‘ಇ–ವಾಹನ’ಗಳತ್ತ ಎಲ್ಲರ ಚಿತ್ತ!

ಶನಿವಾರ, ಮಾರ್ಚ್ 23, 2019
34 °C

‘ಇ–ವಾಹನ’ಗಳತ್ತ ಎಲ್ಲರ ಚಿತ್ತ!

Published:
Updated:
‘ಇ–ವಾಹನ’ಗಳತ್ತ ಎಲ್ಲರ ಚಿತ್ತ!

ದೇಶದ ಬಹುತೇಕ ವಾಹನ ತಯಾರಿಕಾ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳನ್ನು ರಸ್ತೆಗೆ ಇಳಿಸಲು ಭಾರಿ ಉತ್ಸುಕತೆ ತೋರಿಸುತ್ತಿವೆ. 2030ರ ಹೊತ್ತಿಗೆ ದೇಶದಾದ್ಯಂತ ವಿದ್ಯುತ್‌ಚಾಲಿತ ವಾಹನಗಳ ಸಂಖ್ಯೆ ಗಣನೀಯವಾಗಿ ಬಳಕೆಗೆ ಬರಬೇಕು ಎಂದು ಕೇಂದ್ರ ಸರ್ಕಾರ ಕಾರ್ಯಕ್ರಮ ಹಾಕಿಕೊಂಡಿದೆ. ಪರ್ಯಾಯ ಇಂಧನ ಚಾಲಿತ ವಾಹನಗಳ ತಯಾರಿಕೆಯತ್ತ ಗಮನ ಕೇಂದ್ರಿಕೃತಗೊಳ್ಳಲು ಇದು  ಮುಖ್ಯಕಾರಣವಾಗಿದೆ.

ವಿದ್ಯುತ್ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆಯನ್ನು ಉತ್ತೇಜಿಸಲು ತೆರಿಗೆ ನೀತಿಯನ್ನು ಸರಳಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ವಿದೇಶಿ ಸಂಸ್ಥೆಗಳೂ ಭಾರತದಲ್ಲಿ ಇಂತಹ ವಾಹನಗಳ ತಯಾರಿಕೆಯಲ್ಲಿ ಹೂಡಿಕೆ ಮಾಡಲು ಪೂರಕ ಪರಿಸರ ನಿರ್ಮಾಣ ಆಗಲಿದೆ.

ಈಗಾಗಲೇ ದೇಶದ ಹನ್ನೆರಡು ವಾಹನ ತಯಾರಿಕಾ ಸಂಸ್ಥೆಗಳು ವಿದ್ಯುತ್‌ ಚಾಲಿತ ಮತ್ತು ಹೊಗೆ ರಹಿತ ವಾಹನಗಳನ್ನು ತಯಾರಿಸಲು ವಿದೇಶಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿವೆ.

ಇಂತಹ ವಾಹನಗಳ ತಯಾರಿಕೆ ಪ್ರಮಾಣ ಹೆಚ್ಚಾದರೆ, ಇ– ವಾಹನಗಳ ತಯಾರಿಕಾ ವೆಚ್ಚದಲ್ಲಿ ಹೆಚ್ಚು ಪಾಲು ಪಡೆಯುತ್ತಿರುವ ಬ್ಯಾಟರಿ ತಯಾರಿಕೆಯ ವೆಚ್ಚವೂ ಕಡಿಮೆಯಾಗುವ ಸಾಧ್ಯತೆ ಇದೆ.

ಟಾಟಾದಿಂದ ₹2,600 ಕೋಟಿ ಹೂಡಿಕೆ

ದೇಶದ ಎರಡನೆ ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಕೂಡ ಪರಿಸರ ಸ್ನೇಹಿ ವಾಹನಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸುತ್ತಿದೆ. ಈ ಸಂಸ್ಥೆ ಕೂಡ ವಾಹನ ಪ್ರದರ್ಶನದಲ್ಲಿ ಆರು ವಿದ್ಯುತ್‌ ವಾಹನಗಳ ಮಾದರಿಗಳನ್ನು ಪ್ರದರ್ಶಿಸಿದೆ. ಇದರಲ್ಲಿ 12 ಮೀಟರ್‌ ಉದ್ದದ ಪ್ರಯಾಣಿಕ ಬಸ್‌ ಕೂಡ ಇತ್ತು.  ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಉದ್ದೇಶಕ್ಕೆಂದೇ ₹2,600 ಕೋಟಿ  ಹೂಡಿಕೆ ಮಾಡುವುದಾಗಿ ತಿಳಿಸಿದೆ.

ಟೊಯೊಟಾ ವೇಗ

ಜ‍ಪಾನಿನ ವಾಹನ ತಯಾರಿಕಾ ಸಂಸ್ಥೆ ಟೊಯೊಟಾ ಸಹ 2020ರ ವೇಳೆಗೆ ಹತ್ತು ವಿದ್ಯುತ್‌ ಚಾಲಿತ ವಾಹನಗಳನ್ನು ಮಾರುಕಟ್ಟೆ ತರಲು ಉದ್ದೇಶಿಸಿದೆ. ಆಂಧ್ರದ ಹೊಸ ರಾಜಧಾನಿ ಅಮರಾವತಿ ಸ್ಮಾರ್ಟ್‌ ಸಿಟಿ ಯೋಜನೆಗಾಗಿ ಆಂಧ್ರಪ್ರದೇಶದ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ.

ಮರ್ಸಿಡಿಸ್‌ ಒಲವು

ವಿಲಾಸಿ ಕಾರುಗಳ ತಯಾರಿಕಾ ಸಂಸ್ಥೆ ಮರ್ಸಿಡಿಸ್‌ ಬೆಂಜ್‌ ಕೂಡ ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸಲು ನಿರ್ಧರಿಸಿದೆ. ‘ಪರಿಸರ ಮಾಲಿನ್ಯ, ತೈಲ ಆಮದು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರದ ಆಶಯ ಮೆಚ್ಚುವಂಥದ್ದು’ ಎಂದು ಮರ್ಸಿಡಿಸ್‌ನ ಭಾರತ ವಿಭಾಗದ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೊಲ್ಯಾಂಡ್ ಫೋಲ್ಗರ್ ಹೇಳಿದ್ದಾರೆ. ‘2022ರ ಹೊತ್ತಿಗೆ ಮರ್ಸಿಡಿಸ್‌ ಬೆಂಜ್‌ನ ಪ್ರತಿ ಮಾದರಿಯಲ್ಲೂ ಒಂದು ವಿದ್ಯುತ್‌ ಚಾಲಿತ ವಾಹನ ತಯಾರಿಸುವುದು ಇದರ ಉದ್ದೇಶವಾಗಿದೆ.

ಹುಂಡೈನಿಂದ ಎರಡು ವಾಹನ

ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಹುಂಡೈ, ಕಳೆದ ವಾರ ನೆಕ್ಸೊ ಮತ್ತು ಲೊನಿಕ್ ಹೆಸರಿನ ಎರಡು ವಿದ್ಯುತ್‌ಚಾಲಿತ ಎಸ್‌ಯುವಿಗಳನ್ನು ಪರಿಚಯಿಸಿದೆ. ‘ಭಾರತದಲ್ಲಿಯೇ ತಯಾರಿಸಿ ಯೋಜನೆ’ಗೆ ಇಪ್ಪತ್ತು ವರ್ಷಗಳವರೆಗೆ ಬದ್ಧವಾಗಿರುವುದಾಗಿಯೂ ತಿಳಿಸಿದೆ. ಹೀಗಾಗಿ ಈ ಸಂಸ್ಥೆಯಿಂದಲೂ ಇನ್ನಷ್ಟು ಇ–ವಾಹನಗಳು ಮಾರುಕಟ್ಟೆಗೆ ಪರಿಚಯವಾಗಲಿವೆ.

ಫೋರ್ಡ್‌–ಮಹೀಂದ್ರಾ ಸಹಭಾಗಿತ್ವ

ಅಗ್ಗದ ವಿದ್ಯುತ್‌ಚಾಲಿತ ಎಸ್‌ಯುವಿಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿರುವ ಫೋರ್ಡ್‌ ಸಂಸ್ಥೆಗೆ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಕಾರು ತಯಾರಿಕಾ ಸಂಸ್ಥೆ ನೆರವು ನೀಡಲಿದೆ. ಮುಂದಿನ ವರ್ಷವೇ ಈ ಸಂಸ್ಥೆಗಳ ಸಹಭಾಗಿತ್ವದಲ್ಲಿನ ವಿದ್ಯುತ್‌ಚಾಲಿತ ಕಾರು ರಸ್ತೆಗಿಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ತಿಂಗಳು ನಡೆದ ವಾಹನ ಪ್ರದರ್ಶನದಲ್ಲಿ, ಮಹೀಂದ್ರಾ ಸಂಸ್ಥೆ ವಿದ್ಯುತ್‌ ಚಾಲಿತ ವಾಹನಗಳ ಆರು ಮಾದರಿಗಳನ್ನು ಪ್ರದರ್ಶಿಸಿತ್ತು.

‘ಇ–ವಾಹನಗಳ ವಿಭಾಗದಲ್ಲಿ ನಮ್ಮ ಸಂಸ್ಥೆಯು ಆರಂಭದಲ್ಲಿ ₹600 ಕೋಟಿ ಮತ್ತು ಮುಂದಿನ 2–3 ವರ್ಷಗಳಲ್ಲಿ ₹700 ಕೋಟಿ ಹೂಡಿಕೆ ಮಾಡಲಿದೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪವನ್ ಗೋಯೆಂಕಾ ಘೋಷಿಸಿದ್ದಾರೆ.

ಕಿಯಾ ಮೋಟರ್ಸ್

ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಸಂಸ್ಥೆ ಕಿಯಾ ಮೋಟರ್ಸ್ ಕಾರ್ಪೊರೇಷನ್‌ ಕೂಡ 2019–2021ರ ಅವಧಿಯಲ್ಲಿ ವಿದ್ಯುತ್‌ ಚಾಲಿತ ವಾಹನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಸಂಸ್ಥೆಗಳ ಈ ಎಲ್ಲ ಪ್ರಯತ್ನಗಳು ಸಾಕಾರವಾದರೆ ಮುಂದೆ ದೇಶದಾದ್ಯಂತ ಪರಿಸರ ಸ್ನೇಹಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ಸಂಚರಿಸಲಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry