ವಿದ್ಯಾರ್ಥಿಗಳು ವಿಶ್ವ ಸಾಹಿತ್ಯ ಶೋಧಿಸಲಿ

7
ವಿಶ್ವ ಸಾಹಿತ್ಯ ಅಧ್ಯಯನ ಶಿಬಿರದಲ್ಲಿ ವಿಮರ್ಶಕ ಟಿ.ಪಿ.ಅಶೋಕ ಕರೆ

ವಿದ್ಯಾರ್ಥಿಗಳು ವಿಶ್ವ ಸಾಹಿತ್ಯ ಶೋಧಿಸಲಿ

Published:
Updated:
ವಿದ್ಯಾರ್ಥಿಗಳು ವಿಶ್ವ ಸಾಹಿತ್ಯ ಶೋಧಿಸಲಿ

ಶಿವಮೊಗ್ಗ: ವಿಶ್ವ ಸಾಹಿತ್ಯವು ನಮ್ಮ ಅನುಭವ ಮತ್ತು ಪ್ರಜ್ಞೆಯನ್ನು ವಿಸ್ತರಿಸುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ವಿಮರ್ಶಕ ಟಿ.ಪಿ.ಅಶೋಕ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಇಂಗ್ಲಿಷ್ ವಿಭಾಗಮತ್ತು ನೀನಾಸಂ ಪ್ರತಿಷ್ಠಾನದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಸಾಹಿತ್ಯ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವ ಸಾಹಿತ್ಯದ ಓದು ನಮ್ಮ ಅನುಭವವನ್ನು ಬೇರೆಯ ಅನುಭವಗಳ ಜತೆಗೆ ಪರೀಕ್ಷಿಸಿಕೊಳ್ಳಲು ಹಾಗೂ ನಮ್ಮ ಬದುಕಿನ ದಾರಿಯನ್ನು ನಿರ್ಮಾಣ ಮಾಡಿಕೊಳ್ಳಲು ನೆರವಾಗುತ್ತದೆ. ವಿಶ್ವ ಸಾಹಿತ್ಯದಿಂದ ಕಾಲ, ದೇಶದ ಪರಿಧಿ ಮೀರಿ ವಿಸ್ತಾರವಾದ ದೃಷ್ಟಿಕೋನ ಬೆಳೆಸಿಕೊಳ್ಳ

ಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಸಾಹಿತ್ಯ ಜಗತ್ತಿನ ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ವಿಶ್ವ ಸಾಹಿತ್ಯ ಪರಿಚಯಿಸುವ ಪ್ರವೇಶದ್ವಾರಗಳನ್ನು ಶೋಧಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು’ ಎಂದು ಹೇಳಿದರು.

ಗೋಷ್ಠಿಯಲ್ಲಿ ‘ವಸಾಹತು ಸಾಹಿತ್ಯ ಮತ್ತು ಪ್ರೇಮ್‌ಚಂದ್ ಕಥೆಗಳು’ ಕುರಿತು ಮಾತನಾಡಿದ ಅವರು, ‘ಬ್ರಿಟಿಷರ ಆಳ್ವಿಕೆಯಿಂದಾಗಿ ಭಾರತೀಯರ ಬದುಕು ಹಲವು ರೀತಿಯಲ್ಲಿ ಪಲ್ಲಟವಾಗಿರುವುದನ್ನು ನಾವು ನೋಡಿದ್ದೇವೆ. ಅಂತಹ ಕಥನಗಳನ್ನು ಹಲವಾರು ಭಾರತೀಯ ಬರಹಗಾರರು ಸಮರ್ಥವಾಗಿ ನಿರೂಪಿಸಿದ್ದಾರೆ. ಅಂತಹ ಬರಹಗಾರರಲ್ಲಿ ಪ್ರೇಮಚಂದ್‌ ಪ್ರಮುಖರು. ವಸಾಹತುಶಾಹಿ ಆಕ್ರಮಣವನ್ನು ಏಕರೀತಿಯಲ್ಲಿ ಸ್ವೀಕರಿಸಿಲ್ಲ. ಅದನ್ನು ಮಾಸ್ತಿ, ಕುವೆಂಪು, ಕಾರಂತ, ಪ್ರೇಮಚಂದ್‌, ಅಚಿಬೆ ಅವರ ಬರಹಗಳಲ್ಲಿ ಕಾಣಬಹುದು. ಈ ಎಲ್ಲಾ ಬರಹಗಾರರು ತಮ್ಮ ಸಂಸ್ಕೃತಿಯನ್ನು ಹೀಗಳೆಯಲೂ ಇಲ್ಲ ಮತ್ತು ಹೊಗಳಿಲ್ಲ. ಆದರೆ ಬಹಳ ಸೂಕ್ಷ್ಮತೆಯಿಂದ ವಾಸ್ತವತೆಯನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿ, ‘ವಿಶ್ವ ಸಾಹಿತ್ಯದ ಓದಿನ ಮೂಲಕ ನಾವು ಜಾಗತಿಕ ಜಗತ್ತು ಮತ್ತು ಮಾನಸಿಕ ಜಗತ್ತಿನ ತಾಕಲಾಟಗಳನ್ನು ಅರ್ಥಮಾಡಿಕೊಳ್ಳಬಹುದು. ಹಾಗಾಗಿ ವಿಶ್ವಸಾಹಿತ್ಯದ ಓದು ಎಂದರೆ ಕೇವಲ ಒಂದಷ್ಟು ಬರಹಗಾರರ ಕೃತಿಗಳನ್ನು ಓದಿದಂತಲ್ಲ. ಬದಲಾಗಿ ಅದು ವಿಶ್ವದ ಇತಿಹಾಸ, ರಾಜ್ಯಶಾಸ್ತ್ರ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಹಲವು ವಿಚಾರಗಳನ್ನು ಓದಿದಂತೆ’ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ‘ಷೇಕ್ಸ್‌ಪಿಯರ್‌ ಅನುವಾದಗಳು’ ವಿಷಯದ ಕುರಿತು ಮಾತನಾಡಿ, ‘ಷೇಕ್ಸ್‌ಪಿಯರ್‌ ವಸಾಹತು ಶಾಹಿಯ ಮೂಲಕ ಹಾಗೂ ಪಠ್ಯಕ್ರಮದ ಭಾಗವಾಗಿ ತರಗತಿಗಳ ಮೂಲಕ ನಾವು ಷೇಕ್ಸ್‌ಪಿಯರ್‌ ಅವರನ್ನು ತಿಳಿದುಕೊಂಡಿದ್ದೇವೆ. ಭಾರತದ ವಿವಿಧ ಸಂಸ್ಕೃತಿಗಳು ಷೇಕ್ಸ್‌ಪಿಯರ್‌ ಕೃತಿಗಳೊಂದಿಗೆ ಅನುಸಂಧಾನ ಮಾಡಿವೆ. ಷೇಕ್ಸ್‌ಪಿಯರ್‌ ಕೃತಿಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಪ್ರಶ್ನೆ ಬಹಳ ಮುಖ್ಯವಾಗಿ ಎದುರಾಗಿದೆ. ಆದರೂ ಭಾರತೀಯ ಸಾಮಾಜಿಕ ಸಂದರ್ಭಕ್ಕೆ ಅನುಗುಣವಾಗಿ ಷೇಕ್ಸ್‌ಪಿಯರ್‌ ಕೃತಿಗಳನ್ನು ಹಲವಾರು ಭಾರತೀಯ ಭಾಷೆಗಳಲ್ಲಿ ಹಾಗೂ ಭಿನ್ನ ಬಗೆಯಲ್ಲಿ ಅನುವಾದಗೊಳಿಸಲಾಗಿದೆ’ ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಚ್.ಪಾಂಡುರಂಗನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಮಾಧವ ಚಿಪ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಅವಿನಾಶ್, ಇಂಗ್ಲಿಷ್ ಅಧ್ಯಯನ ವಿಭಾಗದ ಸಂಯೋಜಕಿ ಡಾ.ಎಂ.ಕೆ.ವೀಣಾ, ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ ಡಾ.ಎಸ್.ಸಿರಾಜ್ ಅಹಮದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry