ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ

7

ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ

Published:
Updated:
ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ

ಮುಂಬೈ: ಮಂಗಳವಾರದ ವಹಿವಾಟಿನ ಕೊನೆಯ ಅವಧಿಯಲ್ಲಿ ದಿಢೀರ್ ಕುಸಿತ ಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 430 ಅಂಶ ಕಳೆದುಕೊಂಡಿತು.

ಜಾಗತಿಕ ಮಾರುಕಟ್ಟೆ ಪರಿಣಾಮಗಳು ಸಕಾರಾತ್ಮಕವಾಗಿದ್ದರೂ, ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಒತ್ತಡಕ್ಕೆ ಒಳಗಾಗಿದ್ದರಿಂದ ಸೂಚ್ಯಂಕವು 33,317 ಅಂಶಗಳ ಮೂರು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) ಕೂಡ 109 ಅಂಶಗಳನ್ನು ಕಳೆದುಕೊಂಡು 10,249 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಿಂದಾಗಿ, ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ನ ಶಿಖಾ ಶರ್ಮಾ ಅವರಿಗೆ ಗಂಭೀರ ಸ್ವರೂಪದ ಅಪರಾಧಗಳ ತನಿಖಾ ಸಂಸ್ಥೆ (ಎಸ್‌ಎಫ್‌ಐಒ) ನೋಟಿಸ್‌ ನೀಡಿದ ಬೆಳವಣಿಗೆಯು ಷೇರುಪೇಟೆ ಮೇಲೆ ಹೆಚ್ಚು ಪರಿಣಾಮ ಬೀರಿತು.

ಭಾರತೀಯ ಸ್ಟೇಟ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಆ್ಯಕ್ಸಿಸ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳ ಷೇರುಗಳ ಮೌಲ್ಯ ಶೇ 2.77ರಷ್ಟು ಕುಸಿತ ಕಂಡವು.

ವಸೂಲಾಗದ ಸಾಲಗಳ (ಎನ್‌ಪಿಎ) ವರ್ಗೀಕರಣ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಆ್ಯಕ್ಸಿಸ್ ಬ್ಯಾಂಕ್‌ಗೆ ಮತ್ತು ತಿಳಿಯಿರಿ ನಿಮ್ಮ ಗ್ರಾಹಕರನ್ನು (ಕೆವೈಸಿ) ಮಾನದಂಡಗಳನ್ನು ಅನುಸರಿಸದೇ ಇರುವುದಕ್ಕಾಗಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್ ಸೋಮವಾರ ಕ್ರಮವಾಗಿ ₹3 ಹಾಗೂ ₹2ಕೋಟಿ ದಂಡ ವಿಧಿಸಿದ ಬೆಳವಣಿಗೆ ಕೂಡ ವಹಿವಾಟಿನ ಮೇಲೆ ಪ್ರಭಾವ ಬೀರಿತು.

34,047 ಅಂಶಗಳಲ್ಲಿ ಆರಂಭವಾದ ಸೂಚ್ಯಂಕ ದಿನದ ವಹಿವಾಟಿನ ಒಂದು ಹಂತದಲ್ಲಿ 33,209 ಅಂಶಗಳ ಕನಿಷ್ಠ ಮಟ್ಟಕ್ಕೂ ಕುಸಿದಿತ್ತು. 10,400 ಅಂಶಗಳಲ್ಲಿ ಆರಂಭವಾದ ನಿಫ್ಟಿ, ವಹಿವಾಟಿನ ಒಂದು ಹಂತದಲ್ಲಿ 10,441 ಅಂಶಗಳಿಗೆ ಏರಿಕೆಯಾಗಿ ಉತ್ತಮ ವಹಿವಾಟಿನ ಭರವಸೆ ಮೂಡಿಸಿತು. ಆದರೆ ಕೊನೆಗೆ 10,249 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ 10,215 ಅಂಶಗಳ ಕನಿಷ್ಠ ಮಟ್ಟಕ್ಕೂ ಕುಸಿದಿತ್ತು.

₹ 4.30 ಲಕ್ಷ ಕೋಟಿ ನಷ್ಟ

ಐದು ವಹಿವಾಟಿನ ದಿನಗಳಲ್ಲಿ ಹೂಡಿಕೆದಾರರಿಗೆ ₹ 4.30 ಲಕ್ಷ ಕೋಟಿಗಳಷ್ಟು ಸಂಪತ್ತು ನಷ್ಟವಾಗಿದೆ. ಮಂಗಳವಾರದ ವಹಿವಾಟಿನಲ್ಲಿ ₹ 1.54 ಲಕ್ಷ ಕೋಟಿ ಸಂಪತ್ತು ಕರಗಿದೆ.

ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಮಾರುಕಟ್ಟೆ ಮೌಲ್ಯ 144 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry