ಸಂಶೋಧನೆಯ ಕೃಷಿಗಿಳಿದ ರೈತರು

6

ಸಂಶೋಧನೆಯ ಕೃಷಿಗಿಳಿದ ರೈತರು

Published:
Updated:
ಸಂಶೋಧನೆಯ ಕೃಷಿಗಿಳಿದ ರೈತರು

ಓದಿ ಪದವಿ ಪಡೆಯಲು ವಯಸ್ಸಿನ ಮಿತಿಯಿಲ್ಲ. ಈ ಮಾತಿಗೆ, ‘ಹೊಸ ಸಂಶೋಧನೆಗೆ ವಯಸ್ಸಿನ ಹಂಗಿಲ್ಲ’ ಎಂದೂ ಹೊಸದಾಗಿ ಸೇರಿಸಬಹುದು. ಹೊಸದರ ಬಗ್ಗೆ ಅತೀವ ತುಡಿತವಿದ್ದರೆ ಯಾವುದೇ ವಯಸ್ಸಿನಲ್ಲೂ ಏನಾದರೂ ಕಂಡುಹಿಡಿಯಬಹುದು. ಇದಕ್ಕೆ ಸಾಕ್ಷಿಯಾಗಿದ್ದಾರೆ ಗುಜರಾತ್‌ನ ಜುನಾಗಡ ಭಾಂಜಿಬಾಯ್‌ ಮಥುಕಿಯಾ ಅವರು. ತಮ್ಮ ಜೀವಮಾನವಿಡೀ ರೈತ ಸ್ನೇಹಿ ಮತ್ತು ಪರಿಸರ ಸ್ನೇಹಿ ಸಂಶೋಧನೆಗಳಲ್ಲೇ  ಇವರು ತೊಡಗಿಸಿಕೊಂಡಿದ್ದಾರೆ.  ಧಾನ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡುವ ತಂತ್ರಜ್ಞಾನ, ಶೇಂಗಾ ಬೆಳೆಗಳಿಗೆ ಔಷಧ ಸಿಂಪಡಿಸುವ ಯಂತ್ರಗಳ ಶೋಧನೆಯಲ್ಲೂ ಇವರು ಹೆಸರು ಮಾಡಿದ್ದಾರೆ.

ತಮ್ಮ 80 ನೇ ವಯಸ್ಸಿನಲ್ಲಿ ಇವರು ಕಡಿಮೆ ವೆಚ್ಚದ ಟ್ರ್ಯಾಕ್ಟರ್ ಅನ್ವೇಷಣೆ ಮಾಡಿದ್ದಾರೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ 25ಕ್ಕೂ ಹೆಚ್ಚು ಕಡಿಮೆ ವೆಚ್ಚದ ಚೆಕ್‌ ಡ್ಯಾಂಗಳನ್ನು ಕಟ್ಟಿದ್ದಾರೆ. ಇದರಿಂದಾಗಿ ಇವರು ಇದೀಗ ಇಡೀ ದೇಶದಲ್ಲೇ ಗುರುತಿಸಿಕೊಂಡಿದ್ದಾರೆ. ವಯಸ್ಸು ದೇಹಕ್ಕಾಗಿದೆ, ಆದರೆ ಆಲೋಚನೆಗಳಿಗಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ನೀರಿನ ಕೊರತೆ ಕಲಿಸಿದ ಪಾಠ

ಭಾಂಜಿಭಾಯ್  ಅವರು ಹುಟ್ಟಿ ಬೆಳೆದಿದ್ದು ಸಾಮಾನ್ಯ ಕೃಷಿ ಕುಟುಂಬದಲ್ಲಿ. ಅದೂ ಈ ಕುಟುಂಬ ವಾಸವಿದ್ದುದು  ನೀರಿನ ಕೊರತೆಯ ಪ್ರದೇಶದಲ್ಲಿ. ಇದೇ ಇವರಿಗೆ ಅಣೆಕಟ್ಟು ಕಟ್ಟಿ ನೀರು ಉಳಿಸಿಕೊಳ್ಳಬೇಕು ಎಂಬುದಕ್ಕೆ ಪ್ರೇರಣೆಯಾಯಿತು. ಚೆಕ್ ಡ್ಯಾಂಗಳನ್ನೆಲ್ಲ ಇವರು ಅತ್ಯಾಧುನಿಕ ಸೌಲಭ್ಯದ ಸಹಾಯದಿಂದ ನಿರ್ಮಿಸಿಲ್ಲ. ಬದಲಿಗೆ ಸ್ಥಳೀಯವಾಗಿ ದೊರೆಯವ ಕಲ್ಲು, ಮರಳು ಸಾಮಗ್ರಿ ಮತ್ತು ಕೌಶಲರಹಿತ ಕಾರ್ಮಿಕರ ನೆರವಿನಿಂದ. ಇದೆಲ್ಲಕ್ಕಿಂತ ವಿಶೇಷವಾಗಿ ಈ ಡ್ಯಾಂಗಳು ಕಡಿಮೆ ವೆಚ್ಚದವು. ಕಮಾನು ಆಕಾರದ ಬಂಡ್‌ಗಳನ್ನು ನಿರ್ಮಿಸಲು ಇವರು ಕೇವಲ ನಾಲ್ವರು ಕಾರ್ಮಿಕರನ್ನು ಬಳಸಿ ನಾಲ್ಕು ದಿನದಲ್ಲಿ ಪೂರ್ಣಗೊಳಿಸಿದ್ದಾರೆ. ₹10 ಸಾವಿರದಲ್ಲಿ ನಿರ್ಮಿಸಿದ ಇವುಗಳು ಹಲವು ಎಕರೆಗಳಿಗೆ ನೀರು ಉಣಿಸುತ್ತಿವೆ. ಇದರಿಂದಾಗಿ ನೀರಾವರಿ ಪ್ರದೇಶ ಹಸಿರಿನಿಂದ ನಳನಳಿಸುತ್ತಿದೆ. ಈ ಡ್ಯಾಂಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಜತೆಗೆ, ಇವುಗಳು ಎಂತಹ ನೀರಿನ ಒತ್ತಡವನ್ನೂ ತಡೆಯುವ ಶಕ್ತಿ ಹೊಂದಿವೆ.

ಮೊದಲ ಬಾರಿಗೆ ಇವರು ತಮ್ಮ ಗ್ರಾಮದ ಮೂಲಕ ಹರಿಯುವ ಹಳ್ಳಕ್ಕೆ ಡ್ಯಾಂ ಕಟ್ಟಿದ್ದರು. ಈಗ ಇವರ ವಿಶಿಷ್ಟ ತಂತ್ರಜ್ಞಾನಕ್ಕೆ ಮಾರು ಹೋಗಿರುವ ಇತರ ರೈತರು ಮತ್ತುಕಿಯಾ ಅವರ ಬಳಿ ಬಂದು ತಮ್ಮ ಹೊಲಗಳ ಬದಿಯಲ್ಲಿ ಹರಿಯುವ ಹಳ್ಳಕ್ಕೆ ಡ್ಯಾಂ ಕಟ್ಟಿಕೊಡಬೇಕು ಎಂದು ದುಂಬಾಲು ಬೀಳಲಾರಂಭಿಸಿದ್ದಾರೆ. ಸಾಕಷ್ಟು ಜನ ಪರಸ್ಪರ ಸಹಕಾರ ಪದ್ಧತಿಯಲ್ಲಿ ಚೆಕ್ ಡ್ಯಾಂ ನಿ‌ರ್ಮಿಸಿಕೊಳ್ಳುತ್ತಿದ್ದಾರೆ. ಇದಕ್ಕವರು ಸರ್ಕಾರದ ಯಾವುದೇ ಹಣಕಾಸಿನ ಸಹಾಯದ ನಿರೀಕ್ಷೆಯಲ್ಲೂ ಇರುವುದಿಲ್ಲ.

ಗುಜರಾತ್‌ನ ಜುನಾಗಡ ಜಿಲ್ಲೆಯ ಕಾಲವಾಡ ಗ್ರಾಮದಲ್ಲಿನ ಬಾವಿಗಳು ಈಗ ತುಂಬಿ ತುಳುಕುತ್ತಿವೆ.  ಮಥುಕಿಯಾ ಅವರ ಶ್ರಮದಿಂದಾಗಿ ನಿರ್ಮಾಣವಾಗಿರುವ ಚೆಕ್‌ ಡ್ಯಾಂಗಳೇ ಇದಕ್ಕೆ ಕಾರಣ. ಈ ಪ್ರದೇಶಗಳಲ್ಲಿ ನೀರಿನ ಕೊರತೆ ಮತ್ತು ಬರಗಾಲದಿಂದ ಕಂಗೆಟ್ಟಿದ್ದ ರೈತರು ಕೃಷಿಯನ್ನೇ ತೊರೆದು ವಲಸೆ ಹೋಗಿದ್ದರು. ಆದರೆ ಈಗ ಅವರ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳು ಎದ್ದು ನಿಂತಿವೆ. ಇದರಿಂದಾಗಿ ಅವರಲ್ಲಿ ಕೃಷಿ ಬಗ್ಗೆ ಇದ್ದ  ಅಭಿಪ್ರಾಯವೇ ಬದಲಾಗಿ ಹೋಗಿದೆ.

‘ಭಾಂಜಿಭಾಯ್‌ ಅವರ ಸಂಶೋಧನೆಯಿಂದ ಅನೇಕ ರೈತರ ಜಮೀನಿನಲ್ಲಿದ್ದ ಬಾವಿಗಳು ನೀರಿನಿಂದ ತುಂಬಿವೆ. ಇದರಿಂದಾಗಿ ಅವರು ಯಾವುದೇ ಭಯವಿಲ್ಲದೆ ಬೆಳೆ ಬೆಳೆಯಬಹುದಾಗಿದೆ’ ಎನ್ನುತ್ತಾರೆ ಗುಜರಾತ್‌ ಗ್ರಾಸ್‌ರೂಟ್ಸ್‌ ಆಗುಮೆಂಟೇಷನ್ ನೆಟ್‌ವರ್ಕ್‌ನ ಮುಖ್ಯ ಸಂಶೋಧನಾ ಮ್ಯಾನೇಜರ್‌ ಮಹೇಶ್‌ ಪಟೇಲ್.

ತಮ್ಮ ಕಮಾನು  ಆಕಾರದ ಚೆಕ್‌ ಡ್ಯಾಂನ ಪ್ರಯೋಜನದ ಬಗ್ಗೆ ಮತ್ತುಕಿಯಾ ಅವರು ಹೇಳುವುದು ಹೀಗೆ, ‘ಡ್ಯಾಂಗಳಲ್ಲಿ ನೀರು ಹೆಚ್ಚಾಗಿ ಬದಿಗಳಲ್ಲಿ ಹರಿದು ಹೋಗುವುದನ್ನು ತಡೆಯಬೇಕು. ಇದರಿಂದಾಗಿ ಡ್ಯಾಂ ಬದಿಗಳಲ್ಲಿ ಮಣ್ಣಿನ ಸವಕಳಿ ನಿಲ್ಲುತ್ತದೆ. ಸಾಂಪ್ರದಾಯಿಕವಾಗಿ ನಿರ್ಮಿಸುವ ಡ್ಯಾಂಗಳು ಇದನ್ನು ತಡೆಯುವುದಿಲ್ಲ. ಮಣ್ಣಿನ ಸವಕಳಿ ನಿಂತರೆ ಡ್ಯಾಂನ ಆಯಸ್ಸು ಹೆಚ್ಚುತ್ತದೆ. ಹೆಚ್ಚಿನ ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹರಿಯುವುದಿಲ್ಲ. ಆದ್ದರಿಂದ ನೀರು ಸಂಗ್ರಹಿಸಿಕೊಳ್ಳಬೇಕು. ಚೆಕ್ ಡ್ಯಾಂ ನೀರು ವ್ಯರ್ಥವಾಗುವುದನ್ನು ತಡೆಯುತ್ತದೆ. ಇಲ್ಲದಿದ್ದರೆ ಮುಂಗಾರು ಮುಗಿಯುತ್ತಿದ್ದಂತೆ ನೀರಿನ ಕೊರತೆಯಾಗುತ್ತದೆ’.

ಕಡಿಮೆ ವೆಚ್ಚದ ಟ್ರ್ಯಾಕ್ಟರ್ ಸಂಶೋಧನೆ

ಕೆಲವು ವರ್ಷಗಳ ಹಿಂದೆ ಸೌರಾಷ್ಟ್ರ ಭಾಗದಲ್ಲಿನ ರೈತರು ಶೇಂಗಾ ಬೆಳೆಯಲು ಹರಸಾಹಸ ಪಡುತ್ತಿದ್ದರು. ಬಿತ್ತನೆಗೆ ಹೊಲ ಸಿದ್ಧಪಡಿಸಲು ಅವರು ಹಲವು ತೊಂದರೆ ಎದುರಿಸುತ್ತಿದ್ದರು. ಭಾರೀ ವೆಚ್ಚ ಮಾಡಿ ಅವರೆಲ್ಲ ಟ್ರ್ಯಾಕ್ಟರ್‌ ಖರೀದಿಸಲು ಸಾಧ್ಯವಿರಲಿಲ್ಲ. ಇದನ್ನು ಅರಿತ ಮಥುಕಿಯಾ ಅವರು ಯಾಕೆ ಕಡಿಮೆ ಮೊತ್ತದ ಟ್ರ್ಯಾಕ್ಟರ್ ಸಂಶೋಧನೆ ಮಾಡಬಾರದು ಎಂದು ತೀರ್ಮಾನಿಸಿದರು. ಆಗಲೇ ಮೂಡಿಬಂದಿದ್ದು, ಸಣ್ಣ ರೈತರಿಗಾಗಿ ಕೇವಲ ₹1.6 ಲಕ್ಷ ವೆಚ್ಚದ 10 ಎಚ್‌.ಪಿಯ ಟ್ರ್ಯಾಕ್ಟರ್‌. ಡೀಸೆಲ್ ಎಂಜಿನ್‌ನ ಇವುಗಳಿಗೆ ಜೀಪ್‌ನ ಚಾಸಿ ಬಳಸಲಾಗಿದೆ. ತಮ್ಮ ಮಗ ಹಾಗೂ ಸೋದರಳಿಯನನ್ನು ಬಳಸಿಕೊಂಡು ಮೂರು ಮತ್ತು ನಾಲ್ಕು ಚಕ್ರದ ಟ್ರ್ಯಾಕ್ಟರ್‌ಗಳನ್ನು ತಯಾರು ಮಾಡಿದ್ದಾರೆ. ರೈತರಿಂದ ಇವುಗಳಿಗೆ ಭಾರಿ ಬೇಡಿಕೆ ಬಂದಿದ್ದು, ಇನ್ನಷ್ಟು ಟ್ರ್ಯಾಕ್ಟರ್ ತಯಾರು ಮಾಡುವಲ್ಲಿ ತೊಡಗಿಕೊಳ್ಳಲಿದ್ದಾರೆ.

‘ದೊಡ್ಡ ದೊಡ್ಡ ಕಂಪನಿಗಳು ಹೈ ಪವರ್‌ ಎಂಜಿನ್‌ನ ಟ್ರ್ಯಾಕ್ಟರ್ ತಯಾರಿಸಿ ಲಾಭ ಮಾಡಿಕೊಳ್ಳುತ್ತವೆ. ಆದರೆ ಮತ್ತುಕಿಯಾ ಅವರು ಕಂಡುಹಿಡಿದಿರುವ ಕಡಿಮೆ ವೆಚ್ಚದ ಟ್ರ್ಯಾಕ್ಟರ್ ಸಣ್ಣ ರೈತರಿಗೆ ವರದಾನವಾಗಿದೆ’ ಎನ್ನುತ್ತಾರೆ ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆಯ ಅನಿಲ್ ಕೆ.ಗುಪ್ತಾ.

ಅರಸಿ ಬಂದ ಪ್ರಶಸ್ತಿ, ಗೌರವ

ಮಥುಕಿಯಾ ಅವರು ರೈತರಿಗಾಗಿ ಎಷ್ಟೆಲ್ಲ ಪ್ರಯೋಗ, ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದರೂ ಇವರ ಬಗ್ಗೆ ಹೆಚ್ಚಿನ ಪ್ರಚಾರವೇ ಇಲ್ಲ. ಆದರೆ ಪ್ರಶಸ್ತಿಗಳು ಇವರ ಹೆಗಲೇರಿವೆ. ಕಳೆದ ವರ್ಷ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ. ಇದೇ ಪ್ರತಿಷ್ಠಾನಕ್ಕೆ ಸಂಶೋಧನಾ ಸಲಹಾ ಸಮಿತಿಗೆ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್‌ ಸೈನ್ಸ್‌ ಕೌನ್ಸಿಲ್‌ನಲ್ಲಿ ಭಾರತವನ್ನು ಇವರ ಪ್ರತಿನಿಧಿಸಿದ್ದಾರೆ.

ಗುಜರಾತ್‌ ಗ್ರಾಸ್‌ರೂಟ್ಸ್‌ ಆಗುಮೆಂಟೇಷನ್ ನೆಟ್‌ವರ್ಕ್‌ನ ಸಂಪರ್ಕ ಸಂಖ್ಯೆ:

91–79–26769686.ಇ–ಮೇಲ್ ವಿಳಾಸ: gian@gain.org

ಬುಲೆಟ್‌ ಸಾಂತಿ ಆವಿಷ್ಕರಿಸಿದ ಮತ್ತೊಬ್ಬ ರೈತ

ಗುಜರಾತ್‌ನ ಮತ್ತೊಬ್ಬ ರೈತ ಮನ್‌ಸುಖ್‌ ಜಿಗಾನಿ ಎಂಬುವವರು ಬುಲೆಟ್‌ ಸಾಂತಿ ಎಂಬ ವಾಹನವನ್ನು ಆವಿಷ್ಕರಿಸಿದ್ದಾರೆ. ಬುಲೆಟ್ ಬೈಕ್‌ನ ಎಂಜಿನ್‌ ಬಳಸಿ ಮಾಡಿದ ಇದು ಕೃಷಿ ಕೆಲಸಕ್ಕೆ ನೆರವಾಗುತ್ತದೆ. ಸೌರಾಷ್ಟ್ರದ ಅಮರೆಲಿಯ ಜಿಗಾನಿ ಅವರ ಈ ಬೈಕ್‌ ಸಾಕಷ್ಟು ಜನರ ಗಮನವನ್ನೂ ಸೆಳೆದಿದೆ. ಸಣ್ಣ ರೈತರ ಹೊಲ ಹಸನು ಮಾಡುವ ಕೆಲಸಕ್ಕೆ ಇದು ಸೂಕ್ತವಾಗಿದೆ.

1994 ರಿಂದ ಜಿಗಾನಿ ಅವರು ಕೃಷಿ ಉಪಕರಣಗಳನ್ನು ತಯಾರು ಮಾಡುತ್ತಿದ್ದರು. 2002 ಇವರ ಬುಲೆಟ್‌ ಸಾಂತಿ, ಪ್ರತಿಷ್ಠಿತ ‘ನ್ಯಾಷನಲ್ ಸಂಶೋಧನಾ ಪ್ರತಿಷ್ಠಾನ’ ದ ಪ್ರಶಸ್ತಿಯನ್ನೂ ಪಡೆದಿದೆ. ಈ ಯಂತ್ರ ಭಾರತವಲ್ಲದೆ ವಿಶ್ವದ ಇತರ ಕಡೆಯೂ ಸುದ್ದಿ ಮಾಡಿತ್ತು. ವಿವಿಧ ಸರ್ಕಾರೇತನ ಸಂಸ್ಥೆಗಳೂ ಮತ್ತು ವಿಶ್ವವಿದ್ಯಾಲಯಗಳಲ್ಲಿ ಚರ್ಚೆಯಾಗಿತ್ತು. ಕೀನ್ಯಾದ ನೈರೋಬಿಯಲ್ಲಿನ ಜೊಮೊ ಕೆನ್ಯಾಟ್ಟಾ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಜಿಗಾನಿ ಅವರನ್ನು ಆಹ್ವಾನಿಸಿ ಬುಲೆಟ್‌ ಸಾಂತಿ ಬಗ್ಗೆ ಮಾಹಿತಿ ಪಡೆದಿತ್ತು.

ಮುಂಬದಿಯಲ್ಲಿ ಒಂದು ಚಕ್ರ ಮತ್ತು ಹಿಂದಬದಿಯಲ್ಲಿ ಎರಡು ಚಕ್ರಗಳಿಂದ ಸಾಗುವ ಈ ವಾಹನ ಟ್ರ್ಯಾಕ್ಟರ್ ಮಾಡುವ ಕೆಲಸವನ್ನೇ ನಿರ್ವಹಿಸುತ್ತಿತ್ತು. ಭಾರಿ ವೆಚ್ಚ ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಲು ಶಕ್ತರಲ್ಲದ ರೈತರಿಗೆ  ಇದು ವರದಾನವಾಗಿತ್ತು. ಭಾರತದಲ್ಲಿ  ₹40 ಸಾವಿರ ಬೆಲೆಯ ಈ ವಾಹನಕ್ಕೆ ಕೀನ್ಯಾದಲ್ಲೂ ಭಾರಿ ಬೇಡಿಕೆ ಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry