ಸೆಂಟ್ರಲ್ ಕಾಲೇಜಿನ ಮಧುರ ನೆನಪುಗಳು...

7

ಸೆಂಟ್ರಲ್ ಕಾಲೇಜಿನ ಮಧುರ ನೆನಪುಗಳು...

Published:
Updated:
ಸೆಂಟ್ರಲ್ ಕಾಲೇಜಿನ ಮಧುರ ನೆನಪುಗಳು...

ಸಂಶೋಧನಾ ಕೇಂದ್ರವಾಗಲಿ

1954ರಿಂದ 58ರವರೆಗೆ ನಾನು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ.ಎಂ.ಎಸ್ಸಿ ಮುಗಿಸಿ ನಾನು ಉಪನ್ಯಾಸಕ ವೃತ್ತಿ ಆರಂಭಿಸಿದ್ದೂ ಸೆಂಟ್ರಲ್ ಕಾಲೇಜಿನಲ್ಲೇ. ಆಗ ಈ ಕಾಲೇಜು ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿತ್ತು. ನಾನು ಭೂವಿಜ್ಞಾನದ ವಿದ್ಯಾರ್ಥಿ. ನಮಗೆ ಒಳ್ಳೆಯ ಮೇಷ್ಟ್ರುಗಳಿದ್ದರು.

ಆ ಕಾಲದಲ್ಲಿ ಸಾರ್ವಜನಿಕರಿಗಾಗಿಯೇ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸುತ್ತಿದ್ದರು. ಎರಡು ದಿನ ನಡೆಯುತ್ತಿತ್ತು. ಜನಜಾತ್ರೆ ಆಗುತ್ತಿತ್ತು. ಕಾಲೇಜಿನ ಕರ್ನಾಟಕ ಸಂಘಕ್ಕೆ ಒಳ್ಳೇ ಹೆಸರಿತ್ತು. ಜಿ.ಪಿ. ರಾಜರತ್ನಂ, ನರಸಿಂಹಯ್ಯ, ಬಿ.ಜಿ.ಎಲ್. ಸ್ವಾಮಿ ಅವರಂಥ ಸಾಧಕರು ನಮ್ಮೊಡನೆ ಇದ್ದರು. ನನ್ನನ್ನು ಕರ್ನಾಟಕ ಸಂಘದ ಕಾರ್ಯದರ್ಶಿ ಆಗಿ ರಾಜರತ್ನಂ ಆಯ್ಕೆ ಮಾಡಿದ್ದರು. ಮೊಟ್ಟಮೊದಲ ಬಾರಿಗೆ ನಾಟಕಕಾರ ಸಂಸರ ದಿನಾಚರಣೆ ಆಚರಿಸಿದ್ದೆವು. ಶಿವರಾಮ ಕಾರಂತರನ್ನು ಕರೆಸಿದ್ದವು.

ಆರಂಭದಲ್ಲಿ ಬರೀ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ ಗಳು ಮಾತ್ರ ಇದ್ದವು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತಿತ್ತು. ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯರಾಗಿರು ತ್ತಿದ್ದರು. ಅಕಾಡೆಮಿಕ್ ವಲಯದಲ್ಲಿ ತುಂಬಾ ಹೆಸರಾಗಿತ್ತು. ಕಾಲೇಜಿನಲ್ಲಿ ಆಧುನಿಕ ಗ್ರಂಥಾಲಯವಿತ್ತು. ನನ್ನಲ್ಲಿ ಜ್ಞಾನ ಮತ್ತು ಕಾವ್ಯ ಶಕ್ತಿ ಬೆಳೆಸಿದ್ದೇ ಈ ಗ್ರಂಥಾಲಯ. ಕಾಲೇಜಿಗೆ ದೇಶದಲ್ಲಿ ಉತ್ತಮ ಹೆಸರಿದೆ. ಈಗ ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದ್ದು ಹರ್ಷ ತಂದಿದೆ. ವಿಜ್ಞಾನ ಕೇಂದ್ರ ಮತ್ತು ಮಾದರಿ ಸಂಶೋಧನಾ ಕೇಂದ್ರವೂ ಇದಾಗಬೇಕು ಎಂಬುದು ನನ್ನಾಸೆ.

–ಪ್ರೊ.ಕೆ.ಎಸ್.ನಿಸಾರ್ ಅಹಮದ್, ಕವಿ

***

ನೆನಪು ಮಧುರ

ನಿಜ ಹೇಳಬೇಕೆಂದರೆ ಸೆಂಟ್ರಲ್ ಕಾಲೇಜಿನಲ್ಲಿ ನಾನು ಸರಿಯಾಗಿ ಓದಲಿಲ್ಲ. ನಾನು ಅಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದೆ. ಆದರೆ, ಪದವಿ ಪೂರ್ಣಗೊಳಿಸಲಿಲ್ಲ. ಆಗಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ನನಗೆ ಓದಿಗಿಂತ ಸಂಗೀತ, ನೃತ್ಯದಲ್ಲಿ ಆಸಕ್ತಿ ಇತ್ತು. ಬರೀ ಹಾಜರಾತಿಗೆ ಇದ್ದು ಅಲ್ಲಿ ಇಲ್ಲಿ ಓಡಾಡುತ್ತಾ ಕಾಲ ಕಳೆದೆ. ಈ ವಿಜ್ಞಾನ ಓದಿದರೆ ಪ್ರಯೋಜವಿಲ್ಲ ಅನಿಸ್ತು. ಬಾಂಬೆಗೆ ಹೋಗಿಬಿಟ್ಟೆ. ಈಗ ಹಳೇ ವಿದ್ಯಾರ್ಥಿ ಅಂಥ ಕರೆದಿದ್ದಾರೆ. ಅವರಿಗೆ ನಾನು ಕೃತಜ್ಞ.

ನಾನು ಸೃಜನಶೀಲವಾಗಿ ಬೆಳೆಯಲು ಈ ಕಾಲೇಜು ನೆರವಾಯಿತು. ಹಿರಿಯ ರಂಗಕರ್ಮಿ ವಿಮಲಾ ರಂಗಾಚಾರ್ ಅವರು ನನ್ನ ಸೀನಿಯರ್ ಆಗಿದ್ದರು. ಈಗ ಬದುಕಿರುವವರಲ್ಲಿ ಅವರು ಈ ಕಾಲೇಜಿನ ಹಳೆಯ ವಿದ್ಯಾರ್ಥಿ. ವಿಮಲಾ ಮತ್ತು ‘ಕಿಡಿ’ ಪತ್ರಿಕೆಯ ಬಾಬು ಅವರನ್ನು ನಮ್ಮ ಕಾಲೇಜಿನ ಪ್ರತಿನಿಧಿಗಳಾಗಿ ಯೂತ್ ಫೆಸ್ಟಿವಲ್‌ಗೆ ರಷ್ಯಾದ ಮಾಸ್ಕೊಗೆ ಕಳುಹಿಸಲಾಗಿತ್ತು. ನಾನು ಕಾಲೇಜಿನ ಹಾಕಿ ಆಟದ ತಂಡದಲ್ಲಿದ್ದೆ. ಕ್ರಿಕೆಟ್ ಕೂಡಾ ಆಡುತ್ತಿದ್ದೆ. ಈಗಿನ ಸೆನೆಟ್ ಹಾಲ್ ಜಾಗದಲ್ಲಿ ಆಗ ಮೈದಾನವಿತ್ತು. ಅಲ್ಲಿ ನಾವು ಎನ್‌ಸಿಸಿ ಪರೇಡ್ ಮಾಡ್ತಾ ಇದ್ವಿ. ಇಂಗ್ಲಿಷ್ ವಿಭಾಗದ ಹಿಂದೆ ಈ ಮೈದಾನವಿತ್ತು. ನಮ್ಮ ಕನ್ನಡ ತರಗತಿಗೆ ವೀ. ಸೀತಾರಾಮಯ್ಯ ಮತ್ತು ಜಿ.ಪಿ.ರಾಜರತ್ನಂ ಅವರು ಬರುತ್ತಿದ್ದರು. ಒಮ್ಮೆ ಕಾರ್ಯಕ್ರಮವೊಂದಕ್ಕೆ ಉರ್ದು ವಿಭಾಗಕ್ಕೆ ನನ್ನನ್ನು ಅತಿಥಿಯನ್ನಾಗಿ ಆಹ್ವಾನಿಸಿದ್ದರು. ಆಗ ತಿಮ್ಮಯ್ಯ ಕುಲಸಚಿವರಾಗಿದ್ದರು. ಅವರಿಗೆ ಸೇರಿದಂತೆ ಬಹುತೇಕರಿಗೆ ನನ್ನನ್ನು ಉರ್ದು ಕಾರ್ಯಕ್ರಮಕ್ಕೆ ಕರೆದಿದ್ದು ಆಶ್ಚರ್ಯ ತಂದಿತ್ತು. ಆ ಕಾರ್ಯಕ್ರಮದಲ್ಲಿ ನಾನು ಉರ್ದುವಿನಲ್ಲೇ ಮಾತನಾಡಿದ್ದೆ. ನನ್ನ ಮುಂಬೈ ಸ್ನೇಹಿತರ ಒಡನಾಟದಿಂದ ಉರ್ದು ಭಾಷೆಯನ್ನು ಕಲಿತು, ಸುಲಲಿತವಾಗಿ ಮಾತನಾಡುತ್ತಿದ್ದೆ.

ಈಗ ಬೆಂಗಳೂರು ಕೇಂದ್ರ ವಿ.ವಿ. ಆರಂಭವಾಗಿರುವುದು ಸಂತಸದ ಸಂಗತಿ. ಹೊಸ ವಿಶ್ವವಿದ್ಯಾಲಯ ಒಳ್ಳೆಯ ಕೆಲಸಗಳನ್ನು ಮಾಡಲಿ.

–ಎಂ.ಎಸ್. ಸತ್ಯು, ಚಿತ್ರ ನಿರ್ದೇಶಕ ಮತ್ತು ರಂಗಕರ್ಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry