‘ಸಿಕ್ಕ ಅವಕಾಶ ಬಳಸಿಕೊಳ್ಳಿ’

ಗುರುವಾರ , ಮಾರ್ಚ್ 21, 2019
32 °C

‘ಸಿಕ್ಕ ಅವಕಾಶ ಬಳಸಿಕೊಳ್ಳಿ’

Published:
Updated:
‘ಸಿಕ್ಕ ಅವಕಾಶ ಬಳಸಿಕೊಳ್ಳಿ’

* ಹೆಣ್ಣು ಎಂದು ಹೆಮ್ಮೆ ಎನ್ನಿಸಿದ ಕ್ಷಣ ಯಾವುದು?

ನಾಲ್ಕು ಗೋಡೆಗಳ ಮಧ್ಯೆ ಗೃಹಿಣಿಯಾಗಿದ್ದವಳು ರಾಜಕೀಯಕ್ಕೆ ಬಂದೆ. ನಾನು ಮಹಿಳೆ ಎನ್ನುವ ಬಗ್ಗೆ ಸಾಕಷ್ಟು ಬಾರಿ ಹೆಮ್ಮೆ ಎನಿಸಿದೆ. ಇಬ್ಬರು ಹೆಣ್ಣುಮಕ್ಕಳ ತಾಯಿಯಾದಾಗ, ಎರಡು ಬಾರಿ ಚುನಾವಣೆ ಗೆದ್ದಾಗ, ಜನರ ಮೊಗದಲ್ಲಿ ನಗು ಅರಳಿದಾಗ, ಹತ್ತಾರು ಬಂಧ, ಸಂಬಂಧಗಳ ನಡುವೆಯೂ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಹೆಣ್ಣುಮಕ್ಕಳದ್ದೇ ಹೆಚ್ಚುಗಾರಿಕೆ. ಹೀಗಾಗಿ ಹೆಣ್ಣು ಜನ್ಮ ನನಗೆ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ.

* ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ...

ನಾನು ಬೆಂಗಳೂರಿನವಳೇ. ಅಮ್ಮನ ಮನೆ ಮಾಗಡಿ ರಸ್ತೆ. ನಾವು ನಾಲ್ಕೈದು ಜನ ಹೆಣ್ಣು ಮಕ್ಕಳು. ನಮ್ಮ ತಂದೆ ಕಟ್ಟುನಿಟ್ಟಿನ ಪರಿಸರದಲ್ಲಿ ನಮ್ಮನ್ನು ಬೆಳೆಸಿದರು. ಹೊರಗೆ ಹೋಗಲು ಬಿಡುತ್ತಿರಲಿಲ್ಲ. ನಾನು ಹತ್ತನೇ ತರಗತಿವರೆಗೆ ಮಾತ್ರ ಓದಿದೆ. ನಮ್ಮ ಬದುಕಿನ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದುಕೊಂಡವರು ಕುಟುಂಬದವರೇ. ಇಂದು ಈ ಮಟ್ಟಕ್ಕೆ ಬೆಳೆದಿರುವುದು ಅವರಿಂದಲೇ.

* ಬೆಂಗಳೂರಿನಲ್ಲಿ ಲಿಂಗ ಸಮಾನತೆ ಇದೆಯೇ?

ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರ ಕೊಡಲು ಬಯಸುತ್ತೇನೆ. ಮೊದಲಿಗೆ ಹೋಲಿಸಿದರೆ ಈಗ ಸಮಾಜ ಸ್ವಲ್ಪ ಬದಲಾಗಿದೆ. ಆದರೂ ಹಳೆಯ ಕಟ್ಟುಪಾಡುಗಳಿಗೆ, ಹೆಣ್ಣು ಅಬಲೆ ಎನ್ನುವ ಮನೋಧರ್ಮಕ್ಕೆ ಅಂಟಿಕೊಂಡು ವರ್ತಿಸುವವರು ಅನೇಕರಿದ್ದಾರೆ. ಹೆಣ್ಣುಮಕ್ಕಳ ಧೈರ್ಯ, ಸ್ಥೈರ್ಯ, ಸಾಧನೆಯೇ ಇಂಥ ಮನಸ್ಥಿತಿಯವರಿಗೆ ಉತ್ತರವಾಗಬೇಕು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಖುಷಿ ಆಗಿರಬೇಕು ಎಂದರೆ ಇಂದಿನ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಲೇಬೇಕು. ಮುಂದಿನ ಸ್ವಸ್ಥ ಸಮಾಜಕ್ಕೆ ಪೂರಕವಾಗುವಂತೆ ಪ್ರತಿಯೊಬ್ಬರೂ ಹೆಣ್ಣು ಗಂಡು ಎಂಬ ಭೇದ ಮಾಡದೆ ತಮ್ಮ ಮಕ್ಕಳಲ್ಲಿ ಉತ್ತಮ ಚಿಂತನೆಯನ್ನು ಬೆಳೆಸುವತ್ತ ಗಮನ ಹರಿಸಬೇಕು.

* ನಿಮ್ಮ ಪ್ರಕಾರ ಮಹಿಳಾ ದಿನ ಎಂದರೇನು?

ಹೆಣ್ಣಿನ ಮೇಲೆ ನಡೆಯುತ್ತಿರುವ ಎಲ್ಲಾ ರೀತಿಯ ದೌರ್ಜನ್ಯ ನಿಂತು ಆಕೆಯ ಮೊಗದಲ್ಲಿ ಖುಷಿ ಅರಳಬೇಕು. ಅವಳ ಮೊಗದಲ್ಲಿ ನೆಮ್ಮದಿಯ ಭಾವ ಮೂಡಿದ ದಿನ ನಿಜವಾದ ಮಹಿಳಾದಿನ.

* ರಾಜಕೀಯ ಮೀಸಲಾತಿ ಹೆಣ್ಣುಮಕ್ಕಳಿಗೆ ವರದಾನವೇ?

ಖಂಡಿತ ಹೌದು. ಮೀಸಲಾತಿಯಿಂದಾಗಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್‌ಗಳಲ್ಲಿ 101 ಮಂದಿ ಮಹಿಳಾ ಸದಸ್ಯರು ಆಯ್ಕೆಯಾಗಲು ಸಾಧ್ಯವಾಗಿದೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗುರಿತಲುಪಲು ಸಾಧ್ಯವಾಗುತ್ತಿಲ್ಲ. ಅಧಿಕಾರದಲ್ಲಿರುವ ಹತ್ತು ವರ್ಷಗಳಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ ಪುರುಷ ಮೇಲಧಿಕಾರಿಗಳಿಂದ ಸಾಕಷ್ಟು ದೌರ್ಜನ್ಯ ಎದುರಿಸಿದ್ದೇವೆ. ಒಳ್ಳೆಯ ಅವಕಾಶ ಸಿಕ್ಕಿದೆ, ಇಂಥ ಬೆದರಿಕೆಗಳಿಗೆ ಹೆದರಿ ಹಿಂದೆ ಸರಿಯಬಾರದು ಎನ್ನುವ ಉದ್ದೇಶಕ್ಕೆ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಬೇಕು. ಆಗ ಸಾಧನೆಯ ಹಾದಿ ಸುಲಭವಾದೀತು.

* ಮಹಿಳೆ ಚುನಾವಣೆ ಗೆದ್ದರೂ, ಅಧಿಕಾರ ಮಾತ್ರ ಪುರುಷರಲ್ಲಿರುತ್ತದೆ ಎನ್ನುವ ವಾದವಿದೆ?

ಎಲ್ಲರ ವಿಷಯದಲ್ಲಿ ಇದು ಸತ್ಯವಲ್ಲ. ನಾನು ರಾಜಕೀಯಕ್ಕೆ ಅಕಸ್ಮಾತ್‌ ಆಗಿ ಬಂದವಳು. ಆರಂಭದ ದಿನಗಳಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ತಂದೆ, ಗಂಡ ನನ್ನ ಬೆಂಬಲಕ್ಕೆ ನಿಂತರು. ಸಾಕಷ್ಟು ವಿಷಯಗಳನ್ನು ಕಲಿಸಿದರು. ಈಗ ಸ್ವಂತ ಯೋಚನೆಯಿಂದ ನಿರ್ಧಾರ ಕೈಗೊಳ್ಳುತ್ತೇನೆ. ‘ಸಭೆಗಷ್ಟೇ ಬಂದು ಸಹಿ ಹಾಕಿದರೆ ನನ್ನ ಜವಾಬ್ದಾರಿ ಮುಗಿಯಿತು. ಉಳಿದದ್ದನ್ನೆಲ್ಲಾ ಪತಿ ನೋಡಿಕೊಳ್ಳುತ್ತಾನೆ’ ಎನ್ನುವ ಮನಸ್ಥಿತಿಯನ್ನು ಮೊದಲು ಹೆಣ್ಣುಮಕ್ಕಳು ಬಿಡಬೇಕು. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸ್ವತಂತ್ರವಾಗಿ ನಿಭಾಯಿಸಲು ಕಲಿಯಬೇಕು.

* ನಿಮ್ಮ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಏನೆಲ್ಲಾ ಮಾಡಿದ್ದೀರಿ?

ಸರ್ಕಾರದ ಕಲ್ಯಾಣ ಯೋಜನೆಯಡಿ ಬರುವ ಎಲ್ಲ ಯೋಜನೆಗಳು ನಮ್ಮ ಕ್ಷೇತ್ರದ ಹೆಣ್ಣುಮಕ್ಕಳನ್ನು ತಲುಪಿದೆ. ಕ್ರೀಡೆ, ಬ್ಯೂಟಿಷಿಯನ್‌, ಹೊಲಿಗೆ ಯಂತ್ರಗಳ ವಿತರಣೆ, ಅಡುಗೆ ಉಪಕರಣಗಳ ವಿತರಣೆ, ಹೆಣ್ಣುಮಕ್ಕಳ ಚಿಕಿತ್ಸೆಗೆ ಅವಶ್ಯಕವಾದ ಹಣಗಳನ್ನೂ ಬಿಡುಗಡೆ ಮಾಡಿದ್ದೀನಿ. ತಳ್ಳುಗಾಡಿ, ಧೋಬಿ ಕಿಟ್‌ಗಳನ್ನು ವಿತರಿಸಿದ್ದೇನೆ. ಅನೇಕ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಬಡ ಹೆಣ್ಣುಮಕ್ಕಳಿಗೆ ಮನೆ ನಿರ್ಮಾಣದಲ್ಲಿಯೂ ಸಹಾಯ ಮಾಡಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry