ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು–ಹೆಣ್ಣೆಂಬ ನಮ್ಮೊಳಗಿನ ಭಾವ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಮಕ್ಕಳು ಈಗ ಯೋಚನೆ ಮಾಡುವ ರೀತಿ ಬದಲಾಗಿದೆ. ಬಾಯಿತಪ್ಪಿಯೂ ನಾವು ನೀನು ಗಂಡು ಈ ಕೆಲಸ ಮಾಡಬಹುದು. ನೀನು ಹೆಣ್ಣು ಆ ಕೆಲಸ ಮಾಡಬಾರದು ಎಂದು ಹೇಳುವಂತಿಲ್ಲ. ನನಗೂ ಹೀಗೆಲ್ಲಾ ಭೇದ ಮಾಡಿ ಮಾತನಾಡುವುದು ಇಷ್ಟವಾಗುವುದಿಲ್ಲ ಎನ್ನಿ...’

ಇಂದಿರಾನಗರದಲ್ಲಿ ವಾಸವಿರುವ ಎರಡು ಮಕ್ಕಳ ತಾಯಿ ಕೋಮಲಾ ಮಾತು ಶುರು ಮಾಡಿದ್ದು ಹೀಗೆ.

‘ನಾವು ಸಣ್ಣವರಿದ್ದಾಗ ‘ನೀನು ಹೆಣ್ಣು, ಮನೆಯ ಒಳಗೆ ಇರು’ ಎಂದು ಹೇಳುತ್ತಿದ್ದರು. ಆದರೆ ಈಗ ಹಾಗೆಲ್ಲಾ ಹೇಳಲು ಆಗದು.  ಗಂಡು– ಹೆಣ್ಣಿನ ನಡುವೆ ವ್ಯತ್ಯಾಸ ಇಲ್ಲ. ಕಲಿಯುವ ಅವಕಾಶ ಹೆಣ್ಣು, ಗಂಡು ಮಕ್ಕಳಿಗೆ ಸಮನಾಗಿದೆ. ಹೆಣ್ಣುಮಕ್ಕಳ ವ್ಯಕ್ತಿ ಸ್ವಾತಂತ್ರ್ಯವನ್ನೂ ಸಮಾಜ ಒಪ್ಪಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಗಂಡಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ’ ಎನ್ನುವುದು ಅವರ ಹೆಮ್ಮೆ.

‘ಗಂಡುಮಗು ಬೆಳೆಸುವುದಕ್ಕೂ, ಹೆಣ್ಣುಮಗು ಬೆಳೆಸುವುದಕ್ಕೂ ವ್ಯತ್ಯಾಸವಿದೆಯೇ?’ ಎಂದು ಕೇಳಿದೆ. ಅವರಿಗೆ ಅವರ ಮನೆಯಲ್ಲಿಯೇ ನಡೆದ ಕೆಲ ಪ್ರಸಂಗಗಳು ನೆನಪಾದವು.

‘ಬೆಳಿಗ್ಗೆ ಮಗಳನ್ನು ಎಬ್ಬಿಸಿ, ಮಗ ಸ್ವಲ್ಪ ಹೊತ್ತು ಮಲಗಿರಲಿ ಎಂದುಕೊಂಡರೆ ಮಗಳು ಬೊಬ್ಬಿಡಲು ಶುರುಮಾಡುತ್ತಾಳೆ. ‘ಅವನು ಗಂಡುಮಗ ಅಂತ ಮಲಗಲು ಬಿಟ್ಟಿದ್ದೀಯಾ? ನಾನು ಹುಡುಗಿ ಅಂತ ಬೇಗ ಎಬ್ಬಿಸ್ತಾ ಇದೀಯಾ’ ಎಂದು ದೂರುತ್ತಾಳೆ. ಮಗನನ್ನು ಬೇಗ ಎಬ್ಬಿಸಿದ ದಿನ, ‘ನಾನು ಹುಡುಗ ಅಂತ ಎಬ್ಬಿಸ್ತಾ ಇದೀಯಾ? ಅವಳು ಹುಡುಗಿ ಅಂತ ಮಲಗಲು ಬಿಟ್ಟಿದೀಯಾ’ ಅತ ಮಗ ದೂರುತ್ತಾನೆ. ಇಬ್ಬರೂ ದೂರಿದಾಗ ‘ನಮ್ಮ ಮನೆಯಲ್ಲಿ ಸಮಾನತೆ ಇದೆ’ ಅಂತ ನನಗೆ ಖುಷಿ ಆಗುತ್ತೆ’ ಎಂದು ಬೀಗುತ್ತಾರೆ ಅವರು.

ಅಂಜನಾಪುರದ ನಾರಾಯಣ ಹೆಗಡೆ ಅವರಿಗೂ ಇಬ್ಬರೂ ಮಕ್ಕಳು. ದೊಡ್ಡವಳು ಸೌರಭ 9ನೇ ತರಗತಿ, ಚಿಕ್ಕನವನು ಶ್ರೀರಾಮ 4ನೇ ತರಗತಿ. ಮಕ್ಕಳನ್ನು ಬೆಳೆಸುವ ಸವಾಲು ಎದುರಿಸಲು ಅವರು ಕಂಡುಕೊಂಡಿರುವ ಮಾರ್ಗ ಸಮಾನತೆ.

‘ಕೆಲ ಸಂದರ್ಭಗಳಲ್ಲಿ ನಾನು ಹೆಣ್ಣು, ನಾನು ಗಂಡು. ಹೀಗಾಗಿ ಅಪ್ಪ–ಅಮ್ಮ ನಮ್ಮ ನಡುವೆ ಭೇದ ಮಾಡುತ್ತಿದ್ದಾರೆ ಎಂದು ಮಕ್ಕಳಿಗೆ ಅನಿಸಬಹುದು. ಅಂತಹ ಸಂದರ್ಭಗಳು ಸೃಷ್ಟಿಯಾಗಬಾರದು ಎಂದು ನಾವು ಶಾಂಪಿಂಗ್‌, ಟ್ರಾವೆಲಿಂಗ್‌ ಮಾಡುವಾಗ ಮಕ್ಕಳಿಬ್ಬರ ಮಾತಿಗೂ ಬೆಲೆ ಕೊಡುತ್ತೇವೆ. ಅವರಿಗೆ ನಮ್ಮ ಹಣಕಾಸಿನ ಸ್ಥಿತಿ ಬಗ್ಗೆ ತಿಳಿಸಿ, ಇಷ್ಟವಾದದ್ದನ್ನು ಖರೀದಿಸಲು ಹೇಳುತ್ತೇವೆ. ಎಲ್ಲಿಯೂ ಮಗನ ಮಾತೇ ನಡೆಯಲಿ ಅಥವಾ ಮಗಳ ದೊಡ್ಡವಳು, ಅವಳು ಹೇಳಿದಂತೆಯೇ ಆಗಲಿ ಎನ್ನುವುದಿಲ್ಲ. ಸರಿ ಕಂಡಿದ್ದನ್ನು ಸರಿ ಎನ್ನುತ್ತೇವೆ. ತಪ್ಪು ಮಾಡಿದಾಗ ತಿಳಿಹೇಳುತ್ತೇವೆ. ಇಬ್ಬರನ್ನೂ ಸಮಾನವಾಗಿ ಕಾಣುತ್ತೇವೆ’ ಎಂದು ತಾವು ಮಕ್ಕಳನ್ನು ಬೆಳೆಸುತ್ತಿರುವ ಬಗೆಯನ್ನು ವಿವರಿಸಿದರು.

‘ಮಗ ಇಷ್ಟಪಟ್ಟು ಈಜು ತರಗತಿಗೆ ಸೇರಿಕೊಂಡಿದ್ದಾನೆ. ಮಗಳನ್ನು ಅವಳಿಷ್ಟದ ಬೇಸಿಗೆ ಶಿಬಿರಕ್ಕೆ ಕಳುಹಿಸುತ್ತಿದ್ದೇವೆ. ಗಂಡು ಅಥವಾ ಹೆಣ್ಣು ಎನ್ನುವ ಕಾರಣಕ್ಕೆ ನಿರ್ದಿಷ್ಟ ಚಟುವಟಿಕೆ ಅಥವಾ ಆಸಕ್ತಿಗಳನ್ನು ಹೇರಿಲ್ಲ. ಭೇದವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿಸುವುದರಿಂದ ಅಪಾಯಗಳೇ ಜಾಸ್ತಿ’ ಎನ್ನುತ್ತಾರೆ ಅವರು.

ಹೆಣ್ಣುಮಕ್ಕಳಿಗಾಗಿ ಹಂಬಲಿಸಿದವರು ಹಲಸೂರಿನ ಸುಮಂಗಲಾ.

‘ನನಗೆ ಇಬ್ಬರು ಹೆಣ್ಣುಮಕ್ಕಳೇ. ಮೊದಲ ಮಗು ಹೆಣ್ಣೇ ಆಗಬೇಕು ಎಂಬ ಆಸೆ ಮೊದಲಿಂದಲೂ ಇತ್ತು. ಎರಡನೇ ಮಗುವೂ ಹೆಣ್ಣಾದಾಗ ನನಗೆ ಖುಷಿಯೇ ಆಯಿತು. ಇಬ್ಬರೂ ಹೆಣ್ಣುಮಕ್ಕಳು ಎಂಬ ಕಾರಣಕ್ಕೆ ಯಾವತ್ತೂ ಅವರನ್ನು ಕೀಳಾಗಿ ನೋಡಿಲ್ಲ. ಈಗ ಓದು, ಉದ್ಯೋಗದ ಕಾರಣಗಳಿಗೆ ಮಕ್ಕಳು ಹೆತ್ತವರಿಂದ ದೂರ ಸರಿಯುವುದು ಸಾಮಾನ್ಯ. ಮುಂದೆ ಯಾವತ್ತೋ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ಗಂಡುಮಕ್ಕಳಿಗೆ ಹಂಬಲಿಸುವುದು ತಪ್ಪು. ವಿದ್ಯಾಭ್ಯಾಸ ಮತ್ತು ಉದ್ಯೋಗದ ವಿಷಯದಲ್ಲಿ ಮಕ್ಕಳು ಇಷ್ಟಪಡುವ ಕ್ಷೇತ್ರವನ್ನು ಹೆತ್ತವರು ಪ್ರೋತ್ಸಾಹಿಸಬೇಕು. ಹೆಣ್ಣು–ಗಂಡು ಎಂದು ತಾರತಮ್ಯ ಮಾಡಬಾರದು’ ಎನ್ನುತ್ತಾರೆ ಅವರು.

ಹೆಣ್ಣುಮಕ್ಕಳನ್ನು ಬೆಳೆಸುವಾಗ ಹೆತ್ತವರು ಕೆಲವಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು ಎನ್ನುವ ಅಭಿಪ್ರಾಯ ಹಲಸೂರಿನ ಅಶ್ವಿನಿ ಸುಧಾಕರ್ ಅವರದು.

‘ನಗರದ ಶಾಲೆಗಳಲ್ಲಿ ಕೆಟ್ಟ ಘಟನೆಗಳು ನಡೆದ ಬಗ್ಗೆ ಸುದ್ದಿಯಾದಾಗ ಮಗಳು ಧೈರ್ಯ, ಸಾಹಸ ಪ್ರವೃತ್ತಿ ಕಲಿಯಬೇಕು ಎಂದು ಆಕೆಯನ್ನು ಕರಾಟೆ ಕೋಚಿಂಗ್‌ಗೆ ಕಳುಹಿಸಿದೆ. ರಸ್ತೆಯಲ್ಲಿ, ಶಾಲೆಯಲ್ಲಿ ಅವಳ ಜೊತೆ ಯಾರೇ ಕೆಟ್ಟದಾಗಿ ನಡೆದುಕೊಂಡರೂ ನನ್ನ ಬಳಿ ಹೇಳಬೇಕು ಎಂದು ಮನಸಿಗೆ ಅರ್ಥವಾಗುವಂತೆ ವಿವರಿಸಿದೆ. ಈಗ ಆಕೆಗೆ 12 ವರ್ಷ. ಬ್ಯಾಡ್‌, ಗುಡ್ ಟಚ್‌ ಬಗ್ಗೆ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟಿದ್ದಾರೆ. ಮನೆಯಲ್ಲಿ ಅಮ್ಮನಾಗಿ ನಾನೂ ಹೇಳಿಕೊಟ್ಟಿದ್ದೀನಿ. ಅಂಗಡಿಗೆ, ಕೋಚಿಂಗ್ ಸೆಂಟರ್‌ಗೆ ಮಗಳು ಒಬ್ಬಳನ್ನೇ ಕಳಿಸುತ್ತೇನೆ. ಈ ಮೂಲಕ ಅವಳಲ್ಲಿ ಧೈರ್ಯ ಬೆಳೆಸಲು ಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಹಲಸೂರಿನ ಅಶ್ವಿನಿ ಸುಧಾಕರ್‌.

‘ನಾನು ಮಗಳಿಗೆ ಕರಾಟೆ, ಸೈಕಲ್‌ ಕಲಿಸಿದ್ದೀನಿ. ಅವಳಿಗೆ ರಾಯಲ್‌ ಎನ್‌ಫೀಲ್ಡ್‌ ಇಷ್ಟ. ನೀನು ಬೆಳೆದ ಮೇಲೆ ಅದನ್ನೂ ಕೊಡಿಸ್ತೀನಿ ಅಂತಿರ್ತಿನಿ. ಹೆಣ್ಣುಮಕ್ಕಳನ್ನು ಬೆಳೆಸುವುದು ಗಂಡುಮಕ್ಕಳನ್ನು ಬೆಳೆಸಿದಂತೆ ಅಲ್ಲ. ಅವರ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಅವರಿಗೆ ಅದನ್ನು ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಬೇಕು. ಮಗಳನ್ನು ಬೆಳೆಸುವಾಗ ‘ನೀನು ಹೆಣ್ಣು’ ಅಂತ ಹೆದರಿಕೆಯಿಂದ ಬೆಳೆಸಿದರೆ, ಅವರೂ ಅದೇ ಮನಸ್ಥಿತಿ ಇರಿಸಿಕೊಂಡು ಸಮಾಜವನ್ನು ಎದುರಿಸಲು ಹೆದರಬಹುದು’ ಎಂದು ತಮ್ಮ ಮನೆಯ ಕತೆಯನ್ನು ಹೇಳುತ್ತಾರೆ.

‘ನನ್ನ ಮಗ ಅಥವಾ ಮಗಳು ಯಾರೇ ತಪ್ಪು ಮಾಡಿದರೂ ಖಂಡಿಸುತ್ತೇನೆ. ಮಕ್ಕಳಾಗಿ ಅವರಿಗೆ ಇರುವ ಹಕ್ಕು ಮತ್ತು ಜವಾಬ್ದಾರಿ, ಎರಡನ್ನೂ ತಿಳಿಸಿ ಹೇಳುತ್ತೇನೆ. ಮಕ್ಕಳ ಜೊತೆಗೆ ಸಾಕಷ್ಟು ಸಮಯ ಕಳೆಯುತ್ತೇನೆ. ಅವರು ಹೇಗೆ ಆಲೋಚನೆ ಮಾಡುತ್ತಾರೆ? ಅವರ ಸ್ನೇಹಿತರು ಯಾರು? ಎಂಥ ಚಟುವಟಿಕೆಗಳಲ್ಲಿ ಅವರಿಗೆ ಆಸಕ್ತಿ ಎಂದೆಲ್ಲಾ ಗೊತ್ತಾಗುತ್ತದೆ’ ಎಂದು ಮಕ್ಕಳನ್ನು ಬೆಳೆಸುವ ಬಗೆಯನ್ನು ಹಂಚಿಕೊಳ್ಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT