಬರ್ 2016ರಲ್ಲಿ ಗೃಹ ನಿರ್ಮಾಣ ಸಂಬಂಧ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಸಾಲ ಮಂಜೂರಾತಿ ಸಮಯದಲ್ಲಿ ಬಡ್ಡಿದರ ಶೇ 9.55 ಇರುತ್ತದೆ. ಆದರೆ ಕೆನರಾ ಬ್ಯಾಂಕು ಇತ್ತೀಚೆಗೆ ಗೃಹಸಾಲದ ಬಡ್ಡಿದರ ಶೇ 8.60ಕ್ಕೆ ಇಳಿಸಿದ್ದು, ನಾನು ಪಡೆದಿರುವ ಸಾಲಕ್ಕೆ ದಿನಾಂಕ 4–7–2017 ವರೆಗೂ ಶೇ 9.55 ರಂತೆ ಬಡ್ಡಿಯನ್ನು ಪಾವತಿಸುತ್ತಿದ್ದೇನೆ. ನಾನು ಸಾಕಷ್ಟು ಮನವಿ ಮಾಡಿಕೊಂಡರೂ, ಅಕ್ಟೋಬರ್ 2016 ರಿಂದ ಅಕ್ಟೋಬರ್ 2017ರ ವರೆಗೆ ಒಂದು ವರ್ಷದ ನಂತರ ನಾನು ಪಡೆದಿರುವ ಸಾಲಕ್ಕೆ ಪ್ರಸ್ತುತ ಬಡ್ಡಿದರ ಅನ್ವಯವಾಗುತ್ತದೆ ಅಂತಾ ತಿಳಿಸಿರುತ್ತಾರೆ. ನನಗೆ ಮಾರ್ಗದರ್ಶನ ಮಾಡಿ

ಉತ್ತರ: ಬ್ಯಾಂಕುಗಳಲ್ಲಿ ಗೃಹಸಾಲ ಪಡೆಯುವಾಗ ಬದಲಾಗುವ ಬಡ್ಡಿದರ (F* oating Rate of Interest) ಪಡೆದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್,  ಬ್ಯಾಂಕುಗಳಿಗೆ ನೀಡುವ ಸಾಲನ ಮೇಲಿನ (Repo Rate) ಬಡ್ಡಿ ಕಡಿಮೆ ಮಾಡಿದಾಗ, ಆ ಅವಧಿಯಿಂದ ತಗ್ಗಿದ ಬಡ್ಡಿದರ ಗ್ರಾಹಕರಿಗೆ ಹಾಕುತ್ತಾರೆ. ಒಟ್ಟಿನಲ್ಲಿ, ಗೃಹಸಾಲ ಪಡೆಯುವಾಗ ಇರುವ ಬಡ್ಡಿದರ, ಆರ್.ಬಿ.ಐ. ಬಡ್ಡಿ ದರ ಇಳಿಸುವ ತನಕ ಬದಲಾಗುವುದಿಲ್ಲ.

ಎಂ. ಮಲ್ಲಿಕಾರ್ಜುನ, ಬೆಳಗಾವಿ

* ಪ್ರಶ್ನೆ: ನಾನು ಇತ್ತೀಚೆಗೆ ನಿವೃತ್ತನಾದೆ. ನಾನು ಅಂಗವಿಕಲ. ನಿವೃತ್ತಿಯಿಂದ  ₹ 35 ಲಕ್ಷ ಬಂದಿದೆ. ನನ್ನ ಪಿಂಚಣಿ  ₹ 15,396. ಇದರಲ್ಲಿ  ₹ 15 ಲಕ್ಷವನ್ನು ನನ್ನ ಹೆಸರಿನಲ್ಲಿ ಠೇವಣಿ ಮಾಡಿದ್ದೇನೆ. ಉಳಿದ ಹಣ ಎಲ್ಲಿ ಇರಿಸಿದರೆ ಆದಾಯ ಠೇವಣಿಯಿಂದ ವಿನಾಯಿತಿ ಪಡೆಯಬಹುದು. ನನಗೆ 3 ಜನ ಮಕ್ಕಳು. ಒಬ್ಬನಿಗೆ ಮದುವೆ ಆಗಿದೆ. ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಿದರೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?‌

ಉತ್ತರ: ನೀವು ಅಂಗವಿಕಲರಾದ್ದರಿಂದ ವಾರ್ಷಿಕ  ₹ 3 ಲಕ್ಷದ ಜೊತೆಗೆ, ಸೆಕ್ಷನ್ 80 ಯು, ಆಧಾರದ ಮೇಲೆ  ₹75,000 ಹೆಚ್ಚಿನ ವರಮಾನದ ವರೆಗೆ, ಅಂದರೆ  ₹ 3.75 ಲಕ್ಷ ಆದಾಯದ ತನಕ ತೆರಿಗೆ ಕೊಡುವ ಅಗತ್ಯವಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ  ₹ 1,84,752,  ₹ 15 ಲಕ್ಷ ಠೇವಣಿ ಮೇಲಿನ ಬಡ್ಡಿ, ಶೇ 7 ರಂತೆ  ₹ 1,05,000.  ಒಟ್ಟು ಆದಾಯ ₹ 2,89,752. ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ರಿಟರ್ನ್ ತುಂಬುವ ಅವಶ್ಯವಿಲ್ಲ. ಉಳಿದ ಹಣ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಿರಿ. ಇಲ್ಲಿ ಬರುವ ಬಡ್ಡಿ ಆದಾಯ ನಿಮ್ಮ ಆದಾಯಕ್ಕೆ ಸೇರಿಸುವ ಅವಶ್ಯವಿಲ್ಲ.

ಕೆ.ಜಿ. ವಿಜಯ ಶೇಖರ, ಹಳಿಯಾಳ

* ಪ್ರಶ್ನೆ: ನನ್ನ ವಯಸ್ಸು 62. NWKRTC ಯಿಂದ ನಿವೃತ್ತಿ. ನಿವೃತ್ತಿ ವೇತನ ₹ 2,233.  ನಿವೃತ್ತಿಯಿಂದ ಬಂದ ಹಣದಿಂದ  ₹ 14 ಲಕ್ಷ ಅಂಚೆ ಕಚೇರಿ 5 ವರ್ಷಗಳ ಠೇವಣಿಯಲ್ಲಿರಿಸಿ ತಿಂಗಳಿಗೆ  ₹ 10,033 ಪಡೆಯುತ್ತಿದ್ದೇನೆ. ಈ ಹಣ 5 ವರ್ಷಗಳ ಆರ್.ಡಿ. ಮಾಡಿದ್ದೇನೆ. ಪ್ರಶ್ನೆ: 1. ಇದರಿಂದ ಬರುವ ಆದಾಯಕ್ಕೆ ತೆರಿಗೆ ಇದೆಯೇ. 2. ರಿಟರ್ನ್ ತುಂಬಬೇಕಾ 3. ತೆರಿಗೆ ಬರುವಲ್ಲಿ ವಿನಾಯಿತಿ ಪಡೆಯುವ ಬಗೆ– ಇವೆಲ್ಲವನ್ನು ವಿವರವಾಗಿ ತಿಳಿಸಿರಿ. 2016ರಲ್ಲಿ  ಗ್ರ್ಯಾಚುಟಿ  ₹ 13,00,472 ಬಂದಿದ್ದು,  ₹ 3,00,472ಕ್ಕೆ ತೆರಿಗೆ ಕೊಟ್ಟಿದ್ದೇನೆ. ಈಗ ಗ್ರಾಚ್ಯುಟಿ ಮಿತಿ  ₹ 20 ಲಕ್ಷವಾಗಿದ್ದು, ಉಳಿಕೆ ಹಣ ನನಗೆ ಸಿಗಬಹುದೇ, ತುಂಬಿದ ತೆರಿಗೆ ವಾಪಸು ಸಿಗಬಹುದೇ?

ಉತ್ತರ: ನಿಮ್ಮ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿಯಿಂದ ನೀವು ವಾರ್ಷಿಕವಾಗಿ  ₹ 1,47,191 ಮಾತ್ರ ಪಡೆಯುತ್ತಿದ್ದು, ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಜೊತೆಗೆ ರಿಟರ್ನ್ ತುಂಬುವ ಅವಶ್ಯವೂ ಇಲ್ಲ. ನೀವು 2016 ರಲ್ಲಿ ನಿವೃತ್ತರಾದ್ದರಿಂದ  ₹ 20 ಲಕ್ಷಕ್ಕೆ ಹೆಚ್ಚಿಸಿದ ಗ್ರ್ಯಾಚುಟಿ ಸೌಲಭ್ಯಕ್ಕೆ ನೀವು ಅರ್ಹರಾಗುವುದಿಲ್ಲ ಹಾಗೂ ಈ ಬಾಬ್ತು ಕಟ್ಟಿದ ತೆರಿಗೆ ವಾಪಸು ಪಡೆಯಲು ಅವಕಾಶವಿಲ್ಲ.

ಸೀತಾರಾಮ ಭಟ್, ಮಾಳ (ಕಾರ್ಕಳ)

* ಪ್ರಶ್ನೆ: ನಿಮ್ಮ ಸಲಹೆಗಳನ್ನು ನಾನೂ ಪ್ರತೀ ಬುಧವಾರ ಓದುತ್ತೇನೆ. ಈ ಪತ್ರದ ಲಗ್ತು paper Cutting.... BSE-NSE-SEBI ಇವುಗಳೆಲ್ಲ ಏನೆಂಬುದು ತಿಳಿಯಲಿಲ್ಲ.  ಸೂಚ್ಯಂಕ ಏರಿಳಿತ ಇವೆಲ್ಲಾ ಜನಸಾಮಾನ್ಯರಿಗೆ ಅರಿವಾಗುವಂತೆ ತಿಳಿಸಿ?

ಉತ್ತರ: ನೀವು ಕಾರ್ಕಳ ತಾಲ್ಲೂಕು ಒಂದು ಹಳ್ಳಿಯಲ್ಲಿದ್ದು, ಪ್ರಜಾವಾಣಿ ಓದುತ್ತಿರುವುದು ಹಾಗೂ ಪ್ರಶ್ನೆ ಕೇಳಿರುವುದು ನನಗೆ ನಿಜವಾಗಿ ಖುಷಿ ಕೊಟ್ಟಿದೆ. NSE-BSE-SEBI ಈ ಮೂರು ಸಂಸ್ಥೆಗಳು ಷೇರು ಮಾರುಕಟ್ಟೆಗೆ ಸಂಬಂಧಿಸಿದೆ. NSE– Nationa* Stock Exchange, BSE–Bombay Stock Exchange, SEBI– Security Exchange Board of India. ಬಿ.ಎಸ್.ಇ. ಹಾಗೂ ಎನ್.ಎಸ್.ಇ.ಗಳು ಷೇರು ಮಾರುಕಟ್ಟೆಗಳು. ಪ್ರತೀ ದಿವಸ –– ಷೇರುಗಳು ಖರೀದಿ ಹಾಗೂ ಮಾರಾಟ ಆಗುತ್ತದೆ. Share Brokers ಮುಖಾಂತರ ಈ ವಹಿವಾಟು ಮಾಡಬಹುದು. ವಹಿವಾಟಿಗೆ ಬ್ರೋಕರ್ಸ್‌ಗಳಿಗೆ ಕಮೀಷನ್ ಕೊಡಬೇಕಾಗುತ್ತದೆ. SEBI, ಕೇಂದ್ರ ಸರ್ಕಾರದ ಒಂದು ಅಂಗ ಸಂಸ್ಥೆ. ಈ ಸಂಸ್ಥೆ BSE-NSE ವಹಿವಾಟುಗಳನ್ನು ಮ್ಯೂಚುವಲ್ ಫಂಡ್‌ಗಳನ್ನು (RBI ಬ್ಯಾಂಕುಗಳನ್ನು ನಿಯಂತ್ರಿಸುವಂತೆ) ನಿಯಂತ್ರಿಸುತ್ತವೆ. ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟದ ಒತ್ತಡ ಹೆಚ್ಚಾದಾಗ, ಸೂಚ್ಯಂಕ (SENSEX) ಕೆಳಗೆ ಬರುತ್ತದೆ ಹಾಗೂ ಖರೀದಿಸುವವರ ಸಂಖ್ಯೆ ಹೆಚ್ಚಾದಾಗ ಸೂಚ್ಯಂಕ ಮೇಲಕ್ಕೆ ಹೋಗುತ್ತದೆ.

ಹೆಸರು ಬೇಡ, ಊರು ತುಮಕೂರು

* ಪ್ರಶ್ನೆ: ನನ್ನ ವಯಸ್ಸು 86. ರೈಲ್ವೆ ನಿವೃತ್ತ ಅಧಿಕಾರಿ. ತಿಂಗಳ ಪಿಂಚಣಿ ₹ 23,600. ನನಗೆ 4 ಜನ ಹೆಣ್ಣುಮಕ್ಕಳು. ನನ್ನ ಹೆಂಡತಿ 10 ವರ್ಷಗಳ ಹಿಂದೆ ವಿಧಿವಶಳಾಗಿದ್ದಾಳೆ. ಈಗ ನನ್ನ ಹೆಸರಿನಲ್ಲಿರುವ ನಿವೇಶನ ಮಾರಾಟ ಮಾಡಬೇಕೆಂದಿದ್ದೇನೆ. ₹ 25 ಲಕ್ಷ ಬರಬಹುದು. ಈ ಹಣ ಹೂಡಿಕೆ ಮಾಡುವುದರಲ್ಲಿ ನಿಮ್ಮ ಸಲಹೆ ಕೋರುತ್ತೇನೆ. ರೂರಲ್‌ ಎಲೆಕ್ಟ್ರಿಫಿಕೇಷನ್‌ ಡಿಪಾಸಿಟ್‌ ಎಂದರೇನು ಇದರಲ್ಲಿ ಹೂಡಿದರೆ ಆದಾಯ ತೆರಿಗೆ ಕೊಡಬೇಕಾಗಿಲ್ಲವೇ?

ಉತ್ತರ: ನೀವು ನಿವೇಶನ ಮಾರಾಟ ಮಾಡಿದಾಗ ಹಾಗೂ ಖರೀದಿಸುವಾಗ ಕೊಟ್ಟ ಹಣ ಇವೆರಡರ ಅಂತರಕ್ಕೆ  ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಬರುತ್ತದೆ. ಆದಾಯ ತೆರಿಗೆ ಬರುವುದಿಲ್ಲ. ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಸೆಕ್ಷನ್‌ 5ಇಸಿ ಅಡಿಯಲ್ಲಿ Rura* E* ectrification Corporationನಲ್ಲಿ ಗರಿಷ್ಠ ₹ 50 ಲಕ್ಷಗಳ ತನಕ ಇರಿಸಿ, ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ವಿನಾಯ್ತಿ ಪಡೆಯಬಹುದು. ಇದೇ ಮಾರ್ಗ ನಿಮಗೆ ಸೂಕ್ತವಾಗಿದೆ. REC ಎಂದರೆ ಇದೊಂದು ಕೇಂದ್ರ ಸರ್ಕಾರದ ಅಂಗ ಸಂಸ್ಥೆ. ಇಲ್ಲಿ ಹಣ ಹೂಡಲು ಭಯಪಡುವ ಅವಶ್ಯವಿಲ್ಲ. ಇದರಲ್ಲಿ ಹೂಡಿದರೆ ಇಲ್ಲಿ ತಿಳಿಸಿದಂತೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಕೊಡುವಂತಿಲ್ಲ. ರೂರಲ್‌ ಎಲೆಕ್ಟ್ರಿಫಿಕೇಷನ್‌ ಅಥವಾ ನ್ಯಾಷನಲ್‌ ಹೈವೇ ಅಥಾರಿಟಿ. ಈ ಎರಡೂ ಸಂಸ್ಥೆ ಭಾರತ ಸರ್ಕಾರದ ಅಂಗ ಸಂಸ್ಥೆಗಳಾಗಿದ್ದು, ನೀವು ಇವೆರೆಡರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು.

ವಿಜಯಕುಮಾರ್‌, ವೈಟ್‌ಫೀಲ್ಡ್‌, ಬೆಂಗಳೂರು

* ಪ್ರಶ್ನೆ: ನಾನು ಬೆಂಗಳೂರಿನಲ್ಲಿ ಉಪಾಹಾರ ಮಂದಿರ (ಹೋಟೆಲ್‌) ಪ್ರಾರಂಭಿಸಬೇಕೆಂದಿದ್ದೇನೆ. ನನ್ನ ಬಳಿ ಇರುವ ಸ್ವಲ್ಪ ಹಣದಿಂದ ಇದು ಸಾಧ್ಯವಾಗಲಾರದು. ಬ್ಯಾಂಕ್‌ ಸಾಲ, ಬಡ್ಡಿದರ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿ?

ಉತ್ತರ: ಬ್ಯಾಂಕುಗಳು ಸಾಲಕೊಡುವ ಮುನ್ನ ನಿಮ್ಮ ಯೋಜನೆಯ ವಿವರಣೆ ಕೇಳುತ್ತಾರೆ ಹಾಗೂ ಯೋಜನೆ ಆರ್ಥಿಕವಾಗಿ ಸಾಧ್ಯವಾಗಬಹುದೇ ಎನ್ನುವುದನ್ನು ಪರಿಶೀಲಿಸುತ್ತಾರೆ. ವ್ಯಕ್ತಿಯು ಪ್ರಾರಂಭಿಸುವ ಯೋಜನೆಯಲ್ಲಿ ಹಣ ತೊಡಗಿಸಿದಾಗ ಯೋಜನೆ ಯಶಸ್ಸಾಗಿ, ಸಾಲ ಮರುಪಾವತಿಸಬೇಕು ಎನ್ನುವುದೇ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ನಿಮ್ಮ ಹಿಂದಿನ ಅನುಭವ (Previous Experience) ಅಷ್ಟೇ ಮುಖ್ಯವಾಗುತ್ತದೆ. ಇವೆಲ್ಲವೂ ಬ್ಯಾಂಕಿಗೆ ಮನದಟ್ಟಾದಲ್ಲಿ ಪ್ರಧಾನ ಮಂತ್ರಿಯವರ ‘ಮುದ್ರಾ’ ಯೋಜನೆಯಡಿಯಲ್ಲಿ ನೀವು ಸಾಲ ಪಡೆಯಬಹುದು. ಬಡ್ಡಿ ದರ ಶೇ 12. ಮರುಪಾವತಿಸಲು 60–80 ತಿಂಗಳ ಸಮಾನ ಕಂತು (ಇಎಂಐ ಕಂತು ಬಡ್ಡಿ ಸೇರಿ) ಕೊಡುತ್ತಾರೆ. ನೀವು ಈಗಲೇ ಖಾತೆ ಹೊಂದಿದ ಬ್ಯಾಂಕಿನಲ್ಲಿ ಹೆಚ್ಚಿನ ವಿಚಾರಗಳಿಗೆ ಸಂಪರ್ಕಿಸಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry